Home ನಂಬಿಕೆ ಸುತ್ತಮುತ್ತ ಜಗದಗಲ ಬೆಳಕೇ

ಜಗದಗಲ ಬೆಳಕೇ

ದೀಪಾವಳಿಯು ಭಾರತೀಯರ ಸಮಗ್ರ ಸಮಾರಾಧನೆಯ ಸುಂದರ ಅಭಿವ್ಯಕ್ತಿ.

1498
0
SHARE

ಚಂದ್ರಮಾನದ ಆಶ್ವಯುಜ-ಕಾರ್ತಿಕ ಮಾಸಗಳ (ಅಕ್ಟೋಬರ್‌-ನವೆಂಬರ್‌) ಬಹುಳ-ಚತುರ್ದಶೀ, ಅಮಾವಾಸ್ಯೆ ಮತ್ತು ಶುದ್ಧಪ್ರತಿಪತ್‌ ತಿಥಿಗಳಂದು ಬರುವ ದೀಪಾವಳಿಯು ಶರದೃತುವಿನ ಮಧ್ಯಮಣಿ. ಮಳೆಗಾಲದ ಬಿರುಬು ತಗ್ಗಿ, ಬೇಸಿಗೆಯ ಬೇಗೆಯಿರದೆ, ಚಳಿಗಾಲವು ದೂರವಿರುವ ಈ ಕಾಲವು ನಿಜಕ್ಕೂ ವಾಲ್ಮೀಕಿ ಮಹರ್ಷಿಗಳು ಹೇಳುವಂತೆ ಅನೇಕಾಶ್ರಯಚಿತ್ರಶೋಭಾ, ಕಾಳಿದಾಸನೆನ್ನುವಂತೆ ಬಹುಗುಣರಮಣೀಯಾ. ನದಿಗಳ ಬಗ್ಗಡ ನೀರು ತಿಳಿಯಾಗಿ ಬೆಳಗಿ, ಬೆಳದಿಂಗಳಿನಿಂದ ರಾತ್ರಿ ಕಂಗೊಳಿಸಿ, ಹೊಲ-ಗದ್ದೆಗಳು ನಳನಳಿಸಿ, ಕಾನು-ಮಲೆಗಳು ಸಿರಿಸಿರಿಯಾಗಿ, ಪಶುಸಂಪದವು ಹೊಸ ಸೊಗಸಿನಿಂದ ಕಳೆಯೇರಿ ಮೆರೆಯುವ ಈ ಕಾಲದಲ್ಲಿ ಸಮೃದ್ಧಿಯೇ ಕೇಂದ್ರಬಿಂದುವಾಗುತ್ತದೆ. ಪ್ರಾಕೃತಿಕ ಸಮೃದ್ಧಿಗೆ ಸ್ಪಂದಿಸುವ ಮಾನವನ ಸಾಂಸ್ಕೃತಿಕ ಜೀವನವು ಈ ಸಂದರ್ಭದಲ್ಲಿ ಸಹಜವಾಗಿಯೇ ತನ್ನ ಚಿರಂತನಸಂವೇದನೆಯಾದ ಬೆಳಕಿನತ್ತ ಬೆಂಬತ್ತುವಿಕೆ, ಮೃತ್ಯುವನ್ನು ಗೆಲ್ಲುವಿಕೆ ಮತ್ತು ಬಡತನವನ್ನು ತೊಡೆಯುವಿಕೆಗಳೆಂಬ ಅಂಶತ್ರಯವನ್ನು ಸಂಕೇತಿಸುವಂತೆ ಆಚರಣೆಗಳನ್ನು ರೂಪಿಸಿಕೊಂಡಿದೆ. ಹೀಗಾಗಿ, ದೀಪಾವಳಿಯು ಬೆಳಕು-ಕತ್ತಲೆಗಳ ಸಂಗ್ರಾಮದಲ್ಲಿ ಬೆಳಕಿನ ಗೆಲುವನ್ನು ಸಾರುವ ಹಬ್ಬವೂ ಹೌದು. (ಇದು ಮಾನವನ ನಿರಂತರ ಸದಸತ್ಸಂಗ್ರಾಮ ಸಂಘರ್ಷದ ಸಂಕೇತ ಹಾಗೂ ಅಸತ್ತಿನ ಮೇಲೆ ಸತ್ತಿನ ವಿಜಯ ಎಂಬುದು ಸುಲಭವೇದ್ಯ. ಆದರೆ ಗಮನಿಸಬೇಕಾದ ಮತ್ತೂಂದಂಶವೇನೆಂದರೆ ವಿಶುದ್ಧ ಭಾರತೀಯ ಪ್ರಜ್ಞೆಯ ಪ್ರಕಾರ ಶಾಶ್ವತವಾದ ಅಸತ್‌- Eternal Evil – ಎಂಬುದು ಇಲ್ಲವೇ ಇಲ್ಲವೆಂಬುದನ್ನು ತಾರ್ಕಿಕವಾಗಿ ಬೆಳಕಿನ ಅಭಾವವೇ ಕತ್ತಲೆಂಬ ಪದಾರ್ಥವಲ್ಲದೆ ಅದಕ್ಕೆ ಪ್ರತ್ಯೇಕವೂನಿತ್ಯವೂ ಆದ ಸ್ವತಂತ್ರಾಸ್ತಿಣ್ತೀವೇ ಇಲ್ಲವೆಂಬ ತಣ್ತೀವು ಇಲ್ಲಿ ಪ್ರತಿಪಾದಿತವಾಗಿರುವುದು!), ಇದರ ವಿಸ್ತರಣವಾಗಿ ಮೃತ್ಯುವನ್ನು ಗೆದ್ದು ಅಮೃತತ್ವವನ್ನು ಪಡೆಯುವುದರ ಪ್ರತೀಕವಾಗಿ ಅಳಿದ ಪಿತೃಗಳಿಗೆ- ಅವರು ಇನ್ನೂ ಚೈತನ್ಯದಿಂದ ಇದ್ದಾರೆ ಎಂಬುದರ ಸಂಕೇತವಾಗಿ- ಸಲ್ಲಿಸುವ ಕೃತಜ್ಞತಾಸಮರ್ಚೆಯ ಸಂದರ್ಭವೂ ಹೌದು, ಪ್ರಾಕೃತಿಕ ಸಮೃದ್ಧಿಯನ್ನು ಸಾಂಸ್ಕೃತಿಕ ಹಾಗೂ ಸಾಮಾಜಿಕ ಸೌಲಭ್ಯಗಳಿಗಾಗಿ ಅಳವಡಿಸಿಕೊಂಡು ಮೆರೆಯುವ ಆರ್ಥಿಕ-ಕಾಮಿಕ ವೈಭವೋತ್ಸಾಹದ ಆಚರಣೆಯೂ ಹೌದು. (ಕಾಮವೆಂದೊಡನೆಯೇ ಯಾರೂ ಹೌಹಾರಬೇಕಿಲ್ಲ. ನಮ್ಮ ಸಾಂಪ್ರದಾಯಿಕ ಪ್ರಜ್ಞೆಯು “ಕಾಮ’ದಲ್ಲಿಯೇ ಸಕಲಜೀವನಸೌರಭಾಕಾರಿಯಾದ ಕಲೆಗಳನ್ನೂ ವಿದ್ಯಾ-ವಿನೋದಗಳನ್ನೂ ಸಾಂಸ್ಕೃತಿಕ ಸೌಖ್ಯಗಳನ್ನೂ ಅರ್ಥಪೂರ್ಣವಾಗಿ ಅಡಕಗೊಳಿಸಿದೆ.) ಒಟ್ಟಿನಲ್ಲಿ ದೀಪಾವಳಿಯು ಭಾರತೀಯರ ಸಮಗ್ರಸಮಾರಾಧನೆಯ ಸಮರ್ಥ ಅಭಿವ್ಯಕ್ತಿ, ಸುಂದರ ಅಭಿವ್ಯಕ್ತಿ.

