Home ನಂಬಿಕೆ ಸುತ್ತಮುತ್ತ ಪತಂಗ ಮಾಡುವ ತಪ್ಪುಗಳು ನಮ್ಮ ಜೀವನಕ್ಕೆ ಹೇಗೆ ಮಾದರಿಯಾಗುತ್ತೆ ಗೊತ್ತಾ?

ಪತಂಗ ಮಾಡುವ ತಪ್ಪುಗಳು ನಮ್ಮ ಜೀವನಕ್ಕೆ ಹೇಗೆ ಮಾದರಿಯಾಗುತ್ತೆ ಗೊತ್ತಾ?

498
0
SHARE

ಶ್ರೀಮದ್ಭಾಗವತದಲ್ಲಿ ಹೇಳಿದ ಇಪ್ಪತ್ತನಾಲ್ಕು ಗುರುಗಳಲ್ಲಿ ಹನ್ನೊಂದನೆಯ ಗುರು ಪತಂಗ. ಇದನ್ನು ದೀಪದ ಹುಳು ಎಂತಲೂ ಕರೆಯಲಾಗುತ್ತದೆ. ಈ ದೀಪದ ಹುಳುವನ್ನು ಸೂಕ್ಷ್ಮವಾಗಿ ಗಮನಿಸಿ ಇದರಿಂದಲೂ ನಾವು ಕಲಿಯಬೇಕಾದ ಪಾಠವಿದೆ ಎನ್ನುತ್ತದೆ ಶ್ರೀಮದ್ಭಾಗವತ. ಬದುಕಿನ ಹಾದಿಯನ್ನು ಸರಳವಾಗಿ ಅರ್ಥೈಸುತ್ತಲೇ ಶ್ರೀಮದ್ಭಾಗವತದಲ್ಲಿ ಅನೇಕ ಸಂಗತಿಗಳು ಹೇಳಲ್ಪಟ್ಟಿವೆ ಮತ್ತು ಅವು ಮಾರ್ಗದರ್ಶಕವೂ ಆಗಿವೆ. ಬೇರೆಯವರ ತಪ್ಪುಗಳನ್ನು ನೋಡಿ ಮತ್ತೆ ಆ ತಪ್ಪುಗಳನ್ನು ಮಾಡದವನೇ ಜಾಣನಂತೆ. ಇಲ್ಲಿ ಪತಂಗವು ಮಾಡುವ ತಪ್ಪುಗಳು ನಮ್ಮ ಜೀವನಕ್ಕೆ ಹೇಗೆ ಮಾದರಿಯಾಗಿವೆ ಎಂಬುದನ್ನು ಹೇಳಲಾಗಿದೆ.

ಪತಂಗ ಅಥವಾ ದೀಪದ ಹುಳವು ಬೆಂಕಿಗೆ ಆಕರ್ಷಿತವಾಗಿ ಬೆಂಕಿಯ ಸುತ್ತ ಹಾರುತ್ತ ಹಾರುತ್ತ ಬೆಂಕಿಯನ್ನು ಹಿಡಿಯಲು ಹೋಗಿ ಆ ಬೆಂಕಿಯಿಂದಲೇ ಸಾವನ್ನಪ್ಪುತ್ತದೆ. ಅಂತೆಯೇ ಅಜಿತೇಂದ್ರಿಯ ವ್ಯಕ್ತಿಯು ದೇವಮಾಯಾರೂಪೀ ಸ್ತ್ರೀಯರನ್ನು ನೋಡಿ, ಅವಳ ಮೋಹದಲ್ಲಿ ಮೋಸಹೋಗಿ ಅಂಧಕಾರಮಯ ನರಕದಲ್ಲಿ ಬೀಳುತ್ತಾನೆ. ಅಜಿತೇಂದ್ರಿಯ ಎಂದರೆ ಇಂದ್ರಿಯಗಳ ಗುಲಾಮ ಅಥವಾ ಇಂದ್ರಿಯಗಳನ್ನು ನಿಯಂತ್ರಿಸಲಾಗದವನು ಎಂದರ್ಥ. ಕಾಮಿನಿ, ಕಾಂಚನ, ಆಭೂಷಣ, ವಸ್ತ್ರ ಮೊದಲಾದವು ಮಯಾ ನಿರ್ಮಿತವಾಗಿವೆ. ಮೂಢಬುದ್ಧಿಯ ಮಾನವನು ಉಪಭೋಗ ಬುದ್ಧಿಯಿಂದ ಅವುಗಳಲ್ಲಿ ಆಸಕ್ತನಾಗಿ ತನ್ನ ವಿವೇಕವನ್ನು ಕಳೆದುಕೊಳ್ಳುತ್ತಾನೆ. ದೀಪದ ಹುಳುವಿನಂತೆ ಸ್ವತಃ ಅವುಗಳಲ್ಲಿ ಬಿದ್ದು ತನ್ನನಾಶವನ್ನು ಮಾಡಿಕೊಳ್ಳುತ್ತಾನೆ.

