ಕೊಲ್ಲೂರು: ಕಳೆದ 3 ದಿನಗಳಿಂದ ಅವ್ಯಾಹತವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಕುಂದಾಪುರ ಹಾಗೂ ಉಡುಪಿ ತಾಲೂಕಿನ ಮಾರಣ ಕಟ್ಟೆಯ ಶ್ರೀ ಬ್ರಹ್ಮ ಲಿಂಗೇಶ್ವರ ದೇವಸ್ಥಾನವು ಸಂಪೂರ್ಣ ಜಲಾವೃತಗೊಂಡಿದೆ. ಮಾರಣಕಟ್ಟೆಯ ಬ್ರಹ್ಮಕುಂಡ ನದಿ ಉಕ್ಕಿ ಹರಿಯುತ್ತಿದ್ದು, ಅದರ ಉಪನದಿಯಾದ ಚಕ್ರಾ ನದಿಯು ಅಪಾಯ ಮಟ್ಟದಿಂದ ಮೇಲೆ ಹರಿದು ಬಂದಿರುವುದರಿಂದ ಮಾರಣಕಟ್ಟೆಯ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ, ದೇಗುಲದ ಭೋಜನ ಶಾಲೆ ಸಹಿತ ಬಲಪಾರ್ಶ್ವ ಸಂಪೂರ್ಣ ಜಲಾಮಯವಾಗಿದೆ. ಇಲ್ಲಿಗೆ ಆಗಮಿಸಿದ ಭಕ್ತರು ತೊಯ್ದ ಬಟ್ಟೆಯಲ್ಲಿ ದೇವರ ದರ್ಶನ ಮಾಡಬೇಕಾಯಿತು. ಚಿತ್ತೂರು, ಹೊಸೂರು, ವಂಡ್ಸೆ, ಇಡೂರು, ನೂಜಾಡಿ, ಕುಂದಬಾರಂದಾಡಿ, ಜಾಡಿ ಪರಿಸರದಲ್ಲಿನ ಅನೇಕ ಕೃಷಿಭೂಮಿ ಸಂಪೂರ್ಣ ಜಲಾವೃತಗೊಂಡಿದ್ದು ಕೃಷಿ
ಬೆಳೆ ನಾಶವಾಗಿದೆ. ವಂಡ್ಸೆ ಪರಿಸರದಲ್ಲಿ ಈ ಭಾಗದ ಚರಿತ್ರೆಯಲ್ಲೇ ಮೊದಲು ಎಂಬಂತೆ ಕಳೆದ 3 ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಕೊಲ್ಲೂರಿನಲ್ಲಿ ಭಾರೀ ಮಳೆ : ಕೊಲ್ಲೂರು ಪರಿಸರದಲ್ಲಿ ಎಡಬಿಡದೆ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ರೈತರು ಆತಂಕಕ್ಕೊಳಗಾಗಿದ್ದಾರೆ. ಹಾಲ್ಕಲ್, ಜಡ್ಕಲ್, ಮುದೂರಿನಲ್ಲಿ ಮಳೆಯಾಗಿದ್ದು ಯಾವುದೇ ಅನಾಹುತದ ಬಗ್ಗೆ ವರದಿಯಾಗಿಲ್ಲ.