ದೀಪಗಳ ದೈವಿಕಮೂಲ ವೇದಗಳ ಅಗ್ನಿಮುಖ
ವೇದಗಳಲ್ಲಿ ಹಾಗೂ ವೇದಾಂಗಗಳಲ್ಲಿ ಈ ಕಾಲವು ಪಾರ್ವಣ, ಶ್ರಾದ್ಧ, ಶ್ರಾವಣಿ, ಆಗ್ರಹಾಯಣಿ, ಚೈತ್ರಿ ಮತ್ತು ಆಶ್ವಯುಜಿ ಎಂಬ ಸಪ್ತಪಾಕಯಜ್ಞ ಸಂಸ್ಥೆಗಳನ್ನು ಆಚರಿಸಲು ವಿನಿಯುಕ್ತವಾಗಿದೆ. ಈ ಪಾಕಯಜ್ಞ ಸಂಸ್ಥೆಗಳಲ್ಲಿಯೇ ವ್ರತ-ಪರ್ವ-ಉತ್ಸವಗಳ ಆಯಾಮಗಳಿವೆಯಲ್ಲದೆ ದೀಪಾವಳಿಯ ಮೂರು ಮುಖಗಳಾದ ಪ್ರಕಾಶೋತ್ಕರ್ಷ, ಮೃತ್ಯುಮರ್ದನ ಮತ್ತು ಐಹಿಕ ಸಮೃದ್ಧಿಗಳ ಅನುಸಂಧಾನವೂ ಉಂಟು. ಅಷ್ಟೇ ಅಲ್ಲ, ಈಗಿನ “ಸಂಶೋಧಕ’ರು ಪರಿಶಿಷ್ಟವೆಂದೂ ಜಾನಪದವೆಂದೂ ಎತ್ತಿಹಿಡಿಯುವ ಅನೇಕ ಸಂಗತಿಗಳೂ ಆಗ್ರಹಾಯಣಿ, ಪಾರ್ವಣ, ಶ್ರಾವಣಿ, ಚೈತ್ರಿ ಮುಂತಾದ ಕೃಷಿಸಂಬಂಧಿತವೂ ಪಾಚನಸಂಬಂಧಿತವೂ ಆದ ಇಷ್ಟಿಗಳಲ್ಲಿ ಉಂಟು. ಹೀಗಾಗಿ, ಇಲ್ಲಿಯೇ ಮಾರ್ಗ-ದೇಶಿಗಳ ಮಧುರಬೀಜಾವಾಪವಿದೆ. ಬೃಹದಾರಣ್ಯಕದಲ್ಲಿ ಬರುವ ಜ್ಯೋತಿಬ್ರಾಹ್ಮಣ ಪ್ರಕರಣವು (4.3.2-7) ಅತ್ಯಂತ ಸುಂದರವಾಗಿ ಬಾಹ್ಯಜ್ಯೋತಿಗಳಾದ ಸೂರ್ಯ-ಚಂದ್ರ-ತಾರಾ-ವಿದ್ಯುತ್‌-ಅಗ್ನಿಗಳ ಅರಿವನ್ನೂ ಬೆಳಕನ್ನೂ ಬೆಳಗಿಸುವ ಅಂತರ್ಜ್ಯೋತಿಯಾದ ಅಸ್ಮಿತಾಪ್ರಜ್ಞೆಯನ್ನು ಎತ್ತಿಹಿಡಿಯುವಲ್ಲಿಯೇ ದೀಪಾವಳಿಯ ಹೃದಯವಾದ ಆತ್ಮತೇಜಸ್ಸಿನ ಪ್ರತಿಮೆಯುಂಟು. ಇದನ್ನು ನಿರ್ಣಯಾಮೃತವೆಂಬ ನಿಬಂಧಗ್ರಂಥವು ಹೀಗೆ ಸಂಕ್ಷೇಪಿಸಿದೆ:|

ತ್ವಂ ಜ್ಯೋತಿಶ್ಚ ರವಿಶ್ಚಂದ್ರೋ ವಿದ್ಯುತ್ಸೌವರ್ಣತಾರಕಾಃ |
ಸರ್ವೇಷಾಂ ಜ್ಯೋತಿಷಾಂ ಜ್ಯೋತಿರ್ದೀಪಜ್ಯೋತಿಸ್ಸ್ಥಿತೇ ತಮಃ ||

ಇದು ದೀಪಾವಳಿಯಂದು ಬಳಸಬೇಕಾದ ದೀಪವಂದನ ಶ್ಲೋಕವೂ ಹೌದು.

ಸಮಗ್ರ ವೇದಸಂಸ್ಕೃತಿಯೇ ಯಜ್ಞರೂಪದ್ದು. ಯಜ್ಞದ ಆರಾಧನೈಕಸ್ತರದಲ್ಲಿ ಅಗ್ನಿಯೇ ಆದ್ಯಾಲಂಬನ. ಹೀಗಾಗಿ, ದೀಪಾವಳಿಯ ದೀಪಗಳ ದೈವಿಕಮೂಲ ವೇದಗಳ ಅಗ್ನಿಮುಖದಲ್ಲಿದೆ. ಅಗ್ನಿಯು ಭೂಸ್ಥಾನೀಯದೇವತೆ. ಅಗ್ನ್ಯಾರಾಧನೆಯನ್ನು ಭಾರತ-ಇರಾಣಗಳಲ್ಲಿ ಮಾತ್ರವಲ್ಲದೆ ಪುರಾತನ ಈಜಿಪ್ಟ್, ಕ್ರೀಟ್‌, ಗ್ರೀಸ್‌, ರೋಮ್‌ಗಳಲ್ಲಿಯೂ ನಡೆಸುತ್ತಿದ್ದರು. ಅಗ್ನ್ಯಾಧಾನ (ಅಗ್ನಿಯನ್ನು ವಿಧಿವತ್ತಾಗಿ ಉತ್ಪಾದಿಸಿ ಆರಾಧಿಸುವ ಪ್ರಧಾನಸೋಪಾನ)ವು ಕೃತ್ತಿಕಾ ನಕ್ಷತ್ರದಲ್ಲಿ ನಡೆಯಬೇಕೆಂದು ಶ್ರೌತ-ಸ್ಮಾರ್ತವಿಧಿಯುಂಟು. ಅಗ್ನಿನಕ್ಷತ್ರವೆಂದೇ ಕೃತ್ತಿಕೆಯನ್ನು ಅನಾದಿಕಾಲದಿಂದ ಆದರಿಸಿದ್ದಾರೆ. ಕಾರ್ತಿಕಮಾಸವು ಮೊದಲಾಗುವುದೇ ದೀವಳಿಗೆಯಲ್ಲಿ. ಹೀಗೆ ದೀಪಾವಳಿ-ಅಗ್ನಿಗಳ ಸಂಬಂಧ ಘನಿಷ್ಠ. ಕೃತ್ತಿಕಾದೀಪೋತ್ಸವ, ಕಾರ್ತಿಕದೀಪಾರಾಧನೆಗಳೆಲ್ಲ ಸುವಿಖ್ಯಾತ, ಸರ್ವಜನಪ್ರಿಯ. ಸ್ಕಂದನು ಇದೇ ನಕ್ಷತ್ರದಲ್ಲಿ ಜನಿಸಿದವನು. ಆತನು ಅಗ್ನಿಸಂಭವನೂ ಹೌದು. ಹೀಗಾಗಿಯೇ ಅಮರಕೋಶವು ಅಗ್ನಿಭೂಃ ಎಂದು ಆತನನ್ನು ಹೆಸರಿಸಿದೆ. ಅವನು ಗಂಗಾತನಯನೂ ಹೌದಷ್ಟೆ! ಹೀಗಾಗಿ ದೀಪಾವಳಿಯ (ನರಕಚತುರ್ದಶಿಯ) ಗಂಗಾಸ್ನಾನವೂ ಅಗ್ನಿಯೊಡನೆ ಬೆಸೆದುಕೊಂಡಿದೆ; ದೀಪದಲ್ಲಿ ಬೆರೆತುಕೊಂಡಿದೆ.

