Home ಧಾರ್ಮಿಕ ಕ್ಷೇತ್ರಗಳು ಅದ್ಭುತ ಕಲಾ ರಚನೆಯ “ಮಾರಮುರೆಸ್ ನ ಮರದ ಚರ್ಚ್”

ಅದ್ಭುತ ಕಲಾ ರಚನೆಯ “ಮಾರಮುರೆಸ್ ನ ಮರದ ಚರ್ಚ್”

3083
0
SHARE

16ನೆಯ ಶತಮಾನದಲ್ಲಿ ನಿರ್ಮಿಸಲಾದ ಈ ಚರ್ಚ್ ನ್ನು ಮರದಿಂದಲೇ ಕಟ್ಟಲಾಗಿದೆ. ಇದರ ಹಿಂದಿರುವ ಬಡಗಿಗಳ ಕೌಶಲ್ಯಕ್ಕೆ ತಲೆ ಬಾಗಲೇಬೇಕು.
ಉತ್ತರ ರೊಮೇನಿಯಾದ ಮಾರಮುರೆಸ್ ಗ್ರಾಮದ ಪರ್ವತ ಪ್ರದೇಶದ ಸುಂದರ ತಾಣದಲ್ಲಿ ಮೂರು ಶತಮಾನಗಳಿಗೂ ಹಿಂದಿನ ಮನ ಸೆಳೆಯುವ ಚರ್ಚುಗಳಿದ್ದು, ಇವು ಮರದಿಂದಲೇ ನಿರ್ಮಾಣಗೊಂಡಿದೆ. 17-19 ಶತಮಾನಗಳ ನಡುವೆ ಇಲ್ಲಿ ಇಂಥ 300 ಸಂಪ್ರದಾಯಬದ್ಧ ಚರ್ಚ್ ಗಳ ನಿರ್ಮಾಣವಾಗಿದ್ದ ದಾಖಲೆಗಳಿದ್ದರೂ ಪ್ರಕೃತ ಉಳಿದುಕೊಂಡಿರುವುದು ನೂರು ಮಾತ್ರ. 1999 ರಲ್ಲಿ ಯುನೆಸ್ಕೋ ಇವುಗಳಲ್ಲಿ ಎಂಟು ಚರ್ಚ್ ಗಳನ್ನು ವಿಶ್ವ ಪರಂಪರೆಯ ತಾಣಗಳೆಂದು ಘೋಷಿಸಿದ ಬಳಿಕ ವರ್ಷವೂ ಸಾವಿರಾರು ಪ್ರವಾಸಿಗರು ಬಂದು ಈ ಕಲಾ ಕೌಶಲದ ಮಹತ್ತ್ವದ ಸ್ಮಾರಕಗಳ ಸಮೂಹವನ್ನು ನೋಡಿ ಕಣ್ತುಂಬಿಕೊಳ್ಳುತ್ತಿದ್ದಾರೆ.
ಈ ಚರ್ಚ್ ಗಳು ಗೋಥೀಕ್ ಕಲೆಯ ಮಹೋನ್ನತ ಪ್ರತಿಬಿಂಬಗಳಾಗಿವೆ. ಸ್ಥಳೀಯ ದಾರು ವಾಸ್ತು ಶಿಲ್ಪಗಳ ಕಲಾ ಕೌಶಲ್ಯಕ್ಕೆ ಹಿಡಿದ ಕನ್ನಡಿಯಂತಿವೆ. ಎತ್ತರವಾದ ಘಂಟೆಯ ಗೋಪುರ, ಬೃಹದಾಕಾರದ ತೊಲೆಗಳನ್ನೇ ಗೋಡೆ ಮತ್ತು ಛಾವಣಿಯಾಗಿ ಹೊಂದಿದ ಅವುಗಳ ರಚನೆಗೆ ಗಟ್ಟಿಯಾದ ಓಕ್ ಮರಗಳನ್ನು ಉಪಯೋಗಿಸಿದ್ದಾರೆ.
ವಿದೇಶಿ ಆಡಳಿತಗಾರರ ಆಸ್ಥೆ
ಬಹು ಎತ್ತರದ ಛಾವಣಿಯಿಂದ ಮನ ಸೆಳೆಯುವ ಉನ್ನತ ಮಟ್ಟದ ಕಲಾಸೃಷ್ಟಿಗೆ ಮಾದರಿಯಾಗುವ ಇಂಥ ಚರ್ಚ್ ಗಳ ಅಲ್ಲಿ ನಿರ್ಮಾಣವಾದುದು 16ನೆಯ ಶತಮಾನದಲ್ಲಿ. ಆಗ ವಿದೇಶದ ಆಡಳಿತಗಾರರು ಇಲ್ಲಿ ಕ್ಯಾಥೋಲಿಕ್ ಆಸ್ಟ್ರೋ, ಹಂಗರಿಯನ್ ಶೈಲಿಯ ಆರ್ಡೋಡಾಕ್ಸ್ ಕಲ್ಲಿನ ಚರ್ಚ್ ಗಳನ್ನು ಕಟ್ಟಲು ಮುಂದಾದರು. ಆದರೆ ಸ್ಥಳೀಯ ಜನ ಅದನ್ನು ತೀವ್ರವಾಗಿ ವಿರೋಧಿಸಿದರು. ಮರಗಳನ್ನು ತುಂಬ ಪ್ರೀತಿಸುವ ಜನರು ಅದರಿಂದ ಚರ್ಚ್ಗಳನ್ನು ಕಟ್ಟಿದರೆ ದೇವರಿಗೂ ಸಂತೋಷವಾಗುತ್ತದೆಂದು ಸ್ಪಷ್ಟಪಡಿಸಿದರು. ಇದು ಮರದ ಕಲಾ ರಚನೆಯ ಕೆಲಸಕ್ಕೆ ನಾಂದಿ ಹಾಡಿತು.

