Home ನಂಬಿಕೆ ಸುತ್ತಮುತ್ತ ಬ್ರಹ್ಮಚಾರಿಣಿ

ಬ್ರಹ್ಮಚಾರಿಣಿ

2300
0
SHARE

ನವರಾತ್ರೆಯ ಪರ್ವಕಾಲದ ಎರಡನೆಯ ದಿನ ಪೂಜಿಸಲ್ಪಡುವ ದೇವಿಯ ಅವತಾರ ಬ್ರಹ್ಮಚಾರಿಣಿ. “ಬ್ರಹ್ಮವಾರಯಿತುಂ ಶೀಲಂ ಯಸ್ಯಾಃ ಸಾ ಬ್ರಹ್ಮಚಾರಿಣಿ” ಎಂಬ ಸಂಸ್ಕೃತದ ಉಕ್ತಿಯಿದೆ. ಎಂದರೆ ಬ್ರಹ್ಮರೂಪವಾಗುವ ಶೀಲ ಯಾರದ್ದಾಗಿದೆಯೋ ಅಥವಾ ಯಾರ ನಡೆ-ನುಡಿಗಳು ಬ್ರಹ್ಮರೂಪದಂತಿದೆಯೋ ಅವಳೇ ಬ್ರಹ್ಮಚಾರಿಣಿ ಎಂದರ್ಥ. ದೇವಿಯು ಬ್ರಹ್ಮಚರ್ಯಯನ್ನು ಪಾಲಿಸಿದ ಸಂದರ್ಭದ ರೂಪವೇ ಬ್ರಹ್ಮಚಾರಿಣಿ.

ಸತಿ ದೇವಿಯು ಶಿವನನ್ನು ಹೊಂದುವುದಕ್ಕಾಗಿ ಕಾನನವನ್ನು ಸೇರಿ ತಪಸ್ಸು ಮಾಡುತ್ತಾಳೆ. ಬ್ರಹ್ಮಚರ್ಯದ ಪಾಲನೆಯೇ ಒಂದು ಮಹಾನ್ ತಪಸ್ಸು. ಅಂತಹ ಕಟ್ಟುನಿಟ್ಟಾದ ನಿಯಮಗಳಿಂದ ತಪಸ್ಸನ್ನು ಮಾಡಿದಾಗ ಬ್ರಹ್ಮದೇವನು ಒಲಿದು ಬಂದು, ನಿನಗೆ ಶಿವನು ಸಿಗಲೆಂದು ಆಶೀರ್ವದಿಸುತ್ತಾನೆ. ಆ ಬಳಿಕ ಆಕೆ ಶಿವನನ್ನು ಸೇರುತ್ತಾಳೆ. ಇದು ಬ್ರಹ್ಮಚಾರಿಣಿಯ ಕಥೆ.
ಕಿತ್ತಳೆ ಬಣ್ಣದ ಅಂಚಿನಿಂದ ಕೂಡಿದ ಬಿಳಿಯ ಸೀರೆಯನ್ನು ಉಟ್ಟಿರುವ ದೇವಿಯು ಬಲದ ಕೈಯಲ್ಲಿ ಜಪಮಾಲೆಯನ್ನು ಮತ್ತು ಎಡದ ಕೈಯಲ್ಲಿ ಕಮಂಡಲವನ್ನು ಧರಿಸಿರುತ್ತಾಳೆ. ಬ್ರಹ್ಮಚಾರಿಣಿ ದೇವಿಯು ಪ್ರೀತಿ ಹಾಗೂ ಶಾಂತಿಯ ಸಂಕೇತ. ಅಲ್ಲದೆ ಶಾಂತಿ, ಸಂತೋಷ, ಸಂಕಲ್ಪ ಮತ್ತು ಭಕ್ತಿಯ ರೂಪವೂ ಇವಳೇ ಆಗಿದ್ದಾಳೆ. ಮದುವೆಯಾಗದೆ ಇರುವ ಪಾರ್ವತಿಯ ರೂಪವೇ ಈ ಬ್ರಹ್ಮಚಾರಿಣಿ ದೇವಿ ಎನ್ನಲಾಗಿದೆ.