ದೀಪಾವಳಿಯ ಉತ್ಸವರೂಪವನ್ನು ಭಾರತದ ಅತ್ಯಂತ ಪ್ರಾಚೀನವೂ ವಿಸ್ತೃತವೂ ಆದ ಇಂದ್ರಮಹ ಅಥವಾ ಇಂದ್ರಧ್ವಜೋತ್ಸವದಲ್ಲಿ ಕಾಣಬಹುದು. ಇದು ಶರತ್ಕಾಲದ ಎಲ್ಲ ಹಬ್ಬಗಳಿಗೂ ಮೂಲ. ಇದರ ಬಗ್ಗೆ ವೇದಾಂಗಗಳೆನಿಸಿದ ಕಲ್ಪಸೂತ್ರಗಳಲ್ಲಿಯೂ ಇತಿಹಾಸ-ಪುರಾಣಗಳಲ್ಲಿಯೂ ವಿಪುಲ ಉಲ್ಲೇಖವುಂಟು. ಇದರ ಅಧ್ಯಯನವೇ ಪ್ರತ್ಯೇಕ ಪ್ರಬಂಧವಾಗುವ ಕಾರಣ ಸದ್ಯಕ್ಕೆ ಈ ವಿಸ್ತಾರವನ್ನು ಬಿಟ್ಟು ಸಾಗಬಹುದು.

ಯಕ್ಷರಾತ್ರಿ- ದೀಪಾವಳಿ
ವಾತ್ಸ್ಯಾಯನನ ಕಾಮಸೂತ್ರದಲ್ಲಿ ಬರುವ “ಯಕ್ಷರಾತ್ರಿ’ಯೇ ದೀಪಾವಳಿ ಹಬ್ಬದ ಇಂದಿನ ರೂಪಕ್ಕೆ ಅತಿನಿಕಟ ಅತ್ಯಂತ ಪ್ರಾಚೀನ ಲಿಖೀತ ದಾಖಲೆಯೆನ್ನುವುದು ಡಾ. ವಿ. ರಾಘವನ್ನರ ಅಭಿಪ್ರಾಯ. ಯಕ್ಷರಾತ್ರಿಯು ಭೋಗಪ್ರಧಾನವಾದ, ಹರ್ಷೋತ್ಕರ್ಷದ ಬೆಳಕಿನ ಇರುಳು. ಭೋಗ-ಸಂಪದಗಳ ಅಧಿದೇವತೆಗಳೆನಿಸಿದ ಯಕ್ಷರು ವಾಣಿಜ್ಯ ಮತ್ತು ಸಾರ್ಥಗಳ ಸಂರಕ್ಷಕರೂ ಹೌದು (ಮಣಿಭದ್ರ ಯಕ್ಷನಂತೂ ಪ್ರಾಚೀನ ಭಾರತದ ವಣಿಗjನರ ಪರಮಪ್ರಿಯದೇವತೆ). ಇವರೆಲ್ಲ ಧನದನೆನಿಸಿದ ಧನಾಧಿಪತಿ ಕುಬೇರನ ಅನುಚರರು. ಇಂದಿಗೂ ದೀಪಾವಳಿಯ ನಡುವಣ ಅಮಾವಾಸ್ಯೆಯ ಲಕ್ಷ್ಮೀಪೂಜೆ, ಕುಬೇರಾರಾಧನೆಗಳು ಈ ಅಂಶವನ್ನೇ ತಿಳಿಸುತ್ತಿವೆ. ಅಲ್ಲದೆ ದೀಪಾವಳಿ ಹಬ್ಬದ ಒಂದು ಮುಖ್ಯ ಅಂಗವಾದ ಆರ್ಥಿಕಸಮೃದ್ಧಿಯ ಅರ್ಚನೆಯನ್ನೂ ಸಂಕೇತಿಸಿವೆ. ನಿಬಂಧಗ್ರಂಥಗಳು ಬಲಿಪಾಡ್ಯಮಿಯ ಎರಡನೆಯ ದಿನ ಧನತ್ರಯೋದಶಿ ಯೆಂಬ ವ್ರತವನ್ನು ನಡೆಸಬೇಕೆಂದು ವಿಧಿಸಿವೆ. ಅಲ್ಲದೆ ಬಲಿಪಾಡ್ಯಮಿಗೆ ಕುಬೇರಪ್ರತಿಪತ್‌ ಅಥವಾ ಕುಬೇರ-ಲಕ್ಷ್ಮೀಪೂಜಾಪ್ರತಿಪತ್‌ ಎಂಬ ನಾಮಾಂತರಗಳೂ ಇವೆ. ಶಾಸ್ತ್ರಕಾರರು ಈ ಪ್ರತಿಪದೆಯನ್ನು ದ್ಯೋತಪ್ರತಿಪತ್‌’ ಎಂದೂ ಹೇಳಿದ್ದಾರೆ. ಈ ದಿನದಂದೇ ಶಿವ-ಶಿವೆಯರು ಜೂಜಾಡಿದಾಗ ಗೌರಿಯು ಹರನದೆಲ್ಲವನ್ನೂ ಕಸಿದು ಆತನನ್ನು “ನಗ್ನಮುಷಿತ’ನನ್ನಾಗಿಸಿದಳೆಂದು ಸ್ಕಂದಪುರಾಣದ ಶಂಕರಸಂಹಿತೆಯ ಒಕ್ಕಣೆ. ಇದನ್ನು ಎಲ್ಲೋರಾ ಗುಹೆಗಳ ಶಿಲ್ಪವೊಂದು ಸುಮನೋಹರವಾಗಿ ಕಂಡಿರಿಸಿರುವುದು ಸ್ಮರಣೀಯ. ಇಂಥ ಪೌರಾಣಿಕ ವಿನೋದಗಳು ನಮ್ಮ ಚಿರಂತನರ ರಾಸಿಕ್ಯಕ್ಕೆ ಸೂರ್ಯಸಾಕ್ಷಿಗಳು.

