Home ನಂಬಿಕೆ ಸುತ್ತಮುತ್ತ ದೀಪಾವಳಿ ಎಂಬ ದೀಪೋತ್ಸವ; ಬಲಿ ಪಾಡ್ಯ

ದೀಪಾವಳಿ ಎಂಬ ದೀಪೋತ್ಸವ; ಬಲಿ ಪಾಡ್ಯ

ಜಗತ್ಸರ್ವಮ್ ಜ್ಯೋತಿರ್ಮಯಂ  

3011
0
SHARE

ದೀಪಾವಳಿಯ ದೀಪೋತ್ಸವದ ದಿನ ಕಾರ್ತಿಕ ಮಾಸ, ಶುಕ್ಲ ಪಕ್ಷದ ಪ್ರತಿಪದ ಅಥವಾ ಪಾಡ್ಯ. ಬಲಿಪಾಡ್ಯ ಎಂದೇ ಹೆಸರಾಗಿರುವ ಈ ದಿನ ದೀಪಗಳನ್ನು ಹಚ್ಚಿ ಮನೆ ಮನಗಳನ್ನು ಬೆಳಗುವ ಶುಭದಿನ. ಬಲಿಪಾಡ್ಯದ ಹಿಂದೆಯೂ ಪುರಾಣ ಕಥೆಯಿದೆ. ಭೂಲೋಕವನ್ನು ಆಳುತ್ತಿದ್ದ ಬಲಿ ಚಕ್ರವರ್ತಿಯು ದೇವಲೋಕಕ್ಕೆ ಮುತ್ತಿಗೆ ಹಾಕಿ, ದೇವತೆಗಳನ್ನು ಸೋಲಿಸಿ ದೇವಲೋಕವನ್ನು ತನ್ನ ಅಧಿಪತ್ಯಕ್ಕೆ ತೆಗೆದುಕೊಳ್ಳುತ್ತಾನೆ. ಇದರಿಂದ ದೇವತೆಗಳಿಗೆ ವಾಸಸ್ಥಾನ ಇಲ್ಲದಂತಾಗಿ ಅವರು ವೈಕುಂಠಕ್ಕೆ ಹೋಗಿ ವಿಷ್ಣುವಿನಲ್ಲಿ ನಡೆದುದೆಲ್ಲವನ್ನೂ ಅರುಹಿ, ತಮ್ಮ ಕಷ್ಟವನ್ನು ಪರಿಹರಿಸಬೇಕೆಂದು ಬೇಡಿಕೊಳ್ಳುತ್ತಾರೆ. ದೇವತೆಗಳನ್ನು ಸಂತೈಸಿದ ಮಹಾನ್ ವಿಷ್ಣುವು ಬಲಿಚಕ್ರವರ್ತಿಗೆ ಪಾಠಕಲಿಸುವುದಕ್ಕಾಗಿ ವಾಮನ ರೂಪವನ್ನು ತಾಳಿ ಬಲಿಯ ಬಳಿ ಬರುತ್ತಾನೆ.

