Home ಧಾರ್ಮಿಕ ಸುದ್ದಿ ಸತ್ಪಥದಲ್ಲಿ ನಡೆದುಕೊಳ್ಳುವುದೇ ಧರ್ಮ: ಶಿವಸುಜ್ಞಾನಶ್ರೀ

ಸತ್ಪಥದಲ್ಲಿ ನಡೆದುಕೊಳ್ಳುವುದೇ ಧರ್ಮ: ಶಿವಸುಜ್ಞಾನಶ್ರೀ

ಕಜ್ಕೆ ಶಾಖಾ ಮಠ ಉದ್ಘಾಟನೆ

1153
0
SHARE

ಬ್ರಹ್ಮಾವರ: ಬದುಕಿನಲ್ಲಿ ಭಗವಂತನನ್ನು ಬಿಟ್ಟು ನನ್ನದೇನು ಇಲ್ಲವೆಂದು ಸತ್ಪಥದಲ್ಲಿ ನಡೆದುಕೊಳ್ಳುವುದೇ ಧರ್ಮ. ಧರ್ಮವನ್ನು ನಿರಂತರ ಅನು ಸರಿಸುವುದರಿಂದ ಎಲ್ಲರೂ ಶಾಂತಿ, ನೆಮ್ಮದಿಯಿಂದ ಇರಲು ಸಾಧ್ಯ ಎಂದು ವಿಶ್ವಕರ್ಮ ಜಗದ್ಗುರು ಪೀಠ ಹಾಸನ ಅರೇಮಾದನಹಳ್ಳಿ ವಿಶ್ವಬ್ರಾಹ್ಮಣ ಮಹಾ ಸಂಸ್ಥಾನದ ಪೀಠಾಧಿಪತಿ ಶಿವಸುಜ್ಞಾನ ತೀರ್ಥ ಸ್ವಾಮೀಜಿ ಹೇಳಿದರು.

ಅವರು ಕಜ್ಕೆಯಲ್ಲಿ ನಿರ್ಮಿಸಿರುವ ಸಂಸ್ಥಾನದ ಶಾಖಾ ಮಠವನ್ನು ಉದ್ಘಾಟಿಸಿ ಮಾತನಾಡಿದರು. ಐದು ವರ್ಷದ ಹಿಂದೆ ಕಜ್ಕೆಯ ಜಾಗಕ್ಕೆ ಪಾದಸ್ಪರ್ಶ ಮಾಡುವಾಗ ಈ ಜಾಗವನ್ನು ಹಾಡಿಮನೆ ಎಂದು ಕರೆಯುತ್ತಿದ್ದರು. ಇಂದು ಹಾಡಿಹಾಡಿ ಭಗವಂತನ ಭಜಿಸುವ ಕ್ಷೇತ್ರವಾಗಿ ಸಂಭ್ರಮಕ್ಕೆ ಚಾಲನೆ ದೊರೆತಿದೆ ಎಂದರು. ಎಲ್ಲರ ದೊಡ್ಡ ಮನಸ್ಸು ಹಾಗೂ ಶೃಂಗೇರಿ ಶಂಕರಾಚಾರ್ಯರು ಮತ್ತು ಉಡುಪಿ ಶ್ರೀಕೃಷ್ಣನ ಅನುಗ್ರಹದಿಂದ ಸಾಧ್ಯವಾಗಿದೆ. ಅತೀ ಶೀಘ್ರವಾಗಿ ಅನ್ನಪೂರ್ಣೇಶ್ವರಿಯ ಕ್ಷೇತ್ರ ನಿರ್ಮಾಣಗೊಂಡು ಜಗದ್ವಿಖ್ಯಾತ ವಾಗಲಿದೆ ಎಂದರು.

ವಿಶ್ವಕ್ಕೆ ವಿಶ್ವಕರ್ಮರ ಕೊಡುಗೆ ದೊಡ್ಡದಿದೆ, ರಾಜಕೀಯವಾಗಿಯೂ ವಿಶ್ವಕರ್ಮರಿಗೆ ಅವಕಾಶಗಳು ದೊರೆಯಬೇಕಿದೆ, ಪರಿಪೂರ್ಣ ವ್ಯಕ್ತಿತ್ವದ ಅದ್ಬುತ ಶಕ್ತಿ ಶಿವಸುಜ್ಞಾನ ತೀರ್ಥ ಮಹಾ ಸ್ವಾಮೀಜಿ ಮೂಲಕ ಕಜ್ಕೆ ಕ್ಷೇತ್ರ ರಾಜ್ಯದ ಅತ್ಯುನ್ನತ ಕ್ಷೇತ್ರವಾಗಿ ಮುಂದೆ ಮೂಡಿ ಬರಲಿದೆ ಎಂದು ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ ಹೇಳಿದರು.