ವೇದಗಳಲ್ಲಿ ಶರತ್ಕಾಲದಿಂದ ನವವರ್ಷದ ಆರಂಭ ಮಾಡುತ್ತಿದ್ದುದರ ಉಲ್ಲೇಖವಿದೆ. ಅಲ್ಲದೆ “ನೂರು ಶರತ್ಕಾಲ ನಾವು ಸುಖವಾಗಿ ಬಾಳ್ಳೋಣ, ಒಳಿತನ್ನು ಕೇಳ್ಳೋಣ, ಸೊಗಸನ್ನು ಕಾಣೋಣ, ನಲವನ್ನು ಹಾಡೋಣ, ಗೆಲುವನ್ನು ಹೊಂದೋಣ’ ಎಂಬಿವೇ ಅಭಿಪ್ರಾಯಗಳ ಉದಾತ್ತಮನೋಹರ ಜೀವನೋತ್ಸಾಹದ ಮಂತ್ರಗಳು ವೇದಗಳಲ್ಲಿವೆ. ಈ ಹಿನ್ನೆಲೆಯಲ್ಲಿ ವಿಕ್ರಮಸಂವತ್ಸರ (ವಿಕ್ರಮಶಕೆ) ಚಕ್ರದ ಆರಂಭ ಶರತ್ಕಾಲದಲ್ಲಿಯೇ ಆಗುವುದು ಗಮನಾರ್ಹ. ಅಂತೆಯೇ ವಿಕ್ರಮಶಕೆಯನ್ನೇ ಹೆಚ್ಚಾಗಿ ಆಧರಿಸುವ ಉತ್ತರ ಭಾರತೀಯರೂ, ಅವರಲ್ಲಿಯ ವರ್ತಕವರ್ಗ ಪ್ರಮುಖರೆನಿಸಿ ದಕ್ಷಿಣಕ್ಕೂ ಬಂದಿರುವ ಸೇಠರು (ಶ್ರೇಷ್ಠಿಗಳು), ಮಾರವಾಡಿಗಳೂ ತಮ್ಮ ವಾಣಿಜ್ಯದ, ಲೇವಾದೇವಿಯ, ಆಯವ್ಯಯದ ಎಲ್ಲ ಲೆಕ್ಕಪತ್ರ ದಸ್ತಾವೇಜುಗಳನ್ನು ದೀಪಾವಳಿಯಿಂದಲೇ ಆರಂಭಿಸುತ್ತಾರೆ, ಅಲ್ಲಿಗೇ ಮುಗಿಸುತ್ತಾರೆ. ಸೌರಮಾನದಲ್ಲಿಯೂ ಸಹ ದೀಪಾವಳಿಯು ತುಲಾಮಾಸದಲ್ಲಿಯೇ ಬರುವ ಕಾರಣ ತುಲಾ (ತಕ್ಕಡಿ) ಸಂಕೇತವೂ ಈ ಹಬ್ಬದ ವಾಣಿಜ್ಯ-ಆರ್ಥಿಕ ಸಮೃದ್ಧಿಯ ವ್ಯಾವಹಾರಿಕ ಆಯಾಮವನ್ನು ಧ್ವನಿಸಿದೆಯೆನ್ನಬಹುದು.”

ಹಲವು ಹಬ್ಬಗಳ ಸಮೂಹ
ದೀಪಾವಳಿಯು ಒಂದು ಹಬ್ಬಮಾತ್ರವಲ್ಲ, ಅದೊಂದು ಪರ್ವಸಮೂಹವೇ ಹೌದೆಂಬುದು ಮುಂದೆ ನಮಗಿಲ್ಲಿ ಸಿದ್ಧವಾಗುತ್ತದೆ. “ಶಕ್ರಾಚಾರ್‌’ ಎಂಬ ನಾಮಾಂತಾರವುಳ್ಳ ಇಂದ್ರಾರಾಧನಪರ್ವ ಸಂಚಯವು ಉಪೇಂದ್ರನ ಆರಾಧನೆಯೂ ಆಗಿದೆ. ವಿಷ್ಣುವಿನ ಇಪ್ಪತ್ನಾಲ್ಕು ಅವತಾರಗಳಲ್ಲಿ ಒಂದಾದ ಧನ್ವಂತರಿಯ ಸ್ಮತಿಯೂ ಇಲ್ಲಿದೆಯೆಂಬುದಕ್ಕೆ ತಮಿಳುನಾಡಿನಲ್ಲಿ ಇಂದಿಗೂ ನರಕಚತುರ್ದಶಿಯ ಬೆಳಗ್ಗೆ ಆರೋಗ್ಯ ದಾಯಕವಾದ ಲೇಹ್ಯವನ್ನು ಧನ್ವಂತರಿಯ ಪ್ರಸಾದವೆಂದು ಭಕ್ಷಿಸುವುದು ಸಾಕ್ಷಿಯಾಗಿದೆ. ಆದಿತ್ಯನೇ ವಿಷ್ಣು, ಅಂತರಿಕ್ಷಸ್ಥಾನೀಯವಾದ ಇಂದ್ರನೇ ನಾರಾಯಣ (ನಾರನೀರಿನ ಅಯನಹಾದಿ) ಎಂಬ ವೈದಿಕ ಸಮೀಕರಣ ದಂತೆ ಇಂದ್ರನು ಹೇಗೆ ವಿಷ್ಣುವೂ ಹೌದೋ ಹಾಗೆಯೇ ವಿಷ್ಣುವು ಶಿವನೂ ಹೌದು (ಆದಿತ್ಯನ ಭೂಸ್ಥಾನೀಯ ರೂಪ ಅಗ್ನಿ. ಅಗ್ನಿಯ ಶಾಂತ-ಘೋರ ರೂಪಗಳೇ ಶಿವ-ರುದ್ರರೆಂಬುದು ವೈದಿಕವಿದ್ಯಾಸಿದ್ಧಸತ್ಯ.)

ಹೀಗಾಗಿ, ಶಿವನ ಪೂಜೆಯೂ ಇದೇ ಸಂದರ್ಭದಲ್ಲಿ ಕೇದಾರೇಶ್ವರ ವ್ರತವೆಂದು ದೀಪಾವಳಿಯಲ್ಲಿ ಅಡಕವಾಗಿದೆ. ನರಕಚತುರ್ದಶಿಯು ಕೇವಲ ನರಕಾಸುರ ಸಂಹಾರಮಾಡಿದ ಶ್ರೀಕೃಷ್ಣನ ಯಶೋಗಾಥೆಯ ಸ್ಮತಿ ಮಾತ್ರವಲ್ಲ; ನರಕಭೀತಿ ಯ, ಅರ್ಥಾತ್‌ ಮೃತ್ಯುಭಯದ ನಿವಾರಣೆಯೂ ಹೌದು; ಅಳಿದ ಪಿತೃಗಳ ಸಂಸ್ಮತಿಯೂ ಹೌದು. ಈ ಮೂಲಕ ಅಳಿದವರ ಅಮರತೆಯನ್ನು ಸಾಬೀತುಮಾಡುವ ಯತ್ನ ಇಲ್ಲಿದೆ. ಹೀಗಾಗಿಯೇ ಧರ್ಮಶಾಸ್ತ್ರದ ಕೆಲವು ಕೃತಿಗಳಲ್ಲಿ ಈ ದಿನವನ್ನು ಪ್ರೇತಚತುರ್ದಶಿಯೆಂದೂ ಹೆಸರಿಸಲಾಗಿದೆ. ಲಿಂಗಪುರಾಣವೂ ಸಹ ಇದೇ ಮಾತನ್ನು ಎತ್ತಿಹಿಡಿದಿದೆ. ಪದ್ಮಪುರಾಣವಂತೂ ಈ ಹಬ್ಬದ ಸ್ಥಾನವನ್ನು ಮೃತ್ಯುಜಯತೆಯೆಂದೇ ಕೊಂಡಾಡಿದೆ:

