Home ಧಾರ್ಮಿಕ ಸುದ್ದಿ ಧರ್ಮಸಂಸದ್‌ಗೆ ಸರ್ವ ತಯಾರಿ: ಕನ್ಯಾಡಿ ಶ್ರೀ

ಧರ್ಮಸಂಸದ್‌ಗೆ ಸರ್ವ ತಯಾರಿ: ಕನ್ಯಾಡಿ ಶ್ರೀ

1413
0
SHARE

ಮಂಗಳೂರು: ಧರ್ಮಸ್ಥಳದ ನಿತ್ಯಾನಂದ ನಗರದ ಕನ್ಯಾಡಿ ಶ್ರೀರಾಮ ಕ್ಷೇತ್ರದಲ್ಲಿ ಸೆ. 3ರಂದು ನಡೆಯಲಿರುವ ಧರ್ಮ ಸಂಸದ್‌ಗೆ ಎಲ್ಲ ರೀತಿಯ ಸಿದ್ಧತೆ ನಡೆಸಲಾಗುತ್ತಿದೆ. ದೇಶದ ಸುಮಾರು 2000ಕ್ಕೂ ಅಧಿಕ ಸಾಧುಸಂತರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಕನ್ಯಾಡಿ ಶ್ರೀರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು.

ಬುಧವಾರ ಮಂಗಳೂರಿನಲ್ಲಿ ನಡೆದ ಧರ್ಮಸಂಸದ್‌ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಶ್ರೀಗಳು, ಸನಾತನ ಹಿಂದೂ ಧರ್ಮದ ರಕ್ಷಣೆ ಪ್ರತಿಯೊಬ್ಬನ ಜವಾಬ್ದಾರಿ. ನೈತಿಕ ಮೌಲ್ಯಗಳು ಕುಸಿಯುತ್ತಿದ್ದು ಇದಕ್ಕೆ ಈಗಿನ ಶಿಕ್ಷಣ ವ್ಯವಸ್ಥೆ ಕಾರಣ. ಧಾರ್ಮಿಕ ಜಾಗೃತಿ ಮೂಡಿಸುವುದೇ ಧರ್ಮಸಂಸದ್‌ನ ಉದ್ದೇಶ. ದೇಶದ ಪರಂಪರೆ, ಪುರಾಣ, ಮೌಲ್ಯಗಳು, ಚಿಂತನೆಗೆಳು ಪಠ್ಯದಲ್ಲಿ ಸೇರ್ಪಡೆಗೊಳ್ಳಬೇಕು ಎನ್ನುವ ಬಗ್ಗೆ ನಿರ್ಣಯ ಕೈಗೊಂಡು ಸರಕಾರಕ್ಕೆ ಹಕ್ಕೊತ್ತಾಯ ಸಲ್ಲಿಸಲಾಗುವುದು ಎಂದರು.

