Home ಧಾರ್ಮಿಕ ಕ್ಷೇತ್ರಗಳು 109 ಗುಹೆಗಳ ಪಶ್ಚಿಮ ನಲಂದಾ ‘ಕನ್ಹೇರಿ ಕೇವ್ಸ್ ಬಗ್ಗೆ ಗೊತ್ತಾ?

109 ಗುಹೆಗಳ ಪಶ್ಚಿಮ ನಲಂದಾ ‘ಕನ್ಹೇರಿ ಕೇವ್ಸ್ ಬಗ್ಗೆ ಗೊತ್ತಾ?

3069
0
SHARE

ದೇಶದ ಮಹಾನಗರದಲ್ಲಿರುವ ಏಕಮಾತ್ರ ರಾಷ್ಟ್ರೀಯ ಉದ್ಯಾನವೆಂದರೆ, ಅದು ಮುಂಬಯಿಯಲ್ಲಿರುವ ‘ಸಂಜಯಗಾಂಧಿ’ ರಾಷ್ಟ್ರೀಯ ಉದ್ಯಾನ’.103 ವರ್ಗ ಕಿ.ಮೀ. ವಿಸ್ತಾರದಲ್ಲಿ ಹರಡಿರುವ ಈ ನ್ಯಾಷನಲ್ ಪಾರ್ಕ್ ಉತ್ತರ ಮುಂಬಯಿಯಲ್ಲಿರುವ ಬೊರಿವಲಿ ಪೂರ್ವದಲ್ಲಿದೆ. ಈ ದಟ್ಟ ಅರಣ್ಯದ ನಡುವೆ ಬೆಟ್ಟಗಳಲ್ಲಿ ‘ಕನ್ಹೇರಿ’ ಬೌದ್ಧ ವಿಹಾರವಿದೆ. ಒಂದೊಮ್ಮೆ ಬೌದ್ಧಿಕ ದೀಕ್ಷೆ ಮತ್ತು ಜ್ಞಾನದ ಬಹು ದೊಡ್ಡ ಕೇಂದ್ರವಾಗಿರುವ ಈ ಕನ್ಹೇರಿ ಬೌದ್ಧ ವಿಹಾರಕ್ಕೆ ನಲಂದಾ ವಿಶ್ವ ವಿದ್ಯಾಲಯದ ತುಲನೆ ಮಾಡಲಾಗುತ್ತಿತ್ತು. ಆದರೆ ಇಂದು ಇದರ ಧಾರ್ಮಿಕ ಮತ್ತು ಪುರಾತತ್ತ್ವ ಮಹತ್ತ್ವದ ಬದಲು ಕೇವಲ ಪ್ರವಾಸಿ ತಾಣವಾಗಿ ಉಳಿದು ಕೊಳ್ಳುತ್ತಿದೆಯೇ ಎಂಬ ಪ್ರಶ್ನೆ ಕನ್ಹೇರಿ ಕೇವ್ಸ್ ಗೆ ಭೇಟಿ ನೀಡಿದಾಗ ಕಾಡದಿರದು. ಈ ಬೌದ್ಧ ವಿಹಾರದಲ್ಲಿ 109 ಗುಹೆಗಳಿವೆ. ಬಂಡೆಗಲ್ಲುಗಳನ್ನು ಕೆತ್ತಿ ಇವುಗಳನ್ನು ನಿರ್ಮಿಸಲಾಗಿದೆ. ಇವುಗಳನ್ನು ಎಷ್ಟು ಉಪೇಕ್ಷೆ ಮಾಡಲಾಗಿದೆ ಎಂದರೆ, ಅನೇಕ ಗುಹೆಗಳಿಗೆ ಹೋಗಲು ಸರಿಯಾದ ದಾರಿಯೇ ಇಲ್ಲ!

