ವೇಣೂರು : ದೈವಾರಾಧನೆ ಎಂಬುದು ಕೃಷಿಗೆ ನೇರವಾಗಿ ಸಂಬಂಧ ಹೊಂದಿರುವಂತಹದು. ದೈವಾರಾಧನೆ ತುಳು ನಾಡಿನ ಮೂಲ ಸಂಸ್ಕೃತಿ. ಅದನ್ನು ಅದರ ಮೂಲ ಸ್ವರೂಪಕ್ಕೆ, ಸಿದ್ಧಾಂತಕ್ಕೆ ಧಕ್ಕೆ ಬಾರದಂತೆ ನಡೆಸಿಕೊಂಡು ಬರಬೇಕೇ ಹೊರತು, ಆಡಂಬರಕ್ಕೆ ಪ್ರಾಧಾನ್ಯ ನೀಡುವುದು ಸರಿ ಯಲ್ಲ ಎಂದು ಬಂಟ್ವಾಳ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ| ತುಕಾರಾಮ್ ಪೂಜಾರಿ ಹೇಳಿದರು.
ಅವರು ಬಳಂಜ, ನಾಲ್ಕೂರು, ಬಡಗ ಕಾರಂದೂರು ಗ್ರಾಮಕ್ಕೆ ಸಂಬಂಧಪಟ್ಟ ಮುಜ್ಕಾನ ಕೊಡಮಣಿತ್ತಾಯ ದೈವಸ್ಥಾನ ಆನೆಪಿಲದ ಆಲಯ ಸಮರ್ಪಣೆ, ಮಂಚ ಪ್ರತಿಷ್ಠೆ, ಕಲಶಾಭಿಷೇಕ ಹಾಗೂ ನೇಮ ಸಂದರ್ಭ ರವಿವಾರ ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ದೈವಾರಾಧನೆ ಎಂಬ ವಿಚಾರದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು.
ತುಳುನಾಡು ಎಂಬುದು ಸರ್ವ ಜನಾಂಗದ, ಸಂಸ್ಕೃತಿಯ ಸಂಗ್ರಹಾಲಯ ವಿದ್ದಂತೆ. ಆದರೆ ಇತ್ತೀಚಿಗೆ ಅದರ ಪಾವಿತ್ರ್ಯ ನಾಶವಾಗುತ್ತಾ ಹೋಗಿ ಆಡಂಬರವೇ ಹೆಚ್ಚಾಗುತ್ತಿದೆ. ಮೂಲ ಸ್ವರೂಪ ಮಾಯವಾ ಗುತ್ತಿರುವುದು ಖೇದರಕ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬೆಂಗಳೂರು ಈಶ ಸಮೂಹ ಸಂಸ್ಥೆ ನಿರ್ದೇಶಕ ಡಾ| ಎನ್. ಕಿಶೋರ್ ಆಳ್ವ ಅವರು, ದೈವಾರಾಧನೆ ಸಂದರ್ಭ ಇಲ್ಲಿನ ಸುತ್ತಲಿನ ಜನರು ಸೇರಿ ಏಕ ಮನಸ್ಸಿನಿಂದ ಕೆಲಸ ಕಾರ್ಯಗಳನ್ನು ಮಾಡುತ್ತಾರೆ. ಇದು ಸ್ವಸ್ಥ ಸಮಾಜದ ಲಕ್ಷಣವನ್ನು ತೋರಿಸುತ್ತದೆ. ದೈವಾರಾಧನೆಗೂ ಪ್ರಾಮಾಣಿಕತೆಗೂ ನೇರ ಸಂಬಂಧವಿದೆ ಎಂದರು.
ಅಳದಂಗಡಿ ಸತ್ಯದೇವತಾ ದೈವಸ್ಥಾನದ ಆಡಳಿತದಾರ ಶಿವಪ್ರಸಾದ್ ಅಜಿಲ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋ.ಯ ಬೆಳ್ತಂಗಡಿ ತಾಲೂಕು ಯೋಜನಾಧಿಕಾರಿ ಜಯಕರ ಶೆಟ್ಟಿ, ಅಳದಂಗಡಿ ಜಿ.ಪಂ. ಸದಸ್ಯ ಶೇಖರ ಕುಕ್ಕೇಡಿ, ಅಳದಂಗಡಿ ತಾ.ಪಂ. ಸದಸ್ಯೆ ವಿನುಷಾ ಪ್ರಕಾಶ್, ಬಳಂಜ ಗ್ರಾ.ಪಂ. ಅಧ್ಯಕ್ಷೆ ದೇವಕಿ, ಡಾ| ಎನ್.ಎಂ. ತುಳುಪುಳೆ, ದೈವಸ್ಥಾನ ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ವಿಜಯಕುಮಾರ್ ಜೈನ್ ಆರಂತಬೈಲುಗುತ್ತು, ಜಗತ್ಪಾಲ ಜೈನ್ ಪಾಲ್ಯಗುತ್ತು, ಸೀತಾರಾಮ ಪೂಜಾರಿ ಡೆಪ್ಪುಣಿ, ವಿಠಲ ಪೂಜಾರಿ ಕೆಂಪುಂರ್ಜ, ರಮಾನಂದ ಪೂಜಾರಿ ಯ್ಯಕುರಿ, ಸದಾನಂದ ಪೂಜಾರಿ ಅಂತರ, ಕಾರ್ಯದರ್ಶಿಗಳಾದ ದಿನೇಶ್ ಪೂಜಾರಿ ಅಂತರ, ಕುದ್ಯೊಟ್ಟು ದಿನೇಶ್ ಪೂಜಾರಿ, ಸತೀಶ್ ಕೆ. ಬರೆಮೇಲು, ಕೋಶಾಧಿಕಾರಿ ಬಾಲಕೃಷ್ಣ ಪೂಜಾರಿ ಯ್ಯೆಕುರಿ, ಜತೆ ಕಾರ್ಯದರ್ಶಿ ಮಂಜುಳಾ, ಸಂಜೀವ ಮತ್ತಿತತರು ಇದ್ದರು.
ಸಮ್ಮಾನ
ಸಮಿತಿ ಉಪಾಧ್ಯಕ್ಷ ಅಜಿತ್ಕುಮಾರ್ ಹೇರಗುತ್ತು ಹಾಗೂ ಚೀಂಕ್ರ ಮೂಲ್ಯ ಅವರನ್ನು ಸಮ್ಮಾನಿಸಲಾಯಿತು. ದೈವಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿರುವ ವಿವಿಧ ವಿಭಾಗದವರನ್ನು ಗುರುತಿಸಲಾಯಿತು. ಬಳಿಕ ದೈವದ ನೇಮ ನೆರವೇರಿತು. ಸಮಿತಿ ಅಧ್ಯಕ್ಷ ಸುಭಾಶ್ಚಂದ್ರ ರೈ ಪಡ್ಯೊಡಿಗುತ್ತು ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಮೋಹನ ಗೌಡ ಕಲ್ಮಂಜ ವಂದಿಸಿದರು. ವಿಜಯಕುಮಾರ್ ಜೈನ್ ನಾವರ ಕಾರ್ಯಕ್ರಮ ನಿರ್ವಹಿಸಿದರು.