ಬಂಟ್ವಾಳ: ಲೌಕಿಕ, ಪಾರಮಾರ್ಥಿಕ ಒಳಿತಿಗಾಗಿ ಸನಾತನ ಹಿಂದೂ ಧರ್ಮದ ವಿವಿಧ ಪರಂಪರೆಗಳ ಆಚಾರ್ಯರು, ಮಹಾಮಂಡಲೇಶ್ವರರು, ಮಹಂತರನ್ನು ಒಂದು ಕಡೆ ಸೇರಿಸಿ ಲೋಕ ಕಲ್ಯಾಣ, ಧರ್ಮ ರಕ್ಷಣೆ, ರಾಷ್ಟ್ರೀಯ ಲೋಕಕಲ್ಯಾಣ ಮಂಚ್ ಸಂಸ್ಥೆ ಸ್ಥಾಪಿಸುವುದು ಸೆ. 3ರಂದು ನಡೆಯುವ ರಾಷ್ಟ್ರೀಯ ಧರ್ಮ ಸಂಸದ್ ಸಮಾವೇಶದ ಉದ್ದೇಶವಾಗಿದೆ. ಸಮಾಜದಲ್ಲಿ ಸಾರ್ವತ್ರಿಕ ಮತ್ತು ವಾಸ್ತವವಾಗಿ ಇರುವಂತಹ ವ್ಯತ್ಯಾಸಗಳನ್ನು ಸರಿಪಡಿಸುವುದು. ನಮ್ಮಲ್ಲಿ ಐಕ್ಯಮತ್ಯ ಭಾವನೆ ಬೆಳೆಸುವುದು ನಮ್ಮೆಲ್ಲರ ಹೊಣೆ ಎಂದು ಧರ್ಮಸ್ಥಳ ನಿತ್ಯಾನಂದ ನಗರ ಶ್ರೀ ರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು. ಅವರು ಜು. 1ರಂದು ಮೆಲ್ಕಾರ್ ಬಿರ್ವ ಸೆಂಟರ್ ಮಿನಿ ಸಭಾಭವನದಲ್ಲಿ ನಡೆದ ಧರ್ಮ ಸಂಸದ್ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಸದ್ಗುರು ಪಟ್ಟಾಭಿಷೇಕ ದಶಮಾನೋತ್ಸವ ಪ್ರಯುಕ್ತ ನಡೆಯುವ ಧರ್ಮ ಸಂಸದ್-2018 ಕಾರ್ಯಕ್ರಮದಲ್ಲಿ ಸನಾತನ ಧರ್ಮಕ್ಕೆ ಪಟ್ಟಾಭಿಷೇಕ ಆಗಬೇಕು ಎಂದರು.
ಕನ್ಯಾನ ಬಾಳೆಕೋಡಿ ಶ್ರೀ ಕಾಳಬೈರವೇಶ್ವರ ಕ್ಷೇತ್ರದ ಶ್ರೀ ಶಶಿಕಾಂತಮಣಿ ಸ್ವಾಮೀಜಿ ಮಾತನಾಡಿ, ಶ್ರೀರಾಮ ಕ್ಷೇತ್ರ ದಿಂದ ಹಾಕಿಕೊಂಡಿರುವ ಕಾರ್ಯಕ್ರಮವು ಸಮಾಜಕ್ಕೆ ಮಾರ್ಗದರ್ಶನ ನೀಡುವುದು. ಸುಧಾರಣೆ ಸಂತರಲ್ಲಿಯೂ ಆಗಬೇಕು. ಕೇವಲ ಒಂದು ವ್ಯವಸ್ಥೆ ಸಮಾಜಕ್ಕೆ ಸೀಮಿತವಾಗಿ ಇರುವುದರಿಂದ ನಾವು ಹೊರಗೆ ಬಂದು ಸರ್ವರನ್ನು ಮಾನವತೆಯ ನೆಲೆಯಲ್ಲಿ ಕಾಣಬೇಕಾಗಿದೆ. ಇದಕ್ಕೊಂದು ಪೂರಕ ಕೆಲಸ ಆಗುತ್ತಿದೆ ಎಂದರು. ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ ಮಾತನಾಡಿ, ಧರ್ಮ ಸಂಸದ್ ಜಗತ್ತಿಗೆ ಬೆಳಕು ನೀಡುವ ಕೆಲಸ. ಧರ್ಮವನ್ನು ಕಟ್ಟುವ ಕೆಲಸ. ಮಠಮಂದಿರಗಳ ಜತೆ ಸಂತರು, ಸಾಧುಗಳು ಒಟ್ಟಾಗಿ ಧರ್ಮದ ಸಮಾಜ ಕಟ್ಟಬೇಕು ಎಂದು ಕರೆ ನೀಡಿದರು.