ಅಧ್ಯಾತ್ಯ- ವ್ಯಾಪಾರ ಕೇಂದ್ರ
ಒಂದೊಮ್ಮೆ ದೇಶದ ಪಶ್ಚಿಮ ಭಾಗದ ಮಹತ್ತ್ವಪೂರ್ಣ ಜ್ಞಾನಕೇಂದ್ರವಾಗಿ, ನಲಂದಾ ವಿಶ್ವವಿದ್ಯಾಲಯದೊಂದಿಗೆ ತುಲನೆ ಮಾಡಲಾಗುತ್ತಿದ್ದ ಕನ್ಹೇರಿ ಕೇವ್ಸ್ ನ ಬೌದ್ಧ ವಿಹಾರಗಳ ನಿರ್ಮಾಣ ಕಾಲ ಕ್ರಿಸ್ತಪೂರ್ವದ ಅಂತಿಮ ಶತಾಬ್ದಿಯಿಂದ ಕ್ರಿ.ಶ. ಒಂಭತ್ತನೆಯ ಶತಾಬ್ದಿ ತನಕ ಎಂದು ಇತಿಹಾಸಕಾರರು ಗುರುತಿಸುತ್ತಾರೆ. ಈ ಗುಹೆಗಳಲ್ಲಿ ಬೌದ್ಧ ವಿಹಾರಗಳಿವೆ.ಅಧ್ಯಯನ, ನಿವಾಸ ಮತ್ತು ಧ್ಯಾನಕ್ಕಾಗಿ ಆ ಗುಹೆಗಳನ್ನು ಬಳಸುತ್ತಿದ್ದರು. ಗುಹೆಗಳ ಒಳಗಿನ ಸ್ವರೂಪ ನೋಡಿದಾಗ ಅದು ಒಂದು ಕಾಲದಲ್ಲಿ ಅಧಾತ್ಮ ಮತ್ತು ಅಧ್ಯಯನದ ಬಹುದೊಡ್ಡ ಕೇಂದ್ರವಾಗಿರುವುದು ಗೋಚರವಾಗುತ್ತದೆ. ಜೊತೆಗೆ ಆ ಪ್ರದೇಶ ವ್ಯಾಪಾರದ ಬಹುಮುಖ್ಯ ಕೇಂದ್ರವೂ ಆಗಿತ್ತು. ಕಲ್ಯಾಣ್, ಸೋಪಾರ, ನಾಸಿಕ್, ಪೈಠಣ್, ಉಜ್ಜೇನ್…. ಪ್ರಮುಖ ಸ್ಥಳಗಳಿಗೆ ವ್ಯಾಪಾರಕ್ಕೆ ಹೋಗಿ ಬರುವವರ ವಿಶ್ರಾಂತಿ ಸ್ಥಳವಾಗಿಯೂ ಕನ್ಹೇರಿ ಪ್ರಸಿದ್ಧಿ ಪಡೆದಿತ್ತು.

ನಾವು ಬೊರಿವಲಿ ರೈಲ್ವೇ ಸ್ಟೇಷನ್ ನಲ್ಲಿ ಇಳಿದು ರಿಕ್ಷಾದಲ್ಲಿ ಸಂಜಯ ಗಾಂಧಿ ‘ನ್ಯಾಷನಲ್ ಪಾರ್ಕ್ ಗೆ ಬಂದೆವು. ರೈಲ್ವೇ ಸ್ಟೇಷನ್ ನಿಂದ ರಿಕ್ಷಾದಲ್ಲಿ ಕನಿಷ್ಠ ದರವಷ್ಟೇ. ಐದು ನಿಮಿಷದ ದಾರಿ. ಕನ್ಹೇರಿ ಕೇವ್ಸ್ ಗೆ ಹೋಗಬೇಕಾದರೆ ಸಂಜಯಗಾಂಧಿ ರಾಷ್ಟ್ರೀಯ ಉದ್ಯಾನಕ್ಕೇ ಬರಬೇಕು. ಇಲ್ಲಿಂದ ಏಳು ಕಿ.ಮೀ ಧೂರದಲ್ಲಿದೆ ಕನ್ಹೇರಿ ಗುಹೆಗಳು. ಹಾಗಾಗಿ ಪ್ರವೇಶ ಶುಲ್ಕ ನೀಡಿ ಒಳಬಂದ ಅನಂತರ ಬಸ್ಸು ಅಥವಾ ಶೇರ್ ಜೀಪ್ ಕಾರ್ ನಲ್ಲಿ ಕನ್ಹೇರಿ ಗುಹೆಯತ್ತ ತೆರಳಬೇಕು. ಒಳಹೋಗಲು ಅಲ್ಲಿ ಮತ್ತೆ ಪ್ರವೇಶ ಶುಲ್ಕ ನೀಡಬೇಕು.
ಒಳಗೋಗುವ ಮುನ್ನ ಉದ್ಯಾನದ ಗಾರ್ಡ್ ಗಳು ಪ್ರವಾಸಿಗರ ಬ್ಯಾಗ್ ಗಳನ್ನು ಚೆಕ್ ಮಾಡುತ್ತಾರೆ. ಆ ದಿನದ ಪತ್ರಿಕೆ ನನ್ನ ಬ್ಯಾಗ್ ನಲ್ಲಿದ್ದುದ್ದನ್ನು ತೆಗೆದು” ಇದನ್ನು ಒಯ್ಯುವಂತಿಲ್ಲ” ಅಂದರು. “ಇದು ಇವತ್ತಿನ ಪತ್ರಿಕೆ. ಹಣ ಕೊಟ್ಟು ಪಡೆದಿದ್ದು“ ಅಂದೆ. “ಅಲ್ಲೆಲ್ಲಾ ಪೇಪರ್ ಹಾಸಿ ಅದರ ಮೇಲೆ ಕೂರುತ್ತಾರೆ. ಅನಂತರ ಪೇಪರ್ ಅಲ್ಲೇ ಬಿಟ್ಟು ಹೋಗುತ್ತಾರೆ.,ಅದಕ್ಕೆ” ಅಂದ ಗಾರ್ಡ್. ನಾನು ಪ್ರೆಸ್ ಕಾರ್ಡ್ ತೋರಿಸಿದ ಬಳಿಕ ಅವನಿಗೆ ಅರ್ಥವಾಗಿ ಮತ್ತೇ ಬ್ಯಾಗ್ ನಲ್ಲೇ ಪತ್ರಿಕೆ ಇರಿಸಿದ.

