Home ನಂಬಿಕೆ ಸುತ್ತಮುತ್ತ ದೀಪಾವಳಿ ಎಂಬ ದೀಪೋತ್ಸವ; ಜಗತ್ಸರ್ವಮ್ ಜ್ಯೋತಿರ್ಮಯಂ  

ದೀಪಾವಳಿ ಎಂಬ ದೀಪೋತ್ಸವ; ಜಗತ್ಸರ್ವಮ್ ಜ್ಯೋತಿರ್ಮಯಂ  

ನರಕ ಚತುರ್ದಶಿ ಮತ್ತು ತೈಲಾಭ್ಯಂಜನ ಸ್ನಾನ

2325
0
SHARE

ಆಶ್ವಯುಜ ಮಾಸದ ಅಂತ್ಯಕಾಲ ಸಮೀಪಿಸಿತೆಂದರೆ ದೀಪಾವಳಿಯ ಸಂಭ್ರಮ ಎಲ್ಲೆಡೆ ಕಂಡುಬರುತ್ತದೆ. ಹೊಸತೊಂದು ಬೆಳಕು ಹರಿಯುತ್ತಿದ್ದಂತೆ ಭಾಸವಾಗುತ್ತದೆ. ಎಲ್ಲೆಡೆ ದೀಪಗಳ ಸಾಲು, ದೀಪಗಳ ಹಾವಳಿ; ದೀಪಾವಳಿ. ಹಿಂದೂ ಧರ್ಮದಲ್ಲಿ ಪ್ರಮುಖ ಹಬ್ಬವಾಗಿರುವ ಇದು ಆಶ್ವಯುಜ ಕೃಷ್ಣ ಪಕ್ಷದ ಚತುರ್ದಶಿಯಿಂದ ಹಿಡಿದು ಕಾರ್ತಿಕ ಮಾಸದ ಪಾಡ್ಯದ ತನಕ ವಿವಿಧ ರೂಪಗಳಲ್ಲಿ ಈ ಹಬ್ಬದ ಆಚರಣೆಯಿರುತ್ತದೆ. ಇದು ಬೆಳಕಿನ ಹಬ್ಬ, ಪರಸ್ಪರ ಪ್ರೀತಿಯ ಬೆಳಕನ್ನು ಬೆಳಗುವ ಹಬ್ಬ. ಹಿಂದೂ ಧರ್ಮದ ಪ್ರತಿಯೊಂದು ಹಬ್ಬದ ಹಿಂದೆಯೂ ಪುರಾಣ ಕಥೆಗಳಿವೆ. ಪ್ರತಿಯೊಂದು ಹಬ್ಬವೂ ನಮಗೆ ಜ್ಞಾನ, ಶಕ್ತಿ, ಸಂಸ್ಕಾರವನ್ನು ನೀಡುವಂತವುಗಳು. ಇದೇ ರೀತಿ ಹಬ್ಬಗಳಲ್ಲೇ ದೊಡ್ಡ ಹಬ್ಬ ಎಂದು ಕರೆಸಿಕೊಂಡಿರುವ ದೀಪಾವಳಿ ಹಬ್ಬಕ್ಕೂ ಪುರಾಣ ಕಥೆಯಿದೆ.

