Home ಧಾರ್ಮಿಕ ಸುದ್ದಿ ಧಾರ್ಮಿಕ ಆಚರಣೆಯ ಭಂಗಕ್ಕೆ ಸರಕಾರ ಮತ್ತೆ ಮುಂದಾಗಿದೆಯೇ?

ಧಾರ್ಮಿಕ ಆಚರಣೆಯ ಭಂಗಕ್ಕೆ ಸರಕಾರ ಮತ್ತೆ ಮುಂದಾಗಿದೆಯೇ?

ಕ್ಷೇತ್ರಗಳ ಆಚಾರ ಅನುಷ್ಠಾನದ ಬಗ್ಗೆ ಮೂಗು ತೂರಿಸಲು ಮತ್ತೆ ಪ್ರಯತ್ನ ನಡೆಸುತ್ತಿದೆ ಎಂಬ ಆರೋಪ ಕೇಳಿ ಬಂದಿದೆ

1153
0
SHARE

ಶಬರಿಮಲೆ ಯುವತಿ ಪ್ರವೇಶದ ವಿವಾದವು ಮತ್ತೆ ಸುಪ್ರೀಂಕೋರ್ಟ್‌ ನಲ್ಲಿ ಇರುವಾಗಲೇ ಪುರುಷರು ಶರ್ಟ್‌ ಧರಿಸಿ ದೇವಾಲಯ ಪ್ರವೇಶದ ಬಗ್ಗೆ ಇನ್ನೊಂದು ವಿವಾದಕ್ಕೆ ಸರಕಾರ ಮಂದಾಗಿರುವುದು ಜೇನುಗೂಡಿಗೆ ಕಲ್ಲೆಸೆದಂತಾಗಿದೆ. ದೇವಸ್ಥಾನಗಳ ಪೂರ್ವ ಸಂಪ್ರದಾಯವನ್ನು ಬುಡಮೇಲುಗೊಳಿಸುವ ಎಡರಂಗ ಸರಕಾರದ ನಾಸ್ತಿಕ ನಿಲುವನ್ನು ಭಕ್ತರು ಮತ್ತು ಹಿಂದೂ ಸಂಘಟನೆಗಳು ಬಲವಾಗಿ ವಿರೋಧಿಸಲು ಮುಂದಾಗಿದೆ.

ಕುಂಬಳೆ:
ಕೇರಳದ ಹಿಂದೂ ದೇವಾಲಯಗಳಿಗೆ ಅಂಗಿ ಧರಿಸಿ ಪುರುಷರ ಪ್ರವೇಶದ ಬಗ್ಗೆ ಅಭಿಪ್ರಾಯ ಕೇಳಿದ ರಾಜ್ಯ ಎಡರಂಗ ಸರಕಾರ ಮತ್ತೂಮ್ಮೆ ಆಸ್ತಿಕರ ಭಾವನೆಯನ್ನು ಕೆರಳಿಸಲು ಮುಂದಾಗಿದೆ.

ದೇವಸ್ಥಾನದೊಳಗೆ ಪುರುಷರು ಶರ್ಟ್‌,ಬನಿಯನ್‌ ಧರಿಸಿ ಪ್ರವೇಶಿಸುವ ಕುರಿತು ಕೇರಳ ಸರಕಾರವು ಕ್ಷೇತ್ರ ತಂತ್ರಿಯವರಿಂದ ಅಭಿಪ್ರಾಯವನ್ನು ಕೇಳಿದೆ. ಶ್ರೀ ಶಬರಿಮಲೆಗೆ ಯುವತಿಯರು ಪ್ರವೇಶಿಸಬಹುದೆಂಬುದಾಗಿ ಸುಪ್ರೀಂಕೋರ್ಟ್‌ ತೀರ್ಪು ನೀಡಿದ ಆದೇಶವನ್ನು ಸಮರ್ಥಿಸಿ ಶ್ರೀ ಶಬರಿಮಲೆಗೆ ಮಹಿಳೆಯರ ಪ್ರವೇಶವನ್ನು ಬೆಂಬಲಿಸಿದ ಕೇರಳ ಸರಕಾರದ ನಿಲುವು ಭಾರೀ ವಿವಾದಕ್ಕೀಡಾದ ಬೆನ್ನಲ್ಲೆ ಹಿಂದುಗಳ ಕ್ಷೇತ್ರಗಳ ಆಚಾರ ಅನುಷ್ಠಾನದ ಬಗ್ಗೆ ಮೂಗು ತೂರಿಸಲು ಮತ್ತೆ ಪ್ರಯತ್ನ ನಡೆಸುತ್ತಿದೆ ಎಂಬ ಆರೋಪ ಕೇಳಿ ಬಂದಿದೆ

