ಉಡುಪಿ: ಕೊರೊನಾದಂತಹ ರೋಗ ರುಜಿನಗಳು ನಮ್ಮನ್ನು ಕಾಡಿದಾಗ ಜ್ಯೋತಿಷ್ಯಶಾಸ್ತ್ರ ಪ್ರಕಾರ ನವಗ್ರಹಗಳ ಆರಾಧನೆಯಿಂದ ಮಾತ್ರ ಪರಿಹಾರ ಸಾಧ್ಯ ಎಂದು ದೊಡ್ಡಣಗುಡ್ಡೆ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಅಭಿಪ್ರಾಯಪಟ್ಟಿದ್ದಾರೆ.
ಎ. 5ರ ರವಿವಾರ ರಾತ್ರಿ 9 ಗಂಟೆಗೆ 9 ನಿಮಿಷ ನಾಲ್ಕೂ ದಿಕ್ಕಿನಲ್ಲಿ ದೀಪ ಹಚ್ಚಬೇಕು. ಪ್ರತೀ ಮನೆಯ ಎಲೆಕ್ಟ್ರಿಕ್ ದೀಪಗಳನ್ನು ಆರಿಸಿ ಮನೆಯ ಮುಂಭಾಗದಲ್ಲಿ ಮೊಂಬತ್ತಿ, ಮೊಬೈಲ್ ಲೈಟ್ ಅಥವಾ ಟಾರ್ಚ್ ಬೆಳಗಿಸಿ. ದೀಪ ಹಚ್ಚುವ ಮೂಲಕ ಭಾರತವನ್ನು ಬೆಳಗಿಸೋಣ ಎಂದು ಪ್ರಧಾನಿ ಮೋದಿ ಅವರು ಕರೆ ನೀಡಿದ್ದಾರೆ. ಸೂರ್ಯನ ಅಧಿಪತ್ಯದ ರವಿವಾರ 9 ಗಂಟೆಗೆ 9 ನಿಮಿಷಗಳ ಕಾಲ ದೀಪವನ್ನು ಹಚ್ಚುವುದು. ಸಂಖ್ಯೆ 9 ಕುಜನನ್ನು ಪ್ರತಿನಿಧಿಸುತ್ತದೆ. ಸೂರ್ಯನ ಮಿತ್ರನಾದ ಕುಜ ಅಗ್ನಿ ತತ್ವವನ್ನು ಹೊಂದಿರುತ್ತಾನೆ. ವೈರಸ್ನಂತಹ ಮಹಾಮಾರಿಯನ್ನು ರಾಹುಗ್ರಹಕ್ಕೆ ಹೋಲಿಸಲಾಗುತ್ತದೆ. ಕುಜ ಹಾಗೂ ರಾಹುಗ್ರಹಗಳು ಪರಸ್ಪರ ಶತ್ರು ಗ್ರಹಗಳು. ಈ ವೈರಸ್ನ್ನು ನಾಶಗೊಳಿಸಲು ಪ್ರತೀ ಮನೆಯಲ್ಲಿಯೂ ದೀಪ ಬೆಳಗಿಸಿ ಅಗ್ನಿ ತತ್ವದಿಂದ ಶಮನಗೊಳಿಸಬಹುದು ಎನ್ನುವುದು ಜ್ಯೋತಿಷ್ಯಶಾಸ್ತ್ರದ ಲೆಕ್ಕಾಚಾರ ಎಂದು ತಿಳಿಸಿದ್ದಾರೆ.
ದೀಪ ಪ್ರಜ್ವಲನೆ ಎನ್ನುವುದು ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತದೆ. ಆತ್ಮಸ್ಥೈರ್ಯ ಹೆಚ್ಚಾದಾಗ ಎಂತಹ ಕಠಿನ ಪರಿಸ್ಥಿತಿಯನ್ನು ಎದುರಿಸಲು ಶಕ್ತರಾಗುತ್ತೇವೆ. ಧಾರ್ಮಿಕವಾಗಿಯೂ ಗಂಡಾಂತರಗಳು ಎದುರಾದಾಗ ದೇವರ ಮನೆಯಲ್ಲಿ ದೀಪ ಹಚ್ಚಿ ಪ್ರಾರ್ಥಿಸುವುದು ವಾಡಿಕೆ. ಅದರಂತೆ ಪ್ರಧಾನಿ ಅವರು ಕರೆ ನೀಡಿದ್ದಾರೆ. ದೀಪ ಬೆಳಗಿಸಿ ಕೊರೊನಾ ಕತ್ತಲೆ ದೂರ ಮಾಡೋಣ ಎಂದು ಗುರೂಜಿ ತಿಳಿಸಿದ್ದಾರೆ.