ನರಕ ಚತುರ್ದಶಿ ಎಂಬ ಹೆಸರು ಬರುವುದಕ್ಕೆ ಕಾರಣ ನರಕಾಸುರ ಎಂಬ ಹೆಸರಿನ ಅಸುರ. ಇವನ ಕಥೆಯು ಈ ಹಬ್ಬಕ್ಕೆ ಇಂಬನ್ನು ಕೊಟ್ಟಿದೆ. ಭೂದೇವಿಯ ಮಗನಾದ ರಜೋಗುಣ ಮತ್ತು ತಮೋಗುಣ ಸಂಪನ್ನನಾದ ಈ ನರಕಾಸುರನು ತನ್ನ ಅಸುರಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಘೋರವಾದ ತಪಸ್ಸನ್ನು ಮಾಡಿ ಬ್ರಹ್ಮನಿಂದ ಸುಗುಣವತಿಯಾದ ಸ್ತ್ರೀಯಿಂದ ಮಾತ್ರ ನನಗೆ ಸಾವು ಬರಲಿ. ಬೇರಾರಿಂದಲೂ ಸಾವು ಬರಬಾರದು ಎಂಬ ವಿಶೇಷವಾದ ವರವನ್ನು ಪಡೆದುಕೊಳ್ಳುತ್ತಾನೆ. ಆದರೆ ಈ ವರವನ್ನು ತನ್ನ ಅಸುರಕೃತ್ಯಕ್ಕೆ ಬಳಸಿಕೊಳ್ಳುತ್ತಾನೆ. ಸಾಮಾನ್ಯರಿಂದ ಹಿಡಿದು ಸಿರಿವಂತರಿಗೂ ಹಿಂಸೆ ಕೊಡುತ್ತಿದ್ದ. ಅಷ್ಟೇ ಅಲ್ಲದೆ ತಪೋನಿರತರಾದ ಮುನಿಗಳಿಗೆ, ಯಜ್ಞ ಯಾಗಗಳಿಗೆ ತೊಂದರೆಯನ್ನು ಕೊಡುತ್ತ ಲೋಕಕಂಠಕನಾಗುತ್ತಾನೆ. ಆಗ ಎಲ್ಲಾ ಋಷಿಗಳು ಸೇರಿ ವಿಷ್ಣು ದೇವರ ಮೊರೆ ಹೋಗುತ್ತಾರೆ. ವಿಷ್ಣುವು ತನ್ನ ಕೃಷ್ಣಾವತಾರದಲ್ಲಿದ್ದಾಗ 16೦೦೦ ಸ್ತ್ರೀಯರನ್ನು ಬಂಧನದಲ್ಲಿಟ್ಟು, ಜನಗಳನ್ನ ಹಿಂಸಿಸುತ್ತ ಇನ್ನಷ್ಟು ಕ್ರೂರತನವನ್ನು ಮೆರೆದಾಗ ಕೃಷ್ಣನು ಈತನನ್ನು ತನ್ನ ಮಡದಿ ಸತ್ಯಭಾಮೆಯ ಕೈಯಲ್ಲಿ ಸುಧರ್ಶನಚಕ್ರವನ್ನು ನೀಡಿ, ಆಮೂಲಕ ಸಂಹರಿಸುತ್ತಾನೆ. ಮತ್ತು ಆ 16೦೦೦ ಹೆಂಗಳೆಯರನ್ನು ಬಿಡುಗಡೆ ಮಾಡುತ್ತಾನೆ. ಬಂಧನದಿಂದ ಬಿಡುಗಡೆಯಾದ ಆ ಹೆಂಗಳೆಯರು ಮನಸ್ಸು ಮತ್ತು ದೇಹ ಶುದ್ಧಿಗಾಗಿ ತೈಲಾಭ್ಯಂಜನವನ್ನು ಮಾಡುತ್ತಾರೆ. ಈ ದಿನವೇ ಆಶ್ವಯುಜ ಕೃಷ್ಣ ಚತುರ್ದಶಿ. ಇದು ಮುಂದೆ ನರಕ ಚತುರ್ದಶಿಯೆಂಬುದಾಗಿ ಪ್ರತೀತಿಯಾಯಿತು.

ಆಸ್ವಿನಯಾಸ್ಯಾಂಸಿತೇ ಪಕ್ಷೇ
ಚತುರ್ದಶ್ಯಾಂ ವಿದೂದಯೇ
ಸ್ನಾಪಯೇತ್ ತಿಲತೈಲೇನ

ರೌರವಂ ನರಕಂ ಪ್ರಜೇತ್ ಎಂಬ ಮಾತಿದೆ. ಆಶ್ವಯುಜದ ಈ ಚತುರ್ದಶಿಯಂದು ಎಳ್ಳೆಣ್ಣೆ ಹಚ್ಚಿ ಸ್ನಾನ ಮಾಡದಿದ್ದರೆ ರೌರವ ನರಕಕ್ಕೆ ಹೋಗುತ್ತೇವೆಂದು ಇದರ ಅರ್ಥ.