ದೇವಿಯ ಪ್ರತಿಯೊಂದು ರೂಪವೂ ಮನುಷ್ಯನು ಹೇಗೆ ಬದುಕಬೇಕೆಂಬುದನ್ನು ಸೂಚಿಸುತ್ತದೆ. ಬ್ರಹ್ಮಚರ್ಯವನ್ನು ಹೇಗೆ ಪಾಲಿಸಬೇಕೆಂಬುದಕ್ಕೆ ಮಾರ್ಗದರ್ಶಿಣಿಯಾಗಿ ನಿಲ್ಲುವ ಈ ದೇವಿ ಬ್ರಹ್ಮಚರ್ಯದ ಪಾವಿತ್ರ್ಯತೆಯನ್ನೂ ಸೂಚಿಸುತ್ತಾಳೆ. ಮನುಷ್ಯನು ನಾಲ್ಕು ಆಶ್ರಮಗಳಲ್ಲಿ ಬದುಕುತ್ತಾನೆ. ಬ್ರಹ್ಮಚರ್ಯ, ಗ್ರಹಸ್ಥ, ವಾನಪ್ರಸ್ಥ ಮತ್ತು ಸಂನ್ಯಾಸ. ಮೊದಲನೆಯದು ಬ್ರಹ್ಮಚರ್ಯ. ಇದು ಅತ್ಯಂತ ಕಠಿಣಾವಸ್ಥೆ. ಯಾಕೆಂದರೆ ಮನಸ್ಸು ಮತ್ತು ದೇಹಗಳು ಬೆಳೆಯುವ ವಯಸ್ಸಿನಲ್ಲಿ ನಮ್ಮ ವಾಂಛೆ ಮತ್ತು ಕುತೂಹಲಗಳ ನಿಯಂತ್ರಣ ಸುಲಭವಲ್ಲ. ಆದರೆ ಅವೆಲ್ಲವನ್ನೂ ನಿಯಂತ್ರಿಸಿ ಬ್ರಹ್ಮಚರ್ಯವನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಮುಂದೆ ಸುಖವಿದೆ. ಮನೋಕಾಮನೆಗಳನ್ನು ನಿಯಂತ್ರಿಸಿ ಪರಿಶುದ್ಧವಾಗಿ ಮುಂದೆ ಗೃಹಸ್ಥಾಶ್ರಮಕ್ಕೆ ಕಾಲಿಡಬೇಕು. ಆಗ ನಮ್ಮ ಶ್ರೇಯಸ್ಸಿನ ಜೊತೆಗೆ ಸಮಾಜದ ಶ್ರೇಯಸ್ಸೂ ಸಾಧ್ಯ. ಬ್ರಹ್ಮಚಾರಿಯಾದವನು ಸಮಾಜದ ಒಳಿತಿನ ಕನಸುಗಳನ್ನು ಕಾಣಬೇಕು. ಸನ್ನಡತೆ ಮತ್ತು ಸದ್ಗುಣಗಳನ್ನು ಬೆಳೆಸಿಕೊಳ್ಳಬೇಕು.

ಬ್ರಹ್ಮಚಾರಿಣಿಯ ಕೈಯಲ್ಲಿ ಜಪಮಾಲೆಯಿದೆ. ಜಪಮಾಲೆ ಇರುವುದು ಜಪ ಮಾಡುವುಕ್ಕಾಗಿ. ಅಂದರೆ ತಪಸ್ಸಿಗಾಗಿ. ಅಲ್ಲಿ ಏಕಾಗ್ರತೆಗೆ ಭಂಗಬಾರದ ಹಾಗೆ ನಮ್ಮ ಮನಸ್ಸನ್ನು ಕೇಂದ್ರೀಕರಿಸಲು ಜಪಮಾಲೆ ಸಹಾಯಕ. ಬ್ರಹ್ಮಚರ್ಯದಲ್ಲಿ ಕೋಪ-ತಾಪ, ಆಸೆ-ಆಕಾಂಕ್ಷೆಗಳನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು. ಜೀವನದ ಸತ್ಯವನ್ನು ಬಿಂಬಿಸುವ ದೇವಿಯರ ಪೂಜಾಕಾರ್ಯವೆಂದರೆ ಅಂತಹ ಸತ್ಯಮಾರ್ಗಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳವುದೇ ಹೊರತು ಕೇವಲ ಆಡಂಭರದ ಪೂಜೆಯಲ್ಲ. ಧನಾತ್ಮಕ ಅಂಶಗಳು ನಮ್ಮ ಮನಸ್ಸಿನಲ್ಲಿ ಬ್ರಹ್ಮಚರ್ಯಾವಸ್ಥೆಯಲ್ಲಿಯೇ ಗಟ್ಟಿಯಾಗಿ ಬೇರೂರಿ ನಿಂತರೆ ನಮ್ಮ ಜೀವನಕ್ರಮವೂ ಮುಂದೆ ಅದೇ ದಾರಿಯಲ್ಲಿ ಸಾಗುತ್ತದೆ. ಜೀವನಮೌಲ್ಯಗಳು ಪರಸ್ಪರರಲ್ಲಿ ಹೊಂದಾಣಿಕೆಗೆ ಅನುವುಮಾಡಿಕೊಡುವದರಿಂದ ಇಡೀ ವಿಶ್ವವೇ ಸಂತಸವಾದ ವಾತಾವರಣದಲ್ಲಿ ಬದುಕಲು ಸಾಧ್ಯ.

ಬ್ರಹ್ಮ ಎಂದರೆ ಸೃಷ್ಟಿ ಎಂದೇ ಅರ್ಥ. ಜೀವಿಯನ್ನು ಸೃಷ್ಟಿಸುವವನು ಬ್ರಹ್ಮನಾದರೆ ಜೀವನವಿಧಾನವನ್ನು ಸೃಷ್ಟಿಸುವವರು ನಾವು. ಹಾಗಾಗಿ ಭೂಲೋಕದ ಆಗುಹೋಗುಗಳಗೆಲ್ಲ ನಮ್ಮ ಜೀವನಕ್ರಮವೇ ಕಾರಣ. ಬ್ರಹ್ಮಚರ್ಯವನ್ನು ಸರಿಯಾಗಿ ಪಾಲಿಸಿ ಸಮರ್ಪಕವಾದ ಜೀವನವಿಧಾನವನ್ನು ನಾವು ಸೃಷ್ಟಿಸುತ್ತಿರಬೇಕು. ನಮ್ಮಲ್ಲಿ ಉತ್ಪತ್ತಿಯಾಗುವ ಭಾವನೆ ಮತ್ತು ಅದನ್ನು ವ್ಯಕ್ತಪಡಿಸುವ ರೀತಿ ಹೊಸ ಸಂಬಂಧವನ್ನು ಹುಟ್ಟುಹಾಕಲೂಬಹುದು ಅಥವಾ ಇರುವ ಸಂಬಂಧವನ್ನು ಸಾಯಿಸಲೂಬಹುದು. ಇದನ್ನು ಅರಿತು ನಿಯಂತ್ರಿಸುವ ಬದುಕಿನ ರೀತಿಯಲ್ಲೊಂದು ಈ ಬ್ರಹ್ಮಚರ್ಯ. ಬ್ರಹ್ಮಚಾರಿಣಿ ನಮ್ಮೆಲ್ಲರನ್ನು ಅನುಗ್ರಹಿಸಲಿ. ಜೀವನಮೌಲ್ಯಗಳನ್ನು ಹೊಂದುವುದೆಂದರೆ ಸತಿಯು ಪರಮೇಶ್ವರನನ್ನು ತಪಸ್ಸು ಮಾಡಿ ಪಡೆದಂತೆ. ಪರಮೇಶ್ವರನೆಂದರೆ ಲಯಕರ್ತ. ಅರ್ಥಾತ್ ಮೊಕ್ಷದಾಯಕ. ಹಾಗಾಗಿ ಬ್ರಹ್ಮಚರ್ಯವನ್ನು ಪಾಲಿಸಿದರೆ ಮುಂದೆ ಮೋಕ್ಷ ಖಂಡಿತ.

ಇನ್ನು ನಾಳೆಗೆ……

|| ಸರಳವಾಗಿ ಯೋಚಿಸಿ-ಸಂಸ್ಕಾರಯುತರಾಗಿ-ಸರಳವಾಗಿ ಜೀವಿಸಿ||

ವಿಷ್ಣು ಭಟ್ಟ, ಹೊಸ್ಮನೆ.

LEAVE A REPLY

Please enter your comment!
Please enter your name here