ಕಾಪು: ಪ್ರತಿಯೋರ್ವರನ್ನೂ ಭಕ್ತಿ ಮಾರ್ಗದತ್ತ ಕೊಂಡೊಯ್ಯುವಲ್ಲಿ ಭಜನೆ ಸಹಕಾರಿ. ಕೈಯಲ್ಲಿ ತಾಳ, ಕಾಲಿನಲ್ಲಿ ನರ್ತನ, ಮನಸ್ಸಿನಲ್ಲಿ ಏಕಾಗ್ರತೆ ಎಂಬ ಮೂರು ಪ್ರಕಾರಗಳ ಸಾನ್ನಿಧ್ಯದೊಂದಿಗೆ ನಡೆಸುವ ಭಜನೆ ಅತ್ಯಂತ ಶ್ರೇಷ್ಠವಾಗಿದೆ ಎಂದು ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ಆಗಮ ಪಂಡಿತ ವೇ| ಮೂ| ಕೇಂಜ ಶ್ರೀಧರ ತಂತ್ರಿ ಹೇಳಿದರು.
ಕುಂಜೂರು ಶ್ರೀ ದುರ್ಗಾ ದೇವಸ್ಥಾನದಲ್ಲಿ ಜರಗಿದ ಶ್ರೀ ದುರ್ಗಾ ಮಿತ್ರವೃಂದದ 11ನೇ ವಾರ್ಷಿಕ ಭಜನ ಮಂಗಲೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕುಂಜೂರು ಶ್ರೀ ದುರ್ಗೆಯ ಸನ್ನಿಧಿಯಲ್ಲಿ ಭಜನೆ ಮೂಲಕ ಆರಂಭಗೊಂಡ ದುರ್ಗಾ ಮಿತ್ರವೃಂದ ದೇವಸ್ಥಾನದ ಉಪಸಂಸ್ಥೆ ರೀತಿ ಕಾರ್ಯನಿರ್ವಹಿಸುತ್ತಿದೆ. ಇದೇ ಮಾದರಿ ಸೇವೆ ನಿರಂತರವಾಗಿ ಮುಂದುವರಿಯಲಿ ಎಂದರು.
ಧಾರ್ಮಿಕ ಉಪನ್ಯಾಸ ನೀಡಿದ ನಿವೃತ್ತ ಶಿಕ್ಷಕ ಪುಂಡಲೀಕ ಮರಾಠೆ ಮಾತನಾಡಿ, ಕಲಿಯುಗದಲ್ಲಿ ಹರಿನಾಮವ ನೆನೆದರೆ ಕುಲಕೋಟಿಗಳ ಉದ್ಧಾರವಾಗುತ್ತದೆ ಎಂಬ ನಂಬಿಕೆಯಿದೆ. ಭಜನ ಮಂಡಳಿಗಳು ಸಂಸ್ಕಾರ ತೆರೆಯುವ ಕೇಂದ್ರಗಳಾಗಿವೆ. ದಿನನಿತ್ಯ ನಡೆಯುವ ನಗರ ಭಜನೆ ಮೂಲಕ ಮನೆ-ಮನಗಳಲ್ಲಿ ಧಾರ್ಮಿಕ ಜಾಗೃತಿ ಮೂಡಿಸಲು ಸಾಧ್ಯ ಎಂದರು. ಜಾನಪದ ವಿದ್ವಾಂಸ ಕೆ. ಎಲ್. ಕುಂಡಂತಾಯ ಅಧ್ಯಕ್ಷತೆ ವಹಿಸಿದ್ದರು.
ಕುಂಜೂರು ಶ್ರೀ ದುರ್ಗಾ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ದೇವರಾಜ್ ರಾವ್ ನಡಿಮನೆ, ಎಲ್ಲೂರು ಶ್ರೀ ವಿಶ್ವೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವೈ. ಪ್ರಫುಲ್ಲ ಶೆಟ್ಟಿ ಎಲ್ಲೂರುಗುತ್ತು, ದಿನೇಶ್ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಭಜನ ಕಾರ್ಯದರ್ಶಿ ಶಂಕರ ಆಚಾರ್ಯ ಉಪಸ್ಥಿತರಿದ್ದರು. ಶ್ರೀ ದುರ್ಗಾ ಮಿತ್ರವೃಂದದ ಅಧ್ಯಕ್ಷ ಸತೀಶ್ ಶೆಟ್ಟಿ ಗುಡ್ಡೆಚ್ಚಿ ಸ್ವಾಗತಿಸಿದರು. ಕಾರ್ಯದರ್ಶಿ ಪ್ರಕಾಶ್ ಆಚಾರ್ಯ ವಂದಿಸಿದರು.