Home ನಂಬಿಕೆ ಸುತ್ತಮುತ್ತ ಭಕ್ತಪ್ರಹ್ಲಾದನ ಕತೆಯ ದೃಷ್ಟಾಂತ; ಭಗವತ್ಪ್ರಾಪ್ತಿಗಾಗಿ ಏನು ಮಾಡಬೇಕು?

ಭಕ್ತಪ್ರಹ್ಲಾದನ ಕತೆಯ ದೃಷ್ಟಾಂತ; ಭಗವತ್ಪ್ರಾಪ್ತಿಗಾಗಿ ಏನು ಮಾಡಬೇಕು?

1156
0
SHARE

ದೇವರನ್ನು ಒಮ್ಮೆ ನೋಡಬೇಕು ಆಸೆ ಎಲ್ಲ ಭಕ್ತರಲ್ಲೂ ಇರುತ್ತದೆ. ಅದು ಸಾಧ್ಯವಾ? ಅಥವಾ ಎಂದಿಗೂ ಸಾಧ್ಯವೇ ಇಲ್ಲದ ಮಾತಾ? ಗೊತ್ತಿಲ್ಲ! ಬದುಕಿನ ಕೊನೆಯಲ್ಲಾದರೂ ಆತ್ಮ ದೇಹವನ್ನು ಬಿಟ್ಟು ಪರಮಾತ್ಮನನ್ನೇ ಸೇರಬೇಕು ಎಂಬ ಆಸೆ ಸಹಜವಾಗಿಯೇ ಇರುತ್ತದೆ. ಕೊನೆಯಲ್ಲಿ ಭಗವತ್ಪ್ರಾಪ್ತಿ ದೊರೆತರೇನೇ ಮುಕ್ತಿ ಎಂಬ ನಂಬಿಕೆ ನಮ್ಮಲ್ಲಿದೆ. ಹಾಗಾಗಿ ಎಲ್ಲರೂ ಬಯಸುವುದೂ ಇದನ್ನೇ. ಈ ಭಗವತ್ಪ್ರಾಪ್ತಿಗಾಗಿ ಏನು ಮಾಡಬೇಕು? ಹೇಗೆ ದೊರೇತೀತು? ಎಂಬ ಪ್ರಶ್ನೆ ಕಾಡುತ್ತದೆ. ಬದುಕಿನ ಯಾವ ಭಾಗವನ್ನು ತೆಗೆದಿಟ್ಟರೂ ಅಲ್ಲಿ ನಾವು ಅಸತ್ಯದ ನೆರಳಿನಲ್ಲೇ ಬದುಕಿರುತ್ತೇವೆ; ಬದುಕುತ್ತಿದ್ದೇವೆ. ಕೆಲವೊಮ್ಮೆ ಗೊತ್ತಿದ್ದೂ, ಇನ್ನು ಕೆಲವೊಮ್ಮೆ ಗೊತ್ತಿಲ್ಲದೆಯೂ. ಆದರೆ ಸುಳ್ಳು ಎಂದಿಗೂ ಸತ್ಯವಾಗದು. ಸುಳ್ಳನ್ನು ಸತ್ಯವೆಂದು ನಂಬಿಸಬಹುದು; ನಂಬಬಹುದು ಅಷ್ಟೆ. ಸತ್ಯದ ಬೆಳಕಲ್ಲಿ ಬದುಕುವುದು ಈ ಯುಗದಲ್ಲಿ ಸಾಧ್ಯವೇ ಇಲ್ಲದ ಮಾತು ಎಂಬುದು ಸೂರ್ಯನ ಬೆಳಕಿನಷ್ಟೇ ಸತ್ಯ. ಇದು ಅಗತ್ಯಕ್ಕೋ ಅನಿವಾರ್ಯಕ್ಕೋ ಬದುಕು ಹೊರಳಿಕೊಂಡ ದಾರಿಯಾದರೂ ಮನಸ್ಸು ಬಯಸುವುದು ಮಾತ್ರ ಭಗವತ್ಪ್ರಾಪ್ತಿ. ಇಂತಹ ಬದುಕಿಗೆ ಮುಕ್ತಿಯ ದಾರಿಯೂ ಇದೊಂದೇ.

