ಸುರತ್ಕಲ್ : ಸಮಾಜದಲ್ಲಿ ಆಯಾ ಕೆಲಸಗಳ ಪ್ರತಿಭಾ ಸಂಪನ್ನರು ಅವರವರ ಕೆಲಸ ಕಾರ್ಯಗಳನ್ನು ಮಾಡಿ ದಾಗ ಎಲ್ಲವೂ ಸುಸೂತ್ರವಾಗಿ ನೆರವೇರುತ್ತದೆ. ಎಲ್ಲ ಸೇವೆಗಳೂ ಶ್ರೇಷ್ಟವೇ. ಒಂದೇ ಪಂಕ್ತಿಯಲ್ಲಿ ಭೋಜನ ಮಾಡಿದ ಮಾತ್ರಕ್ಕೆ ಯಾರೂ ಶ್ರೇಷ್ಠರಾಗುವುದಿಲ್ಲ. ಆಯಾ ಕರ್ಮ, ಉತ್ತಮ ಕೈಂಕರ್ಯದಿಂದ ಉತ್ತಮರಾಗುತ್ತಾರೆ. ನಮ್ಮ ವೈದಿಕ ಶಾಸ್ತ್ರ ಪರಂಪರೆಯ ಉಳಿವಿಗಾಗಿ ದೇವತರಾಧನೆ ಅತಿ ಮುಖ್ಯ ಎಂದು ಶ್ರೀ ಕೊಂಡೆಯೂರು ಯೋಗಾನಂದ ಸರಸ್ವತಿ ಸ್ವಾಮೀಜಿ ಅವರು ಹೇಳಿದರು.
ಸುರತ್ಕಲ್ ಇಡ್ಯಾ ಮಹಾಲಿಂಗೇಶ್ವರ ದೇಗುಲದಲ್ಲಿ ಜರಗಲಿರುವ ಬ್ರಹ್ಮಕಲಶಾಭೀಷೇಕ, ಅಷ್ಟಪವಿತ್ರ ನಾಗಮಂಡಲೋತ್ಸವ, ಧರ್ಮನೇಮದ ಅಂಗವಾಗಿ ಮಂಗಳವಾರ ಜರಗಿದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಬ್ರಹ್ಮಕಲಶದ ಮೂಲಕ ಮಾಡುವ ಧಾರ್ಮಿಕ ಕಾರ್ಯ ಇಂದು ನಾಳೆಗಲ್ಲ, ಮುಂದಿನ ಜನ್ಮಕ್ಕೂ ಅದರ ಪುಣ್ಯ ಪ್ರಾಪ್ತಿ ವ್ಯಾಪಿಸಬೇಕು. ಧಾರ್ಮಿಕ ಆಚಾರದ ಹಿಂದೆ ವಿಜ್ಞಾನ ಇದೆ. ಆ ವಿಜ್ಞಾನದ ಹಾದಿಯ ಮೂಲವನ್ನು ಋಷಿ ಮುನಿಗಳು ತೋರಿಸಿದ್ದಾರೆ. ಧಾರ್ಮಿಕ ಶ್ರದ್ಧೆ ಆಚರಣೆಗಳನ್ನು ಹಿರಿಯರು ಉಳಿಸಿಕೊಳ್ಳುತ್ತಾ ಬಂದಿದ್ದಾರೆ ಎಂದರು.
