ಹೆಬ್ರಿ: ದೇಹಕ್ಕೆ ಆರೋಗ್ಯವಿದ್ದರೂ ಮಾನಸಿಕ ನೆಮ್ಮದಿಗೆ ದೇವಾಲಯಕ್ಕೆ ಹೋಗಬೇಕು. ಅದಕ್ಕೆ ದೇವಾಲಯವನ್ನು ರುಗ್ಣಾಲಯ ಎನ್ನುತ್ತಾರೆ. ದೇವರೇ ಇಲ್ಲಿ ಮುಖ್ಯ ವೈದ್ಯರು. ದೇವರ ಸೇವೆಯನ್ನು ನಾವು ಸರಿಯಾಗಿ ಮಾಡಿ ದೇವಸ್ಥಾನದ ಅಭಿವೃದ್ಧಿಗೆ ತಮ್ಮ ಪಾಲು ವಿನಿಯೋಗಿಸಿದಾಗ ಬದುಕು ಪಾವನವಾಗುತ್ತದೆ ಎಂದು ಉಡುಪಿ ಅದಮಾರು ಮಠಾಧೀಶ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಹೇಳಿದರು.
ಅವರು ಫೆ. 13ರಂದು ಇತಿಹಾಸ ಪ್ರಸಿದ್ಧ ಕಾರಣೀಕ ಕ್ಷೇತ್ರ ಮುದ್ರಾಡಿ ಬೆಳಗುಂಡಿ ಮಹಾಲಿಂಗೇಶ್ವರ ದೇವಸ್ಥಾನದ 4 ಕೋ.ರೂ. ವೆಚ್ಚದ ಜೀರ್ಣೋದ್ಧಾರದ ಮನವಿ ಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದರು. ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ದಿವಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜೀರ್ಣೋದ್ಧಾರ ಕಾರ್ಯಕ್ಕೆ ದೇಣಿಗೆ ನೀಡಿದ ಹಲವರನ್ನು ಸ್ವಾಮೀಜಿ ಗೌರವಿಸಿದರು.
ಈ ಸಂದರ್ಭ ಮುದ್ರಾಡಿ ಬೆಳಗುಂಡಿ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಬೆಳಗುಂಡಿ ಪಾಂಡುರಂಗ ಪ್ರಭು, ಮುದ್ರಾಡಿ ಗ್ರಾ.ಪಂ. ಅಧ್ಯಕ್ಷೆ ಶಶಿಕಲಾ ಪೂಜಾರಿ, ಡಾ| ವಾಸುದೇವ ಭಟ್, ಅಶೋಕ್ ಕುಮಾರ್ ಶೆಟ್ಟಿ, ಮಂಜುನಾಥ ಪೂಜಾರಿ, ಗಿರೀಶ್ ಕುಮಾರ್, ಮಂಜುನಾಥ ಅಡಿಗ, ರಾಘವೇಂದ್ರ ಅಡಿಗ, ಪದ್ಮನಾಭ ಅಡಿಗ ಮೊದಲಾದವರು ಉಪಸ್ಥಿತರಿದ್ದರು.
ಸಂತೋಷ ಕುಮಾರ್ ಶೆಟ್ಟಿ ಪ್ರಾಸ್ತಾವನೆಗೈದರು. ಅಂಬಾತನಯ ಮುದ್ರಾಡಿ ಸ್ವಾಗತಿಸಿ, ಬಲ್ಲಾಡಿ ಚಂದ್ರಶೇಖರ ಭಟ್ ನಿರೂಪಿಸಿ, ಕಾಪೋಳಿ ಶ್ರೀಧರ ಹೆಬ್ಟಾರ್ ವಂದಿಸಿದರು.