ಉಡುಪಿ: ದೊಡ್ಡಣಗುಡ್ಡೆಯ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಸಂಪನ್ನಗೊಳ್ಳುವ ಮಹಾರುದ್ರ ಯಾಗದ ಪೂರ್ವಭಾವಿ ಧಾರ್ಮಿಕ ಕಾರ್ಯಕ್ರಮವಾಗಿ ಮಂಗಳವಾರ ಬೆಳಗ್ಗೆಯಿಂದ ಶತರುದ್ರ ಪಾರಾಯಣ ದೇವತಾ ಪ್ರಾರ್ಥನೆ , ಸ್ವಸ್ತಿ ಪುಣ್ಯಾಹ ವಾಚನ, ಆದ್ಯ ಗಣಯಾಗ, ನವಕ ಪ್ರಧಾನ ಕಲಶಾಭಿಷೇಕದೆೊಂದಿಗೆ ಶತರುದ್ರ ಪಾರಾಯಣ ಆರಂಭಗೊಂಡಿತು , ಬುಧವಾರ ಬೆಳಗ್ಗೆ 7 ಗಂಟೆಗೆ ಮಹಾರುದ್ರ ಯಾಗ ಆರಂಭಗೊಂಡು 10 ಗಂಟೆಗೆ ಪೂರ್ಣಾಹುತಿಯಾಗಲಿದೆ. ಭಕ್ತರು ನೀಡಿದ ದ್ರವ್ಯಗಳನ್ನು ಪೂರ್ಣಹುತಿಯಲ್ಲಿ ಸಮರ್ಪಿಸಲಾಗುತ್ತದೆ ಎಂದು ಕ್ಷೇತ್ರ ಉಸ್ತುವಾರಿ ಕುಸುಮಾ ನಾಗರಾಜ್ ತಿಳಿಸಿರುತ್ತಾರೆ .
ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ವೇದಮೂರ್ತಿ ಕೃಷ್ಣಮೂರ್ತಿ ತಂತ್ರಿಗಳ ನೇತೃತ್ವದಲ್ಲಿ ಕೆ. ಪಂಜ ಭಾಸ್ಕರ ಭಟ್ ಪೌರೋಹಿತ್ಯದಲ್ಲಿ ಈ ಮಹಾಯಾಗ ಸಂಪನ್ನಗೊಳ್ಳುವುದು. ಮಧ್ಯಾಹ್ನ ಕ್ಷೇತ್ರದ ನವಶಕ್ತಿ ವೇದಿಕೆಯಲ್ಲಿ ನೆರವೇರಲಿರುವ ಧಾರ್ಮಿಕ ಸಭೆಯಲ್ಲಿ ಶ್ರೀ ಎಡನೀರು ಮಠದ ಶ್ರೀ ಕೇಶವಾನಂದಭಾರತೀ ಶ್ರೀಪಾದರು ಹಾಗೂ ಶ್ರೀ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.
ನಿರಂತರ ಅನ್ನಸಂತರ್ಪಣೆ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಡಾ| ಮಂಜರಿ ಚಂದ್ರ ನಿರ್ದೇಶನದ ಸೃಷ್ಟಿ ಕಲಾ ಕುಟೀರದ ಕಲಾವಿದರಿಂದ ಶಿವಾರ್ಪಣ ಕಾರ್ಯಕ್ರಮ ಜರಗಲಿರುವುದು. ಸಂಜೆ ಕಲ್ಪೋಕ್ತ ಪೂಜೆ ಸಹಿತ ರಂಗ ಪೂಜಾ ಮಹೋತ್ಸವ, ಕರಂಬಳ್ಳಿ ವೆಂಕಟರಮಣ ಭಜನಾ ಮಂಡಳಿ ಹಾಗೂ ಮಾತೃಶ್ರೀ ಭಜನಾ ಮಂಡಳಿ ಭಜಕರಿಂದ ನೃತ್ಯ ಭಜನೆ ನೆರವೇರಲಿದೆ.