ಅಪಮೃತ್ಯುರ್ವಿನಶ್ಯತಿ ಸ್ನಾನಂ ನರಕಭೀರುಭಿಃ |
ಯಮಲೋಕಂ ನ ಪಶ್ಯತಿ ನರಕಸ್ಯ ಕ್ಷಯಾಯ ವೈ || (4.124.4)
ನರಕಚತುರ್ದಶಿಯಂತೆಯೇ ಬಲಿಪಾಡ್ಯಮಿಯೂ ವಿಷ್ಣುವಿಜಯದ ಕಥೆಯೇ. ಆದರೆ ಇಲ್ಲಿ ಬಲಿಚಕ್ರವರ್ತಿಯ ದಾನವೀರದ ದೀಪ್ತಿಯೂ ಇದೆ. ಈ ಕಥೆಯನ್ನು ಆರ್ಯ -ಅನಾರ್ಯ (ದ್ರಾವಿಡ) ಸಂಘರ್ಷ ಹಾಗೂ ಆರ್ಯರ ಆಕ್ರಮಣಶೀಲತೆಯ ಬಗ್ಗೆ ಅನುಚಿತವಾಗಿ ಬಳಸಿಕೊಳ್ಳಲಾಗಿದೆ. ಆದರೆ ಇಲ್ಲಿರುವುದು ಪ್ರಕೃತಿಯಲ್ಲಿ ಕಾಣುವ ಋತುಪರಿವರ್ತನೆ. ಅಷ್ಟೇಕೆ, ಈಚಿನ ಸಂಶೋಧನೆ ಗಳನ್ನು ಗಮನಿಸಿದರೆ ಈ ಪುರಾಣಕಥೆಯು ಭಾರತದ ಸಪ್ತಸಿಂಧೂಪ್ರದೇಶ (ಬ್ರಹ್ಮಾವರ್ತ)ದಿಂದ ಸಿಡಿದು ಹೊರ ಬಂದು, ದಾಶರಾಜ್ಞಯುದ್ಧ ದಲ್ಲಿ ಸೋತು ಪಶ್ಚಿಮದತ್ತ ನಡೆದ ಆರ್ಯರದೇ ಒಂದು ಗುಂಪು (ಇವರೇ ಅಸುರರೆಂದೂ ಪೂರ್ವದೇವರೆಂದೂ ವಿಶ್ರುತರು) ಪಾರ್ಶವರಾದ (ಪರ್ಷಿಯಾದತ್ತ ಸರಿದ) ಸಂಗತಿಯನ್ನು ಧ್ವನಿಸುತ್ತದೆಂದೂ ಹೇಳಬಹುದು. ಒಟ್ಟಿನಲ್ಲಿದು ಭಾರತೀಯರದೇ ಕಥೆ, ಆಂತರಿಕ ಸಂಘರ್ಷ ಹಾಗೂ ಪ್ರಾಕೃತಿಕ ವ್ಯತ್ಯಾಸಗಳ ಸ್ಮತಿಗಾಥೆ.

ನಾವಿಲ್ಲಿ ಗಮನಿಸಬೇಕಾದ ಮತ್ತೂಂದಂಶವೆಂದರೆ ದೀಪಾವಳಿಯ ವ್ರತವಿಭಾಗದಲ್ಲಿ ಈ ಹಬ್ಬವೂ ಅಡಕಗೊಂಡಿದೆ ಯೆಂಬುದನ್ನು. ಐತಿಹಾಸಿಕವಾದ ಚಂದ್ರಗುಪ್ತ ವಿಕ್ರಮಾದಿತ್ಯನ ಶಕವಿಜಯವೂ ದೀಪಾವಳಿಯಲ್ಲಿ ಅಡಗಿರುವುದು ಗಮನಾರ್ಹ. ಅಂತೆಯೇ ಜೈನಮತದ ತೀರ್ಥಂಕರರಲ್ಲಿ ಅಂತಿಮನೆನಿಸಿದ ಭಗವಾನ್‌ ಮಹಾವೀರನ ನಿರ್ಯಾಣದ ದಿನವೂ ದೀಪಾವಳಿಯೇ. ಬಂಗಾಳದ ಶಾಕ್ತರು ಸನತುRಮಾರಸಂಹಿತಾನುಸಾರವಾಗಿ ದೀಪಾವಳಿಯಲ್ಲಿ ಮಹಾರಾತ್ರಿ ಎಂಬ ಹೆಸರಿನ ದೇವೀಪೂಜೆ ಮಾಡುತ್ತಾರೆ. ಪ್ರಾಚೀನಭಾರತದಲ್ಲಿ ಮಾರ್ಗಪಾಲೀಪೂಜಾ ಎಂಬ ಹೆಸರಿನಿಂದ ದೀಪಾವಳಿಯಲ್ಲಿ ಪ್ರಯಾಣಿಕರು (ವಿಶೇಷತಃ ಸಾರ್ಥರು) ಮಾರ್ಗರಕ್ಷಕ ಶಕ್ತಿದೇವತೆಗಳನ್ನು ದಿಬ್ಬಗಳಲ್ಲಿ ಪೂಜಿಸಿ ಗಜ-ತುರಗ-ರಥವೈಭವದೊಡನೆ ಮೆರವಣಿಗೆ ಮಾಡಿಸುತ್ತಿದ್ದರು. ಇಲ್ಲೆಲ್ಲ ಶಕö ಸಹಜವಾಗಿಯೇ ಋತು ಸಂಬಂಧಿಪರ್ವವಾದ ದೀಪಾವಳಿಗೆ ತಳಿಕೆ ಬಿದ್ದಿರುವುದು ಸ್ಪಷ್ಟ. ಮಣಿಪುರ-ತ್ರಿಪುರಗಳ ನಾಗರಿಗೂ ದೀಪಾವಳಿ ಪಿತೃಪೂಜಾದಿನ. ವಿಶೇಷತಃ ಬಲಿಪಾಡ್ಯಮಿಯ ಮರುದಿನ ಯಮದ್ವಿತೀಯಾ ಎಂದೇ ಈ ಆಚರಣೆ ಉಂಟು. ತರ್ಪಣಾದಿಗಳೂ ಇಲ್ಲಿವೆ. ಉತ್ತರಭಾರತದಲ್ಲಿ ಇದೇ ದಿನದಂದು ಋಗ್ವೇದದಲ್ಲಿಯೇ ಬರುವ ಆದಿಮ ಸೋದರ-ಸೋದರಿಯರಾದ ಯಮ-ಯಮಿಯರ ಪೂಜೆಯೂ ತದಂಗವಾಗಿ ಅಣ್ಣ -ತಂಗಿಯರ ಹಬ್ಬವೂ ಇದೆ. ಇದನ್ನು ನಾರದಪುರಾಣ ಶಿಫಾರಾಸುಮಾಡಿದೆ ಕೂಡ (1.111.18-19). ಈ ಹಬ್ಬಕ್ಕೆ ಭಗಿನೀ-ಹಸ್ತಭೋಜನ ಎಂಬ ಹೆಸರೂ ಇದೆ.

