ಬೆಳ್ತಂಗಡಿ: ಅಜಿಲ ಸೀಮೆಯ ದೇವರು ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಶಿಲಾಮಯ ದೇಗುಲದ ಶಿಲಾನ್ಯಾಸ ಕಾರ್ಯಕ್ರಮವನ್ನು ಜೂ. 20ರಂದು ಬೆಳಗ್ಗೆ 10.30ಕ್ಕೆ ಶೃಂಗೇರಿಯ ಜಗದ್ಗುರು ಶಂಕರಾಚಾರ್ಯ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ನೆರವೇರಿಸುವರು ಎಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅಳದಂಗಡಿ ಅರಮನೆಯ ತಿಮ್ಮಣ್ಣರಸ ಡಾ| ಪದ್ಮಪ್ರಸಾದ ಅಜಿಲರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಶೃಂಗೇರಿಯ ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳ ಆಶೀರ್ವಾದದೊಂದಿಗೆ, ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಉಪಸ್ಥಿತಿಯಲ್ಲಿ ಶಿಲಾನ್ಯಾಸ ಕಾರ್ಯಕ್ರಮ ಜರಗಲಿದೆ. ಸುಮಾರು 32 ಗ್ರಾಮಗಳಿಗೆ ಒಳಪಡುವ ಅಜಿಲ ಸೀಮೆಯ ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನವನ್ನು 4 ಕೋ. ರೂ. ವೆಚ್ಚದಲ್ಲಿ ಗರ್ಭಗುಡಿ ಸುತ್ತುಪೌಳಿಯನ್ನು ಶಿಲಾಮಯವಾಗಿ ನಿರ್ಮಾಣಗೊಳಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯರಾದ ಕೆ. ಹರೀಶ್ ಕುಮಾರ್, ಭೋಜೇಗೌಡ ಎಸ್.ಎಲ್., ಮಾಜಿ ಶಾಸಕ ವಸಂತ ಬಂಗೇರ, ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಎಂ. ಮೊಹನ ಆಳ್ವ, ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ, ರಘುನಾಥ ಸೋಮಯಾಜಿ, ಮಂಜುನಾಥ ಭಂಡಾರಿ, ಶೆಡ್ಯೆ, ಶ್ರೀಪತಿ ಭಟ್, ರವಿಶಂಕರ್ ಶೆಟ್ಟಿ ಬಡಾಜೆ ಗುತ್ತು ಉಪಸ್ಥಿತರಿರುವರು. ಶಿಲಾನ್ಯಾಸ ಕಾರ್ಯಕ್ರಮದಲ್ಲಿ 5 ಸಾವಿರ ಮಂದಿ ಪಾಲ್ಗೊಳ್ಳಲಿದ್ದು, ಶೃಂಗೇರಿ ಶ್ರೀಗಳನ್ನು ಮುಖ್ಯ ರಸ್ತೆಯಿಂದ ದೇವಸ್ಥಾನದವರೆಗೆ ಪೂರ್ಣಕುಂಭ ಸ್ವಾಗತ ಮೂಲಕ ಮೆರವಣಿಗೆಯಲ್ಲಿ ಕರೆತರಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಪಿ. ಧರಣೇಂದ್ರ ಕುಮಾರ್, ಸೋಮಯ್ಯ ಹನೈನಡೆ, ಸುಂದರ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ವಿ. ಪ್ರಭಾಕರ ಹೆಗ್ಡೆ ಹಟ್ಟಾಜೆಗುತ್ತು, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎ. ಜಯರಾಮ ಶೆಟ್ಟಿ, ಸದಸ್ಯರಾದ ಶಶಿಧರ್ ಶೆಟ್ಟಿ ನಾರಡ್ಕ, ಕಿಶೋರ್ ಭಂಡಾರಿ ಬೊಳ್ಳುರು ಉಪಸ್ಥಿತರಿದ್ದರು.