ಗುರುಕುಲ ಮಾದರಿಯ ಅಂಗನವಾಡಿ ವಿದ್ಯಾಸಂಸ್ಥೆ
ಮುಂದಿನ ಹತ್ತು ವರ್ಷದೊಳಗೆ ದೇಶದ ಪ್ರತೀ ಹಳ್ಳಿಗಳಲ್ಲಿ ಗುರುಕುಲ ಮಾದರಿಯ ಅಂಗನವಾಡಿ ವಿದ್ಯಾಸಂಸ್ಥೆಯನ್ನು ಪ್ರಾರಂಭಿಸುವ ಮೂಲಕ ಮುಂದಿನ ಪೀಳಿಗೆಯ ಉದ್ಧಾರದ ಉದ್ದೇಶವಿದೆ ಎಂದರು. ಧರ್ಮಸಂಸದ್‌ಗೆ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ಆದಿಚುಂಚನಗಿರಿ ಮಠಾಧೀಶರು, ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ, ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಸಿಎಂಗಳಾದ ಯಡಿಯೂರಪ್ಪ, ಸಿದ್ದರಾಮಯ್ಯ ಅವರನ್ನು ಆಹ್ವಾನಿಸಲಾಗಿದೆ. ಬದರಿ, ಕೇದಾರ, ಗಂಗೋತ್ರಿ, ಉಜ್ಜಯಿನಿ, ನಾಸಿಕ್‌, ರಾಮೇಶ್ವರ ಸೇರಿದಂತೆ ದೇಶ ವಿದೇಶಗಳಿಂದ 2 ಸಾವಿರಕ್ಕೂ ಅಧಿಕ ಸಾಧು ಸಂತರು , 25ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆಯಿದೆ ಎಂದವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ, ಬಲ್ಯೊಟ್ಟುವಿನ ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಕೇಮಾರುವಿನ ಶ್ರೀ ಈಶ ವಿಠಲದಾಸ ಸ್ವಾಮೀಜಿ, ತೀರ್ಥಹಳ್ಳಿಯ ಶ್ರೀ ರೇಣುಕಾನಂದ ಸ್ವಾಮೀಜಿ, ಬಾಳೆಕೋಡಿ ಶ್ರೀ ಶಶಿಕಾಂತ ಮಣಿ ಸ್ವಾಮೀಜಿ ಮಾತನಾಡಿದರು. ಸಭೆಯಲ್ಲಿ ಶಾಸಕ ವೇದವ್ಯಾಸ ಕಾಮತ್‌, ಮೇಯರ್‌ ಭಾಸ್ಕರ್‌, ಶಾಸಕ ಹರೀಶ್‌ ಪೂಂಜ, ಅಜಿತ್‌ ಕುಮಾರ್‌ ರೈ ಮಾಲಾಡಿ, ಡಾ| ಎಂ.ಮೋಹನ್‌ ಆಳ್ವ, ನವೀನ್‌ಚಂದ್ರ ಸುವರ್ಣ, ರಾಜಶೇಖರ ಕೋಟ್ಯಾನ್‌, ಸತ್ಯಜಿತ್‌ ಸುರತ್ಕಲ್‌ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

‘ರಾ. ಲೋಕ ಕಲ್ಯಾಣ ಮಂಚ್‌ ಸ್ಥಾಪನೆ ಗುರಿ’
‘ರಾಜಕೀಯ ರಹಿತವಾಗಿ ರಾಷ್ಟ್ರಮಟ್ಟದಲ್ಲಿ ಎಲ್ಲ ಅಖಾಡಗಳು, ನಾಗಸಾಧುಗಳು, ಸೀತಾರಾಮ ಪರಂಪರೆ, ನಾಥ ಪಂತ, ತ್ಯಾಗಿ, ಬೈರಾಗಿ ಹೀಗೆ ಹಿಂದೂ ಧರ್ಮದ ವಿವಿಧ ಪರಂಪರೆಗಳ ಆಚಾರ್ಯರನ್ನು, ಮಹಾಮಂಡಲೇಶ್ವರರನ್ನು ಒಟ್ಟುಗೂಡಿಸಿ ಧರ್ಮ ಸಂಸದ್‌ ಮೂಲಕ ರಾಷ್ಟ್ರೀಯ ಲೋಕ ಕಲ್ಯಾಣ ಮಂಚ್‌ ಸ್ಥಾಪಿಸುವ ಗುರಿ ಹೊಂದಲಾಗಿದೆ’ ಎಂದು ಕನ್ಯಾಡಿ ಶ್ರೀಗಳು ಹೇಳಿದರು. ‘ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಸಂತರು ಹಾಗೂ ಸಮಾಜ ಒಟ್ಟಾಗಿರಬೇಕು. ಹೀಗಾಗಿ ಜನರಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸಲು ಕನ್ಯಾಡಿ ಶ್ರೀಗಳ ನೇತೃತ್ವದಲ್ಲಿ ಧರ್ಮಸಂಸದ್‌ ಆಯೋಜನೆಗೊಂಡಿದೆ’ ಎಂದು ಒಡಿಯೂರು ಶ್ರೀಗಳು ಹೇಳಿದರು. ‘ವೇದಗಳು, ಭಗದ್ಗೀತೆ ಆಶಯ ಇಡೀ ಸಮಾಜಕ್ಕೆ ತಲುಪಬೇಕು. ಈ ನಿಟ್ಟಿನಲ್ಲಿ ಧರ್ಮಸಂಸದ್‌ ಪ್ರೇರಣೆಯಾಗಲಿ’ ಎಂದು ಕೇಮಾರು ಶ್ರೀಗಳು ತಿಳಿಸಿದರು.

LEAVE A REPLY

Please enter your comment!
Please enter your name here