ಸುಬ್ರಹ್ಮಣ್ಯ : ಬಳ್ಪ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರೀ ದೇವಸ್ಥಾನದ ನೂತನ ಬ್ರಹ್ಮರಥ ಸಮರ್ಪಣೆ ಬುಧವಾರ ನಡೆಯಿತು.
ಇತಿಹಾಸ ಪ್ರಸಿದ್ಧ ಸಂಪೂರ್ಣ ಶಿಲಾ ಮಯವಾದ ಬಳ್ಪ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭಕ್ತರ ಸಹಕಾರದಿಂದ ನಿರ್ಮಾಣವಾದ ನೂತನ ಬ್ರಹ್ಮರಥ ಸಮರ್ಪಣೆ ಕಾರ್ಯಕ್ರಮ ಬುಧವಾರ ಸಂಜೆ ಕ್ಷೇತ್ರದ ತಂತ್ರಿಗಳಾದ ಪಾವಂಜೆ ವಾಗೀಶ ಶಾಸ್ತ್ರೀ ಅವರ ನೇತೃತ್ವದಲ್ಲಿ ನಡೆಯಿತು. ಮಂಗಳವಾರ ಸಂಜೆ ಹಸಿರು ಹೊರೆಕಾಣಿಕೆ ಸಮರ್ಪಣೆ, ಉಗ್ರಾಣ ತುಂಬುವ ಕಾರ್ಯಕ್ರಮ ನಡೆದು ಗುರುವಾರ ಬೆಳಗ್ಗೆ ವಿವಿಧ ವೈದಿಕ ಕಾರ್ಯಕ್ರಮ ನಡೆದು ಕಲಶಪ್ರತಿಷ್ಠಾ- ಅಧಿವಾಸ ಹೋಮ ನಡೆಯಿತು.
ಸುಂದರ ರಥ
ಬಳ್ಪ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದೆ. ಸಂಪೂರ್ಣ ಶಿಲಾಮಯದಿಂದ ಕೂಡಿದ ಈ ದೇವಸ್ಥಾನವನ್ನು ರಾಜರ ಕಾಲದಲ್ಲಿ ನಿರ್ಮಾಣ ಮಾಡಲಾಗಿದೆ ಎಂಬ ದಾಖಲೆಗಳು ಇದೆ. ಇಂತಹ ಪ್ರಸಿದ್ಧ ದೇವಸ್ಥಾನದಲ್ಲಿ 1900ರ ಸುಮಾರಿಗೆ ರಥ ಇದ್ದ ಕುರುಹು ಕಂಡುಬರುತ್ತಿದ್ದು, ಶಿಥಿಲವಾದ ಬಗ್ಗೆ ಮಾಹಿತಿಗಳು ಇದೆ. ಇದೀಗ ದೇವಸ್ಥಾನ ಅಭಿವೃದ್ಧಿ ಬಳಿಕ ರಥ ಸಮರ್ಪಣೆಯಾಗಿದೆ. ಸುಮಾರು 100 ವರ್ಷಗಳ ನಂತರ ರಥೋತ್ಸವ ನಡೆಯುತ್ತಿದೆ. ಈ ಅಪೂರ್ವ ರಥವನ್ನು ಮೂಡಬಿದರೆ ಕಲ್ಲಮುಂಡ್ಕೂರು ನಾರಾಯಣ ಆಚಾರ್ಯ ಹಾಗೂ ಅವರ ಪುತ್ರ ಹರೀಶ್ ಆಚಾರ್ಯ ನಿರ್ಮಾಣ ಮಾಡಿದ್ದಾರೆ. ಸುಮಾರು 6 ತಿಂಗಳ ಕೆತ್ತನೆ ಮಾಡಿದ್ದು, ಕಿರಾಲ್ಬೋಗಿ, ಹೆಬ್ಬಲಸು ಹಾಗೂ ಮೈರೋಳು ಮರ ಬಳಸಲಾಗಿದೆ. ರಥದ ಸುತ್ತಲೂ ದೇವಸ್ಥಾನದ ಇತಿಹಾಸದ ಕೆತ್ತನೆ, ತ್ರಿಶೂಲಿನೀ ದೇವರು, ದುರ್ಗೆ, ಶ್ರೀಚಕ್ರ ದೇವತೆಯ ಕೆತ್ತನೆಯನ್ನು ಮಾಡಲಾಗಿದೆ.