ಹಿಂದೂ ಕ್ಷೇತ್ರಗಳಲ್ಲಿ ಪುರುಷರು ಶರ್ಟ್‌ ತೆಗೆದು ಒಳಗೆ ಪ್ರವೇಶಿಸಿ ದೇವರ ದರ್ಶನ ನಡೆಸುವುದರ ವಿರುದ್ಧ ತ್ರಿಶ್ಯೂರ್‌ ನಿವಾಸಿ ಕೆ.ಜಿ.ಅಭಿಲಾಷ್‌ ಎಂಬವರು ರಾಜ್ಯ ಮುಜುರಾಯಿ ಖಾತೆ ಸಚಿವರಿಗೆ ಎರಡು ತಿಂಗಳ ಹಿಂದೆ ಮನವಿ ಸಲ್ಲಿಸಿದ್ದರು.ಇದನ್ನು ಪರಿಗಣಿಸಿದ ಕೇರಳ ದೇವಸ್ವಂ ಸಚಿವ ಕಡಗಂಪಳ್ಳಿ ಸುರೇಂದ್ರನ್‌ ಪುರುಷರು ಶರ್ಟ್‌ ಧರಿಸಿ ಕ್ಷೇತ್ರಕ್ಕೆ ಪ್ರವೇಶಿಸುವ ಕುರಿತು ಸಮಾಲೋಚನೆ ನಡೆಸುವಂತೆ ಕ್ರಮ ಕೈಗೊಳ್ಳುವ ಸಲುವಾಗಿ ಕ್ಷೇತ್ರಗಳ ತಂತ್ರಿಯವರಿಂದ ಅಭಿಪ್ರಾಯವನ್ನು ಕೇಳಿದೆ.ಎರಡು ತಿಂಗಳ ಹಿಂದೆಯೇ ಮನವಿ ಸಲ್ಲಿಸಿದರೂ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಶಬರಿಮಲೆ ವಿವಾದದೊಂದಿಗೆ ಇದು ಕೂಡಾ ಭಾರೀ ವಿವಾದವಾಗುವ ಸಾಧ್ಯತೆಯನ್ನು ಮನಗಂಡು ಚುನಾವಣೆ ನಡೆದ ಮರು ದಿನವೇ ಈ ಕುರಿತು ಆಲೋಚಿಸಲು ತಂತ್ರಿಯವರ ಅಭಿಪ್ರಾಯ ಕೇಳಲು ಸರಕಾರ ಮುಂದಾಗಿದೆ.