ಉದ್ಘಾಟನೆ ತಡಂಬೈಲು ಶ್ರೀ ದುರ್ಗಾಂಬಾ ದೇವಸ್ಥಾನ ಪ್ರಧಾನ ಅರ್ಚಕ ವೇ| ಮೂ| ಲಕ್ಷ್ಮೀ ನಾರಾಯಣ ಭಟ್ ಉದ್ಘಾಟನೆ ನೆರವೇರಿಸಿದರು. ಸಭಾಧ್ಯಕ್ಷತೆಯನ್ನು ಮಂಗಳೂರು ಶರವು ದೇವಸ್ಥಾನದ ಆಡಳಿತ ಮೊಕ್ತೇಸರ ವೇ| ಮೂ| ಶರವು ರಾಘವೇಂದ್ರ ಶಾಸ್ತ್ರಿ ವಹಿಸಿದ್ದರು. ಡಾ| ಎಂ. ಪ್ರಭಾಕರ ಜೋಷಿ ಅವರು ಸಂಗೀತ ಮತ್ತು ನೃತ್ಯಗಳ ಮೂಲಕ ಶಿವಾರಾಧನೆ ಎಂಬ ವಿಷಯದ ಕುರಿತು ಧಾರ್ಮಿಕ ಉಪನ್ಯಾಸ ನೀಡಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕ ವೇ|
ಮೂ| ವೆಂಕಟರಮಣ ಆಸ್ರಣ್ಣ, ಗುರ್ಮೆ ಸುರೇಶ್ ಶೆಟ್ಟಿ ಕಾಪು, ಭಂಡಾರಿ ಸಮಾಜ ಸಂಘ ಅಧ್ಯಕ್ಷ ರಘುವೀರ ಭಂಡಾರಿ, ನಿವೃತ್ತ ಸೈನಿಕರ ಸಂಘ ಉಪಾಧ್ಯಕ್ಷ ರೋ. ಸಾರ್ಜೆಂಟ್, ಶ್ರೀಕಾಂತ್ ಶೆಟ್ಟಿ ಬಾಳ, ಕಿನ್ನಿಗೋಳಿ ಯುಗಪುರುಷ ಭುವನಾಭಿ ರಾಮ ಉಡುಪ, ಬದವಿದೆ ಶ್ರೀ ವಿಶ್ವನಾಥ ದೇವಸ್ಥಾನ ಮೊಕ್ತೇಸರ ವಿಶ್ವೇಶ್ವರ ಬದವಿದೆ, ಸುರತ್ಕಲ್ ಐ. ವಾಸುದೇವ, ಕರುಣಾಕರ ಶೆಟ್ಟಿ ಹೊಸಬೆಟ್ಟು, ತುಳು ಸಾಹಿತ್ಯ ವಿದ್ವಾಂಸ ಕೆ.ಕೆ. ಪೇಜಾವರ, ಜನತಾ ಕಾಲನಿ ಗಣೇಶ ಭಜನ ಮಂದಿರ ಅಧ್ಯಕ್ಷ ಸುಧಾಮ ಶೆಟ್ಟಿ ಬಾಳ, ಲಲಿತಕಲಾ ಆರ್ಟ್ಸ್ನ ಧನಪಾಲ್ ಎಚ್. ಶೆಟ್ಟಿಗಾರ್, ಕಾಟಿಪಳ್ಳ ಬ್ರಹ್ಮಮೊಗೇರ ದೈವಸ್ಥಾನ ಲಕ್ಷ್ಮಣ ಆಚಾರ್, ಉದ್ಯಮಿ ಬಿ.ಕೆ. ತಾರನಾಥ, ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಆನುವಂಶಿಕ ಆಡಳಿತ ಮೊಕ್ತೇಸರ ಐ. ರಮಾನಂದ ಭಟ್, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಮಹಾಬಲ ಪೂಜಾರಿ ಕಡಂಬೋಡಿ ಉಪಸ್ಥಿತರಿದ್ದರು. ಮಧುಸೂದನ್ ಇಡ್ಯಾ ಪ್ರಸ್ತಾವಿಸಿದರು. ಐ. ಸತೀಶ್ ರಾವ್ ಇಡ್ಯಾ ಸ್ವಾಗತಿಸಿದರು. ಪುಪ್ಪರಾಜ್ ಕುಳಾಯಿ ವಂದಿಸಿದರು. ಕೆ. ಪಿ. ಚಂದ್ರಶೇಖರ್,ಸುಮಂಗಳಾ ಹೇರಳೆ ನಿರೂಪಿಸಿದರು.