ಮಳೆಗಾಲ ಮುಗಿದರೂ ನ್ಯಾಷನಲ್ ಪಾರ್ಕ್ ನಲ್ಲಿ ಬೋಟಿಂಗ್ ಆರಂಭವಾಗಿರಲಿಲ್ಲ, ಪ್ರವಾಸಿ ಆಕರ್ಷಣೆಯ ಮಿನಿರೈಲೂ ಆರಂಭವಾಗಿರಲಿಲ್ಲ. ಕೇವಲ ಸಫಾರಿ ಮಾತ್ರ ಇತ್ತು. ಉದ್ಯಾನದ ಅನೇಕ ಸ್ಥಳಗಳಲ್ಲಿ ಅನಧಿಕೃತ ಜೋಪಡಿಗಳು ಜಾಗವನ್ನು ಕಬಳಿಸಿವೆ. ಕೆಲವೆಡೆ ಪ್ರವಾಸಿಗರನ್ನು ಲೂಟಿ ಮಾಡಲಾಗುತ್ತಿದೆ.

ಸಿರಿನ್ ಎನ್ ವಾಯರ್ನ್ ಮೆಂಟ್ ಸರ್ವಿಸಸ್ ದಶಕದ ಹಿಂದೆ ತನ್ನ ಅಧ್ಯಯನದಲ್ಲಿ ಧ್ವನಿ ಮಾಲಿನ್ಯ, ಜಲಮಾನಲಿನ್ಯ, ಜಲ್ಲಿಕಲ್ಲು ಒಡೆಯುವ ಕಾರ್ಖಾನೆಗಳ ಸದ್ದು, ಅತಿಕ್ರಮಣಗಳು….ಈ ಎಲ್ಲರಿಂದ ಉದ್ಯಾನಕ್ಕೆ ಹಾನಿ ಸಂಭವಿಸುತ್ತಿದೆ ಎಂದು ಉಚ್ಚರಿಸಿ ವರದಿ ನೀಡಿತ್ತು. ಉದ್ಯಾನದ ಪ್ರವೇಶದ್ವಾರವು ಮುಂಬಯಿ ಅಹಮದಾಬಾದ್ ರಾಷ್ಟ್ರೀಯ ಹೆದ್ದಾರಿಯೂ ಆಗಿರುವುದರಿಂದ ವಾಹನಗಳ ಓಡಾಟ ವಿಪರೀತ. ಹೀಗಾಗಿ ಪಾರ್ಕ್ ನ ಒಳಗಿನ ಪ್ರಾಣಿಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಆಗಾಗ ಬೆಂಕಿ ಪ್ರಕರಣಗಳೂ ವರದಿಯಾಗುತ್ತಿದ್ದು, ವನಸ್ಪತಿಗಳೂ ನಾಶವಾಗುತ್ತಿವೆ.ಇದರ ಇನ್ನೊಂದು ತುದಿಯಲ್ಲಿರುವ ‘ಯೆವೂರ್’ ಕೂಡ ‘ಪಿಕ್ನಿಕ್ ಸ್ಪಾಟ್’ ಆಗುತ್ತಿದ್ದು ಧ್ವನಿಮಾಲಿನ್ಯಕ್ಕೆ ತುತ್ತಾಗಿದೆ. ಇಲ್ಲಿರುವ ಮಂಗ, ನವಿಲು, ಕಾಡು ಕೋಳಿ, ಜಿಂಕೆ….ಮೊದಲಾದ ಪಶು-ಪಕ್ಷಿಗಳ ಸಂಖ್ಯೆ ಸುಮಾರು ಶೇ. 50 ರಷ್ಟು ಕಡಿಮೆಯಾಗಿವೆ.
ಮುಂಬಯಿಯ ಪ್ರಖ್ಯಾತ ಗುಹೆಗಳು