ಸರಕಾರಕ್ಕೆ ಲಭಿಸಿದ ಮನವಿಯನ್ನು ತಿರುವಂಕೂರು, ಕೊಚ್ಚಿ,ಗುರುವಾಯೂರು ಹಾಗೂ ಮಲಬಾರ್‌ ದೇವಸ್ವಂ ಮಂಡಳಿಗೆ ಹಸ್ತಾಂತರಿಸಲಾಗಿದೆ. ರಾಜ್ಯದ ದೇವಸ್ವಂ ಸಚಿವರು ಈ ಕುರಿತು ಸಮಗ್ರ ವರದಿ ಸರಕಾರಕ್ಕೆ ಸಲ್ಲಿಸುವಂತೆ ನಿರ್ದೇಶ ನೀಡಿರುವರು. ಕೇರಳದ ಹೆಚ್ಚಿನ ಕ್ಷೇತ್ರಗಳಲ್ಲಿ ಇಂದಿಗೂ ಪುರುಷರು ಶರ್ಟ್‌ ಹಾಗೂ ಬನಿಯನ್‌ ಕಳಚಿ ಒಳ ಪ್ರವೇಶಿಸಿ ಕ್ಷೇತ್ರ ದರ್ಶನ ನಡೆಸಬೇಕು.ಹಿಂದುಗಳಿಗೆ ಮಾತ್ರ ಪ್ರವೇಶ ಎಂಬುದಾಗಿ ಕ್ಷೇತ್ರಗಳ ಪ್ರವೇಶ ದ್ವಾರದ ಪಕ್ಕದಲ್ಲಿ ನಾಮಫಲಕ ಹಾಕಿರುವುದನ್ನು ಕಾಣಬಹುದು.ಈ ವಿಷಯಕ್ಕೆ ಸಂಬಂಧಿಸಿದಂತೆ ಆಸ್ತಿಕ ಆಚರಣೆಯ ಬಗ್ಗೆ ನಾಸ್ತಿಕ ಸರಕಾರ ಮುತುವರ್ಜಿ ವಹಿಸಿರುವುದು ಭಾರೀ ವಿವಾದಕ್ಕೆಡೆಯಾಗಲಿದೆ.ಈ ಬಗ್ಗೆ ಪ್ರತಿಕ್ರಿಯಿಸಿದ ಅಖೀಲ ಕೇರಳ ತಂತ್ರಿವರ್ಯ ಸಮಾಜದ ವಲಯ ಕಾರ್ಯದರ್ಶಿ ಪುಡವೂರು ಜಯನಾರಾಯಣ ನಂಬೂದಿರಿ, ಈ ವಿಷಯದ ಕುರಿತು ಕ್ಷೇತ್ರಗಳ ಆಡಳಿತ ಸಮಿತಿಯೊಂದಿಗೆ ಚರ್ಚಿಸುವುದಾಗಿ ತಿಳಿಸಿರುವರು. ದೇವಾಲಯದ ಪೂರ್ವ ಸಂಪ್ರದಾಯವನ್ನು ಬದಲಿಸುವುದು ಸೂಕ್ತವಲ್ಲ ಎಂಬುದಾಗಿ ಕ್ಷೇತ್ರಗಳ ಮೊಕ್ತೇಸರರ ಮತ್ತು ಆಡಳಿತ ಅಧಿಕಾರಿಗಳ ಅಭಿಪ್ರಾಯವಾಗಿದೆ. ಹೆಚ್ಚಿನ ದೇವಾಲಯಗಳು ಸಾರ್ವಜನಿಕ ಸೊತ್ತು ಆಗಿರದೆ ಅನುವಂಶಿಕ ಆಡಳಿತಕೊಳಪಟ್ಟಿದೆ.ಇಲ್ಲಿ ಕೆಲವೊಂದು ಕಟ್ಟು ನಿಟ್ಟಿನ ಆಚರಣೆ ಸಂಪ್ರದಾಯಗಳು ಮತ್ತು ನಂಬಿಕೆಗಳು ಸೇರಿದಾಗ ಮಾತ್ರ ಅದು ದೇವಸ್ಥಾನ ಆಗುವುದು. ಆದುದರಿಂದ ಯಾರೋಬ್ಬರನ್ನೂ ಒತ್ತಾಯದ ಮೂಲಕ ಪೂವಾಚಾರದ ಸಂಪ್ರದಾಯಗಳನ್ನು ಬದಲಾಯಿಸುವುದು ತರವಲ್ಲವೆಂಬುದಾಗಿ ಕ್ಷೇತ್ರಗಳ ಸಮಿತಿಗಳು ಪ್ರತಿಕ್ರಿಯಿಸಿದೆ.

ಆಸ್ತಿಕರ ಭಾವನೆಗಳಿಗೆ ಧಕ್ಕೆ ತರುವ ಪ್ರಯತ್ನ ಕ್ಷೇತ್ರಗಳ ಸಂಪ್ರದಾಯ ಮತ್ತು ಆಚರಣೆಗಳನ್ನು ಬದಲಾಯಿಸಲು ಯತ್ನಿಸುತ್ತಿದೆ.ಆಸ್ತಿಕರ ಭಾವನೆಗಳಿಗೆ ಧಕ್ಕೆ ತರಲು ಯತ್ನಿಸುತ್ತಿದೆ.ಇದರಿಂದ ಸರಕಾರಕ್ಕೆ ಕಡುಕೇ ಹೊರತು ಕ್ಷೇತ್ರಗಳಿಗಲ್ಲ.ಆದುದಿಂದ ಭಕ್ತರ ಭಾವನೆಯನ್ನು ತಿಳಿದು ಸರಕಾರ ಮುಂದುವರಿದರೆ ಸರಕಾರಕ್ಕೆ ಒಳಿತು.
ಹೆಸರು ಹೇಳಲು ಇಚ್ಛಿಸದ ಕಾಸರಗೋಡು ಜಿಲ್ಲೆ ಯ ಓರ್ವ ತಂತ್ರಿ

LEAVE A REPLY

Please enter your comment!
Please enter your name here