ವಾಮನ ಎಂದರೆ ಸಣ್ಣ ರೂಪ ಎಂಬುದು ಎಲ್ಲರಿಗೂ ತಿಳಿದೇ ಇದೆ. ಈ ಸಣ್ಣ ರೂಪವನ್ನು ಕಂಡ ಬಲಿಯು ಈತನ ಮಹತ್ತ್ವವನ್ನು ಅರಿಯದೆ, ಅದಾಗಲೇ ದೇವತೆಗಳನ್ನು ಗೆದ್ದ ಅಹಂಕಾರದಿಂದ ತೀರಾ ಹಗುರವಾಗಿ ವಾಮನನ್ನು ಪರಿಗಣಿಸಿದ. ಮತ್ತು ಸಕಲೈಶ್ವರ್ಯನಾದ ಗತ್ತಿನಿಂದಲೇ “ಎಲೈ ವಟುವೇ, ನಿನಗೆ ನನ್ನಿಂದ ಏನು ಬೇಕು ಕೇಳು, ನಾನೀಗಲೇ ಕೊಡುತ್ತೇನೆ” ಎಂದ. ಅದಕ್ಕೆ ವಾಮನನು “ನೀನು ಕೊಡುವುದು ನಿಜವೇ?” ಎಂದಾಗ “ಕೊಟ್ಟ ಮಾತಿಗೆ ಈ ಬಲಿ ಚಕ್ರವರ್ತಿ ಎಂದಿಗೂ ತಪ್ಪುವವನಲ್ಲ, ನೀನು ಏನನ್ನೇ ಕೇಳು ನಾನು ಕೊಡುವುದು ಖಂಡಿತ” ಎಂದು ಭಾಷೆಯಿತ್ತ. ವಾಮನನು “ನನಗೆ ಮೂರು ಹೆಜ್ಜೆಗಳಷ್ಟು ಜಾಗ ಕೊಟ್ಟರೆ ಸಾಕು” ಎಂದಾಗ ಬಲಿ ತನಗೆ ಬರುತ್ತಿರುವ ನಗುವನ್ನು ತಡೆದುಕೊಳ್ಳಲಾಗದೆ ವಾಮನನ ಪಾದಗಳತ್ತ ನೋಡುತ್ತ “ನಿನ್ನ ಮೂರು ಹೆಜ್ಜೆ ನನ್ನ ಅಂಗೈಯಷ್ಟೂ ಆಗಲಿಕ್ಕಿಲ್ಲ! ಇನ್ನೂ ಹೆಚ್ಚಿನ ಜಾಗವನ್ನು ಕೇಳು” ಎಂದ. ಅದಕ್ಕೆ ಪ್ರತಿಯಾಗಿ ವಾಮನನು “ಬೇಡ, ನನ್ನ ಮೂರು ಹೆಜ್ಜೆಯ ಜಾಗವಷ್ಟೇ ಸಾಕು” ಎಂದ. ಬಲಿ ಚಕ್ರವರ್ತಿಯು “ಇನ್ನೂ ಬುದ್ಧಿ ಬೆಳಯದ ಬಾಲನಿವ” ಎಂದುಕೊಳ್ಳುತ್ತ ವಾಮನನ ಮಾತಿಗೆ ಒಪ್ಪಿದ.

ವಾಮನನು ಮೊದಲ ಹೆಜ್ಜೆಯನ್ನು ಎಲ್ಲಿಡಲೆಂದು ಕೇಳಿದಾಗ ಬಲಿ ಭೂಮಿಯಲ್ಲಿ ಎಲ್ಲಿ ಬೇಕಾದರೂ ಇಡು ಎಂದು ಮತ್ತೆ ನಕ್ಕ. ಸರಿ ಎನ್ನುತ್ತ ವಾಮನ ಅವತಾರಿ ವಿಷ್ಣುವು ಮೊದಲ ಹೆಜ್ಜೆಯನ್ನಿಟ್ಟಾಗ ಆ ಪಾದವು ಇಡೀ ಭೂಮಿಯನ್ನಾವರಿಸಿತು. ಬಲಿಯ ಎದೆಯಲ್ಲಿ ನಿಧಾನವಾಗಿ ಭಯ ಹುಟ್ಟಿತು. ಎರಡನೆಯ ಹೆಜ್ಜೆಯು ಇಡೀ ಆಕಾಶವನ್ನು ತುಂಬಿಕೊಂಡಾಗ ಬಲಿಗೆ ಇದು ದೇವರ ಆಟ ಎಂಬುದು ಗೊತ್ತಾಗಿ ಹೋಯಿತು. ತಾನು ಮಾಡಿದ್ದು ತಪ್ಪಾಯಿತೆಂದು ಅರಿವಿಗೆ ಬಂತಲ್ಲದೆ ಕೊಟ್ಟ ಮಾತಿನಂತೆ ವಾಮನನು “ಮೂರನೆಯ ಹೆಜ್ಜೆ ಎಲ್ಲಿಡಲಿ?” ಎಂದು ಕೇಳಿದಾಗ ತನ್ನ ತಲೆಯನ್ನೇ ತೋರಿಸಿದ. ಬಲಿಯ ತಲೆಗೆ ವಿಷ್ಣುವಿನ ಪಾದ ತಾಗುತ್ತಿದ್ದಂತೆ ಬಲಿ ಪಾತಾಳಕ್ಕೆ ಇಳಿದುಬಿಟ್ಟ. ಈತನ ಸತ್ಯಸಂಧತೆ ಮತ್ತು ತಾನು ಪಾತಾಳದ ಪಾಲಾಗುವುದನ್ನು ತಿಳಿದೂ ತಲೆಯನ್ನು ತೋರಿದ ನಿಷ್ಠೆಗೆ ಮೆಚ್ಚಿ ವಿಷ್ಣುವು ಆತನನ್ನು ಪಾತಾಳದ ಅಧಿಪನನ್ನಾಗಿ ಮಾಡಿದ. ಅಲ್ಲದೆ ವರುಷದಲ್ಲಿ ಒಂದು ದಿನ ಭೂಮಿಯನ್ನಾಳುವ ಅವಕಾಶವನ್ನು ಮಾಡಿಕೊಟ್ಟ. ಬಲಿಯು ಬುವಿಗೆ ಬಂದು ಆಳುವ ವರುಷದಲ್ಲೊಂದು ದಿನವೇ ಈ ಬಲಿಪಾಡ್ಯದ ದಿನ.

