ಉಡುಪಿ: ಶ್ರೀ ಕೃಷ್ಣ ಮಠದಲ್ಲಿ ಸೋಮವಾರ ಸಂಭ್ರಮದ ವಿಟ್ಲಪಿಂಡಿ ಉತ್ಸವಕ್ಕೆ ತೆರೆಬಿದ್ದಿದೆ. ವೇಷಗಳ ದರ್ಬಾರಿನೊಂದಿಗೆ ನಡೆದ ವಿಟ್ಲಪಿಂಡಿ ಉತ್ಸವದಲ್ಲಿ ಹುಲಿವೇಷ, ಹಾಲಿವುಡ್ ವೇಷಗಳು, ಪೌರಾಣಿಕ ವೇಷಗಳು ಮನಸೂರೆಗೊಂಡವು.
ರಥಬೀದಿಯಲ್ಲಿ ವಿಶೇಷ ವೇದಿಕೆಯಲ್ಲಿ ಶೀರೂರು, ಸೋದೆ ಮಠ, ಕಲ್ಕೂರ ಕಿಚನ್ಸ್ ಮತ್ತು ಡೆವಲಪರ್ ವತಿಯಿಂದ ಆಯೋಜಿಸಲಾದ ಹುಲಿವೇಷ ಸ್ಪರ್ಧೆಯನ್ನು ಪರ್ಯಾಯ ಪಲಿಮಾರು ಶ್ರೀಗಳು ಉದ್ಘಾಟಿಸಿದರು. ರಾಜಾಂಗಣದಲ್ಲಿ ಪರ್ಯಾಯ ಪಲಿಮಾರು ಮಠದಿಂದ ಆಯೋಜಿಸಲಾದ ಹುಲಿವೇಷ ಸ್ಪರ್ಧೆ, ಜಾನಪದ ವೇಷ ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರತಿ ಹುಲಿ ವೇಷ
ತಂಡಕ್ಕೂ ವಿಶೇಷ ಪುರಸ್ಕಾರ ನೀಡಲಾಯಿತು.
ಛಾಯಾಚಿತ್ರಗ್ರಾಹಕರಿಗೆ ಹಬ್ಬ
ವಿಟ³ಪಿಂಡಿ ಎಂದಾಗ ಛಾಯಾಗ್ರಾಹಕರಿಗೆ ಹಬ್ಬ. ವಿವಿಧ ವೇಷಗಳು ಮತ್ತು ವಿಟ³ಪಿಂಡಿಯ ಸೊಬಗನ್ನು ಸೆರೆಹಿಡಿಯುವಲ್ಲಿ ಛಾಯಾಗ್ರಾಹಕರು ನಿರತರಾಗಿದ್ದದ್ದು ಕಂಡು ಬಂತು. ವಿವಿಧ ಸಂಘಟನೆಗಳು ಮತ್ತು ಸಂಸ್ಥೆಗಳು ಛಾಯಾಚಿತ್ರ ಸ್ಪರ್ಧೆಯನ್ನು ಕೂಡ ಆಯೋಜಿಸಿದ್ದರಿಂದ ಸಾಕಷ್ಟು ಮಂದಿ ಕ್ಯಾಮೆರಾ ಮತ್ತು ಮೊಬೈಲ್ಗಳಲ್ಲಿ ವಿಟ್ಲಪಿಂಡಿಯ ಸಂಭ್ರಮವನ್ನು ಸೆರೆಹಿಡಿಯುತ್ತಿದ್ದರು.
ಸೆಲ್ಫಿ ಜಮಾನ
ಯುವಕ-ಯುವತಿಯರು, ಮಕ್ಕಳು, ಚಿಣ್ಣರನ್ನು ಸೆಳೆಯುವ ಎಲ್ಲ ಬಗೆಯ ವಸ್ತುಗಳ ಮಾರಾಟ ಮಳಿಗೆಗಳು ಜನರನ್ನು ಕೂಗಿ ಕೂಗಿ ಕರೆಯುತ್ತಿದ್ದರು. ಯುವಕ-ಯುವತಿಯರು ಹುಲಿವೇಷ ಧಾರಿಗಳು, ಮಕ್ಕಳ ಕೃಷ್ಣವೇಷ ಮತ್ತು ಹಾಲಿವುಡ್ ಸಿನಿಮಾ ಶೈಲಿಯ ವೇಷಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತ ಸಂಭ್ರಮಿಸುತ್ತಿದ್ದರು. ಮಳೆಯಿಲ್ಲದೆ ಇರುವುದು ಉತ್ಸವದಲ್ಲಿ ಸಾರ್ವ
ಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಲು ಸಾಧ್ಯವಾಯಿತು.