ಮುಂಬಯಿ ಮತ್ತು ಅದರ ಉಪನಗರಗಳಲ್ಲಿ ಕನ್ಹೇರಿ ಪರಿಸರಕ್ಕೆ ಗೌರವಯುತವಾದ ಇತಿಹಾಸವಿದೆ. ಮಂಬಯಿಯೇ ಹಿಂದೂ ಮತ್ತು ಬೌದ್ಧರ ಹಲವಾರು ಗುಹಾ ಮಂದಿರಗಳಿವೆ. ಕನ್ಹೇರಿ ಗುಹೆಗಳು, ಮಂಡಪೇಶ್ವರ ಗುಹೆಗಳು, ಜೋಗೇಶ್ವರಿ ಗುಹೆಗಳು, ಮಹಾಕಾಲಿ ಗುಹೆಗಳು, ಎಲಿಫೆಂಟಾ ಗುಹೆಗಳು….ಇನ್ನೂ ದೂರಕ್ಕೆ ಹೋದರೆ ಲೋಣಾವಾಲಾದಿಂಧ 12 ಕಿ.ಮೀ ಧೂರದಲ್ಲಿ ಭಾಜಾ ಗುಹೆಗಳು, ಕಾರ್ಲಾ ಗುಹೆಗಳು…. ಮೊದಲಾದವು. ಪ್ರತಿಯೊಂದು ಗುಹೆಗಳಿಗೂ ಅದರದ್ದೇ ಆದ ಇತಿಹಾಸ, ಮಹತ್ತ್ವವಿದೆ. ಎಲಿಫೆಂಟಾ ಕೇವ್ಸ್ ದಕ್ಷಿಣ ಮುಂಬಯಿಯ ಗೇಟ್ ವೇ ಆಫ್ ಇಂಡಿಯಾದಿಂದ ಹತ್ತು ಕಿ.ಮೀ ದೂರದಲ್ಲಿದೆ. ಬೊರಿವಲಿ-ದಹಿಸರ್ ನಡುವೆ ಮಂಡಪೇಶ್ವರ ಗುಹೆ ಇದೆ. ಎಲಿಫೆಂಟಾ ಗುಹೆಗಳು ಮತ್ತು ಜೋಗೇಶ್ವರಿಯ ಗುಹೆಗಳ ಶಿಲೆಗಳ ಮೇಲೆ ಜೋಪಡಿ, ಕಟ್ಟಡಗಳ ನೀರು ಹರಿಯುತ್ತದೆ. ಈ ಶಿಲೆಗಳನ್ನು ಬಟ್ಟೆ ಒಣಗಿಸಲು ಬಳಸುತ್ತಾರೆ. ಅನೇಕ ಕಡೆ ಡಂಪಿಗ್ ಗ್ರೌಂಡ್ ಆಗಿ ಪರಿವರ್ತಿತಗೊಳ್ಳುತ್ತಿದೆ.

ಜೋಗ್ವೇಶ್ವರಿಯ ಗುಹೆಗಳ ನಿರ್ಮಾಣ ಕ್ರಿ.ಶ.520-550ರ ಸುಮಾರಿಗೆ ಆಗಿತ್ತು. 13ನೆಯ ಶತಾಬ್ದಿ ತನಕ ಪೂಜೆ ಅರ್ಚನೆ ನಡೆಯುತ್ತಿತ್ತು. ಅನಂತರ ಮುಸ್ಲಿಂ ಆಕ್ರಮಣ, ಪೋರ್ಚುಗೀಸ್ ಆಕ್ರಮಣಕ್ಕೆ ಬಲಿಯಾಯಿತು.

ಆದರೆ ಮುಂಬಯಿ ಮಹಾನಗರದ ಕನ್ಹೇರಿ ಗುಹೆಗಳಿಗೆ ಇಂದಿಗೂ ಪ್ರವಾಸಿ ಆಕರ್ಷಣೆ ಇದೆ. ಭಾರತೀಯ ಪುರಾತತ್ತ್ವ ಇಲಾಖೆಯ ಔರಂಗಾಬಾದ್ ಸರ್ಕಲ್ ನ ಸೇವಾ ನಿವೃತ್ತಿ ಸಂರಕ್ಷಣಾ ಸಹಾಯಕ ಎ,ಎಂ.ವಾಣಿ, ಕನ್ಹೇರಿ ಗುಹೆಗಳ ಪುರಾತಾತ್ತ್ವಿಕ ಮಹತ್ತ್ಚದ ವ್ಯಾಪಕ ಅಧ್ಯಯನ ಮಾಡಿ ಕಳೆದ ದಶಕದ ಆರಂಭದಲ್ಲಿ ಕೃತಿ (ಗೈಡ್ ಟು ಕನ್ಹೇರಿ ಕೇವ್ಸ್) ರಚಿಸಿದ್ದರು. ಆ ಸಮಯ ಅವರು 40 ಶಿಲಾ ಲೇಖನಗಳನ್ನು ಓದಿದ್ದರು. ಇಲ್ಲಿನ ಗುಹೆಗಳಲ್ಲಿ ಚೈತ್ಯ ಸ್ತಂಭಗಳಲ್ಲಿ ಇಂಥ ಶಿಲಾ ಲೇಖನಗಳಿವೆ. ಒಟ್ಟು ನೂರರಷ್ಟು ಶಿಲಾಲೇಖನಗಳಿದ್ದು ಕೆಲವು ಸಂಸ್ಕೃತ, ದೇವನಾಗರಿ ಮತ್ತು ಬ್ರಾಹ್ಮೀ ಲಿಪಿಗಳಲ್ಲಿವೆ.