ದ್ವೀತೀಯ ಮಹಾಯುದ್ಧದ ಬಳಿಕ ರೊಮೇನಿಯಾ ಮತ್ತು ಉಪ ಕಾರ್ಪಥಿಯನ್ ಉಕ್ರೇನ್ ನಡುವೆ ವಿಭಜನೆಯಿಂದ ಮರಮೂರ್ಸ್ ನಲ್ಲಿ ಸಂಪ್ರದಾಯಿಕ ಕಟ್ಟಡಗಳ ಶ್ರೀಮಂತ ರಚನೆಗಾಗಿ ಈ ಚರ್ಚ್ ಗಳು ಉಳಿದುಕೊಂಡಿವೆ. ಇಲ್ಲಿನ ಬಡಗಿಗಳ ಕೌಶಲ, ಜಾಣತನ, ಜ್ಞಾನ, ಅನುಭವಗಳನ್ನು ಇವು ತೆರೆದಿರಿಸಿವೆ. ಇಂದಿಗೂ ಹಿತ್ತಾಳೆಯ ಕರಕೌಶಲದ ಅದ್ವಿತೀಯ ಪ್ರತಿಭಾವಂತರರು ಇಲ್ಲಿ ನೆಲೆಸಿದ್ದಾರೆ. ಮಧ್ಯಯುಗದ ಅನಂತರದ ಸಾಂಪ್ರಾದಾಯಿಕ ಕಲಾರಚನೆಗೂ ಈ ಚರ್ಚ್ಗಳ ಸಾಕ್ಷ್ಯಗಳಾಗಿವೆ. ಬುರಾನಾ, ಬುಡೆಸ್ಟಿ, ದಿಟೆಸ್ಟಿ, ಐಯುಡ್ ಪ್ಲೋಪೀನ್, ಪಯಿನೈಲ್ ಇಝಿ, ರೊಗೊಜ್, ಸುರ್ಡೆಸ್ಟಿ, ಕಾರ್ನೆಸ್ಟಿಗಳಲ್ಲಿ ಈ ಚರ್ಚುಗಳಿವೆ. ಪರ್ವತ ಪ್ರದೇಶದ ಸುಂದರ ಭೂದೃಶ್ಯದ ಕಾವ್ಯವಾಗಿರುವ ಇವುಗಳಲ್ಲಿ ಅತಿ ಹಳೆಯದು 1633ರಲ್ಲಿ ನಿರ್ಮಿಸಿದ ರೊಗೊಜ್ ಚರ್ಚ್. ಎತ್ತರವಿರುವ ಅದರ ಛಾವಣಿಯಲ್ಲಿ ಗ್ರಾಮದ ಶ್ರೀಮಂತ ಕುಟುಂಬಗಳಿಗಾಗಿ ನಿಗದಿಪಡಿಸಿದ ಸ್ಥಾನಗಳಿವೆ.