ದೇವರನ್ನು ನಂಬುವ ನಾವು ಪುರಾಣವನ್ನೂ ನಂಬುತ್ತೇವೆ. ಹಬ್ಬಗಳಲ್ಲಿ ಇವೆಲ್ಲವನ್ನೂ ನೆನಪಿಸಿಕೊಂಡು ಹಬ್ಬವನ್ನು ಆಚರಿಸುತ್ತ ಸಂಭ್ರಮಿಸುತ್ತೇವೆ. ಈದಿನ ಬಲಿಯ ರೂಪವಾಗಿ ಸೌತೆಕಾಯಿಗೆ ಕಣ್ಣು, ಮೂಗು, ಬಾಯಿ, ಮೀಸೆಗಳನ್ನು ಬರೆದು ಪೂಜಿಸುವ ಕ್ರಮ ಕೆಲವು ಕಡೆ ಇದೆ. ದೇವತಾಸ್ವರೂಪಿಯಾದ ಗೋವಿನ ಪೂಜೆಯನ್ನೂ ಈದಿನ ಮಾಡುತ್ತಾರೆ. ಹೊಸ ಉಡುಪುಗಳನ್ನು ತೊಟ್ಟು ಸಂಭ್ರಮಿಸುವ ಹಬ್ಬ ಇದಾಗಿದೆ. ಸಂಜೆಯಾಗುತ್ತಲೇ ಮನೆಯ ತುಂಬ ಹಣತೆಯಲ್ಲಿ ದೀಪವನ್ನು ಹಚ್ಚಿ ಬಲೀಂದ್ರ ಅಥವಾ ಬಲಿಯನ್ನು ಕಳುಹಿಸಿಕೊಡುವ ಕ್ರಮವಿದೆ. ಆತನು ಭೂಮಂಡಲವನ್ನು ಸುತ್ತಿ ಪಾತಾಳವನ್ನು ಸೇರಲು ಒಂದು ತಿಂಗಳಾದರೂ ಬೇಕೆಂಬ ನಂಬಿಕೆಯಿಂದ ಕಾರ್ತಿಕ ಮಾಸಪರ್ಯಂತ ಮನೆಯ ಮುಂದೆ ದೀಪಗಳನ್ನು ಹಚ್ಚುವ ಕ್ರಮ ಹಲವು ಕಡೆಗಳಲ್ಲಿವೆ.