ಕನ್ಹೇರಿ ಎನ್ನುವ ಶಬ್ದ ಸಂಸ್ಕೃತದ ಕೃಷ್ಣಾಗಿರಿಯ ಅಪಭ್ರಂಶ. ಈ ಕ್ಷೇತ್ರದಲ್ಲಿ ಶಾತವಾಹನರು,ಗುಪ್ತರು ಮತ್ತು ರಾಷ್ಟಕೂಟ ಶಾಸಕರ ಶಾಸನವಿತ್ತು.ಅನಂತರ ಪೋರ್ಚುಗೀಸರು ಕ್ರಿ.ಶ.1534ರಲ್ಲಿ ಈ ಕ್ಷೇತ್ರದಲ್ಲಿ ತಮ್ಮ ಆಧಿಪತ್ಯ ಸ್ಥಾಪಿಸಿದರು. ಇದನ್ನು 1760 ರಲ್ಲಿ ಮರಾಠರು ತಮ್ಮ ವಶಕ್ಕೆ ಪಡೆದರು.1744ರ ಅನಂತರ ಬ್ರಿಟಿಷರ ಅಧೀನಕ್ಕೆ ಬಂತು.

ಕನ್ಹೇರಿ ಪ್ರವೇಶದ್ವಾರದಲ್ಲಿ ಮೊದಲಿಗೆ ಸಿಗುವ ಬೃಹತ್ ಗುಹೆ (ಸಂಖ್ಯೆ ಮೂರು) ಗಮನ ಸೆಳೆಯುತ್ತದೆ. ವಾಸ್ತು ಶಿಲ್ಪದ ದೃಷ್ಟಿಯಿಂದ ಇದು ಮಹತ್ತ್ವ ಪೂರ್ಣ ಗುಹೆ. ಇದರಲ್ಲಿ ಔರಂಗಾಬಾದ್ ಬಳಿಯ ವಿಶ್ವ ಪ್ರಸಿದ್ಧ ಅಜಂತಾ ಎಲ್ಲೋರ ಗುಹೆಗಳು ಮತ್ತು ಖಂಡಾಲಾದ ಬಳಿಯ ಕಾರ್ಲಾ ಗುಹೆಗಳ ಝಲಕ್ ಕಾಣಸಿಗುತ್ತದೆ. ಈ ಗುಹೆ ದೊಡ್ಡ ಸಭಾಗೃಹದಂತೆ ಕಾಣಿಸುತ್ತದೆ. ಕನ್ಹೇರಿಯ 109 ಗುಹೆಗಳಲ್ಲಿ ಸಂಖ್ಯೆ 3, 11, 34, 41, 67 ಮತ್ತು 87 ನೇ ಗುಹೆಗಳು ಬಹಳ ಮಹತ್ತ್ವ ಪೂರ್ಣವಾಗಿವೆ.