ಇದು ತುಂಬ ಸುಂದರವಾದ ಪಾಠ. ನಮ್ಮ ಮನಸ್ಸೂ ಕೂಡ ಪತಂಗದಂತೆ ಕುರುಡು ಮೋಹದಿಂದ ಬಂಧಿಸಲ್ಪಟ್ಟಿರುತ್ತದೆ. ಪತಂಗಕ್ಕೆ ಬೆಂಕಿಯ ಸೌಂದರ್ಯವಷ್ಟೇ ಗೊತ್ತು. ಆದರೆ ಅದು ಸುಟ್ಟುಬಿಡುತ್ತದೆಂಬುದು ಗೊತ್ತಿಲ್ಲ. ಇದು ಒಂದು ಬಗೆಯ ಮೋಹದಿಂದ ಉಂಟಾಗುವ ಕುರುಡುತನ. ನಾವೂ ಕೂಡ ಇಂತಹದ್ದೇ ಮೋಹದಲ್ಲಿ ಗೊತ್ತಿದ್ದೂ ಗೊತ್ತಿದ್ದೂ ಸಿಲುಕಿ ಬಿಡುತ್ತೇವೆ. ಒಂದು ಕ್ಷಣದ ಮೋಹಕ್ಕೆ ಕುರುಡರಾಗಿ ಪತಂಗದಂತೆ ನರಕ ಯಾತನೆಗೆ ಸಿಲುಕಿಕೊಂಡರೆ ಜೀವನವು ದುಃಸ್ಥಿತಿಯನ್ನು ತಲುಪುತ್ತದೆ. ಇವೆಲ್ಲಕ್ಕೂ ಕಾರಣ ಇಂದ್ರಿಯಗಳೇ ಆಗಿವೆ. ಇಂದ್ರಿಯಗಳನ್ನು ನಿಯಂತ್ರಣದಲ್ಲಿಟ್ಟು ಕೊಂಡವನು ಪತಂಗದಂತೆ ಬೆಂಕಿಗೆ ಆಹುತಿಯಾಗಲಾರ. ಆತನಿಗೆ ಇಂದ್ರಿಯಗಳು ಏನನ್ನು ಬಯಸುತ್ತಿವೆ ಮತ್ತು ಅವನ್ನು ಈಡೇರಿಸಲು ಮುಂದಾದರೆ ಭವಿಷ್ಯದಲ್ಲಿ ಏನಾಗಬಹುದು? ಎಂಬುದರ ಅರಿವಿರುತ್ತದೆ. ಹಾಗಾಗಿ ಇಂದ್ರಿಯಗಳನ್ನು ಗೆಲ್ಲುವುದು ಬಹುಮುಖ್ಯ.

ಪ್ರಪಂಚದಲ್ಲಿ ನಮ್ಮ ಇಂದ್ರಿಯಗಳನ್ನು ತುಂಬಾ ಸುಲಭವಾಗಿ ತಮ್ಮತ್ತ ಆಕರ್ಷಿಸುವ ಸಂಗತಿಗಳು ಬಹಳಷ್ಟಿವೆ. ಆದರೆ ನಾವು ಅಂತಹ ಆಕರ್ಷಣೆಗಳತ್ತ ಚಿತ್ತವಿರಿಸದೆ ಇದ್ದಾಗ ಸುಖವೆಂಬ ಭ್ರಮೆಯ ಬೆಂಕಿಯಲ್ಲಿ ಬಿದ್ದು ಮುಂದೆ ಪಶ್ಚಾತಾಪವನ್ನು ಪಡುವ ಪರಿಸ್ಥಿತಿ ನಿರ್ಮಾಣವಾಗಲಾರದು. ಹಾಗಾಗಿ ಭೋಗಲಾಲಸೆಗಳಿಂದ ದೂರವಿರಬೇಕು. ಆಸೆಗಳಿಗೆ ಕಡಿವಾಣವಿರಬೇಕು. ಉಪಭೋಗವನ್ನು ಬಯಸುವ ಮನಸ್ಸಿಗೆ ಸರಿತಪ್ಪುಗಳನ್ನು ಪರಿಶೀಲಿಸುವ ವ್ಯವಧಾನವಾಗಲೀ, ವಿವೇಕವಾಗಲೀ ಇರುವುದಿಲ್ಲ. ಹಾಗಾಗಿ ಪತಂಗದಂತೆ ಬಾಹ್ಯ ಅಂದವನ್ನಷ್ಟೇ ದುರ್ಬಲ ಮನಸ್ಸು ಗುರುತಿಸುತ್ತದೆ ಮತ್ತು ಅಜ್ಞಾನದಿಂದಾಗಿ ಸುಲಭವಾಗಿ ಮೋಹಕ್ಕೆ ಸಿಲುಕಿ, ಅಧರ್ಮದ ನಡೆಗೆ ಮುಂದಾಗುತ್ತದೆ. ಇದನ್ನು ಮೂಢಬುದ್ಧಿ ಎಂದು ಹೇಳಲಾಗಿದೆ. ನಮ್ಮ ಮನಸ್ಸು ಯಾವತ್ತಿಗೂ ಬೆಂಕಿಯ ಚಂದಕ್ಕೆ ಸೋತು ಸಾಯುವ ಪತಂಗದಂತೆ ಆಗಬಾರದು.

..ಮುಂದುವರಿಯುವುದು.
||ಸರಳವಾಗಿ ಯೋಚಿಸಿ-ಸಂಸ್ಕಾರಯುತರಾಗಿ-ಸರಳರಾಗಿ ಜೀವಿಸಿ||

– ಭಾಸ್ವ.

LEAVE A REPLY

Please enter your comment!
Please enter your name here