ಹೆಬ್ರಿ : 25 ಕೋ.ರೂ. ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡ ಹಿರಿಯಡಕ ಶ್ರೀ ವೀರಭದ್ರಸ್ವಾಮಿ ದೇವಸ್ಥಾನದ ಶ್ರೀ ದೇವರ ಪುನಃಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಎ. 16ರಿಂದ ಎ. 25ರ ವರೆಗೆ ನಡೆಯಲಿದ್ದು, ಆಮಂತ್ರಣ ಪತ್ರಿಕೆ ಬಿಡುಗಡೆ ಮಾ. 22 ರಂದು ದೇವಸ್ಥಾನದಲ್ಲಿ ನಡೆಯಿತು.
ಶ್ರೀ ಕ್ಷೇತ್ರದ ಹಿರಿಯರಾದ ಸರ್ವೋತ್ತಮ ಪೈ, ರಾಘವೇಂದ್ರ ಮಲ್ಪೆ, ಸದಾಶಿವ ಆಚಾರ್ ಮಾನೈ, ಜಯರಾಮ ಶೆಟ್ಟಿ ಕೊಂಡಾಡಿ, ವಿಟuಲ ಶೇರಿಗಾರ್ ಹಿರಿಯಡ್ಕ, ಭೋಜ ಎಸ್. ನಾಯಕ್, ಸುಬ್ರಾಯ ನಾಯಕ್, ಧರ್ಮ ಪ್ರಕಾಶ್ ಹಿರಿಯಡ್ಕ, ಉದಯ ಬಂಗೇರ ಬಜೆ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.
ಜೀರ್ಣೋದ್ಧಾರ ಸಮಿತಿಯ ಸಂಘಟನ ಕಾರ್ಯದರ್ಶಿ ನಟರಾಜ್ ಹೆಗ್ಡೆ ಪ್ರಸ್ತಾವನೆಗೈದು ಮಾತನಾಡಿ, ದೇವಸ್ಥಾನದ ಸಮಗ್ರ ಜೀರ್ಣೋದ್ಧಾರದ ಸಂಕಲ್ಪ ಮಾಡಿಕೊಂಡು, ಜೀರ್ಣೋದ್ಧಾರ ಸಮಿತಿಯು ಕಳೆದ ಎರಡೂವರೆ ವರ್ಷಗಳಿಂದ ಕಾರ್ಯಪ್ರವೃತ್ತವಾಗಿದೆ. ಪ್ರಥಮ ಹಂತದಲ್ಲಿ ಶ್ರೀ ಕ್ಷೇತ್ರದ ಆದಿಬ್ರಹ್ಮಸ್ಥಾನ, ಆದಿ ನಾಗಸ್ಥಾನ, ರಾಜಗೋಪುರ, ನಗಾರಿ ಗೋಪುರ, ವಸಂತ ಮಂಟಪ, ಪರಿವಾರ ಗಣಶಾಲೆ, ವ್ಯಾಘ್ರ ಚಾಮುಂಡಿ ಗುಡಿ, ವಿಸ್ತಾರವಾದ ಪಾಕಶಾಲೆ ಸಹಿತ ಭೋಜನ ಶಾಲೆ ಹಾಗೂ ಕಲ್ಯಾಣ ಮಂಟಪ ಕಟ್ಟಡಗಳನ್ನು ಕಳೆದ ಬಾರಿಯ ವಾರ್ಷಿಕ ಉತ್ಸವದ ಹೊತ್ತಿಗೆ ಕಲಶೋತ್ಸವ ಮೂಲಕ ದೇವರಿಗೆ ಸಮರ್ಪಿಸಲಾಗಿದೆ. ಇದೀಗ ದ್ವಿತೀಯ ಹಂತದ ಕಾಮಗಾರಿಗಳಾದ ಶ್ರೀ ಬ್ರಹ್ಮಲಿಂಗೇಶ್ವರ ದೇವರ ಗರ್ಭಗೃಹದ ಪುನರ್ನಿರ್ಮಾಣ, ಶ್ರೀ ವೀರಭದ್ರದೇವರ ಗರ್ಭಗೃಹವನ್ನು ನವೀಕರಿಸಿ ಅದರ ದೀಪದಳಿಗೆ ರಜತ ಕವಚ ಹೊದಿಸುವುದು, ಜೊತೆಗೆ ಪಡುಗೋಪುರ, ಯಾಗ ಶಾಲೆ, ನೂತನ ಧÌಜಸ್ತಂಭ, ಶಿಲಾಮಯ ಸುತ್ತುಪೌಳಿ ಮತ್ತು ಅಂಬೆಲ, ಆಕರ್ಷಕ ಸ್ವಾಗತ ಮಂಟಪ ಹಾಗೂ ಅರ್ಚಕರ ವಸತಿಗೃಹಗಳನ್ನು ನಿರ್ಮಿಸುವ ಕಾರ್ಯ ಅಂತಿಮ ಹಂತದಲ್ಲಿದೆ ಎಂದರು.
ಈ ಸಂದರ್ಭ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಓಂತಿಬೆಟ್ಟು ಬೀಡು ಜಯಪ್ರಕಾಶ್ ಹೆಗ್ಡೆ, ಅಂಜಾರು ಬೀಡು ಸುಭಾಶ್ಚಂದ್ರ ಹೆಗ್ಡೆ, ಪಡ್ಡಂಬೀಡು ಹರ್ಷವರ್ಧನ ಹೆಗ್ಡೆ, ಕಾರ್ಯಾಧ್ಯಕ್ಷ ಮಾಂಬೆಟ್ಟು ಹೌಸ್ ಗೋವರ್ಧನದಾಸ್ ಹೆಗ್ಡೆ, ಕಾರ್ಯದರ್ಶಿಗಳಾದ ಅಂಜಾರ ಬೀಡು ತೆಂಕುಬೈಲು ಮನೆ ಅಮರನಾಥ ಶೆಟ್ಟಿ, ತಂತ್ರಿಗಳಾದ ಲಕ್ಷ್ಮೀನಾರಾಯಣ ತಂತ್ರಿ, ಗುರುರಾಜ ತಂತ್ರಿ, ಅರ್ಚಕರಾದ ರಂಗನಾಥ ಭಟ್, ಅನಂತ ಅಡಿಗ, ಸುಶ್ಮಿತಾ ಉಪಸ್ಥಿತರಿದ್ದರು. ವಾಸುಪ್ರಭು ಸ್ವಾಗತಿಸಿ, ರಾಘವೇಂದ್ರ ಜಿ. ಕಾರ್ಯಕ್ರಮ ನಿರೂಪಿಸಿ, ಶಂಕರ ಶೆಟ್ಟಿ ವಂದಿಸಿದರು.