ಕೃಷ್ಣಾಗಿರಿ ಅರ್ಥಾತ್ ಕಪ್ಪು ಪರ್ವತ ಎನಿಸಿರುವ ಈ ಕನ್ಹೇರಿ ಗುಹೆಗಳ ಮೇಲೇ ಬಾರತೀಯ ಪುರಾತತ್ತ್ವ ಸರ್ವೇಕ್ಷಣಾ ವಿಭಾಗದ ದೃಷ್ಟಿ ಬಿದ್ದುದ್ದು ಬಹಳ ತಡವಾಗಿ. ಮೇ 26,2009ರಂದು ರಾಷ್ಟ್ರೀಯ ಮಹತ್ತ್ವದ ಸ್ಮಾರಕವೆಂದು ಇದನ್ನು ಘೋಷಿಸಲಾಯಿತು. ಮೊದಲ ಗುಹೆ (ಕ್ರಮಾಂಕ ಮೂರು) ಸ್ತಂಭಗಳಲ್ಲಿ ನಿಂತಿದೆ. ಇದರ ಪ್ರವೇಶ ದ್ವಾರದಲ್ಲೇ ಶಿಲಾ ಪ್ರತಿಮೆಗಳ ಸುಂದರ ಚಿತ್ರಕಲೆ ಇದೆ. ಒಳಗಡೆ ಬುದ್ಧನ ವಿಶಾಲ ರೂಪವಿದೆ. ಅತಿದೊಡ್ಡ 25 ಅಡಿ ಎತ್ತರದ ಬುದ್ಧನ ಮೂರ್ತಿ ಇಲ್ಲಿದೆ. ಇದರ ನಿರ್ಮಾಣವನ್ನು ಇಬ್ಬರು ವ್ಯಾಪಾರಿ ಸಹೋದರರಾದ ಗಜಸೇನ ಮತ್ತು ಗಜವೀರ ಎಂಬವರು ಮಾಡಿಸಿದ್ದಾಗಿ ಹೇಳಲಾಗುತ್ತದೆ. ಒಳಗೆ ಪೂಜಾ ವಿಧಾನಕ್ಕಾಗಿ ಚೈತ್ಯ ನಿರ್ಮಾಣ ಮಾಡಲಾಗಿದೆ. ಇಲ್ಲಿನ ಎರಡು ಸ್ತಂಭಗಳಲ್ಲಿ ನಾಲ್ಕು ಸಿಂಹಗಳನ್ನು ಕೆತ್ತಲಾಗಿದೆ. ಮೈತ್ರೇಯಿ ಬೌದ್ಧನ ಜೊತೆ ಏಳು ಅನ್ಯ ಬೌದ್ಧ ಮೂರ್ತಿಗಳೂ ಇವೆ. ಅದೇ ರೀತಿ ಗುಹೆ ಕ್ರಮಾಂಕ ನಾಲ್ಕರಲ್ಲಿ ಪದ್ಮಪಾಣಿ ಅವಲೋಕಿತೇಶ್ವರರ ಭವ್ಯ ಪ್ರತಿಮೆ ಇದೆ. ಹನ್ನೊಂದು ತಲೆ, ಅನೇಕ ಕೈ, ಹಲವು ಜೋಡಿ ಕಣ್ಣುಗಳನ್ನು ಕೆತ್ತಲಾಗಿದೆ. ಬುದ್ಧನ ಒಂದು ಪೂರ್ವ ರೂಪ ಮಹಾಸತಸ್ವಾದ ಮೂಲಕ ಆತ ಶಕ್ತಿವಂತ ಆಗಿದ್ದ ಎಂದು ಹೇಳುವ ಪ್ರಯತ್ನವಿದು. ಇದನ್ನು ದೇಶದಲ್ಲೇ ಅವಲೋಕಿತೇಶ್ವರರ ಏಕಮಾತ್ರ ಪ್ರತಿಮೆ ಎಂದೂ ನಂಬಲಾಗಿದೆ. ಈ ಗುಹೆಯ ಬಳಿ ನೀರಿನ ವ್ಯವಸ್ಥೆಯೂ ಇದೆ. ಹೀಗಾಗಿ ಅಂದಿನ ದಿನಗಳಲ್ಲಿ ಇದು ವಿಶ್ರಾಂತಿ ಸ್ಥಳವೂ ಆಗಿದ್ದೀತು.

ಕನ್ಹೇರಿಯ ಗುಹೆಗಳು ಒಂದೊಮ್ಮೆ ತಾಂತ್ರಿಕ ಕ್ರಿಯೆಗಳ ಕೇಂದ್ರವಾಗಿತ್ತು. ಇಲ್ಲಿ ಅನೇಕ ಜಾತಕ ಕತೆಗಳನ್ನು ವಿಸ್ತಾರವಾಗಿ ವರ್ಣಿಸಲಾಗಿದೆ. ಅನೇಕ ಕಡೆ ಬುದ್ಧನ ವಿಭಿನ್ನ ಸ್ವರೂಪಗಳನ್ನು ಮಾನವನ ರಕ್ಷಣೆ ಮಾಡುವಂತೆ ತೋರಿಸಲಾಗಿದೆ.ಕೆಲವೆಡೆ ಬುದ್ಧ ಉಪದೇಶ ನೀಡುತ್ತಾನೆ.

ಧ್ಯಾನ ಮುದ್ರೆಯಲ್ಲಿರುವ ಮೂರ್ತಿಗಳೂ ಇವೆ. ಸಾಲ್ ಸೆಟ್ ದ್ವೀಪದ ಬೆಟ್ಟದ ಬಂಡೆಗಲ್ಲುಗಳನ್ನು ಕೊರೆದು ಕೆತ್ತಿದ ಈ ಕನ್ಹೇರಿ ಕೇವ್ಸ್ ಹೀನಾಯಾನ ಸಂಪ್ರದಾಯದ ಬೌದ್ಧರ ಚೈತ್ಯ ಮಂದಿರವಾಗಿತ್ತು.

