Home ಧಾರ್ಮಿಕ ಸುದ್ದಿ ಜೀರ್ಣೋದ್ಧಾರದ ಹಾದಿಯಲ್ಲಿ ಶ್ರೀ ವೆಂಕಟರಮಣ ದೇವಸ್ಥಾನ

ಜೀರ್ಣೋದ್ಧಾರದ ಹಾದಿಯಲ್ಲಿ ಶ್ರೀ ವೆಂಕಟರಮಣ ದೇವಸ್ಥಾನ

1629
0
SHARE

ಬ್ರಹ್ಮಾವರ: ಇಲ್ಲಿನ ಚಾಂತಾರು ಗ್ರಾಮದ ಅಗ್ರಹಾರ ಶ್ರೀ ವೆಂಕಟರಮಣ ಜೀರ್ಣೋದ್ಧಾರ ಹಂತದಲ್ಲಿದೆ.

ಇಲ್ಲಿ ಆರೋಗ್ಯದ ವಿಚಾರದ ಪ್ರಾರ್ಥನೆಗೆ ವಿಶೇಷ ಫಲ ಪ್ರಾಪ್ತಿ. ಈ ಕ್ಷೇತ್ರವು ಹಿಂದೆ ಯಜ್ಞಾ-ಯಾಗಾದಿಗಳು ನಡೆದಿರುವ ಋಷಿ ಮುನಿಗಳ ತಪೋಭೂಮಿ ಆಗಿದ್ದು, ರಾಮಾನುಜಾಚಾರ್ಯರ ಕಾಲ ಘಟ್ಟದಲ್ಲಿ ಸಿದ್ದಯೋಗಿಯೋರ್ವರಿಂದ ದೇಗುಲವು ಸ್ಥಾಪಿಸಲ್ಪಟ್ಟಿತು ಎನ್ನವ ವಿಚಾರ ಚಿಂತನೆಯಿಂದ ತಿಳಿದು ಬಂದಿದೆ. ಸಿಂಹ ಆಯ ಹೊಂದಿರುವ ಈ ದೇಗುಲವು ಸುಮಾರು 11ನೇ ಶತಮಾನದ ಹೊಯ್ಸಳ ಕಾಲದ ಶಿಲ್ಪ ಎಂದು ಇತಿಹಾಸ ತಜ್ಞರು ಅಭಿಪ್ರಾಯ ಪಟ್ಟಿರುತ್ತಾರೆ.

ಅಂದಾಜು ಮೂರು ಅಡಿ ಎತ್ತರವಿರುವ ಶ್ರೀ ವೆಂಕಟರಮಣನ ವಿಗ್ರಹದ ಬಲಭಾಗದಲ್ಲಿ ಭೂದೇವಿ ಎಡಭಾಗದಲ್ಲಿ ಶ್ರೀದೇವಿ ಕೈಯಲ್ಲಿ ಶಂಖ, ಚಕ್ರ, ಹಾಗೂ ವರದಹಸ್ತ ನೀಡುವಂತೆ ಚಿತ್ರಿಸಲಾಗಿದೆ. ಉತ್ತರಾಭಿಮುಖವಾಗಿ ಇರುವ ಶ್ರೀ ವೆಂಕಟರಮಣನಿಗೆ ಪಶ್ಚಿಮಾಭಿಮುಖವಾಗಿ ಶ್ರೀ ಕಾಶೀ ವಿಶ್ವನಾಥ, ಶ್ರೀ ವಿನಾಯಕ ಹಾಗೂ ಶ್ರೀ ದುರ್ಗಾಪರಮೇಶ್ವರಿ ದೇವಾಲಯವಿದೆ. ಪೂರ್ವ ದಿಕ್ಕಿನಲ್ಲಿ ಸುಂದರವಾದ ಜಲಾಶಯವಿದ್ದು ಇದರ ದಂಡೆಯಲ್ಲಿ ನಾಗಬ್ರಹ್ಮ ಸ್ಥಾನವಿದೆ.

