Home ನಂಬಿಕೆ ಸುತ್ತಮುತ್ತ ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ….

ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ….

24468
0
SHARE

ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ |
ಮಾ ಕರ್ಮಫಲಹೇತುರ್ಭೂರ್ಮಾ ತೇ ಸಂಗೋಸ್ತ್ವಕರ್ಮಣಿ ||೪೭||
ಯೋಗಸ್ಥಃ ಕುರು ಕರ್ಮಾಣಿ ಸಂಗಂ ತ್ಯಕ್ತ್ವಾ ಧನಂಜಯ |
ಸಮೋಭೂತ್ವಾ ಸಮತ್ವಂ ಯೋಗ ಉಚ್ಯತೇ ||೪೮||

ಶ್ರೀಮದ್ಭಗವದ್ಗೀತೆಯ ಎರಡನೇ ಅಧ್ಯಾಯ ಸಾಂಖ್ಯಯೋಗದಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಹೇಳುವ ಮಾತಿದು. ಈ ಮಾತಿನ ಮೊದಲ ಭಾಗವನ್ನು ಹೆಚ್ಚಿನವರು ತಿಳಿದಿರುತ್ತಾರೆ ಮತ್ತು ನಾವು ಆಗಾಗ ಕೇಳುತ್ತಲೇ ಇರುತ್ತೇವೆ.

“ನಿನಗೆ ಕರ್ಮ ಮಾಡುವುದರಲ್ಲಿ ಮಾತ್ರ ಅಧಿಕಾರವಿದೆ, ಅದರ ಫಲದಲ್ಲಿ ಇಲ್ಲ. ಆದ್ದರಿಂದ ಮಾಡಿದ ಕೆಲಸಕ್ಕೆ ಪ್ರತಿಫಲಾಪೇಕ್ಷಿಯಾಗಿ ಫಲಕ್ಕೆ ಕಾರಣನೂ ತಾನೆಂದುಕೊಳ್ಳಬೇಡ ಮತ್ತು ಕರ್ಮಮಾಡದೇ ಇರಬೇಕೆಂಬ ಹಂಬಲ ನಿನ್ನಲ್ಲಿ ಉಂಟಾಗದಿರಲಿ (೪೭). ಹಾಗೂ ಗೆಲವು-ಸೋಲುಗಳಿಗೆ ಕುಂದದೆ ಎರಡನ್ನೂ ಸಮಾನಚಿತ್ತದಿಂದ ಸ್ವೀಕರಿಸುತ್ತ ನಿನ್ನ ಕರ್ತವ್ಯಗಳನ್ನು ಮಾಡು. ಈ ಸಮತ್ತ್ವಭಾವವೇ ಯೋಗ ಎಂದು ಕರೆಯಲ್ಪಡುತ್ತದೆ (೪೮)” ಎಂಬುದು ಈ ಶ್ಲೋಕಗಳ ಅರ್ಥ.

ಇಲ್ಲಿ ಕೃಷ್ಣನೆಂಬುವವನು ಅರ್ಜುನನಿಗೆ ಯುದ್ಧಕ್ಕೆ ಅಥವಾ ಸರಿಯಾದ ಕರ್ಮಗಳಿಗೆ ಪ್ರಚೋದಿಸುವ ಶಕ್ತಿಯಷ್ಟೇ ಅಲ್ಲ. ಆತ ನಮ್ಮನ್ನೂ ಸೇರಿಸಿ ಸಕಲ ಜೀವಿಗಳಿಗೆ ಬದುಕನ್ನು ಆಸ್ವಾದಿಸುವ ರೀತಿಯನ್ನು ಹೇಳುವ ಲೋಕೋದ್ಧಾರಕ. ಇಲ್ಲಿ ಅರ್ಜುನನೆಂಬವನು ಸಾಮಾನ್ಯ ನರನ ರೂಪ ಅಂದರೆ ಮನುಷ್ಯನ ರೂಪ. ಯುದ್ಧವೆಂಬುದೇ ಜೀವನ. ಈ ಶ್ಲೋಕಾರ್ಥವನ್ನು ಪ್ರತಿಯೊಬ್ಬರೂ ತಮ್ಮ ಜೀವನಕ್ಕೆ ಅಳವಡಿಸಿಕೊಂಡು ಅದರಂತೆ ನಡೆದರೆ ಸರಳ ಮತ್ತು ಸುಂದರವಾದ ವಿಶ್ವ ನಿರ್ಮಾಣವಾಗುವುದರಲ್ಲಿ ಸಂದೇಹವಿರದು.

ಕಲಿಯುಗದಲ್ಲಿ ಕರ್ಮಫಲಾಪೇಕ್ಷೆಯಿಲ್ಲದೇ ಜೀವಿಸುವವರು ಸಿಗುವುದು ತುಂಬಾ ಕಷ್ಟ. ಆದರೆ ಈ ಫಲಾಪೇಕ್ಷೆಗೂ ಒಂದು ಇತಿ-ಮಿತಿಯನ್ನು ಇಟ್ಟುಕೊಂಡು ಜೀವಿಸಿದರೆ ಮುಕ್ತಿಯ ದಾರಿಯತ್ತ ಸಾಗಬಹುದು. ನಾವು ಒಂದು ಕೆಲಸ ಮಾಡುತ್ತೇವೆಂದಾದರೆ ಅದರಿಂದಾಗುವ ಲಾಭದ ಬಗ್ಗೆ ನಿರೀಕ್ಷೆಯನ್ನಿಟ್ಟುಕೊಂಡೇ ಮಾಡುತ್ತೇವೆ. ಆದರೆ ಪರಿಣಾಮ ಲಾಭವೂ ಆಗಬಹುದು, ಕಡಿಮೆ ಲಾಭವಾಗಬಹುದು ಅಥವಾ ನಷ್ಟವೂ ಆಗಬಹುದು. ಈ ಮೂರನ್ನೂ ಸಮನಾದ ಭಾವದಿಂದ ಸ್ವೀಕರಿಸುವ ಗುಣವನ್ನು ನಾವು ಅಳವಡಿಸಿಕೊಂಡಾಗ ನೆಮ್ಮದಿಯ ಜೀವನ ಸಾಧ್ಯ. ಪ್ರತಿಫಲಾಪೇಕ್ಷೆಯಿಂದಾಗಿಯೇ ನಾವು ಮಾಡಬೇಕಾದ ಕೆಲಸಗಳಿಂದ ಹಿಂದೆ ಸರಿಯಬಾರದು.  ಅಂದರೆ ನನ್ನ ಕೆಲಸಕ್ಕೆ ತಕ್ಕ ಪ್ರತಿಫಲ ಸಿಗಲಿಲ್ಲ ಎಂಬ ಕಾರಣಕ್ಕೆ ಸುಮ್ಮನೆ ಕುಳಿತುಕೊಳ್ಳಲೇಬಾರದು. ಅಂತಹ ಮನಸ್ಥಿತಿಯು ಎಂದಿಗೂ ಬಾರದಿರಲಿ ಎಂದು ಕೃಷ್ಣ ಹೇಳುತ್ತಾನೆ. ಆದರೆ ‘ನಾನು ಏನನ್ನೂ ಮಾಡುವುದಿಲ್ಲ’ ಎಂದುಕೊಂಡಲ್ಲಿಗೆ ನಮ್ಮ ಬದುಕು ಅಲ್ಲಿಯೇ ನಿಂತುಬಿಡುತ್ತದೆ. ಅರ್ಥಾತ್ ನಾವು ಬದುಕಿದ್ದೂ ಸತ್ತಂತೆ.

ಬುವಿಯಲ್ಲಿ ಪ್ರತಿಯೊಬ್ಬರಿಗೂ ಜಯ-ಅಪಜಯ, ಕೀರ್ತಿ-ಅಪಕೀರ್ತಿ, ನೋವು-ನಲಿವು ಇದ್ದದ್ದೇ. ಇವೆಲ್ಲವನ್ನೂ ಅನುಭವಿಸುವ ನಮ್ಮ ಮನಸ್ಸು ಇಲ್ಲಿ ಸ್ಥಿರವಾಗಿರಬೇಕು. ಅಂದರೆ ಗೆಲುವು-ಸೋಲುಗಳಿಗೆ ಸಮನಾದ ಭಾವವನ್ನು ಹೊಂದುವ ಮನಸ್ಥಿತಿ ನಮ್ಮದಾಗಬೇಕು. ಯಾಕೆಂದರೆ ಮನುಷ್ಯನ ಜೀವನದಲ್ಲಿ ಎಲ್ಲವೂ ಕ್ಷಣಿಕ. ಏಳುಬೀಳುಗಳನ್ನು ಲೆಕ್ಕಾಚಾರ ಹಾಕುತ್ತ ಅಲ್ಲಿಯೇ ಸ್ಥಿರವಾಗಿಬಿಟ್ಟರೆ ಬದುಕು ಸಾಗುವುದಾದರೂ ಎಂತು? ಹಾಗಾಗಿ ಪ್ರತಿಫಲವನ್ನು ಸಮಚಿತ್ತದಿಂದ ಸ್ವೀಕರಿಸುವುದನ್ನು ಬೆಳೆಸಿಕೊಳ್ಳಬೇಕು. ಪ್ರತಿಫಲವಿಲ್ಲದೇ ಯಾವುದನ್ನೂ ಮಾಡಲಾಗದು ಎಂಬ ಪರಿಸ್ಥಿತಿಯಿದ್ದರೂ ಕೂಡ ಅದರ ಪ್ರತಿಫಲವನ್ನು ಸಮಚಿತ್ತದಿಂದ ಸ್ವೀಕರಿಸುತ್ತೇನೆಂಬ ನಿರ್ಧಾರಕ್ಕೆ ಬಂದು ಜೀವಿಸಿದರೆ ಎಲ್ಲವೂ ಆನಂದಮಯವೇ. ಈ ಸಮನಾದ ಭಾವದಿಂದ ಸ್ವೀಕರಿಸುವುದನ್ನೇ ಕೃಷ್ಣನು ಯೋಗ ಎನ್ನುತ್ತಾನೆ.  ಈ ಯೋಗದ ಸ್ಥಿತಿಯಲ್ಲಿ ಬದುಕುವಾಗ ನೋವುಗಳೂ ಒಂದೇ; ನಲಿವುಗಳೂ ಒಂದೇ.

ಗೀತಾಸಾರ: ಸರಳವಾದ ಬದುಕಿನ ದಾರಿಗಳು ಗೀತೆಯಲ್ಲಿವೆ. ಪ್ರತಿಫಲಾಪೇಕ್ಷೆಯಿಲ್ಲದೆ ಅವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಮನಸ್ಸನ್ನು ಬೆಳೆಸುವ ಕಾರ್ಯ ಆಗಬೇಕು.

||ಸರಳವಾಗಿ ಯೋಚಿಸಿ-ಸಂಸ್ಕಾರಯುತರಾಗಿ-ಸರಳರಾಗಿ ಜೀವಿಸಿ||

– ವಿಷ್ಣು ಭಟ್ಟ ಹೊಸ್ಮನೆ.

 

LEAVE A REPLY

Please enter your comment!
Please enter your name here