ಇದು ಕಾರ್ಲಾ ಗುಹೆಗಳ ಪರಂಪರೆಯಲ್ಲೇ ಸೇರಿದೆ. ಅಲ್ಲಿನ ಕೆಲವು ದೃಶ್ಯ ಇಲ್ಲಿಯೂ ಇದೆ. ಆದರೆ ಹೊರಗಿನ ಗೋಡೆಗಳಲ್ಲಿ ಕಂಡು ಬರುವ ಬುದ್ಧನ ಮೂರ್ತಿಗಳನ್ನು ಕಂಡಾಗ ಮಹಾಯಾನ ಸಂಪ್ರದಾಯದ ಪ್ರಭಾವವೂ ಗೋಚರಿಸುತ್ತದೆ.

ಹೀನಾಯಾನ ಉಪಾಸನೆಯ ಕೆಲವು ಕಾಲದ ಅನಂತರ ಬೌದ್ಧ ಭಿಕ್ಷುಗಳ ಸಂಬಂಧ ಇಲ್ಲಿಂದ ದೂರವಾಯಿತು. ಗುಪ್ತರ ಕಾಲ ಬರುತ್ತಲೇ ಮತ್ತೆ ಒಟ್ಟುಗೂಡಿತು.
ಇಲ್ಲಿನ ಸ್ತಂಭಗಳ ಸಂಖ್ಯೆ 34.ಕೆಲವು ಸ್ತಂಬಗಳ ಮೇಲೆ ನರ-ನಾರೀ ಮೂರ್ತಿಗಳಿವೆ. ಈ ಬಗ್ಗೆ ಸ್ಪಷ್ಟವಾದ ನಂಬಿಕೆ ಏನಿತ್ತು ಎಂದು ತಿಳಿದು ಬರುತ್ತಿಲ್ಲ ಎನ್ನುತ್ತಾರೆ ಇತಿಹಾಸಕಾರರು. ಗುಹೆ ಕ್ರಮಾಂಕ 29-35,42-44,75-77 ಮತ್ತು 98-99 ರಲ್ಲಿ ಜಾತಕ ಕತೆಗಳಿವೆ.

ಪ್ರವೇಶ ದ್ವಾರದಿಂದ ಮೇಲೆರಲು ಬಂಡೆಗಲ್ಲುಗಳನ್ನು ಕಡಿದು ನಿರ್ಮಿಸಿದ ಸುಂದರ ಮೆಟ್ಟಿಲುಗಳನ್ನೂ ಅಷ್ಟೇ ಆಕರ್ಷಣೀಯ. ಎಲ್ಲಾ ಗುಹೆಗಳಿಗೆ ಒಳ ಹೋಗಲು ವ್ಯವಸ್ಥೆ ಇಲ್ಲ. 109 ಗುಹೆಗಳಲ್ಲಿ ಕೆಲವನ್ನು ವೀಕ್ಷಿಸಬಹುದಷ್ಟೇ. ಆದರೆ ಬೆಟ್ಟದ ಮೇಲೆ ನಿಂತ ಹಸುರು ದೃಶ್ಯವನ್ನು ಮನದಣಿಯೇ ವೀಕ್ಷಿಸಬಹುದು. ಹರಿಯುವ ನೀರಿನಲ್ಲಿ ಆಡಬಹುದು.
ಬೌದ್ಧ ಬಸ್ತಿ

ಹೀನಾಯಾನ ಬೌದ್ಧ ಭಿಕ್ಷುಗಳ ಸಾಧನಾ ಸ್ಥಳ ಮತ್ತು ನಿವಾಸ ಸ್ಥಳವಾಗಿದ್ದ ಕನ್ಹೇರಿ ವಿಶ್ವ ವಿಖ್ಯಾತಿ ಪಡೆದಿದೆ. ಸಮುದ್ರ ಮಟ್ಟದಿಂದ 1,500 ಅಡಿ ಎತ್ತರದಲ್ಲಿರುವ ಈ ಕನ್ಹೇರಿ ಕಲ್ಯಾಣ್, ಸೊಪಾರಾ, ನಾಸಿಕ್, ಉಜ್ಜೇನ್, ಪೈಠಣ್ ನ ವ್ಯಾಪಾರ ಮಾರ್ಗವನ್ನು ಜೋಡಿಸುವ ಕೇಂದ್ರ ಆಗಿದ್ದರಿಂದ ಎಲ್ಲಾ ಕಡೆಯ ವ್ಯಾಪಾರಿಗಳೂ ಈ ಮೂಲಕವೇ ಹಾದು ಹೋಗುತ್ತಿದ್ದರು. ಕ್ರಿ.ಶ. ಮೊದಲ ಶತಾಬ್ದಿಯಲ್ಲಿ ಇಲ್ಲಿ ಬೌದ್ದ ಸಾಧಕರು ಸ್ಥಾಯಿ ರೂಪದಲ್ಲಿ ವಾಸಿಸಲು ಬಂದರು. ಬಂಡೆಗಲ್ಲುಗಳನ್ನು ಕೆತ್ತಿ ಸಭಾಗೃಹವನ್ನು ನಿರ್ಮಿಸಿದರು. ಇದು ಬಹುದೊಡ್ಡ ಬೌದ್ಧ ಬಸ್ತಿ ಎನಿಸಿಕೊಂಡಿತು.

