ಬೆಳ್ತಂಗಡಿ: ನಾಡಿನ ಪುಣ್ಯ ಕ್ಷೇತ್ರ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸೋಮವಾರ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಿರುವಂತೆಯೇ ಸಾವಿರಾರು ಮಂದಿ ಭಕ್ತರು ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದರು.
ಮುಂಜಾನೆ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು. ಕ್ಷೇತ್ರದಲ್ಲಿ ನಡೆಯುವ ಎಲ್ಲ ಸೇವೆಗಳು ಇಂದಿನಿಂದ ಆರಂಭವಾಗಿವೆ. ಕ್ಷೇತ್ರದ ಅನ್ನಪೂರ್ಣ ಛತ್ರದಲ್ಲಿ ಭಕ್ತರಿಗೆ ಅಂತರ ಕಾಯ್ದುಕೊಂಡು ಅನ್ನ ಪ್ರಸಾದ ನೀಡಲಾಯಿತು. ನೇತ್ರಾವತಿಯಲ್ಲಿ ಭಕ್ತರಿಗೆ ಪುಣ್ಯ ಸ್ನಾನಕ್ಕೂ ಅವಕಾಶ ನೀಡಲಾಗಿದೆ. ಆದರೆ ಸಾಬೂನು ಹಾಕಿ ಸ್ನಾನಗೈಯ್ಯುವುದು, ಹಲ್ಲು ಉಜ್ಜುವುದು, ಬಟ್ಟೆ ಒಗೆಯುವುದನ್ನು ನಿಷೇಧಿಸಲಾಗಿದೆ. ಶುಚಿತ್ವ ಕಾಪಾಡುವಂತೆ ಸೂಚಿಸಲಾಗಿದೆ.
ಸುರ್ಯ ಸದಾಶಿವ ರುದ್ರ ದೇವಸ್ಥಾನ ನಡ ಗ್ರಾಮದ ಐತಿಹಾಸಿಕ ಮಣ್ಣಿನ ಹರಕೆ ಕ್ಷೇತ್ರ ಸುರ್ಯ ಸದಾಶಿವ ರುದ್ರ ದೇವಸ್ಥಾನದಲ್ಲಿ ಭಕ್ತರಿಗೆ ಸ್ಯಾನಿಟೈಸರ್ ನೀಡಿ ಅಂತರ ಕಾಯ್ದು ದರ್ಶನಕ್ಕೆ ಅವಕಾಶ ನೀಡಲಾಗಿದೆ. ದೇವರಿಗೆ ಭಕ್ತರು ಹೂ, ಫಲವಸ್ತು ನೀಡಿದಲ್ಲಿ ಸ್ವೀಕರಿಸದಂತೆ ಸಿಬಂದಿಗೆ ಸೂಚಿ ಸಲಾಗಿದೆ. ಮಣ್ಣಿನ ಹರಕೆ, ನಿತ್ಯ ಸೇವಾದಿಗಳು ನಡೆಯುತ್ತಿವೆ ಎಂದು ದೇವಸ್ಥಾನಸ ಆನುವಂಶಿಕ ಆಡಳಿತ ಮೊಕ್ತೇಸರ ಸುಭಾಶ್ಚಂದ್ರ ಸುರ್ಯಗುತ್ತು ತಿಳಿಸಿದ್ದಾರೆ.
ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನ
ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಹಣ್ಣು ಕಾಯಿ ಸಹಿತ ದೇವರಿಗೆ ನಿತ್ಯ ಸೇವೆ ನೀಡಲಾಗುತ್ತಿದೆ. ದೇವಸ್ಥಾನ ಸ್ವತ್ಛತೆಗೆ ಆದ್ಯತೆ ನೀಡಲಾಗಿದೆ ಎಂದು ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯ ತಿಳಿಸಿದ್ದಾರೆ.
ದೇಗುಲಗಳಲ್ಲಿ ಭಕ್ತರು ವಿರಳ
ಮುಂಡಾಜೆ: ದೇಗುಲಗಳಲ್ಲಿ ದರ್ಶನಕ್ಕೆ ಅವಕಾಶ ಕೊಟ್ಟರೂ ಸೋಮವಾರ ಮುಂಡಾಜೆ ಆಸುಪಾಸಿನ ದೇವಸ್ಥಾನಗಳಲ್ಲಿ ಭಕ್ತರ ಸಂಖ್ಯೆ ಕಡಿಮೆ ಇತ್ತು. ಮುಂಡಾಜೆ ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನ, ನಿಡಿಗಲ್ ಮಹಾಗಣಪತಿ ದೇವಸ್ಥಾನ, ಚಾರ್ಮಾಡಿ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನ, ಬರಯಕನ್ಯಾಡಿಯ ಲೋಕನಾ ಥೇಶ್ವರ ದೇವಸ್ಥಾನ, ಕಲ್ಮಂಜ ಸದಾಶಿವೇಶ್ವರ ಮೊದಲಾದ ದೇವಸ್ಥಾನಗಳಲ್ಲಿ ಭಕ್ತರು ವಿರಳವಾಗಿದ್ದರು. ಸಂಕಷ್ಟಹರ ಚತುರ್ಥಿಗೆ ದೇವಸ್ಥಾನಗಳಲ್ಲಿ, ರಾತ್ರಿ ಜರಗುತ್ತಿದ್ದ ವಿಶೇಷ ಪೂಜೆಯು ಹೆಚ್ಚಿನ ಕಡೆ ಇರಲಿಲ್ಲ.
ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರ
ದೇವಸ್ಥಾನ ಆರಂಭದಂದೆ ಸೋಮವಾರ ಸಂಕಷ್ಟ ಚತುರ್ಥಿಯಾದ್ದರಿಂದ ಕೊಕ್ಕಡ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಹೆಚ್ಚಿನ ಭಕ್ತರು ಕಂಡುಬಂದರು. ಯಾತ್ರಾರ್ಥಿಗಳು ದೇವರ ದರ್ಶನ ಪಡೆದರು. ಇಲ್ಲೂ ಸರಕಾರದ ಮಾರ್ಗಸೂಚಿಯಂತೆ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಯಿತು. ಉಳಿದಂತೆ ಚಾರ್ಮಾಡಿ ಮತ್ತೂರು ಪಂಚಲಿಂಗೇಶ್ವರ, ಸದಾಶಿವೇಶ್ವರ ದೇವಸ್ಥಾನ ಪಜಿರಡ್ಕ, ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನ, ವೇಣೂರು ಮಹಾಲಿಂಗೇಶ್ವರ, ಶಿಶಿಲ ಶಿಶಿಲೇಶ್ವರ ಸಹಿತ ಬಹುತೇಕ ದೇವಸ್ಥಾನಗಳಲ್ಲಿ ಅಂತರ ಕಾಯ್ದುಕೊಂಡು ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.