ಶ್ರೀಹರ್ಷನ ನಾಗಾನಂದ ನಾಟಕದಲ್ಲಿಯೇ ದೀಪಾವಳಿ ಗೂ ಅಳಿಯನಿಗೂ ನಂಟಿರುವುದು ಸೂಕ್ಷ್ಮವಾಗಿ ಗೋಚರಿ ಸುತ್ತದೆ. ಅಲ್ಲದೆ ಇದನ್ನು ದೀಪಪ್ರತಿಪದುತ್ಸವ ಎಂದೂ ಹೇಳಲಾಗಿದೆ (ಅಂಕ 4). ಈ ಹಬ್ಬವನ್ನು ಸುಖರಾತ್ರಿ, ಸುಖಸುಪ್ತಿಕಾ ಎಂಬಿವೇ ಹೆಸರುಗಳಿಂದ ನೀಲಮತಪುರಾಣ, ಆದಿತ್ಯಪುರಾಣಾದಿಗಳು ವಿವರಿಸಿವೆ. ಅಷ್ಟೇ ಅಲ್ಲ, ಇದು ಸ್ನಾನ-ಪಾನ-ಭೋಜನ-ವಿನೋದಗಳ ಉತ್ಸವವೂ ಹೌದೆಂದು ತಿಳಿಯುತ್ತದೆ. ಜೊತೆಗೆ ಜೂಜಾಟಕ್ಕೂ ಇಲ್ಲಿ ಅವಕಾಶವಿದೆ! (ನಮ್ಮ ಪೂರ್ವಿಕರು ಸಂಪೂರ್ಣವಾಗಿ ತೊಡೆದುಹಾಕಲು ಆಗದ ಚಟಗಳನ್ನು ಕೆಲವೇ ದಿನಗಳಿಗೆ ನಿಯಂತ್ರಿಸಿ, ಅಲ್ಲಿಯೂ ಅವುಗಳಿಗೆ ಧಾರ್ಮಿಕ-ವೈನೋದಿಕ-ಸಾಂಸ್ಕೃತಿಕ ಆಯಾಮ ಗಳನ್ನೇ ನೀಡಿರುವುದನ್ನು ಗಮನಿಸಿದಾಗ ಅವರ ವಿಶಾಲಬುದ್ಧಿ ಹಾಗೂ ವ್ಯವಹಾರಚಾತುರ್ಯಗಳಲ್ಲದೆ ಮಾನವನ ಮೂಲಭೂತ ದೌರ್ಬಲ್ಯಗಳನ್ನು ಸೂಕ್ಷ್ಮವಾಗಿ ವಿವೇಚಿಸಿದ ಪರಿಯೂ ತಿಳಿಯದಿರದು.) ಇದನ್ನು ದ್ಯೋತಪ್ರತಿಪತ್‌ ಎಂದೂ ಹೇಳಿ ಕಾಲ (ಮಹಾಕಾಲಶಿವ) ಮತ್ತು ಕಾಳಿ (ಶಕ್ತಿ)ಯರು ಆಡುವ ಜಗತ್ಸಷ್ಟಿ-ಸ್ಥಿತಿ-ಲಯಗಳ ಜೂಜಾಟಕ್ಕಿದನ್ನು ಒಪ್ಪವಿಡಲಾಗಿದೆ.

ಗೋಪೂಜೆ
ದೀಪಾವಳಿಯಲ್ಲಿ ಗೋಪೂಜೆಯೂ ಒಂದು ಅಂಗ. ಇಂದೂ ಸಹ ಮಲೆನಾಡು ಹಾಗೂ ಕರಾವಳಿಯ ಪ್ರದೇಶಗಳಲ್ಲಿ ಗೋವುಗಳಿಗೆ ಅಲಂಕಾರ-ಅರ್ಚನೆ-ಆಶನಾರ್ಪಣೆಗಳು ಸೊಗಸಾಗಿ ನಡೆದುಬಂದಿವೆ. ಇದನ್ನು ಧರ್ಮಶಾಸ್ತ್ರಗಳಲ್ಲಿ ಗೋವತ್ಸ-ದ್ವಾದಶೀ ಎಂಬ ಹೆಸರಿನಿಂದ ನೀರುತುಂಬುವ ಹಬ್ಬಕ್ಕೆ ಮುನ್ನವೇ ನಡೆಸಲಾಗುತ್ತಿತ್ತು. ಶ್ರೀಕೃಷ್ಣನು ಇಂದ್ರಮಹ ಎಂಬ ಇಂದ್ರಾರಾಧನೆಗೆ ದನ-ಕರುಗಳ ಹಾಗೂ ಪರ್ವತಪೂಜೆಯ ಆಯಾಮ ನೀಡಿ ದೀಪಾವಳಿಗೆ ಮತ್ತಷ್ಟು ವ್ಯಾಪ್ತಿಯನ್ನೂ ಅರ್ಥವಂತಿಕೆಯನ್ನೂ ತಂದಿದ್ದಿಲ್ಲಿ ಸ್ಮರಣೀಯ.

ವಿಶ್ವವ್ಯಾಪಿ ದೀಪಾವಳಿ
ದೀಪಾವಳಿಯು ಮುಖ್ಯವಾಗಿ ಬೆಳಕಿನ ಹಬ್ಬವಾದರೂ ಸದ್ದು-ಗದ್ದಲಗಳಿಗೆ ಇಲ್ಲಿ ಆಸ್ಪದವುಂಟಾದದ್ದು ಇತ್ತೀಚೆಗೆ. ನಿಬಂಧಗ್ರಂಥಗಳಲ್ಲಿ ಬಾಣಬಿರುಸುಗಳು ಉಲ್ಲೇಖಗೊಂಡಿವೆ. ಮಹಾಲಯ ಅಮಾವಾಸ್ಯೆಗಾಗಿ ಭೂಲೋಕಕ್ಕೆ ಬಂದ ಪಿತೃಗಳು ಮತ್ತೆ ತಮ್ಮ ಲೋಕಕ್ಕೆ ತೆರಳಲು ದಾರಿ ತೋರುವುದಕ್ಕಾಗಿ ಈ ಬಗೆಯ ಪಟಾಕಿ-ಮತಾಪು ಮೇಲಾಟಗಳು ಬೇಕಾದವೆಂದು ಅಲ್ಲಿ ಒಕ್ಕಣೆಯಿದೆ:

