Home ನಂಬಿಕೆ ಸುತ್ತಮುತ್ತ ಚಂದ್ರಘಂಟಾ

ಚಂದ್ರಘಂಟಾ

903
0
SHARE

ನವರಾತ್ರೆಯ ಶುಭದಿನಗಳಲ್ಲಿ ಮೂರನೆಯ ದಿನ ದೇವಿಯ ಚಂದ್ರಘಂಟಾ ಅವತಾರವನ್ನು ಪೂಜಿಸುವುದು ಕ್ರಮ. ದೇವಿಯ ರೌದ್ರರೂಪವೆಂದೇ ಹೇಳಲಾಗುವ ಚಂದ್ರಘಂಟಾವತಾರವು ದುಷ್ಟಶಿಕ್ಷಕಿ, ಶಿಷ್ಟಪಾಲಕಿಯಾಗಿದ್ದಾಳೆ. ಮೂರುಕಣ್ಣುಗಳು ಮತ್ತು ಹತ್ತು ಕೈಗಳನ್ನು ಹೊಂದಿರುವ ಈಕೆ ಸಿಂಹಾರೂಢಳಾಗಿ, ಆಯುಧಪಾಣಿಯಾಗಿ, ತಲೆಯಲ್ಲಿ ಅರ್ಧಚಂದ್ರನನ್ನು ಹೊಂದಿದವಳಾಗಿ ಕಾಣಿಸಿಕೊಂಡಿರುವಳು. ಅಸುರರಿಗೆ ಭಯ ಹುಟ್ಟಿಸುವವಳಾದರೂ ಭಕ್ತರಿಗೆ ಮಮತಾಮಯಿಯಾಗಿದ್ದಾಳೆ.

ಹದಿನಾರು ವರ್ಷಗಳ ಕಠಿಣ ಬ್ರಹ್ಮಚರ್ಯವನ್ನು ಪಾಲಿಸಿ ತಪಸ್ಸಿನಿಂದ ಶಿವನನ್ನು ಒಲಿಸಿಕೊಂಡು ಮದುವೆಯಾಗಲು ಸತಿಯು ಮುಂದಾದಾಗ ಶಿವನ ಅತಿಭಯಂಕರ ರೂಪವನ್ನು ಕಂಡ ಸತಿಯ ತಾಯಿಯು ಮಗಳನ್ನು ಮದುವೆ ಮಾಡಿಕೊಡಲು ಹೆದರುತ್ತಾಳೆ. ಇದನ್ನರಿತ ಸತೀದೇವಿಯು ಚಂದ್ರಘಂಟಾ ರೂಪವನ್ನು ತಾಳಿ ಶಿವನೆದುರು ಪ್ರತ್ಯಕ್ಷಳಾಗಿ ಮದುವೆಯ ವರನರೂಪತಾಳುವಂತೆ ಹೇಳುತ್ತಾಳೆ. ಇದಕ್ಕೊಪ್ಪಿದ ಶಿವ ರಾಜಕುಮಾರನ ರೂಪದಲ್ಲಿ ಬಂದಾಗ ಸತಿಯ ಮದುವೆ ಸಂತಸ-ಸಂಭ್ರಮಗಳಿಂದ ನೆರವೇರುತ್ತದೆ. ಇದು ಚಂದ್ರಘಂಟಾಳ ಬಗೆಗಿನ ಒಂದು ಕಥೆ.
ಆಹ್ಲಾದಕರವಾದ ಚಂದ್ರನು ಯಾರ ದ್ವಾರದಲ್ಲಿ ಸ್ಥಿರವಾಗಿರುತ್ತಾನೆಯೋ ಅವಳೇ ಚಂದ್ರಘಂಟಾ ಎಂಬ ಮಾತಿದೆ. ಆಹ್ಲಾದಕರವೆಂದರೆ ಮಮತೆ, ಕ್ಷಮಾಶೀಲತೆ ಮತ್ತು ವಾತ್ಸಲ್ಯ ಈ ಮೂರೂ ಗುಣಗಳ ಸಮ್ಮಿಲಿತ ಸ್ಥಿತಿ. ಈ ಎಲ್ಲವನ್ನೂ ಹೊಂದಿರುವ ಚಂದ್ರಘಂಟಾ ದೇವಿ ನಮ್ಮನ್ನು ವಿಘ್ನಗಳಿಂದ ಪಾರುಮಾಡುವವಳು.

