ಪುಂಜಾಲಕಟ್ಟೆ: ಸುಮಾರು 3 ಕೋ. ರೂ. ವೆಚ್ಚದಲ್ಲಿ, ತೌಳವ ದ್ರಾವಿಡ ಶೈಲಿಯಲ್ಲಿ, ಸಂಪೂರ್ಣ ಶಿಲಾಮಯವಾಗಿ ಪುನರ್ ನಿರ್ಮಾಣಗೊಂಡಿರುವ ಬಂಟ್ವಾಳ ತಾಲೂಕಿನ ಉಳಿ ಗ್ರಾಮದ ಕಕ್ಯಪದವು ಶ್ರೀ ಕಡಂಬಿಲ್ತಾಯಿ, ಕೊಡಮಣಿತ್ತಾಯಿ, ಬ್ರಹ್ಮಬೈದರ್ಕಳ ಗರೋಡಿಯಲ್ಲಿ ಬ್ರಹ್ಮಕಲಶೋತ್ಸವ, ವಾರ್ಷಿಕ ಜಾತ್ರೆ ಮೇ 22ರಂದು ಸಂಪನ್ನಗೊಂಡಿತು.
ಬ್ರಹ್ಮಶ್ರೀ ನಡ್ವಂತಾಡಿ ಬಾಲಕೃಷ್ಣ ಪಾಂಗಣ್ಣಾಯ ಮತ್ತು ಕಕ್ಯ ಶ್ರೀನಿವಾಸ ಅರ್ಮುಡ್ತಾಯರ ಮಾರ್ಗದರ್ಶನದಲ್ಲಿ, ಕ್ಷೇತ್ರದ ಆಸ್ರಣ್ಣ ರಾಜೇಂದ್ರ ಅರ್ಮುಡ್ತಾಯ ಅವರ ಮುಂದಾಳತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದವು. ಮಧ್ಯಾಹ್ನ ಕೊಡಮಣಿತ್ತಾಯಿ ಸ್ಥಾನದಲ್ಲಿ ಶ್ರೀ ಕೊಡಮಣಿತ್ತಾಯಿ ನೇಮ, ಧ್ವಜಾವರೋಹಣ, ಸ್ಥಳ ಶುದ್ಧಿ, ಅನ್ನಸಂತರ್ಪಣೆ ನಡೆಯಿತು.
ಬ್ರಹ್ಮಕಲಶ, ಬ್ರಹ್ಮಬೈದರ್ಕಳ ಜಾತ್ರೆಗೆ ಊರ-ಪರವೂರ ಭಕ್ತಜನ ಸಾಗರ ಹರಿದು ಬಂದಿತ್ತು. ಊಟೋಪಚಾರ, ಸ್ವಚ್ಛತೆ, ಪಾರ್ಕಿಂಗ್ ವ್ಯವಸ್ಥೆಗಳಲ್ಲಿ ಸ್ವಯಂಸೇವಕರು ಅಚ್ಚುಕಟ್ಟಾಗಿ ನಿರ್ವಹಿಸಿದ್ದು ಜನರ ಪ್ರಶಂಸೆಗೆ ಪಾತ್ರವಾಯಿತು.
ಬ್ರಹ್ಮಬೈದರ್ಕಳ ಜಾತ್ರೆಗೆ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕರಾದ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು, ಹರೀಶ್ ಪೂಂಜ, ಜಿ.ಪಂ. ಸದಸ್ಯ ಎಂ.ತುಂಗಪ್ಪ ಬಂಗೇರ, ಬಿಜೆಪಿ ಪ್ರಮುಖ ಹರಿಕೃಷ್ಣ ಬಂಟ್ವಾಳ ಮತ್ತಿತರ ಗಣ್ಯರು ಆಗಮಿಸಿ ದೈವದ ಪ್ರಸಾದ ಸ್ವೀಕರಿಸಿದರು. ಮಾಜಿ ಸಚಿವ, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಬಿ. ರಮಾನಾಥ ರೈ, ಅಧ್ಯಕ್ಷ ಸೇಸಪ್ಪ ಕೋಟ್ಯಾನ್, ಮೋಕ್ತೇಸರ, ಬಾರ್ದಡ್ಡು ಕುಟುಂಬಸ್ಥರಾದ ರಾಜವೀರ್ ಜೈನ್, ಬ್ರಹ್ಮಕಲಶೋತ್ಸವ ಸಮಿತಿ ಸಂಚಾ ಲಕರಾದ ಚಿತ್ತರಂಜನ್ ಕಂಕನಾಡಿ, ರೋಹಿನಾಥ ಪಾದೆ, ಕಾರ್ಯಾಧ್ಯಕ್ಷ ಬಿ. ಪದ್ಮಶೇಖರ ಜೈನ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ. ಮಾಯಿಲಪ್ಪ ಸಾಲ್ಯಾನ್, ವಾಸ್ತುಶಿಲ್ಪಿ ಪ್ರಮಲ್ ಕುಮಾರ್,ಪುನರ್ ನಿರ್ಮಾಣ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಎ. ಚೆನ್ನಪ್ಪ ಸಾಲ್ಯಾನ್ ಆಜೋಡಿ, ಉತ್ಸವ ಸಮಿತಿ ಅಧ್ಯಕ್ಷ ವಿಶ್ವನಾಥ ಸಾಲ್ಯಾನ್ ಬಿತ್ತ, ಉಳಿ ಯುವಕ ಮಂಡಲ ಅಧ್ಯಕ್ಷ ಸನತ್ ಕುಮಾರ್ ಮತ್ತಿತರ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.