ಶ್ರೀ ವೆಂಕಟರಮಣ ದೇವಸ್ಥಾನವು ತುಂಬಾ ಪ್ರಾಚೀನವಾಗಿದ್ದು ತದನಂತರದಲ್ಲಿ ಸಂತಾನ ಪ್ರಾಪ್ತಿಗಾಗಿ ಕೆಳದಿಯ 2ನೇ ಸೋಮಶೇಖರ ನಾಯಕರ ಸಮ್ಮುಖದಲ್ಲಿ ಕ್ರಿ.ಶ. 1743ರ ದುಂದುಭಿ ಸಂವತ್ಸರದ ಮಾರ್ಗಶಿರ ಶುದ್ಧ ಪಂಚಮಿಯಂದು ಶ್ರೀ ಕಾಶೀ ವಿಶ್ವನಾಥ, ಶ್ರೀ ವಿನಾಯಕ ಹಾಗೂ ಶ್ರೀ ದುರ್ಗಾಪರಮೇಶ್ವರಿ ದೇವರನ್ನು ಪ್ರತಿಷ್ಠಾಪಿಸಲಾಯಿತು.

ಭಜನಾ ಕಾರ್ಯಕ್ರಮ
ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವರ್ಷಂಪ್ರತಿ ಹನ್ನೆರಡು ದಿನಗಳ ಭಜನಾ ಕಾರ್ಯಕ್ರಮ ನಡೆಯುತ್ತದೆ. ಶ್ರಾವಣ ಮಾಸದಲ್ಲಿ ಪವಮಾನ ಅಭಿಷೇಕ ವಿಷ್ಣು ಸಹಸ್ರನಾಮ ಅರ್ಚನೆ ಹಾಗೂ ಸಿಂಹ ಮಾಸದಲ್ಲಿ ಸೋಣೆ ಆರತಿ ನಡೆಯುತ್ತದೆ. ನಿತ್ಯ ಪೂಜೆಯೊಂದಿಗೆ ಸಂಕಲ್ಪಿತ ಕಾರ್ಯಕ್ಕಾಗಿ ಕ್ಷೀರಾಭಿಷೇಕ, ಹಾಲುಪರಮಾನ್ನ ನೈವೇದ್ಯ, ನಂದಾದೀಪ, ತುಳಸಿ ಅರ್ಚನೆ, ಪವಮಾನ ಅಭಿಷೇಕ-ಹವನ, ಲಕ್ಷೀನಾರಾಯಣ ಹೃದಯ ಪಾರಾಯಣ-ಹವನ, ಶ್ರೀಸೂಕ್ತ- ಪುರುಷಸೂಕ್ತ ಜಪ-ಹವನ ಮುಂತಾದ ಸೇವೆಗಳು ನಡೆಯುತ್ತವೆ.

ಈ ದೇವಾಲಯವು ಶಿಥಿಲ ಗೊಂಡಿರುವ ಕಾರಣ ಊರಿನ ಭಕ್ತರು ದೇಗುಲಗಳ ಜೀರ್ಣೋದ್ಧಾರ ಹಾಗು ಪುನರ್‌ ಪ್ರತಿಷ್ಠೆ ಮಾಡುವುದಾಗಿ ನಿಶ್ಚಯಿಸಿರುತ್ತಾರೆ. ಅಂದಾಜು ವೆಚ್ಚ ಸುಮಾರು 95 ಲಕ್ಷ ರೂ. ಆಗಿದ್ದು, ಜೀರ್ಣೋದ್ಧಾರ ಕಾರ್ಯವು ಭರದಿಂದ ಸಾಗುತ್ತಿದೆ. ಎಪ್ರಿಲ್‌ 26ರಿಂದ 29ರ ವರೆಗೆ ಪುನಃಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಧಾರ್ಮಿಕ ಕಾರ್ಯಗಳನ್ನು ನೇರವೇರಿಸುವುದಾಗಿ ನಿರ್ಧರಿಸಲಾಗಿದೆ.

ದೇಣಿಗೆ ನೀಡುವ ಭಕ್ತಾದಿಗಳು ಶ್ರೀ ಕಾಶೀ ವಿಶ್ವನಾಥ ವೆಂಕಟರಮಣ ಜೀರ್ಣೋದ್ಧಾರ ಸಮಿತಿ, ಕರ್ನಾಟಕ ಬ್ಯಾಂಕ್‌ ಅಂಬಾಗಿಲು ಶಾಖೆ, ಎಸ್‌.ಬಿ. ಅಕೌಂಟ್‌ 0182500101296101, ಐಎಫ್‌ಎಸ್‌ಸಿ ಕೆಎಆರ್‌ಬಿ0000018 ಇದಕ್ಕೆ ಜಮೆ ಮಾಡಬೇಕಾಗಿ ಸಮಿತಿ ವಿನಂತಿಸಿದೆ.

LEAVE A REPLY

Please enter your comment!
Please enter your name here