ಇಂದಿನ ಕನ್ಹೇರಿಯ ದೃಶ್ಯ ವೀಕ್ಷಿಸಿದರೆ ಆವಾಗಿನ ವೈಭವದ ಕಲ್ಪನೆಯನ್ನು ಊಹಿಸಲೂ ಸಾಧ್ಯವಾಗದು. ಇನ್ನೂ ಆಶ್ಚರ್ಯವೆಂದರೆ ಇಲ್ಲಿನ ಎಲ್ಲಕ್ಕಿಂತ ರಹಸ್ಯಪೂರ್ಣ ಶಿಲಾಲೇಖ ಜಪಾನಿಯಲ್ಲಿದೆ! ಈ ಶಿಲಾಲೇಖ ಇಲ್ಲಿಗೆ ಹೇಗೆ ಬಂತು ಎಂದು ಗೊತ್ತಿಲ್ಲವಂತೆ! ಈ ಉದ್ಯಾನದ ಸೀಮೆಯಲ್ಲಿ ತುಲಸೀ ಸರೋವರ ಮತ್ತು ವಿಹಾರ ಸರೋವರ ಇದೆ. ಕನ್ಹೇರಿ ಕೇವ್ಸ್ ವೀಕ್ಷಿಸಿದ ಮತ್ತೆ ಕೆಳಗಿಳಿದು ಪಾರ್ಕ್ನ ದ್ವಾರಕ್ಕೆ ಬರಲು ಶೇರು ಜೀಪ್ ಹಿಡಿದೆವು.’ಆಗದ್ದು ರಿಟರ್ನ್ ಟಿಕೇಟ್ ಅಲ್ಲ, ಬೇರೆ ಬೇರೆ ಜಾರ್ಜ್’ ಎಂದ ಡ್ರೈವರ್. ಮತ್ತೆ ಹಣ ನೀಡಬೇಕಾಯಿತು. ಅಲ್ಲಿಂದ ಏಳು ಕಿ.ಮೀ. ಪಯಣ.

ಕನ್ಹೇರಿ ಗುಹೆಗಳನ್ನು ಹಾದು ಹೋಗುವಾಗ ಬೌದ್ಧ ಭಾರತದ ಯಾತ್ರೆಯ ಅಪೂರ್ವ ಪರಿಚಯ ಪ್ರವಾಸಿಗರಿಗೆ ಆಗುತ್ತದೆ. ಕನ್ಹೇರಿ ಗುಹೆಯೊಳಗಿನ ಅನೇಕ ಬೌದ್ಧ ಪ್ರತಿಮೆಗಳಲ್ಲಿ ಕೆಲವು ಅವಶೇಷಗಳಷ್ಟೇ ಉಳಿದಿವೆ.

ನಲಂದಾ ವಿಶ್ವವಿದ್ಯಾಲಯದ ತುಲನೆ ಮಾಡಲಾಗುತ್ತಿದ್ದ ಈ ಕನ್ಹೇರಿ ಬೌದ್ಧ ವಿಹಾರ ಮುಂಬಯಿ ಮಹಾನಗರದಲ್ಲಿ ಎಲಿಫೆಂಟಾ ಕೇವ್ಸ್ ಗಿಂತಲೂ ಅಲ್ಲಿ ಬೋಟ್ ಪ್ರಯಾಣ ವಿಶೇಷ, ಅಧಿಕ ಮಹತ್ತ್ವ ಪಡೆದಿದೆ. ಊದ್ಯಾನದ ಸೀಮಾ ಕ್ಷೇತ್ರಗಳಲ್ಲಿ ಇಂದು ಕಾಂಕ್ರೀಟ್ ಅರಣ್ಯ ಏಳುತ್ತಿರುವುದು ಮಾತ್ರ ಹಸುರು ಅರಣ್ಯವನ್ನು ನಾಶ ಮಾಡಲಿರುವ ಸೂಚನೆಯೇ ಎಂಬ ಪ್ರಶ್ನೆ ಕಾಡುತ್ತದೆ.

LEAVE A REPLY

Please enter your comment!
Please enter your name here