ಶಿವಸುಜ್ಞಾನ ಸ್ವಾಮೀಜಿ ವಿಶ್ವಕರ್ಮರಿಗೆ ಸೀಮಿತವಲ್ಲ, ಅವರು ಸಮಸ್ತ ಹಿಂದೂ ಸಮಾಜ ಮತ್ತು ಭವ್ಯಭಾರತದ ಚೈತನ್ಯ ಎಂದು ಹರಿದಾಸ ಬಿ.ಸಿ. ರಾವ್‌ ಶಿವಪುರ ಹೇಳಿದರು. ನಾವು ನಮ್ಮ ಮಕ್ಕಳನ್ನು ಮನುಷ್ಯರನ್ನಾಗಿ ಬೆಳೆಸಿ ಸಮಾಜಕ್ಕೆ ಅರ್ಪಣೆ ಮಾಡಬೇಕಿದೆ ಎಂದರು.

ಮಠಕ್ಕೆ ಸ್ಥಳವನ್ನು ದಾನ ಮಾಡಿದ ಕಜ್ಕೆ ಕೃಷ್ಣಯ್ಯ ಶೆಟ್ಟಿ ಮತ್ತು ಶ್ರೀಧರ ಕಾಮತ್‌ ಹಾಗೂ ಮಿಯ್ನಾರು ನರಸಿಂಹ ಆಚಾರ್ಯ ಅವರನ್ನು ಸ್ವಾಮೀಜಿ ಗೌರವಿಸಿದರು. ಕೊಡುಗೆ ನೀಡಿದ ಗಣ್ಯರನ್ನು, ಜಿಲ್ಲೆಯ ವಿಶ್ವಕರ್ಮ ಸಮುದಾಯದ ಸಂಘ ಸಂಸ್ಥೆಗಳ ಅಧ್ಯಕ್ಷರು, ಪ್ರಮುಖರನ್ನು ಗೌರವಿಸಲಾಯಿತು.

ಚಾತುರ್ಮಾಸ್ಯ ವ್ರತ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾಘವೇಂದ್ರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ನಾಲ್ಕೂರು ಗ್ರಾ.ಪಂ. ಅಧ್ಯಕ್ಷೆ ಲೀಲಾವತಿ ಪೂಜಾರಿ, ಮಾಜಿ ಅಧ್ಯಕ್ಷ ಸಂತೋಷ ಹೆಗ್ಡೆ ಮಾರಾಳಿ, ಉದ್ಯಮಿ ಕಾಶೀನಾಥ ಶೆಣೈ, ಬಾರ್ಕೂರು ಶ್ರೀನಿವಾಸ ಶೆಟ್ಟಿಗಾರ್‌, ನಿವೃತ್ತ ಶಿಕ್ಷಕ ಕಜ್ಕೆ ಕರುಣಾಕರ ಶೆಟ್ಟಿ, ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ಹರೀಶ್‌, ಕೊಕ್ಕರ್ಣೆ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷ ಗಣಪ ಪೂಜಾರಿ, ವಿಶ್ವಕರ್ಮ ಸಮಾಜದ ಪ್ರಮುಖರಾದ ಯುಕೆಎಸ್‌ ಸೀತಾರಾಮ ಆಚಾರ್‌, ಕಾರ್ಕಳ ಪ್ರಕಾಶ ಆಚಾರ್‌, ಎಂ.ಎಸ್‌.ಗೋಪಾಲಕೃಷ್ಣ ಆಚಾರ್‌, ಸಂಜೀವ ಆಚಾರ್ಯ, ದೇವಸ್ಥಾನದ ಆಡಳಿತ ಮೋಕ್ತೇಸರರಾದ ಕಾರ್ಕಳದ ರತ್ನಾಕರ ಆಚಾರ್ಯ, ಕಟಪಾಡಿಯ ನವೀನ ಆಚಾರ್ಯ, ಗೋಕರ್ಣದ ಮಧುಕರ ಚಂದ್ರಶೇಖರ ಆಚಾರ್ಯ, ಕಾಪುವಿನ ಭಾಸ್ಕರ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.

ಕಜ್ಕೆ ಶಾಖಾ ಮಠ ನಿರ್ಮಾಣ ಸಮಿತಿಯ ಅಧ್ಯಕ್ಷ ಅಲೆವೂರು ಯೋಗೀಶ ಆಚಾರ್ಯ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಚಿತ್ತೂರು ಪ್ರಭಾಕರ ಆಚಾರ್ಯ ಪ್ರಸ್ತಾವನೆಗೈದರು. ಪುರೋಹಿತ್‌ ದಾಮೋಧರ ಶರ್ಮ ನಿರೂಪಿಸಿ, ರವಿಚಂದ್ರ ಆಚಾರ್ಯ ಮಾರಾಳಿ ವಂದಿಸಿದರು. ಇದಕ್ಕೂ ಮೊದಲು ಕಾಡೂರಿನಿಂದ ಹೊರೆಕಾಣಿಕೆ ಮೆರವಣಿಗೆ ಪ್ರಾರಂಭಗೊಂಡು ಶಾಖಾ ಮಠ ತಲುಪಿತು.

LEAVE A REPLY

Please enter your comment!
Please enter your name here