ಬೆಳ್ತಂಗಡಿ: ಚತುರ್ವಿಧ ದಾನಕ್ಕಾಗಿ ನಾಡಿನೆಲ್ಲೆಡೆ ಪ್ರಸಿದ್ಧಿ ಪಡೆದ ಶ್ರೀ ಕ್ಷೇತ್ರ ಧರ್ಮ ಸ್ಥಳದ ಧರ್ಮಾಧಿಕಾರಿಗಳಾದ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 52ನೇ ವರ್ಧಂತ್ಯುತ್ಸವು ಅ.24ರಂದು ಜರಗಲಿದೆ.
ಪಟ್ಟಾಭಿಷೇಕ ಪ್ರಯುಕ್ತ ಅ.24ರಂದು ಸಂಜೆ 4 ಗಂಟೆಗೆ ಧರ್ಮಸ್ಥಳ ಶ್ರೀ ಮಹೋತ್ಸವ ಸಭಾಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆ ವಹಿಸುವರು. ಶಾಸಕ ಹರೀಶ್ ಪೂಂಜ ಮತ್ತು ವಿ. ಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಕಂಗೊಳಿಸಲಿದೆ ಧರ್ಮಸ್ಥಳ
ಕ್ಷೇತ್ರದ ದೇವಸ್ಥಾನ, ಬೀಡು, ಬಸದಿ, ಅಮೃತವರ್ಷಿಣಿ ಸಭಾ ಭವನ, ವಸತಿಛತ್ರಗಳು ಅಲಂಕೃತಗೊಳ್ಳಲಿವೆ. ಶ್ರೀ ಮಂಜುನಾಥ ಸ್ವಾಮಿ ದೇಗುಲ, ಚಂದ್ರನಾಥ ಸ್ವಾಮಿ
ಬಸದಿ ಯಲ್ಲಿ ವಿಶೇಷ ಪೂಜೆ ನಡೆಯಲಿದೆ. ನಾಡಿನ ಗಣ್ಯರು, ವಿವಿಧ ಸಂಸ್ಥೆಗಳ ನೌಕರರು, ಭಕ್ತರು, ಅಭಿಮಾನಿಗಳು, ಊರ- ಪರವೂರ ನಾಗರಿಕರು ಡಾ| ಹೆಗ್ಗಡೆಯವರಿಗೆ ಫಲಪುಷ್ಪ ಸಮರ್ಪಿಸಿ, ಗೌರವಿಸುತ್ತಾರೆ. ಧರ್ಮಸ್ಥಳದ ಗ್ರಾಮಸ್ಥರು, ವ್ಯಾಪಾರಸ್ಥರು, ನೌಕರರು ಮತ್ತು ಭಕ್ತರು ಸೇರಿ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಲಿದೆ.
1968ರ ಅ. 24ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ 21ನೇ ಧರ್ಮಾಧಿಕಾರಿಯಾಗಿ ಡಾ| ಹೆಗ್ಗಡೆ ಯವರು ಪಟ್ಟಾಭಿಷಿಕ್ತರಾದರು. ಬಳಿಕ ಶ್ರೀ ಕ್ಷೇತ್ರದ ವತಿ ಯಿಂದ ಹಲವಾರು ಯೋಜನೆಗಳ ಮೂಲಕ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.
ಗ್ರಾಮಾಭಿವೃದ್ಧಿ ಯೋಜನೆ, ಉಚಿತ ಸಾಮೂಹಿಕ ವಿವಾಹ, ಗ್ರಾಮಾಭಿವೃದ್ಧಿ ಮತ್ತು ಸ್ವ-ಉದ್ಯೋಗ ತರಬೇತಿ ಕೇಂದ್ರ, ಆಯುರ್ವೇದ, ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಕ್ಕೆ ಪ್ರೋತ್ಸಾಹ, ಕಲ್ಯಾಣ ಮಂಟಪಗಳು, ಶಾಂತಿವನ ಟ್ರಸ್ಟ್ ಮೂಲಕ ಶಾಲೆಗಳಲ್ಲಿ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಅನುಸಾuನ, ಧರ್ಮೋತ್ಥಾನ ಟ್ರಸ್ಟ್ ಮೂಲಕ ಐತಿಹಾಸಿಕ ದೇವಸ್ಥಾನಗಳು ಮತ್ತು ಸ್ಮಾರಕಗಳ ಜೀರ್ಣೋದ್ಧಾರ ಮತ್ತು ಸಂರಕ್ಷಣೆ ಇತ್ಯಾದಿ ಹತ್ತು – ಹಲವು ಯೋಜನೆಗಳನ್ನು ಡಾ| ಹೆಗ್ಗಡೆಯವರು ಲೋಕ ಕಲ್ಯಾಣಕ್ಕಾಗಿ ಅನುಷ್ಠಾನಗೊಳಿಸಿದ್ದಾರೆ.