Home ಧಾರ್ಮಿಕ ಸುದ್ದಿ ಶ್ರೀಕೃಷ್ಣಮಠದಲ್ಲಿ ಸಂಭ್ರಮದ ಚೂರ್ಣೋತ್ಸವ

ಶ್ರೀಕೃಷ್ಣಮಠದಲ್ಲಿ ಸಂಭ್ರಮದ ಚೂರ್ಣೋತ್ಸವ

105
0
SHARE

ಉಡುಪಿ: ಶ್ರೀಕೃಷ್ಣಮಠದಲ್ಲಿ ಮಕರಸಂಕ್ರಾಂತಿ ಮರುದಿನ ನಡೆಯುವ ಚೂರ್ಣೋತ್ಸವ ಮಂಗಳವಾರ ಸಂಭ್ರಮದಿಂದ ಸಂಪನ್ನಗೊಂಡಿತು.

ಶ್ರೀಕೃಷ್ಣಮಠದಲ್ಲಿ ಈ ಬಾರಿ ವಾಡಿಕೆಯ ಸಪ್ತೋತ್ಸವದ ಜತೆಗೆ 14 ಸೇವಾದಾರರ ಸಪ್ತೋತ್ಸವಗಳಿದ್ದವು.

ಬೆಳಗ್ಗೆ ಪರ್ಯಾಯ ಶ್ರೀಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು ಮಹಾ ಪೂಜೆ ಯನ್ನು ಮುಗಿಸಿದ ಬಳಿಕ ಚೂರ್ಣೋತ್ಸವ ಆರಂಭ ಗೊಂಡಿತು. ಬ್ರಹ್ಮರಥ ದಲ್ಲಿ ಶ್ರೀಕೃಷ್ಣ ಮತ್ತು ಮುಖ್ಯಪ್ರಾಣ ದೇವರ ಉತ್ಸವ ಮೂರ್ತಿಗಳನ್ನು ಇರಿಸಿ ಪೂಜೆ ಸಲ್ಲಿಸಿದ ಬಳಿಕ ರಥಬೀದಿಗೆ ಸಾವಿರಾರು ಭಕ್ತರ ಸಮ್ಮುಖ ಪ್ರದಕ್ಷಿಣೆ ಬಂದು ವಸಂತಮಹಲ್‌ನಲ್ಲಿ ಅಷ್ಟಾವಧಾನ, ಓಲಗಮಂಟಪ ಪೂಜೆ ನಡೆಯಿತು. ತೇರನ್ನು ಭಕ್ತರ ಜತೆ ಸ್ವಾಮೀಜಿಯವರೂ ಎಳೆದರು. ಆರು ಮಂದಿ ರಥದ ಹಿಂಭಾಗ ಒಂದು ಸುತ್ತು ಅಂಗ ಪ್ರದಕ್ಷಿಣೆ (ಉರುಳು ಸೇವೆ) ಮಾಡಿದರು. ಅನಂತರ ಮಧ್ವ ಸರೋವರದಲ್ಲಿ ಉತ್ಸವಮೂರ್ತಿ ಸಹಿತವಾಗಿ ಎಲ್ಲಾ ಮಠಾಧೀಶರು ಅವಭೃಥಸ್ನಾನ ಮಾಡಿ ಸಪ್ತೋತ್ಸವವನ್ನು ಕೃಷ್ಣಾರ್ಪಣಗೈದರು.

ಪೇಜಾವರ ಹಿರಿಯ, ಕಿರಿಯ, ಕೃಷ್ಣಾಪುರ, ಅದಮಾರು ಹಿರಿಯ, ಕಿರಿಯ, ಕಾಣಿಯೂರು, ಸೋದೆ, ಭಂಡಾರಕೇರಿ, ಭೀಮನಕಟ್ಟೆ, ಬನ್ನಂಜೆ ಸ್ವಾಮೀಜಿ ಯವರು ಉತ್ಸವದಲ್ಲಿ ಪಾಲ್ಗೊಂಡಿದ್ದರು.

ಗರುಡ ಪಕ್ಷಿಯ ಸಾಕ್ಷಿ
ಚೂರ್ಣೋತ್ಸವದ ಸಂದರ್ಭ ಗರುಡ ಆಗಸದಲ್ಲಿ ಬಂದು ರಥಕ್ಕೆ ಸುತ್ತು ಹೊಡೆಯುತ್ತದೆ ಎಂಬ ನಂಬಿಕೆ ಇದ್ದು, ಮಂಗಳವಾರವೂ ಇದು ಸಂಭವಿಸಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here