ಏಕಾದಶಿಯ ದಿನ ಸಂಜೆ ಬಾವಿಯನ್ನು ರಂಗೋಲಿ ಮತ್ತು ಹೂವುಗಳಿಂದ ಶೃಂಗರಿಸಿಕೊಂಡು, ಸ್ನಾನದ ನೀರನ್ನು ಇಡುವ ಪಾತ್ರೆ(ಹಂಡೆ)ಗೂ ಹೂವು, ಕಾಡು ಬಳ್ಳಿಗಳಿಂದ ಶೃಂಗರಿಸಿದ ಮೇಲೆ ನೀರನ್ನು ತುಂಬಿಸಿಡುವುದು ಹಿಂದಿನಿಂದ ಬಂದ ಆಚರಣೆ. ಈ ದಿನದಿಂದಲೇ ಮನೆಯಲ್ಲಿ ಹಬ್ಬದ ವಾತಾವರಣವಿರುತ್ತದೆ. ಚತುರ್ದಶಿಯದಿನ ಮುಂಜಾನೆ ದೇವರ ಮುಂದೆ ಕುಳಿತು, ಮನೆಯ ಹಿರಿಯರಿಂದ ಎಣ್ಣೆ ಹಾಕಿಸಿಕೊಂಡು ಆ ಎಣ್ಣೆಯನ್ನು ಇಡೀ ದೇಹಕ್ಕೆ ಹಚ್ಚಿಕೊಂಡು ಸ್ನಾನ ಮಾಡುವುದು ಕ್ರಮ. ದೇಹದ ಆರೋಗ್ಯಕ್ಕೂ ಎಣ್ಣೆಸ್ನಾನ ಒಳ್ಳೆಯದು. ಸ್ನಾನ ಎಂದರೆ ದೇಹಶುದ್ಧಿ. ಇಲ್ಲಿ ತೈಲಸ್ನಾನವನ್ನು ಮಾಡುವುದೆಂದರೆ ನಮ್ಮೊಳಗಿನ ಜಿಡ್ಡು ಅಂದರೆ ಮದ, ಮೋಹ, ಮತ್ಸರಾದಿ ಅರಿಷಡ್ವೈರಿಗಳನ್ನು ತೊಳೆದು ಹೊರಹಾಕುವುದು ಎಂಬುದು ಮತಿತಾರ್ಥ. ನರಕಾಸುರನನ್ನು ಕೊಂದ ದಿನ ಇದು. ಅಂದರೆ ನಮ್ಮಲ್ಲಿ ತಿಳಿದೋ ತಿಳಿಯದೆಯೋ ಅಡಗಿಕೊಂಡಿರುವ ನರಕಾಸುರನ ಅಸುರತ್ವವನ್ನು ವರುಷಕ್ಕೊಮ್ಮೆ ಹೊರಹಾಕಿ ಶುದ್ಧವಾಗುವ ದಿನ. ನರಕಕ್ಕೆ ಹೋಗದಂತೆ ಸದಾಚಾರಗಳಲ್ಲಿಯೇ ತೊಡಗಿಕೊಳ್ಳುವ ದಿನವೂ ಇದು. ಈ ಹಬ್ಬದ ದಿನ ಎಣ್ಣೆಸ್ನಾನವು ಮನಸ್ಸನ್ನು ಪ್ರಫುಲ್ಲವಾಗಿಸುವುದಂತೂ ನಿಜ!

ಮುಂದುವರಿಯುವುದು…

|| ಸರಳವಾಗಿ ಯೋಚಿಸಿ ಸಂಸ್ಕಾರಯುತರಾಗಿ ಸರಳರಾಗಿ ಜೀವಿಸಿ ||

ವಿಷ್ಣು ಭಟ್, ಹೊಸ್ಮನೆ (ಭಾಸ್ವ).

LEAVE A REPLY

Please enter your comment!
Please enter your name here