ಪುತ್ತೂರು : ಐತಿಹಾಸಿಕ ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನಕ್ಕೆ ನೂತನ ಚಂದ್ರಮಂಡಲ ರಥ ಜ. 6ರಂದು ಸಮರ್ಪಣೆಯಾಗಲಿದೆ.
1987ರಿಂದ 28 ವರ್ಷ ದೇವಳದ ಆಡಳಿತ ಮೊಕ್ತೇಸರರಾಗಿ ದೇವಾಲಯದ ಅಭಿವೃದ್ದಿಗೆ ಶ್ರಮಿಸಿದ ಇಡ್ಯಡ್ಕ ಮೋಹನ್ ಗೌಡ ಮತ್ತು ಡಾ| ಆಶಾ ಅಭಿಕಾರ್ ದಂಪತಿಯ ಬಾರೆಂಗಳಗುತ್ತು ಚಾಮುಂಡಿ ಸೇವಾ ಟ್ರಸ್ಟ್ ಮುಖಾಂತರ ನೂತನ ರಥ ಸೇವಾ ರೂಪದಲ್ಲಿ ಸಮರ್ಪಣೆಯಾಗಲಿದೆ.
ರಥವು ನಿಲೇಶ್ವರ ತಂತ್ರಿಗಳ ಮಾರ್ಗದರ್ಶನದಲ್ಲಿ ವಾಸ್ತುತಜ್ಞ ಮುನಿಯಂಗಳ ಕೃಷ್ಣಪ್ರಸಾದ್ ಶಿಲ್ಪ ಶಾಸ್ತ್ರದಂತೆ ಕಾರ್ಕಳದ ಕಾಷ್ಠ ಶಿಲ್ಪಿ ಹರೀಶ್ ಆಚಾರ್ಯ ಅವರಲ್ಲಿ ನಿರ್ಮಾಣವಾಗಿದೆ. ನೂತನ ಚಂದ್ರಮಂಡಲ ರಥವು ಸತ್ತಿಗೆ ಸೇರಿ 12 ಅಡಿ ಎತ್ತರವಿದ್ದು, 15 ಲಕ್ಷ ರೂ. ವೆಚ್ಚದಲ್ಲಿ ಬೋಗಿ, ಹೆಬ್ಬಲಸು ಮತ್ತು ಹಲಸು ಮರಗಳಿಂದ ನೂತನ ರಥ ತಯಾರಾಗಿದೆ.
ರಥದಲ್ಲಿ ಮೊದಲು ಚಕ್ರ, ಹಚ್ಚುಮರ, ಅನಂತರ ಜಂತಿ ಆನೆ ರೂಪ ಮತ್ತು ವ್ಯಾಲ ರೂಪ, ಪೀಠ, ಅಷ್ಟಪಟ್ಟಿ, ಗೊಂಬೆ ಹಲಿಗೆ, ನಂದಿ, ಬುರುದೆ ಗುಂಟಾದ ಆಕೃತಿಗಳ ಕೆತ್ತನೆಯಿದ್ದು,
ಚರೆಹಲಗೆಯಲ್ಲಿ ಹಂಸ ಸಾಲು ಕೆತ್ತಲಾಗಿದೆ. ರಥದಲ್ಲಿ ನಾಗ ಹೆಡೆ, ಜಾರ್ಲಿ, ಮುರ್ಗಿಯ ವಿಶೇಷ ಶಿಲ್ಪಕಲೆಯಿದೆ. ರಥದ ಮೇಲ್ಭಾಗದಲ್ಲಿ ಪೀಠ ಹಾಗೂ ಪ್ರಭಾವಳಿ ಹೊಂದಿರುತ್ತದೆ.
ರಥ 10.5 ಅಡಿ ಎತ್ತರವಿದ್ದು, ಶ್ವೇತ ಛತ್ರ ಸೇರಿದರೆ 12 ಅಡಿ ಎತ್ತರವಿರುತ್ತದೆ ಎಂದು ರಥ ಕೆತ್ತನೆ ಕಾರ್ಯ ಮಾಡಿರುವ ಕಾರ್ಕಳದ ಕಾಷ್ಠ ಶಿಲ್ಪಿ ಹರೀಶ್ ಆಚಾರ್ಯ ಮಾಹಿತಿ ನೀಡಿದ್ದಾರೆ.
ದೇವಾಲಯದ ಇತಿಹಾಸದಲ್ಲಿ ದೇವರಿಗೆ ರಥೋತ್ಸವ ನಡೆದಿರುವ ಕುರಿತು ಉಲ್ಲೇಖವಿದ್ದು, ಈಗಲೂ ರಥೋತ್ಸವ ಕಟ್ಟೆ, ರಥ ಮಜಲು, ದೈವಗಳಿಗೆ ಬಂಡಿ ಇದ್ದ ಸ್ಥಳಗಳಿವೆ.
ನೂತನ ಚಂದ್ರಮಂಡಲ ರಥ ಜ. 6ರಂದು ಮಧ್ಯಾಹ್ನ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಆವರಣದಿಂದ ದರ್ಬೆ, ಪುರುಷರಕಟ್ಟೆ, ಸವಣೂರು, ಕಾಣಿಯೂರು ಮಾರ್ಗವಾಗಿ ಚಾರ್ವಾಕ ಕಪಿಲೇಶ್ವರ ದೇವಸ್ಥಾಕ್ಕೆ ಮೆರವಣಿಗೆ ಮೂಲಕ ಸಾಗಲಿದ್ದು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸುಧಾಕರ್ ಶೆಟ್ಟಿ ಮೆರವಣಿಗೆಯನ್ನು ಉದ್ಘಾಟಿಸಲಿದ್ದಾರೆ. ಪುತ್ತೂರು ಶಾಸಕ ಸಂಜೀವ ಮಠಂದೂರು ಶುಭಾಶಂಸನಗೈಯಲಿದ್ದಾರೆ ಎಂದು ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ| ಧರ್ಮಪಾಲ ಕರಂದ್ಲಾಜೆ ತಿಳಿಸಿದ್ದಾರೆ.