ಯಮಲೋಕಂ ಪರಿತ್ಯಜ್ಯ ಆಗತಾ ಯೇ ಮಹಾಲಯೇ |

ಉಜ್ಜ್ವಲಜ್ಯೋತಿಷಾ ವರ್ತ್ಮ ಪ್ರಪಶ್ಯಂತೋ ವ್ರಜಂತು ತೇ ||

ಉಲ್ಕಾಹಸ್ತಾ ನರಾಃ ಕುರ್ಯುಃ ಪಿತೃಣಾಂ ಮಾರ್ಗದರ್ಶನಂ ||

ಅಲ್ಲದೆ ಬಾಣ-ಬಿರುಸುಗಳ ದಾನವೂ (ಉಲ್ಕಾದಾನ) ವಿಹಿತವಾಗಿದೆ. ಪಿತೃಗಳಿಗೆ ದೀಪಾರಾಧನೆಯನ್ನು ಮಾಡುವ ದೀಪಶ್ರಾದ್ಧ ವಿಧಾನವೂ ಇಲ್ಲಿದೆ. ಉತ್ತರಕರ್ನಾಟಕ- ಮಹಾರಾಷ್ಟ್ರ ಪ್ರದೇಶಗಳಲ್ಲಿ ತೇಲಿಬಿಡುವ ಆಕಾಶಬುಟ್ಟಿಯೂ ಇದೆ ತಣ್ತೀವನ್ನು ಒಳಗೊಂಡದ್ದು. (ಇಂಥ ಆರಾಧನೆಯನ್ನು ಭಾರತೀಯ ಸಂಸ್ಕೃತಿಯ ನಿಕಟಸಾದೃಶ್ಯವಿರುವ ಇಂಕಾ-ಮಾಯಾ ಸಂಸ್ಕೃತಿಗಳ ನೆಲೆಯಾದ ಮೆಕ್ಸಿಕೋದಲ್ಲಿ All Souls’ Day ಎಂದು ನಡೆಸುತ್ತಾರೆ. ಅದೂ ಇದೇ ಋತುವಿನಲ್ಲಿ- ನವೆಂಬರ್‌ ಏಳರಂದು ಬರುತ್ತದೆ. ಈ ಸಂದರ್ಭದಲ್ಲಿ ಶ್ಮಶಾನಗಳಲ್ಲಿ ದೀಪಾರಾಧನೆ, ಸರ್ವತ್ರ ಜ್ಯೋತಿರ್ವಿಲಾಸ, ಬಾಣ-ಬಿರುಸುಗಳ ಮೇಳ ಸಾಗುತ್ತದೆ.) ಕಾರ್ತಿಕಮಾಸದಲ್ಲಿ ದೀಪಗಳನ್ನು ನೀರಿನಲ್ಲಿ ತೇಲಿಬಿಡುವುದು ನಮ್ಮ ದೇಶದಲ್ಲಿ ಸರ್ವತ್ರ ಸಂದಿರುವ ಆಚಾರ. ಇದೂ ದೀಪಾವಳಿಯ ವಿಸ್ತಾರವೇ. ಇಂಥ ಪ್ರವೃತ್ತಿಯನ್ನು ಥೈಲ್ಯಾಂಡಿನಲ್ಲಿಯೂ ಕಾಣಬಹುದು. ಇದನ್ನು ಮೇ ಖೋಂಗಾ ಬಾ (ತಾಯಿ ಗಂಗೆಯ ಆರಾಧನೆಗಾಗಿ) ‘ಲೊಯ್ ಕಾರ್ತೊಂಗ್’  (ಬಾಳೆಲೆಯ ದೊನ್ನೆಯಲ್ಲಿ ದೀಪವನ್ನು ತೇಲಿಸುವುದು) ಎನ್ನುವರು. ಕಾಂಬೋಡಿಯಾ ಹಾಗೂ ಬರ್ಮಾಗಳಲ್ಲಿಯೂ ಇದೇ ಪದ್ಧತಿಯು ಪಿತೃಗಳಿಗೆ ದಾರಿತೋರಲೆಂದು ಬಳಕೆಯಲ್ಲಿದೆ. ಚೀನಾದಲ್ಲಿಯೂ ಕಾರ್ತಿಕಪೂರ್ಣಿಮೆ ಲಾಟೀನು ಹಬ್ಬವಾಗಿದೆ. ಜಪಾನಿನಲ್ಲಿ ಬೊನ್‌ ಮಟ್‌ ಸುರಿ ಎಂಬುದಾಗಿ (ಪಿತೃಪೂಜೆ) ನೀರಿನಲ್ಲಿ, ಎತ್ತರದ ಎಡೆಗಳಲ್ಲಿ ದೀಪಶ್ರೇಣಿಯಿರುವುದಲ್ಲದೆ ಪಿಂಡಪ್ರದಾನ ಮತ್ತು ತರ್ಪಣಾದಿಗಳೂ ಉಂಟು. ಈಜಿಪ್ತ್ನಲ್ಲಿ ದೀಪಾವಳಿಯು ನೂತನಾಗ್ನಿ ಪ್ರಜ್ವಲನ ಪರ್ವವಾಗಿತ್ತು. ಮನೆ -ಮನೆಗಳ ಬಾಗಿಲಿನಲ್ಲಿಯೂ ದೀಪವಿರಿಸಿ ಹಬ್ಬದಡುಗೆ ಮಾಡಿ ಒಸೈರಿಸ್‌ (ಮೊದಲು ಮೃತನಾದ ಮನುಜದೇವ) ಪೂಜೆ ನಡೆಸುತ್ತಿದ್ದರು. ಗ್ರೀಕರು ಕ್ಯಾಂಡಲೇಮಸ್‌ ಎಂದು ಆಚರಿಸುತ್ತಿದ್ದ ದೀಪಾವಳಿಯು ಕ್ರೈಸ್ತಮತಕ್ಕೂ ಅನಂತರ ಹರಿದುಬಂದಿತು. ಯೆಹೂದ್ಯರ ಛ(ಹ)ನುಕ್ಕೋಹ್‌ ದೀಪಾವಳಿಯೇ. ರೋಮನ್ನರ ಲೆಮೂರಿಯಾ ದೀಪಾವಳಿ ಹಾಗೂ ಅನಾಥಪಿತೃತರ್ಪಣ ಮಹೋತ್ಸವವಾಗಿತ್ತು (ನಮ್ಮಲ್ಲಿಯೂ ನಿರ್ಗತಿಕ‌ರಾಗಿ, ನಿರ್ಬಾಂಧವರಾಗಿ ಸತ್ತವರಿಗೆ ಕಾರುಣ್ಯಪಿತೃಗಳೆಂದು ಹೆಸರಿಸಿ ತರ್ಪಣ ಬಿಡುತ್ತಿದ್ದ ಪರಂಪರೆಯಿದೆ.

“ಯೇಷಾಂ ನ ಮಾತಾ ನ ಪಿತಾ ನ ಬಂಧುರ್ನಾನ್ಯಗೊತ್ರಿಣಃ | ತೇ ಸರ್ವೇ ತೃಪ್ತಿಮಾಯಾಂತು ಮಯೋತ್ಸೃಷ್ಟೈಃ ಕುಶೋದಕೈಃ ||” ಎಂಬ ಶ್ಲೋಕವೇ ಇದಕ್ಕೆ ಪ್ರಮಾಣ.) ನೇಪಾಲದಲ್ಲಿ ಧನತ್ರಯೋದಶಿ ಎಂಬ ಹೆಸರಿನಲ್ಲಿ ಲಕ್ಷ್ಮೀಪೂಜೆ ಇದ್ದದ್ದಲ್ಲದೆ ಕಾಗೆ ಹಾಗೂ ನಾಯಿಗಳಿಗೆ ವಿಶೇಷವಾದ ಅನ್ನಸಂತರ್ಪಣೆ ಸಾಗುತ್ತಿತ್ತು. ಇದನ್ನು ಧರ್ಮಶಾಸ್ತ್ರಗಳಲ್ಲಿ ಕಾಕತ್ರಯೋದಶಿ ಮತ್ತು ಕುಕ್ಕುರತ್ರಯೋದಶಿ ಎಂದು ಹೆಸರಿಸಲಾಗಿದೆ. ಕಾಗೆಗೂ ಪಿತೃಗಳಿಗೂ ಇರುವ ಸಂಬಂಧ ಸರ್ವವೇದ್ಯ. ನಾಯಿಗೂ ಕಾಲಭೈರವನಿಗೂ ಇರುವ ಸಂಬಂಧ ಸಹ ಸುವಿದಿತವೇ. ಯಮನಿಗೂ ನಾಯಿಗಳಿಗೂ ಇರುವ ಸಂಬಂಧ ವೇದವಿಶ್ರುತ. ಹೀಗೆ ಜಗದಗಲಕ್ಕೂ ದೀಪಾವಳಿಯು ಪ್ರಕಾಶಪ್ರೀತಿ-ಪಿತೃಪೂಜೆ-ಸುಖಸಮೃದ್ಧಿಗಳ ಸಮಾಹಾರವಾಗಿ ಅಸತೋ ಮಾ ಸದ್ಗಮಯ | ತಮಸೋಮಾ ಜ್ಯೋತಿರ್ಗಮಯ | ಮೃತ್ಯೋರ್ಮಾ ಅಮೃತಂಗಮಯ || ಎಂಬ ವೈದಿಕಶಾಂತಿಮಂತ್ರದ ಸ್ಫೂರ್ತಿಯಿಂದ ಹರಡಿ ನಾನಾ ವಿಧವಾಗಿ ರೂಪ-ರೂಪಾಂತರಗಳನ್ನು ತಳೆದ ಪರಿ ತುಂಬ ಸ್ವರಸ, ಸುರಸ. ಹೀಗಾಗಿ ಇದು ಅಕ್ಷರಶಃ ವಿಶ್ವವ್ಯಾಪಿ ದೀಪಾವಳಿಯೇ.