ಕಲಾತ್ಮಕತೆಯ ಮಾದರಿಗಳು

ಬುಡೆಸ್ಟಿ ಚರ್ಚಿನ ರಚನೆ ನಡೆದುದು 1643ರಲ್ಲಿ. ಹೆಚ್ಚು ಎತ್ತರವಾದ ಐಯುಡ್ ಪ್ಲೋಪೀನ್ 1718ರಲ್ಲಿ ತಲೆಯೆತ್ತಿದೆ.ಬಳಿಕ 1720ರಲ್ಲಿ ಪವಿತ್ರ ತಾಯಿಯ ದ್ವಾರವೆಂದು ಹೆಸರಾದ ಬುರಾನಾ ಚರ್ಚ್ ನಿರ್ಮಾಣಗೊಂಡಿತು. ಮುಂದಿನ ವರ್ಷ ಸರ್ಡೆಸ್ಟಿಯ ಚರ್ಚ್ ತಲೆಯೆತ್ತಿತ್ತು. 1798ರಲ್ಲಿ ಕಟ್ಟಿದ ಪ್ಲೋಪೀನ್ ಚರ್ಚಿನ ಸೃಷ್ಟಿಯ ಕಾಲದಲ್ಲಿ ಗ್ರಾಮದ 49 ಕುಟುಂಬಗಳು ಒಂದೊಂದು ಚಿನ್ನದ ನಾಣ್ಯವನ್ನು ಕೊಡುಗೆಯಾಗಿ ನೀಡಿದವು. ಈ ನಾಣ್ಯಗಳು ಬಲಿಪೀಠದ ಕೆಳಗೆ ಕಂಡುಬಂದಿವೆ. 154 ಅಡಿ ಎತ್ತರವಿರುವ ಈ ಚರ್ಚಿನ ಛಾವಣಿ ಕಮಾನು ಆಕಾರದಲ್ಲಿದೆ. ಆಕರ್ಷಕವಾದ ಷಡ್ಭಜದ ಗುಮ್ಮಟವಿದೆ. ಎರಡು ಸಾಲಿನ ಕಿಟಕಿಗಳಿವೆ.ಬೆಲೆಬಾಳುವ ಎರಡು ಪ್ರಾರ್ಥನಾ ಪುಸ್ತಕಗಳಿವೆ. ಬಹು ಎತ್ತರವಾದ ಸರ್ಡೆಸ್ಟಿ ಚರ್ಚು 177 ಅಡಿ ಎತ್ತರವಾಗಿದೆ.

ಈ ಚರ್ಚುಗಳ ಗೋಡೆಗಳಲ್ಲಿ ಮನ ಸೂರೆಗೊಳ್ಳುವ ವರ್ಣ ಚಿತ್ರಗಳಿವೆ. ಬೈಬಲಿನ ಕಥೆಗಳ ದೃಶ್ಯಗಳು, ಸತ್ತ ಬಳಿಕ ಪರಲೋಕದಲ್ಲಿ ಸಿಗುವ ಶಿಕ್ಷೆಗಳಿರುವ ಚಿತ್ರಗಳಿವೆ. ಸ್ಥಳೀಯ ಕಲಾವಿದರು ಪ್ರತಿಭೆ ಇಲ್ಲಿ ಅನಾವರಣಗೊಂಡಿದೆ. ಬುಡೆಸ್ಟಿಯ ಚರ್ಚಿನಲ್ಲಿ ಹದಿನಯದನೆಯ ಶತಮಾಣದ ಮರದ ವಿಗ್ರಹಗಳ ಭಾರೀ ಸಂಗ್ರಹವಿದೆ. ಗಾಜಿನ ಮೇಲೆ ಚಿತ್ರಿಸಿದ ವರ್ಣ ಕಲಾಕೃತಿಗಳೂ ಇವೆ. 38 ಮೀಟರ್ ಎತ್ತರವಿರುವ ಎರಡು ಛಾವಣಿಗಳಿವೆ. ನಾಲ್ಕು ಚಿಕ್ಕ ಗೋಪುರಗಳಿವೆ. ಹದಿನ್ಕಾಲು ಕಲಾಕಸುರಿಯಿರುವ ಸ್ತಂಭಗಳಿವೆ. ಒಂದೊಂದು ಚರ್ಚ್ ಕೂಡ ವಿಭಿನ್ನವಾಗಿ ಮನ ಸೆಳೆಯುತ್ತದೆ.

LEAVE A REPLY

Please enter your comment!
Please enter your name here