ಬೈಲೂರು: ಬೈಲೂರು ಬಿಲ್ಲವ ಸಂಘದ ನೂತನ ಗುರು ಮಂದಿರ ಮತ್ತು ಬ್ರಹ್ಮಶ್ರೀ ನಾರಾಯಣ ಗುರುಗಳ ಬಿಂಬ ಪುನರ್ ಪ್ರತಿಷ್ಠಾ ಕಾರ್ಯಕ್ರಮವು ಜ.26-27ರಂದು ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಜ. 26ರಂದು ಸಂಜೆ 3 ಗಂಟೆಯಿಂದ ಬೈಲೂರು ಮಾರಿಯಮ್ಮ ದೇವಸ್ಥಾನದಿಂದ ಗುರುಮಂದಿರದವರೆಗೆ ನಾರಾಯಣ ಗುರುಗಳ ಭಾವಚಿತ್ರದೊಂದಿಗೆ ವಿಶೇಷ ಆಕರ್ಷಣೆ ಕುಂಭ ಕಲಶಗಳೊಂದಿಗೆ ಆಕರ್ಷಕ ಸ್ತಬ್ಧಚಿತ್ರ, ಕೀಲು ಕುದುರೆ, ನಾಸಿಕ್ ಬ್ಯಾಂಡ್, ಹುಲಿ ವೇಷ ಹಾಗೂ ಭಜನ ತಂಡಗಳು, ಕೇರಳ ಚೆಂಡೆಯೊಂದಿಗೆ ಭವ್ಯ ಮೆರವಣಿಗೆ ನಡೆಯಲಿದೆ.
ಅಂತಾರಾಷ್ಟ್ರೀಯ ವೈಟ್ಲಿಫ್ಟರ್ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಅಕ್ಷತಾ ಪೂಜಾರಿ ಬೋಳ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಸಂಜೆ 6.05ರಿಂದ ಪ್ರತಿಷ್ಠಾ ಕಾರ್ಯಕ್ರಮದ ಪ್ರಯುಕ್ತ ವಿಶೇಷ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ.ೆ. 6.30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಶಾಸಕ ವಿ. ಸುನಿಲ್ ಕುಮಾರ್ ಸಭಾ ಅಧ್ಯಕ್ಷತೆ ವಹಿಸಲಿದ್ದಾರೆ. ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಹಾಗೂ ವಿವಿಧ ಗಣ್ಯರು ಸಭೆಯಲ್ಲಿ ಉಪಸ್ಥಿತರಿರುವರು.
ಅನಂತರ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಜನನಿ ಕಲಾವಿದರು ಪದವು ಇವರಿಂದ ವಿಲಾಸ್ ಕುಮಾರ್ ನಿಟ್ಟೆ ವಿರಚಿತ ‘ಪನಂದೆ ಪೋಯೆರ್’ ನಾಟಕ ಪ್ರದರ್ಶನಗೊಳ್ಳಲಿದೆ.
ಜ. 27ರಂದು ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಗಣಪತಿ ಪೂಜೆ, ಮಂಡಲ ಪೂಜೆ, ಕುಂಭ ಸ್ಥಾಪನೆ, ಕುಂಭ ಪೂಜೆ, ಶಿಖರ ಪ್ರತಿಷ್ಠೆ, ಬ್ರಹ್ಮಶ್ರೀ ನಾರಾಯಣ ಗುರುಗಳ ಮೂರ್ತಿ ಪ್ರತಿಷ್ಠೆ, ಪ್ರತಿಷ್ಠಾ ಹೋಮ, ಕಲಶ ಪ್ರೋಕ್ಷಣೆ, ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ.
ಅನಂತರ ಧಾರ್ಮಿಕ ಸಭೆ, ದಾನಿಗಳಿಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದ್ದು, ಸಭೆಯನ್ನು ಕನ್ನಡ ಸಂಸ್ಕೃತಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಡಾ| ಜಯಮಾಲಾ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಹೊಸ್ಮಾರು ಗುರುಕೃಪಾ ಸೇವಾಶ್ರಮದ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಆಶೀರ್ವಚನಗೈಯಲಿದ್ದಾರೆ. ವಿಧಾನ ಪರಿಷತ್ ವಿಪಕ್ಷ ನಾಯಕ ಶ್ರೀನಿವಾಸ ಪೂಜಾರಿ, ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್, ವಿನಯ ಕುಮಾರ್ ಸೊರಕೆ ಮತ್ತಿತರರು ಧಾರ್ಮಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಮಧ್ಯಾಹ್ನ 1 ರಿಂದ ಅನ್ನಸಂತರ್ಪಣೆ ಅನಂತರ ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ಯೂತ್ ಬಿಲ್ಲವಾಸ್ ಕಾಂತರಗೋಳಿ ಯರ್ಲಪಾಡಿ ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಅನಂತರ ಸುನಿಲ್ ನೆಲ್ಲಿಗುಡ್ಡೆ ನೇತೃತ್ವದಲ್ಲಿ ಬಲೆ ತೆಲಿಪಾಲೆ ತೆಲಿಕೆದ ಬರ್ಸ (ಹಾಸ್ಯ ಕಾರ್ಯಕ್ರಮ) ನಡೆಯಲಿದೆ.