ಶ್ರೀಕ್ಷೇತ್ರ ಕಣಿಯೂರಿನ ಮಹಾಬಲ ಸ್ವಾಮೀಜಿ, ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಮಾತನಾಡಿ, ಧರ್ಮ ಸಂಸದ್ ಅತ್ಯುತ್ತಮ ಕಾರ್ಯಕ್ರಮ. ಇದಕ್ಕೆ ನಮ್ಮ ಸಂಪೂರ್ಣ ಬೆಂಬಲ ಇರುವುದು. ಇದರಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು. ಮಾಜಿ ಸಚಿವ ಬಿ. ರಮಾನಾಥ ರೈ, ಬಿ. ನಾಗರಾಜ ಶೆಟ್ಟಿ, ಧರ್ಮ ಸಂಸದ್ ಜಿಲ್ಲಾ ಪ್ರ. ಸಂಚಾಲಕ ಸತ್ಯಜಿತ್ ಸುರತ್ಕಲ್ ತಾ| ಅಧ್ಯಕ್ಷ ಕೇಶವ ಶಾಂತಿ ಉಪಸ್ಥಿತರಿದ್ದರು.
ಧರ್ಮ ಸಂಸದ್ ಉದ್ದೇಶ
· ರಾಷ್ಟ್ರೀಯ ಲೋಕಕಲ್ಯಾಣ ಮಂಚ್ ಸ್ಥಾಪನೆ. ದೇಶದ ಸಂಸತ್ನಿಂದ ಅನುಮೋದಿಸಲ್ಪಟ್ಟ ಸ್ವಾಯತ್ತ ಸಂಸ್ಥೆಯಾಗಬೇಕು.
· ಎಲ್ಲ ರಾಜ್ಯಗಳ ಪಕ್ಷಾತೀತ ಸಂತರನ್ನು ಸದಸ್ಯರನ್ನಾಗಿಸುವುದು.
· ರಾಮಾಯಣ, ಮಹಾಭಾರತ, ಭಗವದ್ಗೀತೆ, ಉಪನಿಷತ್ ಗಳ ವಿಚಾರ ಪರಿಚಯವನ್ನು ಪಠ್ಯಪುಸ್ತಕಗಳಲ್ಲಿ ಜೋಡಿಸಬೇಕು.
· ಧರ್ಮದ ಮೇಲೆ ಆಗುತ್ತಿರುವ ತೊಂದರೆ, ಲೋಕ ಕಲ್ಯಾಣಕ್ಕೆ ಆಗುತ್ತಿರುವ ಸಮಸ್ಯೆಗಳ ನಿವಾರಣೆಗೆ ಮಂಚ್ ತೀರ್ಮಾನ ಹೇಳತಕ್ಕ ಸನ್ನಿವೇಶದ ಸೃಷ್ಟಿ.
·ಭಾರತದ ಶ್ರೇಷ್ಠ ಸನಾತನ ಧರ್ಮದ ಮೂಲಕ ಯುವ ಪೀಳಿಗೆಯನ್ನು ಸಂಸ್ಕಾರವಂತರಾಗಿ ಮಾಡುವ ಉದ್ದೇಶ.
· ಗುರುಕುಲ ಮಾದರಿ ಅಂಗನವಾಡಿ ವಿದ್ಯಾಸಂಸ್ಥೆಯ ಪ್ರಾರಂಭಿಸಿ ಮುಂದಿನ ಪೀಳಿಗೆಯ ಬಗ್ಗೆ ಚಿಂತನೆ.
·ಭದ್ರತೆ ಇಲ್ಲದಿರುವ ಪರಿವ್ರಾಜಕ, ವಯೋವೃದ್ಧ, ಪರ್ಯಟನಾ ಸಂತರಿಗೆ ರಾ.ಲೊ. ಕ. ಮಂಚ್ನಿಂದ ರಕ್ಷಣೆ ಒದಗಿಸುವಂತಾಗಬೇಕು.
· ಕೇಂದ್ರವು ಸಂತರ ಕಲ್ಯಾಣ ನಿಧಿಯನ್ನು ಸ್ಥಾಪಿಸುವ ಉದ್ದೇಶ ಈಡೇರಿಸುವುದು.