ಉಡುಪಿ: ಉಡುಪಿಯ ಅಷ್ಟಮಠಗಳಲ್ಲಿ ಇನ್ನೂ ಪುರಾತನ ತಾಮ್ರದ ಪಾತ್ರೆಗಳು ಬಳಕೆಯಲ್ಲಿವೆ. ಪರ್ಯಾಯದಂತಹ ದೊಡ್ಡ ಉತ್ಸವದಲ್ಲಿ ಸಂದರ್ಭದಲ್ಲಿ ಈ ಎಲ್ಲ ಪಾತ್ರೆಗಳನ್ನು ಉಪಯೋಗಿಸುತ್ತಾರೆ.
ವೈಭವ ಸಾರುವ ಪಾತ್ರೆ
ಶ್ರೀಕೃಷ್ಣ ದೇವರಿಗೆ ತಾಮ್ರದ ಪಾತ್ರೆಯಲ್ಲಿಯೇ ನೈವೇದ್ಯ ನೀಡಬೇಕೆಂಬ ನಂಬಿಕೆ ಇದೆ. ಅದೇ ಕಾರಣಕ್ಕೆ ಎಲ್ಲ ಮಠಗಳಲ್ಲೂ ತಾಮ್ರ, ಕಂಚು, ಹಿತ್ತಾಳೆ ಲೋಹದ ಪಾತ್ರೆಗಳನ್ನು ಬಳಸುತ್ತಿ¨ªಾರೆ. ಅನಾದಿ ಕಾಲದಿಂದ ಬಳುವಳಿಯಾಗಿ ಬಂದ ಪಾತ್ರೆಗಳು ಗತಕಾಲದ ಜೀವನಶೈಲಿಯನ್ನೂ ವಿವರಿಸುತ್ತವೆ.
ನೈವೇದ್ಯ ಪಾತ್ರೆ
14 ಕೆ.ಜಿ. ತೂಕದ ಅಕ್ಕಿ ಹಿಡಿಯುವ ಪಾತ್ರೆಯಿಂದ 41 ಕೆ.ಜಿ. ಸಾಮರ್ಥ್ಯದ ಪದಾರ್ಥ ಹಿಡಿಯುವ ಪಾತ್ರೆಗಳು ಅದಮಾರು ಮಠದಲ್ಲಿ ಇವೆ. ತಾಮ್ರದ ಪಾತ್ರೆ, ಕಠಾರ, ಉರುಳಿ, ಕೊಡಪಾನ, ಹಂಡೆ ಹಾಗೂ ದೇವರ ನೈವೇದ್ಯಕ್ಕೆ ಬಳಸುವ ನೈವೇದ್ಯ ಪಾತ್ರೆ, ಅಪ್ಪ ಕಾವಲಿ, ತೀರ್ಥ ಪಾತ್ರೆ, ಉರುಳಿ ಸೇರಿದಂತೆ ಹಲವಾರು ತಾಮ್ರದ ಪಾತ್ರೆಗಳಿವೆ. ಅವುಗಳನ್ನು ಆಯಾ ಮಠದ ಪರ್ಯಾಯ ಅವಧಿಯಲ್ಲಿ ರಿಪೇರಿ ಹಾಗೂ ಕಲಾಯಿ ಕೆಲಸ ಮಾಡಿಸಲಾಗುತ್ತದೆ.
8ವರ್ಷಗಳಿಂದ ಸೇವೆ
ಸಾಲಿಗ್ರಾಮದ ಆಲ್ಫ್ರೆಡ್ ಕಾಡೋìಜಾ ಅವರು ಕಳೆದ 8 ವರ್ಷಗಳಿಂದ ಶ್ರೀಕೃಷ್ಣ ಮಠದ ತಾಮ್ರದ ಪಾತ್ರೆಗೆ ಕಲಾಯಿ ಹಾಕುತ್ತಿದ್ದಾರೆ. ಕಳೆದ 4 ಪರ್ಯಾಯದಿಂದ ಅವರು ಈ ಕೆಲಸ ಮಾಡುತ್ತಿದ್ದಾರೆ.
ಕಲಾಯಿ ಯಾಕೆ?
ಹುಳಿ, ಉಪ್ಪಿನಿಂದಾಗಿ ಹಿತ್ತಾಳೆ, ತಾಮ್ರದ ಪಾತ್ರೆಗೆ ಕಲಾಯಿ ಹಾಕಬೇಕು. ಕಲಾಯಿ ಹಾಕದೇ ಕಿಲುಬು ಹಿಡಿದ ಪಾತ್ರೆಗಳಲ್ಲಿ ಆಹಾರ ಮಾಡಿದ ಆಹಾರ ವಿಷವಾಗಿ ವಾಂತಿ, ಭೇದಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಈ ನಿಟ್ಟಿನಲ್ಲಿ ನಿಗದಿತ ಸಮಯದೊಳಗೆ ಕಲಾಯಿ ಹಾಕಿಸುವುದು ಉತ್ತಮ.
40 ವರ್ಷಗಳಿಂದ ತಾಮ್ರದ ಕೆಲಸ
ಕಳೆದ 40 ವರ್ಷಗಳಿಂದ ತಾಮ್ರದ ಕೆಲಸದಲ್ಲಿ ತೊಡಗಿಸಿಕೊಂಡಿದ್ದೇನೆ. ಸುಮಾರು 8 ಮಂದಿ ತಂಡದೊಂದಿಗೆ ತಾಮ್ರದ ಕಲಾಯಿ ಹಾಗೂ ದುರಸ್ತಿ ಮಾಡುತ್ತೇವೆ. ಕಾಣಿಯೂರು ಪರ್ಯಾಯದಿಂದ ಮಠದ ತಾಮ್ರದ ಪಾತ್ರೆಗಳಿಗೆ ಕಲಾಯಿ ಕೆಲಸ ಪ್ರಾರಂಭಿಸಿದ್ದೇನೆ.
-ಅಲ್ಫ್ರೆಡ್ ಕಾಡೋಜಾ, ಸಾಲಿಗ್ರಾಮ ಪಾತ್ರೆಗಳಿಗೆ ಕಲಾಯಿ ಹಾಕುವವರು