ಕೋಟ: ಸಾಲಿಗ್ರಾಮ ಶ್ರೀಗುರುನರಸಿಂಹ ದೇವಸ್ಥಾನದಲ್ಲಿ ಮೇ 2ರಂದು ಆರಂಭಗೊಂಡ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಸೋಮವಾರ ವೈಭವದ ತೆರೆಬಿತ್ತು. 14ವರ್ಷದ ಅನಂತರ ಕ್ಷೇತ್ರದಲ್ಲಿ ಅದ್ದೂರಿಯಾಗಿ ಈ ಬ್ರಹ್ಮಕಲಶ ನಡೆಯಿತು.
ಗುರುನರಸಿಂಹನಿಗೆ 1001 ರಜತ ಕಲಶಾಭಿಷೇಕ
ಬೆಳಗ್ಗೆ ಗುರುನರಸಿಂಹ ದೇವರಿಗೆ 1001ಬೆಳ್ಳಿಯ ಕಲಶದಲ್ಲಿ ಬ್ರಹ್ಮಕಲಶಾಭಿಷೆೇಕ ನಡೆಯಿತು. ರಾಜ್ಯದಲ್ಲೇ ಅಪರೂಪಕ್ಕೆ ಇಷ್ಟೊಂದು ದೊಡ್ಡ ಸಂಖ್ಯೆಯ ರಜತ ಕಲಶಾಭಿಷೇಕ ನಡೆದಿದೆ ಎಂದು ಧಾರ್ಮಿಕ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಕಲಶಾಭಿಷೇಕಕ್ಕೆ ಸೇವೆರೂಪದಲ್ಲಿ ಕಲಶ ನೀಡಿದ ಭಕ್ತಾಧಿಗಳಿಗೆ ಪ್ರಸಾದವಾಗಿ ರಜತ ಕಲಶ ವಿತರಿಸಲಾಯಿತು. ಆಂಜನೇಯ ಹಾಗೂ ನಾಗದೇವರಿಗೆ 108 ಬೆಳ್ಳಿ ಕಲಶಾಭಿಷೇಕ ಹಾಗೂ ದುರ್ಗಾಪರಮೇಶ್ವರೀ, ಗಣಪತಿ ದೇವರಿಗೆ 301 ಬೆಳ್ಳಿ ಕಲಶಾಭಿಷೇಕ ನಡೆಯಿತು.
ದೇಗುಲದ ತಂತ್ರಿಗಳಾದ ಯಜ್ಞನಾರಾಯಣ ಸೋಮಯಾಜಿ ಹಾಗೂ ಕೃಷ್ಣ ಸೋಮಯಾಜಿ ಧಾರ್ಮಿಕ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಜ್ಯೋಯಿಸ ರತ್ನಾಕರ ಸೋಮಯಾಜಿ, ಅರ್ಚಕ ಶ್ರೀನಿವಾಸ್ ಅಡಿಗ ಹಾಗೂ ಆಡಳಿತ ಮಂಡಳಿಯ ಅಧ್ಯಕ್ಷ ಕೆ. ಅನಂತಪದ್ಮನಾಭ ಐತಾಳ, ಉಪಾಧ್ಯಕ್ಷ ಬಿ.ರಘುನಾಥ ಸೋಮಯಾಜಿ, ಕಾರ್ಯದರ್ಶಿ ಜಿ.ಮಂಜುನಾಥ ಮಯ್ಯ, ಕೋಶಾಧಿಕಾರಿ ಪ್ರಸನ್ನ ತುಂಗ, ಸದಸ್ಯರಾದ ವೈ.ಸದಾರಾಮ ಹೇಳೆì, ಜಿ. ಚಂದ್ರಶೇಖರ ಉಪಾಧ್ಯ, ಎಂ.ಕೆ. ಅಶೋಕ್ ಕುಮಾರ್ ಹೊಳ್ಳ, ಬಿಜೂರು ಬಲರಾಮ ಮಯ್ಯ, ಪಿ. ಸುಬ್ರಹ್ಮಣ್ಯ ಹೇಳೆì ಉಪಸ್ಥಿತರಿದ್ದರು.
ರಥಾರೋಹಣ
ಬೆಳಗ್ಗೆ ಬ್ರಹ್ಮಕಲಶಾಭಿಷೇಕದ ಅನಂತರ ಬಲಿ ಪೂಜೆ ಮುಂತಾದವುಗಳು ನಡೆಯಿತು ಹಾಗೂ ರಥಾರೋಹಣ ಜರಗಿತು. ಈ ಸಂದರ್ಭ ಗುರುನರಸಿಂಹ ದೇಗುಲದಿಂದ ವಾಧ್ಯಘೋಷ ಹಾಗೂ ತಟ್ಟಿರಾಯ ಮುಂತಾದ ವಿಶೇಷ ಆಕರ್ಷಣೆಯೊಂದಿಗೆ ಆಂಜನೇಯ ದೇವಸ್ಥಾನದ ವರೆಗೆ ರಥಾರೋಹಣ ನಡೆಯಿತು.
ಅನ್ನಸಂತರ್ಪಣೆಗಾಗಿ ವಿಶಾಲ ಚಪ್ಪರ
ಅಪರಾಹ್ನ ಸುಮಾರು 10ಸಾವಿರ ಮಂದಿ ಭಕ್ತಾದಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು ಹಾಗೂ ದೇಗುಲದ ಹಿಂದೆ ವಿಶಾಲವಾದ ಊಟದ ಚಪ್ಪರದ ವ್ಯವಸ್ಥೆ ಮಾಡಲಾಗಿತ್ತು. ಸ್ಥಳೀಯ ಹತ್ತಾರು ಸಂಘಟನೆಗಳ ಯುವಕರು ಹಾಗೂ ಕೂಟ ಬಂಧು ಅಂಗಸಂಸ್ಥೆಗಳ ಸದಸ್ಯರು ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸಿದರು.
ಗಮನಸೆಳೆದ ಧ್ವಜಮರ, ದೊಡ್ಡ ಘಂಟೆ, ತಾಮ್ರದ ಹೊದಿಕೆ
ದೇವಸ್ಥಾನದ ಎದುರು ನೂತನವಾಗಿ ಪ್ರತಿಷ್ಠಾಪನೆಗೊಂಡ ತಾಮ್ರ ಹಾಗೂ ಹಿತ್ತಾಳೆಯ ಹೊದಿಕೆಯನ್ನೊಳಗೊಂಡ ಧ್ವಜಮರ ಹಾಗೂ ಮುಖದ್ವಾರದ ಬಳಿ ಹೊಸದಾಗಿ ಅಳವಡಿಸಿದ ರಾಮ, ಲಕ್ಷ್ಮಣ ಎನ್ನುವ ದೊಡ್ಡ ಘಂಟೆಗಳು,
ಸುತ್ತು ಪೌಳಿಗೆ ಅಳವಡಿಸಿದ ತಾಮ್ರದ ಹೊಡಿಕೆ ಭಕ್ತಾದಿಗಳ ಗಮನಸೆಳೆಯಿತು.