ತೆಕ್ಕಟ್ಟೆ: ಸುಮಾರು 400 ವರ್ಷಗಳ ಇತಿಹಾಸವುಳ್ಳ ಕೋಣಿ ಚಕ್ಕುಲಿಬೆಟ್ಟು ಶ್ರೀ ದುರ್ಗಾ ಗಣಪತಿ ದೇವಸ್ಥಾನ ಹಾಗೂ ಶ್ರೀ ಸ್ವಾಮಿ ಪಂಜುರ್ಲಿ ಸಪರಿವಾರ ದೈವಸ್ಥಾನದ ಪುನಃ ಪ್ರತಿಷ್ಠೆ ಹಾಗೂ ಬ್ರಹ್ಮಕಲಶಾಭಿಷೇಕ ಅಂಗವಾಗಿ ವಿಶ್ವಕರ್ಮ ಜಗದ್ಗುರು ಶ್ರೀ ಸುಜ್ಞಾನ ಪ್ರಭು ಪೀಠ ಅರೆಮಾದನಹಳ್ಳಿ ವಿಶ್ವ ಬ್ರಾಹ್ಮಣ ಮಹಾಸಂಸ್ಥಾನದ ಅರಕಲಗೂಡು ಶ್ರೀಗುರು ಶಿವಸುಜ್ಞಾನ ತೀರ್ಥ ಮಹಾಸ್ವಾಮಿ ಅವರನ್ನು ಜೂ. 1ರಂದು ಪೂರ್ಣಕುಂಭ ಸ್ವಾಗತದೊಂದಿದೆ ದೇಗುಲಕ್ಕೆ ಬರಮಾಡಿಕೊಂಡರು. ಇದೇ ಸಂದರ್ಭದಲ್ಲಿ ಶ್ರೀಗಳು ಶ್ರೀ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭ ಶಿವಸುಜ್ಞಾನ ತೀರ್ಥ ಮಹಾಸ್ವಾಮಿಗಳು ಆಶೀರ್ವಚಿಸಿ ಮಾತನಾಡಿ, ಸುಮಾರು 400 ವರ್ಷಗಳ ಇತಿಹಾಸವುಳ್ಳ, ಪರಂಪರಾಗತವಾಗಿ ವಿಶ್ವ ಬ್ರಾಹ್ಮಣ ವರ್ಗದವರು ಪೂಜಿಸಿಕೊಂಡು ಬಂದಂತಹ ಮೂಲ ಸಾನ್ನಿಧ್ಯವನ್ನು ಜೀರ್ಣೋದ್ಧಾರದಿಂದಾಗಿ ನಂಬಿದ ಅದೆಷ್ಟೋ ಭಕ್ತರು ಜೀವನದಲ್ಲಿ ಶ್ರೇಯಸ್ಸು ಕಂಡಿದ್ದಾರೆ. ವೈಶ್ವಕರ್ಮಣ ಪರಂಪರೆ ಬಹಳ ಶ್ರೇಷ್ಠವಾದಂತಹ ಇತಿಹಾಸದಿಂದ ಬಂದಿರುವಂತದ್ದು ಅದನ್ನು ಉಳಿಸಿಕೊಳ್ಳುವಲ್ಲಿ ನಾವು ಸಮರ್ಥರಾಗಬೇಕು. ಬ್ರಾಹ್ಮಣರೆಲ್ಲರೂ ಮುಖದಿಂದ ಉತ್ಪನ್ನರಾದರೂ ಹೀಗೆ ಎಲ್ಲ ವರ್ಣಗಳ ಉತ್ಪನ್ನ ಪುರುಷ ಸೂಕ್ತದಲ್ಲಿ ವ್ಯಕ್ತವಾಗಿದ್ದು ಅದು ಎಲ್ಲ ವೇದಗಳ ಸಾರ. ನಿರಾಕಾರ ಪರಮಾತ್ಮನ ಅವನ ಮುಖದಿಂದ ಬ್ರಾಹ್ಮಣೋತ್ಪತ್ತಿಯಾಗಿದೆ. ಒಂದೊಂದು ಅಂಗಾಂಗಗಳಲ್ಲಿ ಒಂದೊಂದು ಸೃಷ್ಟಿಯಾಗಿದೆ. ‘ನಾಭಿಯಿಂದ ಅಂತರಿಕ್ಷ ಬಂತು, ಕಣ್ಣುಗಳಿಂದ ಸೂರ್ಯ ಬಂದ, ಮನಸ್ಸಿನಿಂದ ಚಂದ್ರ ಬಂದ’ ಹೀಗೆ ಆ ಪುರುಷನ ಅಂಗಾಂಗಗಳಿಂದ ಇಡೀ ಸೃಷ್ಟಿಯನ್ನೇ ಹೇಳಲ್ಪಟ್ಟಿದೆ. ಆ ಪುರುಷ ಸೂಕ್ತದಲ್ಲಿ ಯಾವ ದೇವರ ಹೆಸರು ಉಲ್ಲೇಖೀಸಿಲ್ಲ ಆದರೆ ವಿಶೇಷವಾಗಿ ವಿಶ್ವಕರ್ಮ ಎನ್ನುವ ಪದ ಅಲ್ಲಿ ಇದೆ. ಈ ರಸ ತತ್ತ್ವದಲ್ಲಿದ್ದ ಅಂಶವನ್ನು ಪೃಥ್ವಿ ತತ್ತ್ವಕ್ಕೆ ತಂದವನ್ನು ವಿಶ್ವಕರ್ಮ ಎಂದು ನುಡಿದರು.
ಈ ಸಂದರ್ಭ ಕೋಣಿ ಗಂಗಾಧರ ಆಚಾರ್ಯ ದಂಪತಿ, ವಿಶ್ವಕರ್ಮ ಕುಟುಂಬಸ್ಥರು, ಭಕ್ತರು ಉಪಸ್ಥಿತರಿದ್ದರು.