Home ಧಾರ್ಮಿಕ ಸುದ್ದಿ ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ

ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ

ಮೈದಳೆದು ನಿಂತ ನೂತನ ರಾಜಗೋಪುರ

1386
0
SHARE

ಉಡುಪಿ: ದೊಡ್ಡಣಗುಡ್ಡೆಯ ಶ್ರೀಚಕ್ರಪೀಠ ಸುರ ಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಅಷ್ಟ ಬಂಧ ಬ್ರಹ್ಮಕಲಶೋತ್ಸವದ ಪರ್ವಕಾಲದಲ್ಲಿ ಉದ್ಘಾಟನೆಗೊಳ್ಳಬೇಕು ಎಂಬುದಾಗಿ ಆಡಳಿತ ಧರ್ಮದರ್ಶಿ ಶ್ರೀ ರಮಾನಂದ ಗುರೂಜೀ ಅವರಿಗೆ ತಾಯಿಯು ನೀಡಿದ ಪ್ರೇರಣೆಯಂತೆ ನಿರ್ಮಾಣಗೊಳ್ಳುತ್ತಿರುವ ಆಕರ್ಷಕ ರಾಜಗೋಪುರ ಈಗ ಅಂತಿಮ ರೂಪ ಪಡೆದುಕೊಂಡಿದೆ.

ತನ್ನ ಕಾರಣಿಕ ಮತ್ತು ಮಹಿಮೆಯಿಂದ ಬಹುದೂರದ ಭಕ್ತರನ್ನೂ ಸೆಳೆದು ಬಹುವಿಧದ ಸೇವೆಗಳಿಂದ ಸಂತೃಪ್ತಳಾಗಿ, ನಾಟ್ಯರಾಣಿ ಗಂಧರ್ವ ಕನ್ಯೆಗೊಲಿದ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಈಗ ಬ್ರಹ್ಮ ಕಲಶೋತ್ಸವ ಸಂಭ್ರಮದ ತಯಾರಿಯ ಭಾಗವಾಗಿ ನಿರ್ಮಾಣಗೊಂಡಿರುವ ರಾಜಗೋಪುರವು ಕ್ಷೇತ್ರದ ಮೆರುಗನ್ನು ಹೆಚ್ಚಿಸಿದೆ.

ಅಪರೂಪದ ರಾಜಗೋಪುರ
ಈ ಸ್ಥಳಕ್ಕೆ ಅಂದು ರಮಾನಂದರು ಬಂದಾಗ ಕಂಡ ದೃಶ್ಯಾವಳಿಗಳೇ ಈ ರಾಜ ಗೋಪುರದಲ್ಲಿ ಚಿತ್ರಣಗೊಂಡಿವೆ. ಬೃಹದಾಕಾರದ ಆಲದ ಮರ, ತಪೋನಿರತ ಮುನಿವರ್ಯರು, ನಾಟ್ಯರಾಣಿ ಗಂಧರ್ವ ಕನ್ಯೆ, ಸಿಂಹಾರೂಢಳಾದ ದುರ್ಗಾ ಆದಿಶಕ್ತಿ ದೇವಿ, ವೀಣಾಪಾಣಿ ಶಾರದಾ ಮಾತೆ, ಪದ್ಮಾಸನಸ್ಥಿತೆ ಮಹಾಲಕ್ಷ್ಮೀ ಮತ್ತು ಇವರೆಲ್ಲರಿಗೂ ನೆರಳನ್ನೀಯುತ್ತಿರುವ ಆದಿಶೇಷನ ಆಕರ್ಷಕ ಚಿತ್ತಾರ ತಂಜಾವೂರಿನ ಕಲಾವಿದರ ಕೈಚಳಕದಲ್ಲಿ ಸಿಮೆಂಟಿನಲ್ಲಿ ಕಲಾತ್ಮಕವಾಗಿ ಮೂಡಿ ಬಂದಿವೆ.

ರಾಜಗೋಪುರದ ನಾಲ್ಕು ದಿಕ್ಕುಗಳ ಸ್ತಂಭಗಳು ಆಲದ ಮರದೋಪಾದಿಯಲ್ಲಿವೆ, ಕ್ಷೇತ್ರದ ಕೇಂದ್ರಬಿಂದುವಾದ ಆಲದ ಮರವೇ ಶಕ್ತಿಕ್ಷೇತ್ರದ ರಾಜಗೋಪುರವಾಗಿ ಭಕ್ತರನ್ನು ಸ್ವಾಗತಿಸುವಂತೆ ಕಂಡುಬರುತ್ತಿದೆ. ಮಹಾಮಾತೆಯ ಸಂಕಲ್ಪ ಮಾತ್ರದಿಂದಲೇ ಅತೀ ಶೀಘ್ರಗತಿಯಲ್ಲಿ ಮೈದಳೆದು ನಿಂತಿರುವ ರಾಜಗೋಪುರವು ಗತಕಾಲದ ಮಹಿಮೆಯನ್ನು ಸಾರುವುದಕ್ಕಾಗಿಯೇ ನಿರ್ಮಾಣವಾದಂತಿದೆ ಎಂದು ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್‌ ತಿಳಿಸಿದ್ದಾರೆ.

ಶಕ್ತಿಸ್ಥಾನಕ್ಕೆ ರಾಜಗೋಪುರ ಪೂರಕ
ಕ್ಷೇತ್ರವೊಂದು ಶಕ್ತಿಸ್ಥಾನವಾಗಿ ರೂಪುಗೊಳ್ಳಬೇಕಾದರೆ ಅಲ್ಲಿರಲೇಬೇಕಾದ ಹಲವಾರು ಅಂಶಗಳಿವೆ. ಅಂತಹ ಅಂಶಗಳಲ್ಲಿ ರಾಜಗೋಪುರವೂ ಒಂದು. ಈ ನೆಲೆಯಲ್ಲಿ ಮೇ ತಿಂಗಳಲ್ಲಿ ನಡೆಯಲ್ಪಡುವ ಅಷ್ಟಬಂಧ ಬ್ರಹ್ಮಕಲಶೋತ್ಸವದ ಸತ್ಕಾಲದಲ್ಲಿ ರಾಜಗೋಪುರ ನಿರ್ಮಿಸುವುದಕ್ಕೆ ಮಾತೆಯು ಯೋಗ-ಭಾಗ್ಯ- ಶಕ್ತಿ ಕರುಣಿಸಿದ್ದಾಳೆ.
ಶ್ರೀ ರಮಾನಂದ ಗುರೂಜೀ, ಧರ್ಮದರ್ಶಿ

LEAVE A REPLY

Please enter your comment!
Please enter your name here