ಬೆಳ್ತಂಗಡಿ: ಧರ್ಮಸ್ಥಳ ಲಕ್ಷದೀಪೋತ್ಸವದ ಮೊದಲ ದಿನವಾದ ಶುಕ್ರವಾರ ರಾತ್ರಿ ಹೊಸಕಟ್ಟೆ ಉತ್ಸವವು ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ವಿವಿಧ ಪೂಜಾ ವಿಧಿವಿಧಾನದೊಂದಿಗೆ ನಡೆಯಿತು.
ಶ್ರೀ ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆಗಳು, ನೈವೇದ್ಯ ಸಮರ್ಪಣೆ ಸೇರಿದಂತೆ ವಿವಿಧ ಸೇವೆ ಸಲ್ಲಿಸಿ ದೇವರ ಗುಡಿಯೊಳಗೆ ಪಲ್ಲಕ್ಕಿಯನ್ನು ಹೊತ್ತು 16 ಸುತ್ತು ಬಂದ ಬಳಿಕ ಲಾಲಾಕ್ಕಿ ಪಲ್ಲಕ್ಕಿಯಲ್ಲಿ ಸ್ವಾಮಿಯ ಮೂರ್ತಿಯನ್ನು ಕೂರಿಸಿ ಮೆರವಣಿಗೆಯೊಂದಿಗೆ ವಸಂತ ಮಹಲ್ನ ಹೊಸಕಟ್ಟೆಗೆ ಕೊಂಡೊಯ್ಯಲಾಯಿತು.
ಹೊಸಕಟ್ಟೆಯಲ್ಲಿ ಅಷ್ಟಾವಧಾನ ಸೇವೆಯೊಂದಿಗೆ ಪೂಜೆ ನೆರವೇರಿತು. ಬಳಿಕ ಮೆರವಣಿಗೆಯಲ್ಲಿ ದೇಗುಲದ ಆನೆ ಸ್ವಾಮಿಗೆ ಚಾಮರ ಬೀಸಿತು. ಉತ್ಸವದಲ್ಲಿ ಮಿಗೆ ಸಂಗೀತ ಸೇವೆ, ವಾಲಗ, ಕೊಳಲು, ಚೆಂಡೆ, ಶಂಖ ಸೇವೆ, ಗೊಂಬೆಗಳು ಮೆರುಗನ್ನು ನೀಡುವುದರೊಂದಿಗೆ ದೇವಸ್ಥಾನದ ಮುಂಭಾಗಕ್ಕೆ ಕರೆತರಲಾಯಿತು.
ಸಾವಿರಾರು ಭಕ್ತರು ನೆರೆದಿದ್ದರು. ಹೊಸಕಟ್ಟೆ ಉತ್ಸವದಂದು ಭಕ್ತರ ಹರಕೆಯಂತೆ ಬೆಳ್ಳಿ ರಥ ಎಳೆಯುವುದು ವಿಶೇಷವಾಗಿತ್ತು. ಬಳಿಕ ದೇವರ ಮೂರ್ತಿಗೆ ಕೊನೆಯ ಮಂಗಳಾರತಿ ಬೆಳಗಿ ದೇಗುಲದೊಳಗೆ ಕೊಂಡೊಯ್ಯಲಾಯಿತು. ಉತ್ಸವದ ಸಂದರ್ಭದಲ್ಲಿ ದೇಗುಲದಿಂದ ವಸಂತ ಮಹಲ್ನವರೆಗೆ ಭಕ್ತರು ತಮ್ಮ ಇಷ್ಟಾರ್ಥ ನೆರವೇರಿಕೆಗಾಗಿ ಹಣತೆಗಳನ್ನು ಬೆಳಗಿದರು.