ಬೆಳ್ತಂಗಡಿ: ತಾಲೂಕಿನಾದ್ಯಂತ ವಿವಿಧ ಗಣೇಶೋತ್ಸವ ಸಮಿತಿಗಳ ವತಿಯಿಂದ ಶ್ರೀ ಗಣೇಶೋತ್ಸವಗಳು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಗಳೊಂದಿಗೆ ನಡೆದಿವೆ. ತಾಲೂಕಿನ ಹಲವೆಡೆ ಪ್ರವಾಹದ ಹಿನ್ನೆಲೆಯಲ್ಲಿ ಕಷ್ಟ-ನಷ್ಟಗಳು ಸಂಭವಿಸಿರುವುದರಿಂದ ಬಹುತೇಕ ಕಡೆ ಸರಳ ರೀತಿಯಲ್ಲಿ ಶ್ರೀ ಗಣೇಶೋತ್ಸವ ಆಚರಿಸಲಾಗಿದೆ.
ಬೆಳ್ತಂಗಡಿ ನಗರದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ ಎರಡು ಕಡೆಗಳಲ್ಲಿ ಶ್ರೀ ಗಣೇಶನ ವಿಗ್ರಹ ಪ್ರತಿಷ್ಠಾಪಿಸಿ, ಶ್ರದ್ಧಾಭಕ್ತಿಯ ಪೂಜಾ ವಿಧಿವಿಧಾನಗಳು ನಡೆದಿವೆ. ಉಜಿರೆಯಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಕುಂಜರ್ಪ ವಠಾರದಲ್ಲಿ ಎರಡು ಕಡೆಗಳಲ್ಲಿ ಶ್ರೀ ಗಣೇಶನ ಆರಾಧನೆ ನಡೆದಿದೆ.
ಹಿಂದೂ ಧಾರ್ಮಿಕ ಸೇವಾ ಸಮಿತಿ ಕನ್ಯಾಡಿ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ನಡ-ಕನ್ಯಾಡಿ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮದ್ದಡ್ಕ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪಡಂಗಡಿ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಗುರುವಾಯನಕೆರೆ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಇಂದಬೆಟ್ಟು, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಮುಂಡಾಜೆ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಲಾೖಲ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಚಾರ್ಮಾಡಿ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಬೆಳಾಲಿನಲ್ಲಿ ಗಣೇಶೋತ್ಸವಗಳು ನಡೆದಿವೆ.
ಉಜಿರೆ ಸಮೀಪದ ಲಾೖಲ ವಿನಾಯಕ ನಗರದಲ್ಲಿ ನೇಕಾರರೇ ವಾಸಿಸುವ ಸುಮಾರು 60 ಕುಟುಂಬಗಳಿದ್ದು, ಪ್ರತಿ ವರ್ಷ ಇಲ್ಲಿನ ಶ್ರೀ ಸಿದ್ಧಿವಿನಾಯಕ ಭಜನ ಮಂದಿರ ಹಾಗೂ ನೇಕಾರರ 21 ಮನೆಯಲ್ಲಿ ವಿಗ್ರಹ ಕೂರಿಸಲಾಗಿದೆ.
ಬೆಳಗ್ಗೆ ಶ್ರೀ ಗಣೇಶನ ವಿಗ್ರಹ ಪ್ರತಿಷ್ಠಾಪನೆಯಿಂದ ರಾತ್ರಿವರೆಗೂ ವಿವಿಧ ಧಾರ್ಮಿಕ ಕಾರ್ಯಗಳು ನಡೆದವು. ಮುಂಡೂರು ಶ್ರೀ ಕ್ಷೇತ್ರ ಮಂಗಳಗಿರಿಯಲ್ಲಿ 108 ತೆಂಗಿನಕಾಯಿ ಗಣಪತಿ ಯಾಗ, ಮೂಡಪ್ಪ ಸೇವೆ ನಡೆಯಿತು. ಜತೆಗೆ ವಿವಿಧ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತರ ಮನಸೂರೆಗೊಂಡವು.
ಬಂಟ್ವಾಳ ಸೆ. 3: ತಾ|ನ ದೇವಸ್ಥಾನಗಳಲ್ಲಿ ಚೌತಿಯ ಅಂಗವಾಗಿ ಗಣಪತಿ ದೇವರ ಆರಾಧನೆ ನಡೆಯಿತು. ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಕ್ಷೇತ್ರ ಮತ್ತು ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದಲ್ಲಿ ಭತ್ತದ ತೆನೆ ವಿತರಣೆ ಹಮ್ಮಿಕೊಳ್ಳಲಾಗಿತ್ತು. ಸಹಸ್ರಾರು ಮಂದಿ ಭತ್ತದ ತೆನೆ ಪಡೆದು ಮನೆ ತುಂಬಿಸಿಕೊಂಡರು.
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಂಭ್ರಮದ ಅಂಗವಾಗಿ ವಿವಿಧ ಕಡೆಗಳಲ್ಲಿ ಶ್ರೀ ಗಣೇಶ ವಿಗ್ರಹ ಪ್ರತಿಷ್ಠೆ, ಸಾರ್ವಜನಿಕ ಕಾರ್ಯಕ್ರಮ, ವಿವಿಧ ಸಾಂಸ್ಕೃತಿಕ ವೈವಿಧ್ಯಗಳಿಗೆ ಸೆ. 2ರಂದು ಚಾಲನೆ ಸಿಕ್ಕಿದೆ.
ಬಿ.ಸಿ. ರೋಡ್, ಜಕ್ರಿಬೆಟ್ಟು, ಫರಂಗಿಪೇಟೆ, ಬಂಟ್ವಾಳ, ಕಲ್ಲಡ್ಕದಲ್ಲಿ ಐದು ಅಡಿ ಎತ್ತರದ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜೆ ನಡೆಸಲಾಗಿದೆ.
ನಾಟಕ, ಬಯಲಾಟ, ತಾಳಮದ್ದಳೆ, ಸಂಗೀತ ರಸಮಂಜರಿ, ಸಾಂಸ್ಕೃತಿಕ ವೈವಿಧ್ಯ ್ನು ಹಮ್ಮಿಕೊಳ್ಳಲಾಗಿದೆ. ಹವನ, ಭಜನೆ, ಸಂಕೀರ್ತನೆ, ಅಪ್ಪದ ಪೂಜೆ, ಕುಂಕುಮಾರ್ಚನೆಗಳು ನೆರವೇರಲಿವೆ.