ದೀಪಗಳ ಪರ್ವ
ಭಾರತೀಯರು ಹಬ್ಬಗಳನ್ನು ವ್ರತ, ಪರ್ವ ಮತ್ತು ಉತ್ಸವಗಳೆಂದು ಪ್ರಾಯಿಕವಾಗಿ ಮೂರು ವರ್ಗಗಳಲ್ಲಿ ಕಂಡರಿಸಿದ್ದಾರೆ. ವ್ರತ ವೈಯಕ್ತಿಕವಾದದ್ದು. ಧರ್ಮ-ಮೋಕ್ಷಗಳಿಗೇ ಅಲ್ಲಿ ಪ್ರಾಧಾನ್ಯ. ನಿಯಮ-ನಿಷ್ಠೆಗಳ ಅಂತರ್ಮುಖತೆಗೇ ಅಲ್ಲಿ ಅಗ್ರತಾಂಬೂಲ. ಪರ್ವ ಕೌಟುಂಬಿಕವಾದದ್ದು. ಇಲ್ಲಿ ಅರ್ಥ-ಕಾಮಗಳೂ ಹದವಾಗಿ ಕಲೆಯುತ್ತವೆ. ನಿಯಮ-ನಿಷ್ಠೆಗಳಿಗೆ ಹಾಳತವಾದ ಆತ್ಮೀಯತೆ, ಅಚ್ಚು-ಕಟ್ಟುಗಳೂ ಕೂಡಿಕೊಳ್ಳುತ್ತವೆ. ಉತ್ಸವವು ಸಾಮೂಹಿಕ (ಸಾಮಾಜಿಕ)ವಾದದ್ದು. ಇದನ್ನು ಒಂದು ಕಾಲದಲ್ಲಿ “ಸಮಾಜ’ವೆಂದೇ ಕರೆಯುತ್ತಿದ್ದರು. ಇಲ್ಲಿ ವಿಲಾಸ-ವೈಭವ-ಸಂತೋಷಗಳು ಮೇಲ್ಗೆ„ಯಾಗುತ್ತವೆ. ಅರ್ಥ-ಕಾಮಗಳು ಧರ್ಮ-ಮೋಕ್ಷಗಳೊಂದಿಗೆ ಸ್ಪರ್ಧಿಸುವಂತೆ ವಿಜೃಂಭಿಸಿ ಸಮಷ್ಟಿಗೆ ಜೀವನೋತ್ಸಾಹವನ್ನೂ ವಿನೋದವನ್ನೂ ತುಂಬುತ್ತವೆ. ಇಲ್ಲಿ ನಿಯಮ-ನಿಷ್ಠೆಗಳಿಗಿಂತ ಉಲ್ಲಾಸ-ವೈಭೋಗಗಳು ಪ್ರಧಾನವಾಗುತ್ತವೆ. ಮೇಲ್ನೋಟಕ್ಕೆ ಈ ಮೂರು ವಿಭಾಗಗಳಲ್ಲಿಯೂ ಪರಸ್ಪರ ವಿರೋಧವಿರುವಂತೆ ಕಂಡರೂ ಆಳದಲ್ಲಿ ಅನುಪಮಸಾಮರಸ್ಯವೇ ಅಡಗಿದೆ. ಏಕೆಂದರೆ, ಇವುಗಳಲ್ಲಿ ಅನ್ಯೋನ್ಯ ಪೂರಕತೆ ಇಲ್ಲದಿದ್ದರೆ ಸಮಗ್ರತಾಸಿದ್ಧಿಯೇ ಸಾಧ್ಯವಿಲ್ಲ. ಅಷ್ಟೇ ಅಲ್ಲ, ವ್ರತ-ಪರ್ವ-ಉತ್ಸವಗಳ ಆಚರಣೆಯಲ್ಲಿ ಕ್ರಮವಾಗಿ ದೇಶ-ಕಾಲಗಳ ಅನುಸರಣೆ ಹೆಚ್ಚಾಗುತ್ತ ಬಂದಿರುವುದನ್ನೂ ಗಮನಿಸಬಹುದು. ವ್ರತವನ್ನು ಎಲ್ಲಿಯಾದರೂ ಯಾವಾಗಲಾದರೂ ಕತೃìವು- ಈತನೊಬ್ಬನೇ ಆದ ಕಾರಣ ಮಾಡಬಹುದು. ಆದರೆ, ಪರ್ವಕ್ಕೆ ಇಷ್ಟು ಸ್ವಾತಂತ್ರ್ಯವಿಲ್ಲ.

ಉತ್ಸವವಂತೂ ಅತಿಹೆಚ್ಚಾಗಿ ದೇಶ-ಕಾಲನಿಯಂತ್ರಿತ. ಇಲ್ಲಿ ಎಲ್ಲರ ಪಾಲ್ಗೊಳ್ಳುವಿಕೆಗೂ ಪ್ರಕೃತಿಯೊಡನೆ ನಿಕಟತೆಗೂ ಅನುಕೂಲಿಸುವಂತೆ ನದೀ-ತಟಾಕ-ದೇವಾಲಯ-ಕೃಷಿಕ್ಷೇತ್ರ-ವಿಶಾಲಾಂಗಣ-ಪರ್ವತ ಮುಂತಾದ ಭೂಮಸ್ಥಳಗಳೂ ವಿಶಿಷ್ಟ ಋತುಗಳ ಸಂಕ್ರಮಣ ಸಂದರ್ಭಗಳೂ ಅತ್ಯವಶ್ಯ. ಆದುದರಿಂದಲೇ ಆರ್ತವ- ಎಂದರೆ ಋತುಸಂಬಂಧಿತವಾದ- ಆಚರಣೆಗಳೆಲ್ಲ ವೈಭವೋಪೇತವಾದ ಉತ್ಸವಗಳಾಗಿವೆ.

ಇದು ಮಾತ್ರವಲ್ಲದೆ, ಒಂದೇ ಆಚರಣೆಯು ವ್ರತ-ಪರ್ವ- ಉತ್ಸವಗಳೆಂಬ ಮೂರು ಆಯಾಮಗಳನ್ನೂ ಹೊಂದಿರಲು ಸಾಧ್ಯ. ಇಂಥ ಸಂದರ್ಭಗಳು ವಿರಳವಾದುವಾದರೂ ತುಂಬ ಸ್ವಾರಸ್ಯಸ್ಥಾನಗಳಾಗಿವೆ. ಹೀಗೆ ಒಂದು ಆಚರಣೆಗೆ ಈ ಮೂರು ಆಯಾಮಗಳೂ ಒದವಿದಾಗ ಅಲ್ಲಿ- ಈಚೆಗೆ “ವ್ಯಧಿಕರಣ ಬುದ್ಧಿ’ಗಳಾದ ಸಂಶೋಧಕಂಮನ್ಯರು ಭೇದಬುದ್ಧಿಯಿಂದ ಹುಟ್ಟುಹಾಕಿದ- ಶಿಷ್ಟ, ಪರಿಶಿಷ್ಟ, ವೈದಿಕ, ಜಾನಪದ ಎಂಬ ಎಲ್ಲ ಬಗೆಯ ಸಾಂಸ್ಕೃತಿಕ ಸಂದರ್ಭಗಳೂ ಸೊಗಸಾಗಿ ಸಮನ್ವಯಿಸಿ ಪರಮ ರಮಣೀಯವೂ ರಸಸಂಕೀರ್ಣವೂ ಆದ ಜೀವನೋತ್ಕರ್ಷ ಸಿದ್ಧಿಯು ಸಾಕ್ಷಾತ್ಕರಿಸುತ್ತದೆ. ಅಂಥ ಮಹಾಮೇಳದಲ್ಲಿ ಅನನ್ಯವಾದ ಆಚರಣೆಯೇ ದೀಪಾವಳಿ, ವೈಶ್ವಿ‌ಕ ತೇಜಸ್ಸಿನತ್ತ ಮಾನವನು ತುಡಿದಿರುವ ಅನಾದಿಯಾದ ನಿರೂಪಾವಳಿ.

ಶತಾವಧಾನಿ ಆರ್‌. ಗಣೇಶ್‌

LEAVE A REPLY

Please enter your comment!
Please enter your name here