Home ಧಾರ್ಮಿಕ ಸುದ್ದಿ ಕುಕ್ಕೆ: ಬ್ರಹ್ಮರಥ ನಿರ್ಮಾಣಕ್ಕೆ ಇಂದು ವೀಳ್ಯ

ಕುಕ್ಕೆ: ಬ್ರಹ್ಮರಥ ನಿರ್ಮಾಣಕ್ಕೆ ಇಂದು ವೀಳ್ಯ

1178
0
SHARE

ಸುಬ್ರಹ್ಮಣ್ಯ : ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಚಂಪಾಷಷ್ಠಿ ವೇಳೆಗೆ ಶ್ರದ್ಧಾ ಭಕ್ತಿಯಿಂದ ಎಳೆಯಲಾಗುವ ಬ್ರಹ್ಮರಥ ಶಿಥಿಲಾವಸ್ಥೆಗೆ ತಲುಪಿರುವ ಹಿನ್ನೆಲೆಯಲ್ಲಿ ನೂತನ ಬ್ರಹ್ಮರಥ ನಿರ್ಮಾಣಕ್ಕೆ ವೀಳ್ಯ ನೀಡುವ ಕಾರ್ಯಕ್ರಮ ಮಾ. 15ರಂದು ಕ್ಷೇತ್ರದಲ್ಲಿ ನೆರವೇರಲಿದೆ.

ಗುರುವಾರ ಬೆಳಗ್ಗೆ ಗಂಟೆ 6.30ರ ಅಮೃ ತಸಿದ್ಧಿ ಯೋಗದ ಶುಭ ಮುಹೂರ್ತದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ರಹ್ಮರಥ ನಿರ್ಮಾಣದ ಸಲುವಾಗಿ ದೇವತಾ ಪ್ರಾರ್ಥನೆಯೊಂದಿಗೆ ವೀಳ್ಯ ನೀಡಲಾಗುವುದು.

ನೂತನ ಬ್ರಹ್ಮರಥ ಹೊಂದಲು ಆಡಳಿತ ಮಂಡಳಿ ಈ ಹಿಂದೆಯೇ ನಿರ್ಧರಿಸಿತ್ತು. 2003ರಿಂದಲೆ ಪ್ರಕ್ರಿಯೆಗಳು ನಡೆಯು ತ್ತಿದ್ದವು. 1.99 ಕೋಟಿ ರೂ. ವೆಚ್ಚದ ಅಂದಾಜು ಪಟ್ಟಿ ಸಿದ್ಧವಾಗಿತ್ತು. ಟೆಂಡರ್‌ ಪ್ರಕ್ರಿಯೆ ಮೂಲಕ ರಥ ನಿರ್ಮಾಣಕ್ಕೆ ತೊಡಕುಗಳು ಇವೆ. ದರಪಟ್ಟಿ ನಿಗದಿಪಡಿಸುವಾಗ ತಾಂತ್ರಿಕ ತೊಂದರೆಗಳು ಉಂಟಾದ ಹಿನ್ನೆಲೆಯಲ್ಲಿ ದಾನಿಗಳು ಜವಾಬ್ದಾರಿ ವಹಿಸಿಕೊಂಡು ರಥ ನಿರ್ಮಿಸಲು ಮುಂದೆ ಬಂದಲ್ಲಿ ಸೂಕ್ತ ಎಂಬ ಅಭಿಪ್ರಾಯವನ್ನು ವ್ಯವಸ್ಥಾಪನ ಸಮಿತಿ ಹೊಂದಿತ್ತು. ಅದರಂತೆ ಬೆಂಗಳೂರಿನ ಬಿಡದಿ ರಿಯಾಲಿಟಿ ವೆಂಚರ್ ಪೋರ್‌ ಗ್ರೂಪ್‌ ಸಂಸ್ಥೆ ಉತ್ಸುಕವಾಗಿದ್ದು, 2 ಕೋಟಿ ರೂ. ವೆಚ್ಚದಲ್ಲಿ ರಥವನ್ನು ನಿರ್ಮಿಸಿಕೊಡಲಿದೆ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ತಿಳಿಸಿದ್ದಾರೆ.

ಎನ್‌. ಮುತ್ತಪ್ಪ ರೈ ಮತ್ತು ಎ. ಅಜಿತ್‌ ಶೆಟ್ಟಿ ಪಾಲುದಾರರಾಗಿರುವ ಸಂಸ್ಥೆ ಇದು. ಬ್ರಹ್ಮರಥವನ್ನು ಏಕವ್ಯಕ್ತಿಯಿಂದ ನಿರ್ಮಿ ಸದೆ ದೇಗುಲದ ಆದಾಯ ಮತ್ತು ಭಕ್ತರ ದೇಣಿಗೆಯಿಂದ ನಿರ್ಮಿಸಬೇಕೆಂಬುದು ಕೂಜುಗೋಡು ಮನೆತನದ ಕೆಲ ಭಕ್ತರು ಅಭಿಪ್ರಾಯ ಪಟ್ಟಿದ್ದರು. ಭಕ್ತರ ವಂತಿಗೆ ಯಿಂದ ಬ್ರಹ್ಮರಥ ನಿರ್ಮಿ ಸಬೇಕೆಂದು ಡಿಸಿಗೆ ಮನವಿಯನ್ನೂ ಸಲ್ಲಿಸಿದ್ದರು.

