ಬೆಳ್ತಂಗಡಿ: ತಾಲೂಕಿನ ಕಡಿರುದ್ಯಾವರ ಮತ್ತು ಚಾರ್ಮಾಡಿ ಗ್ರಾಮಗಳ ಗಡಿಯಂಚಿನಲ್ಲಿ ಅರಣ್ಯದ ಮಧ್ಯಭಾಗದಲ್ಲಿ ದೈವಗಳ ಆರಾಧನೆಯ ಸ್ಥಳ ಬೆಳಕಿಗೆ ಬಂದಿದೆ.
ಜನ ನಿವಾಸದಿಂದ ಒಂದೂವರೆ ಕಿಲೋ ಮೀಟರ್ ದೂರದ ಪ್ರದೇಶ ದಲ್ಲಿ ಚಕ್ರಾಕಾರದ ಸುಮಾರು ಆರು ಅಡಿ ವಾಸದ ಕಾಡುಕಲ್ಲುಗಳಿಂದ ನಿರ್ಮಿಸಿದ ಕೋಣೆಯಂತಹ ರಚನೆ ಪತ್ತೆಯಾಗಿದೆ. ಮಣ್ಣಿನಿಂದ ನಿರ್ಮಿಸಿದ್ದ ಪೀಠದ ಮೇಲೆ ಸುಮಾರು ಆರು ಅಡಿ ಉದ್ದದ, ನಾಲ್ಕು ಅಡಿ ಅಗಲದ ಕಲ್ಲು ಚಪ್ಪಡಿ ಇರಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಧೂಪ ಹಾಕುವ ಮಣ್ಣಿನ ಪಾತ್ರೆಯಾಕಾರದ ಸುಮಾರು 6 ಇಂಚು ಎತ್ತರದ ಒಡೆದ ಭಾಗ ಸಿಕ್ಕಿದೆ. ಆಲಂಕಾರಿಕ ರಚನೆಯಿಂದ ಕೂಡಿರುವ ಪಾತ್ರೆ ಯಾವುದೋ ಆರಾಧನೆಯಲ್ಲಿ ಬಳಸಲ್ಪಡುವ ಪಾತ್ರೆಯ ಭಾಗವಾಗಿರಬೇಕು ಎಂದು ತಿಳಿದುಬಂದಿದೆ.
ಕೆಲವು ತಿಂಗಳಿಗಳ ಹಿಂದೆ ಬುದ್ಧಿ ಭ್ರಮಣೆ ಹೊಂದಿದ್ದ ಮಹಿಳೆ ಯೊಬ್ಬಳು ಅಲ್ಲಿದ್ದ ಹಿತ್ತಾಳೆಯ ಎರಡು ಪಾಪೆಗಳನ್ನು ತಂದು ಊರಲ್ಲೆಲ್ಲ ತೋರಿಸುತ್ತಿದ್ದಳಂತೆ. ಆ ಮನೆಯವರೂ ಇದೇ ರೀತಿ ಅನೇಕ ಸದಸ್ಯರನ್ನು ಕಳೆದುಕೊಂಡು ಮನೆಯು ಬರಿದಾಯಿತು. ಹತ್ತಿರದ ಊರಿನ ಅನೇಕ ಮನೆಗಳಲ್ಲಿ ನಾನಾ ರೋಗಗಳು, ಅಪಸ್ಮಾರ, ಜಗಳ, ರೋಷಾವೇಶಗಳಿಂದಾಗಿ ಪರಸ್ಪರ ಕೊಲೆಗಳು ನಡೆದು ಹೋದವು ಎಂದು ಸ್ಥಳೀಯರು ಹೇಳುತ್ತಾರೆ.
ಕುರುಹು ಪತ್ತೆ
ಈ ಕುರಿತಾಗಿ ಸಂಶೋಧನೆ ಮಾಡಲು ಹೊರಟಾಗ ಕಾಡಿನಲ್ಲಿ ಕುರುಹು ಪತ್ತೆಯಾಗಿದೆ. ಈ ಕುರಿತು ಜೋತಿಷಿಗಳ ಮೊರೆ ಹೋದಾಗ ಇಲ್ಲಿ ಘಟ್ಟದ ಚಾಮುಂಡಿ, ಗುಳಿಗ ಕಲ್ಕುಡ, ಭೈರವ ಇತ್ಯಾದಿ ಏಳು ದೈವಗಳು ಆವಾಸವಾಗಿವೆಯೆಂದು ಹೇಳಿದ್ದಾರೆ. ಆದರೆ ಇಲ್ಲಿ ಸುಮಾರು ಎರಡು ಶತಮಾನಗಳ ಹಿಂದೆ ಮಲೆಕುಡಿಯರಂತಹ ಮೂಲ ನಿವಾಸಿಗಳು ಜಾನಪದೀಯ ರೀತಿ ಯಲ್ಲಿ ದೈವಾರಾಧನೆ ನಡೆಸುತ್ತಿದ್ದರು. ಬಲಿ, ರಕ್ತದಾಹುತಿಯನ್ನು ಕೊಡ ಲಾಗುತ್ತಿತ್ತು ಎನ್ನಲಾಗಿದೆ.
ಕಷ್ಟಗಳ ಪರಿಹಾರಕ್ಕಾಗಿ ಹಾಗೂ ಊರಿನಲ್ಲಿ ಸುಖಶಾಂತಿಗಳು ನೆಲೆಸಲಿಕ್ಕಾಗಿ ಹಿರಿಯರ ಮಾರ್ಗ ದರ್ಶನದಲ್ಲಿ ಊರಿನವರೆಲ್ಲ ಈಗ ಒಟ್ಟಾಗಿದ್ದಾರೆ. ಸ್ಥಳೀಯ ಸಮಾಜ ಸೇವಕಿ ಲೋಕೇಶ್ವರಿ ವಿನಯಚಂದ್ರ ಅವರ ಮುಂದಾಳತ್ವದಲ್ಲಿ ಗ್ರಾಮಸ್ಥರು ಒಟ್ಟು ಸೇರಿ ಮಲ್ಲ ಕುಕ್ಕುದ ಕಾಡ್ ಅಥವಾ ಉಪ್ಪೊಳಿಗೆ ಗುರಿಯೆಂದು ಕರೆಯಲ್ಪಡುತ್ತಿದ್ದ ಕಾಡುಬೆಟ್ಟದ ಮೇಲಿನ ಈ ದೈವಾರಾಧನ ಕೇಂದ್ರವನ್ನು ಮತ್ತೆ ಪುನರ್ ನಿರ್ಮಿಸಲು ಮುಂದಡಿ ಇಟ್ಟಿದ್ದಾರೆ.
•ಡಾ| ವೈ. ಉಮಾನಾಥ ಶೆಣೈ