ಕುಂಬಳೆ: ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದ ವಿಶ್ವಜಿತ್ ಅತಿರಾತ್ರ ಸೋಮಯಾಗದ ಪ್ರಥಮ ದಿನವಾದ ರವಿವಾರ ತೋರಣ ಮುಹೂರ್ತ ನಡೆಯಿತು.
ಅಗ್ನಿಹೋತ್ರಿಗಳಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಐಲ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದಿಂದ ಹಸುರು ವಾಣಿ ಹೊರೆಕಾಣಿಕೆ ಮೆರವಣಿಗೆಗೂ ಪೂರ್ವದಲ್ಲಿ ಐಲ ಶ್ರೀ ದುರ್ಗಾಪರ ಮೇಶ್ವರೀ ಕ್ಷೇತ್ರದಲ್ಲಿ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹಾಗೂ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಮಲ್ಲ ಶ್ರೀ ಕ್ಷೇತ್ರದ ಆನೆಮಜಲು ವಿಷ್ಣು ಭಟ್ ಅವರು ತೆಂಗಿನ ಕಾಯಿ ಒಡೆದು ಮೆರವಣಿಗೆಗೆ ಚಾಲನೆ ನೀಡಿದರು. ವಿಶ್ವಜಿತ್ ಅತಿರಾತ್ರ ಸೋಮ ಯಾಗದ ಯಜಮಾನತ್ವ ವಹಿಸಲಿರುವ ಅಗ್ನಿಹೋತ್ರಿ ಬ್ರಹ್ಮಶ್ರೀ ಅನಿರುದ್ಧ ವಾಜಪೇಯಿ ದಂಪತಿ ಉಪಸ್ಥಿತರಿದ್ದರು.
ಮಂಗಳೂರು, ಉಡುಪಿ ಮುಂತಾದ ಕಡೆಗಳಿಂದ ಸಂಗ್ರಹಿಸಿದ ಹೊರೆಕಾಣಿಕೆಯನ್ನು ಕದ್ರಿ ಶ್ರೀ ಮಂಜುನಾಥ ಕ್ಷೇತ್ರ ಪರಿಸರದಿಂದ ಯೋಗಾಶ್ರಮಕ್ಕೆ ತರಲಾಯಿತು. ಯಾಗ ಸಮಿತಿ ಕಾರ್ಯಾಧ್ಯಕ್ಷ ಮೋನಪ್ಪ ಭಂಡಾರಿ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್, ಕೋಶಾಧಿಕಾರಿ ಶಶಿಧರಶೆಟ್ಟಿ ಗ್ರಾಮ ಚಾವಡಿ, ಮಾಧ್ಯಮ ಪ್ರಚಾರ ಸಮಿತಿ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಮಂಗಳೂರು ಪಾಲಿಕೆ ವಿಪಕ್ಷ ನಾಯಕ ಪ್ರೇಮಾನಂದ ಶೆಟ್ಟಿ, ಪಾಲಿಕೆ ಸದಸ್ಯೆ ರೂಪಾ ಬಂಗೇರ ಉಪಸ್ಥಿತಿಯಲ್ಲಿ ಚಾಲನೆ ನೀಡಲಾಯಿತು. ಸಿಂಗಾರಿ ಮೇಳ, ಮಕ್ಕಳಿಂದ ಕುಣಿತ, ಕೊಂಬು ಕಹಳೆ ಚೆಂಡೆ ವಾದನ ಗಮನ ಸೆಳೆಯಿತು.
ಕಾಪಿಕ್ಕಾಡು ಉಮಾಮಹೇಶ್ವರೀ ಕ್ಷೇತ್ರದ ಆಡಳಿತ ಮೊಕ್ತೇಸರ ಎ.ಜೆ. ಶೇಖರ್ ಉಗ್ರಾಣ ಮುಹೂರ್ತ ನೆರವೇರಿಸಿದರು. ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ದೀಪ ಬೆಳಗಿಸಿದರು.
ಸೋಮವಾರ ವಿದ್ವಾನ್ ಗಣೇಶ ವಾಸುದೇವ ಜೋಗಳೇಕರ್ ಅವರ ಅಧ್ವರ್ಯವದಲ್ಲಿ ನಡೆಯುತ್ತಿರುವ ಅತಿರಾತ್ರ ಸೋಮಯಾಗದ ಋತ್ವಿಜರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಶ್ರೀ ಗಾಯಿತ್ರೀ ದೇವಿ ಸನ್ನಿಧಿಯಲ್ಲಿ ವೈದಿಕ ಕಾರ್ಯಕ್ರಮ, ಮಧ್ಯಾಹ್ನ ಪ್ರಸನ್ನಪೂಜೆ, ಅನ್ನಸಂತರ್ಪಣೆ ನಡೆಯಿತು. ಸ್ವಕುಲ ಧರ್ಮಾರಾಧನೆ ಅಂಗವಾಗಿ ವಿವಿಧ ಸಮುದಾಯದವರ ಕುಲಕಸುಬಿನ ಉತ್ಪನ್ನಗಳ ಮೆರವಣಿಗೆ ಉಪ್ಪಳ ಪೇಟೆ ಯಿಂದ ಸಾಗಿಬಂದು ಶ್ರೀಕ್ಷೇತ್ರಕ್ಕೆ ಸಮರ್ಪಣೆ ಮಾಡಲಾಯಿತು. ಧರ್ಮ ಸಂದೇಶ ಕಾರ್ಯ ಕ್ರಮದಲ್ಲಿ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರ, ಜೋತಿಷಿ ಬೇಳ ಪದ್ಮನಾಭ ಶರ್ಮ, ವಿದ್ವಾನ್ ಸುಬ್ರಹ್ಮಣ್ಯ ಅವಧಾನಿ ಗುಂಡಿಬೈಲು ಭಾಗವಹಿಸಿದ್ದರು.
ಇಂದಿನ ಕಾರ್ಯಕ್ರಮ ಫೆ. 19ರಂದು ಬೆಳಗ್ಗೆ 5ರಿಂದ ಶ್ರೀ ಗಾಯತ್ರೀ ದೇವಿಯ ಸನ್ನಿಧಾನದಲ್ಲಿ ಬಿಂಬಶುದ್ಧಿ, ಶಾಂತಿಹೋಮ, ಪ್ರಾಯಶ್ಚಿತ್ತ ಹೋಮ, ಗಣಯಾಗ, 10.30ಕ್ಕೆ ಶ್ರೀಮದ್ ಎಡನೀರು ಮಠದ ಶ್ರೀ ಕೇಶವಾನಂದ ಭಾರತೀ ಶ್ರೀಪಾದರಿಂದ ಅನುಗ್ರಹ ಸಂದೇಶ, ಸಾಯಂಕಾಲ 5ರಿಂದ ವಿವಿದ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಶ್ರೀ ಗಾಯತ್ರೀ ಸಭಾ ಮಂಟಪದಲ್ಲಿ ರಾತ್ರಿ 7.30ರಿಂದ ನಡೆಯುವ ಧಾರ್ಮಿಕ ಸಭೆಯಲ್ಲಿ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹಾಗೂ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡುವರು.