Home ನಂಬಿಕೆ ಸುತ್ತಮುತ್ತ ಬುದ್ಧ ಪೂರ್ಣಿಮೆಯ ದಿನ ಬೋಧಿಸತ್ವನ ಸ್ಮರಣೆ

ಬುದ್ಧ ಪೂರ್ಣಿಮೆಯ ದಿನ ಬೋಧಿಸತ್ವನ ಸ್ಮರಣೆ

2153
0
SHARE

ಕೋಟ್ಯಂತರ ವರ್ಷಗಳ ಹಿಂದೆ ನಮ್ಮ ಈ ಜಂಬೂದ್ವೀಪದಲ್ಲಿ (ಭಾರತ) ಅಂದಿನ ಸಮ್ಮಾಸಂಬುದ್ಧನಾಗಿದ್ದ ದೀಪಂಕರ ಬುದ್ಧನಿಂದ ಮುಂದೊಮ್ಮೆ ಬುದ್ಧನಾಗಿ ಹುಟ್ಟು ಎಂಬ ಆಶೀರ್ವಾದ ಪಡೆದ ಸುಮೇದ ಪಂಡಿತ ತನ್ನ ಸುದೀರ್ಘ‌ ಪಯಣವನ್ನು ಪ್ರಾರಂಭಿಸುತ್ತಾನೆ. ಸುಮೇದ ಪಂಡಿತ ತನ್ನೊಬ್ಬನ ಬಗ್ಗೆ ಮಾತ್ರ ಚಿಂತಿಸಿದ್ದರೆ ಆಗಲೇ ದೀಪಂಕರ ಬುದ್ಧನಿಂದ ಉಪದೇಶ ಪಡೆದು ನಿಬ್ಟಾನವನ್ನು ಹೊಂದಬಹುದಿತ್ತು. ಆದರೆ ಸಕಲ ಜೀವರಾಶಿಗಳ ಮೇಲೆ ಅನುಪಮ ಕರುಣೆಯಿಂದ, ಸಮ್ಮಾಸಂಬುದ್ಧನಾಗುವ ದೃಢಸಂಕಲ್ಪದಿಂದ ಪ್ರತಿಜನ್ಮದಲ್ಲೂ, ಕೆಲವೊಮ್ಮೆ ಸಾಮಾನ್ಯರು ಊಹಿಸಲಾರದಂತಹ ಪರಿಸ್ಥಿತಿ ಎದುರಿಸಿ ತನ್ನ ಪಯಣ ಮುಂದುವರಿಸಿ ಕೊನೆಗೆ ತನ್ನಗುರಿ ಮುಟ್ಟಿ ಗೌತಮ ಬುದ್ಧನಾಗುತ್ತಾನೆ.

ಬೋಧಿಸತ್ವನ ಅಸಾಮಾನ್ಯ ಮೈತ್ರಿ ಭಾವನೆ, ಕಳಕಳಿ, ಸತ್ಯವಾಕ್ಯ ಪರಿಪಾಲನೆಗಾಗಿ ಅವನು ಮಾಡುವ ಹೋರಾಟ, ಆಗರ್ಭ ಶ್ರೀಮಂತಿಕೆ ಬಂದಾಗಲೆಲ್ಲಾ ಅವನಲ್ಲುಂಟಾಗುವ ವೈರಾಗ್ಯ, ಕ್ರೂರಪ್ರಾಣಿಯ ಹಸಿವನ್ನು ನೀಗಿಸಲು ತನ್ನ ದೇಹವನ್ನೇ ದಾನ ಮಾಡುವ ವೈಖರಿ, ಕ್ಷಮಾಪಾರಮಿಯನ್ನು ಪರಿಪೂರ್ಣಗೊಳಿಸಲು ವಿನಾಕಾರಣ ತನ್ನ ದೇಹದ ಮೇಲಾಗುವ ಚಿತ್ರಹಿಂಸೆಯನ್ನು ಸಹಿಸಿಕೊಳ್ಳುವ ಪರಿ, ಶೀಲದ ಪಾರಮ್ಯಕ್ಕೋಸ್ಕರ ತನ್ನ ಜೀವವನ್ನೇ ಪಣಕ್ಕಿಡುವ ವೈಭವ, ತನ್ನಿಂದ ಜೀವದಾನ ಪಡೆದವರು ತನ್ನ ಮೇಲೆ ಮಾಡುವ ಅನ್ಯಾಯವನ್ನು ಉಪೇಕ್ಷಾ ಭಾವನೆಯಿಂದ ತಡೆದು ಕೊಳ್ಳುವ ವಿಧಾನ, ಪ್ರಜ್ಞಾ ಪಾರಮಿಯ ಪರಾಕಾಷ್ಟೆಯನ್ನು ತಲುಪುವ ಶಕ್ತಿ, ಎಂತಹ ಪ್ರತಿಕೂಲ ಸಂದರ್ಭದಲ್ಲೂ ಪ್ರಯತ್ನಶೀಲತೆ ಮುಂದುವರಿಸುವ ಇಚ್ಛಾಶಕ್ತಿ, ಅಂತಿಮಸತ್ಯವನ್ನು ತಿಳಿಯಲು ತನ್ನ ಮೇಲಾಗುವ ಎಲ್ಲ ತರಹದ ಅಮಾನವೀಯ ದೌರ್ಜನ್ಯಗಳನ್ನು ಸಹನೆಯಿಂದ ಎದುರಿಸುವ ದೃಢಸಂಕಲ್ಪ ಇವೆಲ್ಲವುಗಳ ನೈಜ ವಿವರಣೆ ಭಗವಾನ್‌ ಬುದ್ಧನಿಂದ ವಿವರಿಸಲ್ಪಟ್ಟ ಜಾತಕ ಕಥೆಗಳಲ್ಲಿ ಮಾತ್ರ ಲಭ್ಯ. ಆದುದರಿಂದ ಈ ಜಾತಕ ಕಥೆಗಳಲ್ಲಿ ಕೆಲವನ್ನಾದರೂ ನಾವು ತಿಳಿದುಕೊಳ್ಳಬೇಕು.

ಖಂತಿವಾದಿ ಜಾತಕ
ಬುದ್ಧನು ಜೇತವನದಲ್ಲಿ ವಿಹಾರ ಮಾಡುತ್ತಿರುವಾಗ ಒಬ್ಬ ಕೋಪಿಷ್ಠ ಬಿಕ್ಕುವನ್ನು ಉದ್ದೇಶಿಸಿ ಹೇಳುತ್ತ ‘ಬಿಕ್ಕುವೇ, ನೀನು ಸರ್ವಶಾಂತನಾದ ಬುದ್ಧನ ಸನ್ಯಾಸ ಮಾರ್ಗದಲ್ಲಿದ್ದರೂ ಕೂಡ ಏಕೆ ಕೋಪಗೊಳ್ಳುತ್ತಿರುವೆ? ಹಿಂದೆ ಬೋಧಿಸತ್ವನು ತನ್ನ ಕಿವಿ, ಮೂಗು, ಕೈಕಾಲುಗಳನ್ನು ಕಡಿದು ಹೊಟ್ಟೆಗೆ ಖಡ್ಗದಿಂದ ಇರಿದು ತಿರುಗಿಸಿ, ಎದೆಗೆ ಒದ್ದು ಪ್ರಾಣಹರಣ ಮಾಡಿದಾಗಲೂ ಆ ಕ್ರೂರಿ ರಾಜನ ಮೇಲೆ ಸಿಟ್ಟುಗೊಳ್ಳಲಿಲ್ಲ’ ಎಂದು ಖಂತಿವಾದಿ ಜಾತಕವನ್ನು ವಿವರಿಸುತ್ತಾನೆ.

ಹಿಂದಿನ ಕಾಲದಲ್ಲಿ ಆಗರ್ಭ ಶ್ರೀಮಂತನಾಗಿದ್ದ ಬೋಧಿಸತ್ವನು ಕೊನೆಗೆ ಸಂಸಾರದಲ್ಲಿ ವೈರಾಗ್ಯ ತಾಳಿ ಸರ್ವ ಸಂಪತ್ತನ್ನು ದಾನ ಮಾಡಿ ಕಾಡಿಗೆ ತೆರಳಿ ಒಂದು ಮರದಡಿ ಧ್ಯಾನಾಸಕ್ತನಾಗಿ ಕುಳಿತನು. ತನ್ನ ಈ ಜನ್ಮದಲ್ಲಿ ದಶಪಾರಮಿಗಳಲ್ಲಿ ಒಂದಾದ ಖಂತಿ ಅಥವಾ ಕ್ಷಮೆಯನ್ನು ಪರಿಪೂರ್ಣಗೊಳಿಸಲು ದೃಢಸಂಕಲ್ಪ ತೊಟ್ಟು ತಪಸ್ಸನ್ನು ಆಚರಿಸುತ್ತಿದ್ದನು. ಅಲ್ಲಿನ ಕಲಾಬು ಎಂಬ ರಾಜ ಕ್ರೂರಿ, ಪ್ರಜಾಹಿಂಸಕ, ಕೋಪಿಷ್ಟ ಆಗಿದ್ದ. ಒಂದು ದಿನ ಕುಡಿದು ಮತ್ತನಾಗಿ ಅರಣ್ಯ ಪ್ರದೇಶಕ್ಕೆ ಆಗಮಿಸಿದನು. ನರ್ತಕಿಯರು ನರ್ತಿಸುತ್ತಿದ್ದರು. ಅಮಲಿನಿಂದ ರಾಜ ಅಲ್ಲೇ ನಿದ್ರಿಸಿದ. ನರ್ತಕಿಯರು ನರ್ತನ ನಿಲ್ಲಿಸಿ ಅನತಿ ದೂರದಲ್ಲಿದ್ದ ಬೋಧಿಸತ್ವನ ಶಾಂತ ನಿಲುವನ್ನು ನೋಡುತ್ತಿದ್ದಂತೆ ಆಯಾಸಗೊಂಡ ನರ್ತಕಿಯರಿಗೆ ಮರುಭೂಮಿಯಲ್ಲಿ ನೀರು ಕಂಡಷ್ಟು ಆನಂದವಾಯಿತು. ಒತ್ತಾಯಪಡಿಸಿ ಧಮ್ಮೋಪದೇಶವನ್ನು ಕೇಳಿದರು. ಬೋಧಿಸತ್ವನು ಕ್ಷಮೆ, ತಾಳ್ಮೆಗಿಂತ ಮಿಗಿಲಾದ ಗುಣ ಬೇರೊಂದಿಲ್ಲವೆಂದೂ ಆದರೆ ತಾನು ಕ್ಷಮಾಪಾರಮಿಯನ್ನು ಪರಿಪೂರ್ಣಗೊಳಿಸಲು ತಪಸ್ಸನ್ನು ಆಚರಿಸುತ್ತಿರುವೆನೆಂದೂ ಹೇಳಿದ. ಎಚ್ಚೆತ್ತ ರಾಜ ಬೋಧಿಸತ್ವನ ಮೇಲೇರಿ ಹೋಗುತ್ತಾನೆ. ಬೋಧಿಸತ್ವನು ಶಾಂತನಾಗಿ ತಾನಾಗಿ ನರ್ತಕಿಯರನ್ನು ಕರೆದಿಲ್ಲವೆಂದೂ, ಅವರು ಏನಾದರೂ ಉಪದೇಶ ಮಾಡಿರೆಂದು ಒತ್ತಾಯಿಸಿದಾಗ ತನಗೆ ಹೆಚ್ಚೇನೂ ತಿಳಿದಿಲ್ಲವೆಂದು ಹೇಳಿದೆನಷ್ಟೆ ಎಂದು ನಿರ್ಲಿಪ್ತತೆಯಿಂದ ಹೇಳುತ್ತಾನೆ. ರಾಜ ಬೋಧಿಸತ್ವನ ಕಿವಿಗಳನ್ನು ತುಂಡರಿಸಿ ಚೆಲ್ಲುತ್ತಾನೆ. ಬೋಧಿಸತ್ವನಲ್ಲಿ ಯಾವ ಬದಲಾವಣೆಯಾಗಲಿಲ್ಲ. ಮೂಗನ್ನು ಕತ್ತರಿಸಿದ. ಬೋಧಿಸತ್ವನು ಪುನಃ ಕ್ಷಮಾಗುಣಕ್ಕಿಂತ ಮಿಗಿಲಾದದ್ದು ಬೇರೊಂದಿಲ್ಲವೆಂದೂ, ಆದರೆ ತಾನಿನ್ನೂ ಅದನ್ನು ಪರಿಪೂರ್ಣಗೊಳಿಸಿಲ್ಲವೆಂದೂ ಹೇಳಿದ. ಮತ್ತೆ ಎರಡೂ ಕೈಗಳನ್ನು ತುಂಡರಿಸಿದ. ‘ನೀನು ಈ ದಾರಿಯಾಗಿ ಬರದಿದ್ದರೆ ನನ್ನ ಕ್ಷಮಾಗುಣವನ್ನು ಪರಿಪೂರ್ಣಗೊಳಿಸಲು ನನ್ನಿಂದ ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ನೀನೇ ನನ್ನ ಸರ್ವಶ್ರೇಷ್ಠ ಗುರು. ಸಾಯುವಾಗಲೂ ನಿನ್ನನ್ನು ಕ್ಷಮಿಸಬೇಕು. ಇದಕ್ಕೆ ನಿನ್ನ ಸಹಕಾರ ಅತೀ ಅಗತ್ಯ’ ಎಂದು ಬೋಧಿಸತ್ವನು ಹೇಳಿದ. ಮತ್ತೆ ಹಿಂಸಿಸಿದಾಗ ಆಗಲೇ ಕ್ಷಮಾಪಾರಮಿಯನ್ನು ಪೂರ್ಣಗೊಳಿಸಿ ಮರಣ ಹೊಂದಿದ. ಈ ಅಮಾನುಷ ಕೃತ್ಯವನ್ನು ಸಹಿಸಲಾರದೆ ಭೂಕಂಪನ ಉಂಟಾಗಿ ಬೆಂಕಿಯ ಜ್ವಾಲೆಯು ರಾಜನನ್ನು ಸೆಳೆದುಕೊಳ್ಳುತ್ತದೆ.

ಭಗವಾನ್‌ ಬುದ್ಧನು ಈ ಜಾತಕ ಕತೆ ಪೂರ್ಣಗೊಳಿಸುತ್ತಿದ್ದಂತೆ ಕೋಪಿಷ್ಟ ಬಿಕ್ಕುವು ಜ್ಞಾನೋದಯದ ಪ್ರಥಮ ಹಂತವಾದ ಸೋತಾಪತ್ತಿ ಫ‌ಲವನ್ನು ಹೊಂದುತ್ತಾನೆ.

ಡಾ| ಎಂ. ವಿಜಯಭಾನು ಶೆಟ್ಟಿ, ಮಣಿಪಾಲ.

LEAVE A REPLY

Please enter your comment!
Please enter your name here