ಪ್ರಶ್ನೆಯಲ್ಲಿ ಕಂಡುಬಂದಿದೆ
ದೇಗುಲಕ್ಕೆ ಸಂಬಂಧಿಸಿ ಪ್ರಶ್ನೆ ಚಿಂತನ ನಡೆಸಿದಾಗ, ಶಿಥಿಲಾವಸ್ಥೆಗೆ ತಲುಪಿರುವ ಬ್ರಹ್ಮರಥದ ಬದಲು ನೂತನ ರಥ ಹೊಂದುವ ಕುರಿತು ಕಂಡು ಬಂದಿತ್ತು. ಆ ಬಳಿಕ ರಥ ನಿರ್ಮಾಣ ಪ್ರಕ್ರಿಯೆಗಳು ಚುರುಕುಗೊಂಡಿವೆ. ಕುಂದಾಪುರ ತಾ|ನ ಕೋಟೇಶ್ವರದ ರಾಷ್ಟ್ರ ಪ್ರಶಸ್ತಿ ವಿಜೇತ ಲಕ್ಷ್ಮೀನಾರಾಯಣ ಆಚಾರ್ಯ ಬ್ರಹ್ಮರಥ ನಿರ್ಮಾಣದ ಶಿಲ್ಪಿಗಳಾಗಿದ್ದಾರೆ. ಸುಮಾರು 102ಕ್ಕೂ ಹೆಚ್ಚು ರಥಗಳನ್ನು ಅವರು ಈವರೆಗೆ ನಿರ್ಮಿಸಿದ್ದಾರೆ.

400 ವರ್ಷಗಳ ಇತಿಹಾಸ
ಕ್ಷೇತ್ರದಲ್ಲಿ ಹೊಂದಿರುವ ಬ್ರಹ್ಮರಥ ಎಷ್ಟು ಪ್ರಾಚೀನ ಎಂದು ನಿಖರವಾಗಿ ತಿಳಿದಿಲ್ಲ. ಕೆಳದಿ ಸಂಸ್ಥಾನದ ಹಿರಿಯ ವೆಂಕಟಪ್ಪ ನಾಯಕನು (ಕ್ರಿ.ಶ. 1582-1629) ನಿರ್ಮಿಸಿ ಕೊಟ್ಟಿದ್ದ ಎಂಬುದು ದಾಖಲೆಯಿಂದ ತಿಳಿದುಬರುತ್ತದೆ. ಹೀಗಾಗಿ, ಬ್ರಹ್ಮರಥಕ್ಕೆ 400 ವರ್ಷಗಳ ಇತಿಹಾಸವಿದೆ.

ಆಕ್ಷೇಪವಿಲ್ಲ, ಭಾಗವಹಿಸುವುದೂ ಇಲ್ಲ
ಬ್ರಹ್ಮರಥ ನಿರ್ಮಾಣಕ್ಕೆ ವೀಳ್ಯ ನೀಡುವ ಕಾರ್ಯಕ್ರಮದ ವಿಚಾರವನ್ನು ನಿಕಟ ಸಂಬಂಧಿಗಳ ಮೂಲಕ ನಮ್ಮ ಗಮನಕ್ಕೆ ತಂದಿದ್ದಾರೆ. ಆದರೆ ದೇಗುಲದ ಅದಾಯ ಮತ್ತು ಭಕ್ತರ ದೇಣಿಗೆ ಪಡೆದು ಬ್ರಹ್ಮರಥ ನಿರ್ಮಿಸಬೇಕು ಎಂಬ ಅಭಿಪ್ರಾಯ ನಮ್ಮದು. ಅದನ್ನು ಆಡಳಿತ ಮಂಡಳಿ ಮುಂದೆ ವ್ಯಕ್ತಪಡಿಸಿದ್ದೇವೆ. ಇದೀಗ ದಾನಿಯೊಬ್ಬರ ಮಾಲಕತ್ವದ ಸಂಸ್ಥೆಗೆ ರಥ ನಿರ್ಮಿಸುವುದಕ್ಕೆ ವೀಳ್ಯ ನೀಡುತ್ತಿದ್ದಾರೆ. ನಾವು ಇದನ್ನು ಆಕ್ಷೇಪಿಸುವುದಿಲ್ಲ. ಆದರೆ, ಈ ನಡೆ ನಮಗೆ ತೃಪ್ತಿ ಹಾಗೂ ಸಮಾಧಾನ ತಂದಿಲ್ಲ. ದೇವರ ಇಚ್ಛೆ ಹೇಗಿದೆಯೋ ಹಾಗೆ ನಡೆಯಲಿ. ವೀಳ್ಯ  ನೀಡುವ ಕಾರ್ಯಕ್ರಮದಲ್ಲಿ ನಾವು ಭಾಗವಹಿಸುತ್ತಿಲ್ಲ.

– ಸೋಮಸುಂದರ ಕೂಜುಗೋಡು
(ದೇಗುಲಕ್ಕೆ ಸಂಬಂಧವಿರುವ ಕೂಜುಗೋಡು ಮನೆತನದವರು)

LEAVE A REPLY

Please enter your comment!
Please enter your name here