Home ಧಾರ್ಮಿಕ ಸುದ್ದಿ ಮತ್ಸ್ಯ ಸಂಪತ್ತಿಗಾಗಿ ಕಲ್ಮಾಡಿ ಬೊಬ್ಬರ್ಯನಿಗೆ ದರ್ಶನ ಸೇವೆ

ಮತ್ಸ್ಯ ಸಂಪತ್ತಿಗಾಗಿ ಕಲ್ಮಾಡಿ ಬೊಬ್ಬರ್ಯನಿಗೆ ದರ್ಶನ ಸೇವೆ

2610
0
SHARE

ಮಲ್ಪೆ: ಮತ್ಸ್ಯ ಸಂಪತ್ತು ಅನುಗ್ರಹಿಸುವಂತೆ ಹೆಜಮಾಡಿಯಿಂದ ಸಾಸ್ತಾನ ಕೋಡಿ ವರೆಗಿನ ಸಾಂಪ್ರದಾಯಿಕ ನಾಡ ಟ್ರಾಲ್‌ದೋಣಿ (ನಾಡದೋಣಿ) ಮೀನುಗಾರರು ತಮ್ಮ ಆರಾಧ್ಯ ದೈವ ಬೊಬ್ಬರ್ಯ ದರ್ಶನ ಸೇವೆ ನಡೆಸಿ ಪ್ರಾರ್ಥಿಸಿಕೊಂಡರು. ಬೊಬ್ಬರ್ಯನನ್ನು ಪ್ರಾರ್ಥಿಸಿ ದರ್ಶನ ಮಾಡಿದರೆ ಹೇರಳ ಮತ್ಸ್ಯ ಸಂಪತ್ತು ಲಭಿಸುತ್ತದೆ ಎಂಬ ನಂಬಿಕೆ ಎಲ್ಲ ವರ್ಗದ ಮೀನುಗಾರರಲ್ಲಿದೆ. ಮಲ್ಪೆಯ ಸಾಂಪ್ರದಾಯಿಕ ನಾಡ ಟ್ರಾಲ್‌ದೋಣಿ ಮೀನುಗಾರರ ಸಂಘದ ವತಿಯಿಂದ ಕಳೆದ 5 ವರ್ಷಗಳಿಂದ ಕಲ್ಮಾಡಿ ಪಾದೆಯಲ್ಲಿ ಬೊಬ್ಬರ್ಯ ದರ್ಶನ ಸೇವೆ ನಡೆಯುತ್ತಿದ್ದು, ಅದರಂತೆ ಬುಧವಾರವೂ ವಿಶೇಷ ದರ್ಶನ ಸೇವೆ ನಡೆಯಿತು.

ಈ ಬಾರಿ ಮಳೆಗಾಲದಲ್ಲಿ ಕರಾವಳಿಯಾದ್ಯಂತ ಸಮುದ್ರದಲ್ಲಿ ಮೀನುಗಾರಿಕೆಗೆ ಪೂರಕವಾದ ವಾತಾವರಣ ಇಲ್ಲದೆ ಮೀನುಗಾರರು ದಡದಲ್ಲೇ ಉಳಿಯುವಂತಾಗಿತ್ತು. ಸ್ವಲ್ಪದಿನ ಮಳೆಗೆ ಸಮುದ್ರ ಪ್ರಕ್ಷುಬ್ಧಗೊಂಡು ಕಡಲಿಗೆ ಇಳಿಯಲು ಸಾಧ್ಯವಿಲ್ಲದ ಪರಿಸ್ಥಿತಿ ಎದುರಾಗಿತ್ತು. ಇದೀಗ ಮೀನುಗಾರಿಕೆಗೆ ಹೋದರೂ ಸರಿಯಾದ ಮೀನು ದೊರಕುತ್ತಿಲ್ಲ. ಮೀನುಗಾರಿಕೆಗೆ ಪೂರಕವಾದ ತೂಫಾನ್‌ ಇದುವರೆಗೂ ಆಗಿಲ್ಲ ಎನ್ನಲಾಗಿದೆ.

ನಾಡ ಟ್ರಾಲ್‌ದೋಣಿ ಸಂಘದ ಅಧ್ಯಕ್ಷ ದೇವದಾಸ್‌ ಕುಂದರ್‌, ಉಪಾಧ್ಯಕ್ಷ ಮಧುಸೂದನ್‌ ಮೈಂದನ್‌, ಕಾರ್ಯದರ್ಶಿ ಪುರಂದರ ಕೋಟ್ಯಾನ್‌, ಕೋಶಾಧಿಕಾರಿ ಆನಂದ ಕಾಂಚನ್‌ ಹಾಗೂ 450 ನಾಡ ಟ್ರಾಲ್‌ದೋಣಿಗಳ ಸಾವಿರಾರು ಮಂದಿ ದರ್ಶನ ಸೇವೆಯಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here