ರಾಜಾಂಗಣ ಮಾರ್ಗದಲ್ಲಿ ಒತ್ತಡ
ವಿಟ್ಲಪಿಂಡಿ ಉತ್ಸವದ ಸಮಾಪ್ತಿಯಾದ ಬಳಿಕ ವಾಪಸು ರಾಜಾಂಗಣ
ಪಾರ್ಕಿಂಗ್ ಏರಿಯಾಕ್ಕೆ ತೆರಳಲು ಒಮ್ಮೆಲೆ ನುಗ್ಗಿದ್ದರಿಂದ ರಥಬೀದಿಯಿಂದ ರಾಜಾಂಗಣದ ಬಳಿ ತೆರಳುವ ಮಾರ್ಗದಲ್ಲಿ ಒತ್ತಡ ಉಂಟಾಯಿತು. ಅನಂತರ ಪೊಲೀಸರು ಮಾರ್ಗ ಬದಲಿಸಿ ವಿದ್ಯೋದಯ ಶಾಲೆ ಮಾರ್ಗದ ಮೂಲಕ ಪಾರ್ಕಿಂಗ್ ಏರಿಯಾಕ್ಕೆ ತೆರಳಲು ಸೂಚನೆ ನೀಡಿದರು.
4 ಗಂಟೆಗಳಲ್ಲಿ 10 ಸಾವಿರ ಚಕ್ಕುಲಿ ಖಾಲಿ
ಶೀರೂರು ಮಠದ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರ ನೆನಪಿಗಾಗಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್, ಲಯನ್ಸ್ ಕ್ಲಬ್ ಬ್ರಹ್ಮಗಿರಿ ವತಿಯಿಂದ ಕ್ಷೇತ್ರಕ್ಕೆ ಬರುವ ಭಕ್ತರಿಗೆ ಸೋಮವಾರ ಮಧ್ಯಾಹ್ನ 2ರಿಂದ ಸಂಜೆ 6ರ ವರೆಗೆ ಚಿತ್ತರಂಜನ್ ಸರ್ಕಲ್ನ ಮಾರುತಿ ವೀಥಿಕಾದ ಸಮಿತಿ ಕಚೇರಿ ಎದುರಿನಲ್ಲಿ ಸುಮಾರು 10 ಸಾವಿರ ಅಕ್ಕಿ ಚಕ್ಕುಲಿಯನ್ನು ಸ್ಥಳದಲ್ಲಿಯೇ ತಯಾರಿಸಿ ಹಂಚಲಾಗಿತ್ತು. ರವಿವಾರ ಬೆಳಗ್ಗಿನಿಂದಲೇ ಬಾಣಸಿಗ ಶಂಕರ ನಾಯಕ್ ಅವರಿಂದ ತಯರಿಸಲ್ಪಟ್ಟ ಚಕ್ಕುಲಿಯನ್ನು ಸಮಿತಿಯ ಪ್ರ.ಕಾರ್ಯದರ್ಶಿ ನಿತ್ಯಾನಂದ ಒಳಕಾಡು ನೇತೃತ್ವದಲ್ಲಿ ಹಲವಾರು ಮಂದಿಯ ಸಹಕಾರದಲ್ಲಿ ಹಂಚಲಾಗಿದೆ. ಇದರೊಂದಿಗೆ ಭಾಸ್ಕರ ಕುಂಜಿಬೆಟ್ಟು ಅವರು ನೀಡಿದ 1 ಸಾವಿರ ಲಾಡನ್ನು ಹಂಚಲಾಗಿತ್ತು.