ಶ್ರೀಮಧ್ಬಾಗವತದ ಏಕಾದಶಸ್ಕಂಧದಲ್ಲಿ ಅವದೂತ ದತ್ತಾತ್ರೇಯರು ಭಗವತ್ಪ್ರಾಪ್ತಿಯನ್ನು ಪಡೆಯುವ ಬಗೆಯನ್ನು ಹೇಳಿದ್ದಾರೆ. ಇದಕ್ಕೆ ಭೃಂಗೀ ಹುಳು ಅಂದರೆ ಕಣಜದ ಹುಳುವಿನ ದೃಷ್ಟಾಂತವನ್ನು ಕೊಟ್ಟು ಇದನ್ನು ವಿವರಿಸಿದ್ದಾರೆ. ಪ್ರಾಣಿಯು ಸ್ನೇಹದಿಂದಾಗಲೀ ದ್ವೇಷದಿಂದಾಗಲೀ ತಿಳಿದು-ತಿಳಿದು ಏಕಾಗ್ರವಾಗಿ ತನ್ನ ಮನಸ್ಸನ್ನು ಯಾವುದರಲ್ಲಾದರೂ ತೊಡಗಿಸಿದರೆ, ಅದಕ್ಕೆ ಅದೇ ವಸ್ತುವಿನ ಸ್ವರೂಪ ಪ್ರಾಪ್ತವಾಗುತ್ತದೆ. ಕಣಜದ ಹುಳುವು ಯಾವುದೋ ಹುಳುವನ್ನು ತಂದು ಅದನ್ನು ಮಣ್ಣಿನ ಗೂಡಿನಲ್ಲಿ ಮುಚ್ಚಿಡುತ್ತದೆ. ಹೊರಗಿನಿಂದ ತಾನು ಬಂದು ಪದೇ-ಪದೇ ಅದನ್ನು ಭೂ-ಭೂ ಮಾಡುತ್ತಾ ಹೆದರಿಸುತ್ತದೆ. ಒಳಗಿರುವ ಹುಳುವು ಕಣಜದ ಭಯದಿಂದ ಅದನ್ನೇ ಚಿಂತಸುತ್ತಾ ತನ್ನ ಹಿಂದಿನ ಶರೀರವನ್ನು ಬಿಡದೆ ತದ್ರೂಪವಾಗುತ್ತದೆ. ಅಂದರೆ ಕಣಜದ ಹುಳುವೇ ಆಗುತ್ತದೆ. ಹೀಗೆಯೇ ಪ್ರಿತಿಯಿಂದಾದರೂ ಭಯದಿಂದಾದರೂ ಮನುಷ್ಯನು ಭಗವಂತನನ್ನು ಸತತ ಚಿಂತಿಸುವುದರಿಂದ ಆ ಭವಗವಂತನ ಅಂದರೆ ಪರಮಾತ್ಮನ ಸ್ವರೂಪನೇ ಆಗುವನು. ಹಾಗಾಗಿ ಮನುಷ್ಯನು ಬೇರೆಬೇರೆ ವಸ್ತುಗಳಲ್ಲಿ ಏಕಾಗ್ರವಾಗಿ ಚಿಂತಿಸವುದನ್ನು ಬಿಟ್ಟು ಕೇವಲ ಪರಮಾತ್ಮನ ಚಿಂತನೆ ಮಾಡುವುದೇ ಭಗವತ್ಪ್ರಾಪ್ತಿಗೆ ಸುಲಭ ಮಾರ್ಗ.

ಭಕ್ತಪ್ರಹ್ಲಾದನ ಕತೆಯೂ ಇದಕ್ಕೆ ದೃಷ್ಟಾಂತ. ಹರಿಯೂ ದೇವರೇ, ಹರನೂ ದೇವರೇ. ಆದರೆ ಪ್ರಹ್ಲಾದ ಹರಿಯನ್ನು ಎಲ್ಲೆಲ್ಲಿಯೂ ಕಾಣುತ್ತಾನೆ. ಅವನು ಕಾಣುವ ಚರಾಚರವಸ್ತುಗಳೆಲ್ಲವೂ ಹರಿಮಯವೇ. ಕೊನೆಯಲ್ಲಿ ಕಂಬದೊಳಗಿಂದ ಹರಿ ನರಸಿಂಹನ ರೂಪದಲ್ಲಿ ಹೊರಬರುತ್ತಾನೆ. ಈ ರೂಪವೂ ಕೂಡ ಪ್ರಾಣಿಯಲ್ಲೂ ಮನುಷ್ಯನಲ್ಲೂ ದೇವರು ನೆಲಸಿದ್ದಾನೆ ಎಂಬುದರ ಸೂಚಕ. ಕಲ್ಲಿನ ಮೂರ್ತಿಯೊಂದು ದೇವರ ರೂಪ ಪಡೆಯುವುದಕ್ಕೆ ನಮ್ಮ ನಂಬಿಕೆ-ಪ್ರಾರ್ಥನೆಗಳೇ ಕಾರಣ. ಸದಾ ಒಳ್ಳೆಯದನ್ನು ಚಿಂತಿಸುವುದರಿಂದ ಒಳ್ಳೆಯದೇ ಆಗುತ್ತದೆ. ಅಂತೆಯೇ ಕೆಟ್ಟದ್ದು ಕೂಡ. ನಂಬಿಕೆ ಧನಾತ್ಮಕವಾಗಿದ್ದಾಗ, ಬಲವಾಗಿ, ಏಕಾಗ್ರವಾಗಿದ್ದಾಗ ಭಗತ್ಪ್ರಾಪ್ತಿ ದೊರೆಯುತ್ತದೆ. ಅಷ್ಟೋ-ಇಷ್ಟೋ ಅಥವಾ ಎಳ್ಳಿನಷ್ಟೋ ಏಕಾಗ್ರತೆ ಸಾಧಿಸಬಹುದಾದ ನಾವು ಪಡೆಯುವ ಭಗವತ್ಪ್ರಾಪ್ತಿ ಎಂದರೆ, ಎಕಾಗ್ರದಿಂದ ಒಂದು ಹೂವನ್ನು ದೇವರ ಪಾದಕ್ಕೋ ಶಿರಕ್ಕೋ ಇಟ್ಟಾಗ ದೊರೆಯುವ ಸಂತೃಪ್ತಿಯೇ ಅಲ್ಲವೇ.

||ಸರಳವಾಗಿ ಯೋಚಿಸಿ-ಸಂಸ್ಕಾರಯುತರಾಗಿ-ಸರಳರಾಗಿ ಜೀವಿಸಿ||

– ಭಾಸ್ವ.

LEAVE A REPLY

Please enter your comment!
Please enter your name here