ದೀಪ ಎಂದರೆ ಬೆಳಕು, ಅಂಧಕಾರವನ್ನು ತೊಲಗಿಸುವುದು ಎಂದರ್ಥ. ದೀಪಾವಳಿಯೆಂಬುದು ಜಗತ್ಸರ್ವಂ ಜ್ಯೋತಿರ್ಮಯಂ ಎಂಬ ಮೂಲ ತತ್ತ್ವವನ್ನು ಹೊಂದಿರುವಂತದ್ದು. ಜಗತ್ತು ಸದಾ ಜ್ಞಾನದಿಂದ ಬೆಳಗುತ್ತಿರಲಿ ಎಂಬ ಆಶಯ ಇಲ್ಲಿದೆ. ದೀಪವನ್ನು ಬೆಳಗುವುದು ಎಂದರೆ ಜ್ಞಾನವನ್ನು ಹಂಚುವುದು, ಒಬ್ಬರಿಗೊಬ್ಬರು ಸಹಾಯಕರಾಗಿ ನಿಲ್ಲುವುದೂ ಎಂದರ್ಥ. ವಾಮನನ ರೂಪವೂ ಯಾರನ್ನೂ, ಯಾವುದನ್ನೂ ತುಚ್ಛವಾಗಿ ಕಾಣಬಾರದು. ಪರಸ್ಪರರು ಸೌಹಾರ್ದಯುತವಾಗಿ ಬದುಕಬೇಕೆಂಬುದನ್ನು ಹೇಳುತ್ತದೆ. ದೇವಾನುದೇವತೆಗಳನ್ನು ಗೆದ್ದರೂ ಬಲಿಯು ಅಧಿಪನಾಗುವದಿಲ್ಲ. ಹಾಗಾಗಿ ತುಂಡು ಭೂಮಿಗಾಗಿ ಗಡಿವ್ಯಾಜ್ಯ, ಈ ವ್ಯಾಜ್ಯಗಳಿಂದ ಮನಸ್ಸಿನ ಶಾಂತಿಯನ್ನು ಕೆಡಿಸಿಕೊಳ್ಳದೆ ಎಲ್ಲರಲಿ ಎಲ್ಲರೂ ಒಂದಾಗಿ ಬಾಳಿರೆಂಬುದು ದೀಪಾವಳಿಯ ಸದಾಶಯ.

ದೀಪ ಬೆಳಗುವುದು ಎಂದರೆ ಕತ್ತಲಲ್ಲಿದ್ದವನಿಗೆ ತಾನು ಬೆಳಕನ್ನು ತರುತ್ತಿದ್ದೇನೆ ಭಯ ಬೇಡ ಎಂಬ ಅಭಯವನ್ನು ನೀಡುವುದು. ಅಂತೆಯೇ ಅಜ್ಞಾನಿಗೆ ನಮ್ಮಲ್ಲಿರುವ ಜ್ಞಾನವನ್ನು ನೀಡುವುದಲ್ಲದೆ, ಮನೆ ಮನಸುಗಳ ನಡುವೆ ಪ್ರೀತಿ, ನಂಬಿಕೆಗಳನ್ನು ಬೆಳೆಸಿ ಸಂತೃಪ್ತ ಬದುಕಿಗೆ ನಾಂದಿ ಹಾಡುವುದಾಗಿದೆ.

ಮನದೊಳಗಿನ ಜ್ವಾಲೆಯು ಅಳಿಯಲಿ, ಸುಜ್ಞಾನದ ದೀಪ ಮನ ಮನವ ಬೆಸೆಯಲಿ, ಎಲ್ಲೆಡೆ ಬಾಂಧವ್ಯದ ದೀಪ ಉರಿಯಲಿ ಎಂಬುದು;ಎಲ್ಲರಿಗೂ ದೀಪಾವಳಿಯ ಶುಭಾಶಯ.

|| ಸರಳವಾಗಿ ಯೋಚಿಸಿ ಸಂಸ್ಕಾರಯುತರಾಗಿ ಸರಳರಾಗಿ ಜೀವಿಸಿ ||

ವಿಷ್ಣು ಭಟ್, ಹೊಸ್ಮನೆ (ಭಾಸ್ವ).

LEAVE A REPLY

Please enter your comment!
Please enter your name here