ಬ್ರಹ್ಮಚಾರಿಣಿಯನ್ನು ಪೂಜಿಸಿ ಬ್ರಹ್ಮಚರ್ಯವನ್ನು ಪಾಲಿಸುವ ನಿರ್ಣಯವನ್ನು ಕೈಗೊಂಡ ಬಳಿಕ ಚಂದ್ರಘಂಟಾಳ ಕೃಪೆಗೆ ಪಾತ್ರರಾಗಬೇಕು. ಚಂದ್ರಘಂಟಾಳ ಕಥೆಯೇ ಹೇಳುವಂತೆ ನಮ್ಮ ಘೋರರೂಪವು ಎಲ್ಲರಿಂದಲೂ ನಮ್ಮನ್ನು ದೂರವಿರಿಸುತ್ತದೆ. ಚಂದ್ರ ಎಂದರೆ ಸಹನೆಯ ಮೂರ್ತಿ. ಎಳೆಯ ಮಕ್ಕಳಿಂದ ಹಿರಿಯರಿಗೂ ಚಂದ್ರ ಮತ್ತು ಆತನ ಬೆಳದಿಂಗಳೆಂದರೆ ಇಷ್ಟ. ಬೆಳದಿಂಗಳೆಂದರೆ ಆಹ್ಲಾದಕರ ವಾತಾವರಣ. ಬಿಸಿಲಿನಂತೆ ಅದು ಸುಡುವುದಿಲ್ಲ. ಆಹ್ಲಾದಕರ ಎಂಬುದು ಮಮತೆ, ವಾತ್ಸಲ್ಯ ಮತ್ತು ಕ್ಷಮಾಶೀಲತೆಯ ರೂಪ ಎಂದು ಹೇಳಲಾಗಿದೆ. ಹಾಗಾಗಿ ಚಂದ್ರನಂತಹ ಆಹ್ಲಾದಕರವಾದ ಭಾವ ನಮ್ಮಲ್ಲಿ ಸದಾ ಜಾಗರೂಕವಾಗಿರಬೇಕು.

ಬೆಳದಿಂಗಳ ಹಿತ ಮನಸ್ಸನ್ನು ಪ್ರಫುಲ್ಲವಾಗಿಸುವಂತೆ ನಮ್ಮ ಸಂಬಂಧಗಳು ಮಮತೆ-ವಾತ್ಸಲ್ಯಗಳಿಂದ ತುಂಬಿರಬೇಕು. ಇನ್ನು ಘಂಟಾ ಅಥವಾ ಘಂಟೆ ಎಂಬುದು ನಮ್ಮನ್ನು ಎಚ್ಚರಿಸಲು ಇರುವಂತದ್ದು. ವಯೋಸಹಜವಾದ ಆಸೆಗಳಿಂದಲೋ ಚಂಚಲ ಮನಸ್ಸಿನಿಂದಲೋ ನಮ್ಮ ತಾಳ್ಮೆ ಕೆಟ್ಟು ಕೋಪ, ಮದ, ಮತ್ಸರಕ್ಕೆ ಒಳಗಾಗಿ ಬಾಳಿನ ಬೆಳದಿಂಗಳನ್ನು ಕಳೆದುಕೊಳ್ಳಬಾರದು ಎಂಬ ಎಚ್ಚರಿಕೆಯ ಘಂಟೆ ಮನದ ಮೂಲೆಯಲ್ಲಿ ಆಗಾಗ ಶಬ್ಧ ಮಾಡುತ್ತಲೇ ಇರುತ್ತದೆ. ನಾವು ಅದನ್ನು ಕೇಳಿಸಿಕೊಳ್ಳುವ ಮನಸ್ಸು ಮಾಡಬೇಕು. ತಪ್ಪು-ಒಪ್ಪುಗಳನ್ನು ಮೀರಿದ್ದು ಕ್ಷಮಾಶೀಲತೆ. ಕ್ಷಮಾಶೀಲತೆಯನ್ನು ಅಳವಡಿಸಿಕೊಳ್ಳುವುದು ಮಾನವನಿಗೆ ತೀರಾ ಕಷ್ಟದ ಸಂಗತಿ.

ಯಾವುದು ಕ್ಷಮ್ಯ? ಯಾವುದು ಅಕ್ಷಮ್ಯ? ಎಂಬ ಗೊಂದಲ ಇದ್ದೇ ಇರುತ್ತದೆ. ಯಾರೂ ಕೂಡ ಒಪ್ಪಲಾಗದ ತಪ್ಪನ್ನು ಮನ್ನಿಸುವುದಾದರ ಹೇಗೆ? ಇನ್ನೊಬ್ಬನಿಂದಾದ ತಪ್ಪು ನಮ್ಮ ಬದುಕನ್ನು ಬಲಿತೆಗೆದು ಕೊಂಡರೆ? ಆಗ ಕ್ಷಮಾಶೀಲತೆಯನ್ನು ಹೇಗೆ ಪಾಲಿಸುವುದೆಂಬ ಜಿಜ್ಞಾಸೆಗೆ ಒಳಗಾಗುತ್ತೇವೆ. ಆದರೆ ಮಮತೆ-ವಾತ್ಸಲ್ಯಗಳು ಯಥೇಶ್ಚವಾಗಿ ಸರ್ವರಲ್ಲಿಯೂ ಸಮಾನವಾಗಿ ಹರವಿಕೊಂಡಿದ್ದಾಗ ಅಕ್ಷಮ್ಯ ಅಪರಾಧಗಳು ಸಂಭವಿಸುವುದಕ್ಕೆ ಸಾಧ್ಯವೇ ಇಲ್ಲವಲ್ಲ!

ಚಂದ್ರಘಂಟಾ ದೇವಿ ಮಾನವನಲ್ಲಿರುವ ಅಸುರಗುಣಗಳನ್ನು ನಾಶಮಾಡಲಿ. ಬೆಳದಿಂಗಳಂತಹ ಮಧುರವಾದ ಬಾಂಧವ್ಯ ಜನ-ಜನರ ನಡುವೆ ಬೆಸೆಯುವಂತೆ ಆಶೀರ್ವದಿಸಲಿ. ಕ್ಷಮಾಶೀಲತೆಯನ್ನು ಪಾಲಿಸುವ ಮನಸ್ಸನ್ನು ಎಲ್ಲರಿಗೂ ನೀಡಲೆಂಬುದು ಪ್ರಾರ್ಥನೆ.

ಇನ್ನು ನಾಳೆಗೆ……

|| ಸರಳವಾಗಿ ಯೋಚಿಸಿ-ಸಂಸ್ಕಾರಯುತರಾಗಿ-ಸರಳವಾಗಿ ಜೀವಿಸಿ||

ವಿಷ್ಣು ಭಟ್ಟ, ಹೊಸ್ಮನೆ.

ಓಂ ಶ್ರೀ ಸಾಯಿ ಜ್ಯೋತಿಷ್ಯಾಲಯ
South Canara’s Famous Asrologer
Family issue, ಮದುವೆಯಲ್ಲಿ ವಿಘ್ನ, ಸತಿ-ಪತಿ ಕಲಹ, Court Case, ವಶೀಕರಣ, Love problems, ಸದಾ ಕುಟುಂಬದಲ್ಲಿ ಕಲಹ, Money problem, ಕೆಲಸದಲ್ಲಿ ಕಿರಿಕಿರಿ, ಮಕ್ಕಳ ಸಮಸ್ಯೆ, ವ್ಯಾಪಾರದಲ್ಲಿ ಅಡೆ-ತಡೆ, Loan Issue, ನಿಮ್ಮ ಯಾವುದೇ ಸಮಸ್ಯೆಗೆ 3 ದಿನಗಳಲ್ಲಿ ಶಾಶ್ವತ ಪರಿಹಾರ.
ಹೊಟೇಲ್ ದುರ್ಗಾ ಇಂಟರ್ ನ್ಯಾಶನಲ್, ರೂಂ. ನಂ. 310, 3ನೇ ಮಹಡಿ, ಸಿಟಿ ಬಸ್ ಸ್ಟ್ಯಾಂಡ್ ಹತ್ತಿರ, ಉಡುಪಿ.
ಪಂಡಿತ್ ಸಾಯಿನಾಥ್ ಜೋಶಿ : Ph- 98449-44242

LEAVE A REPLY

Please enter your comment!
Please enter your name here