ಬೆಳ್ಮಣ್ : ಉಡುಪಿ ಜಿಲ್ಲೆಯ ಸೂಡ ಶ್ರೀ ಸುಬ್ರಹ್ಮಣ್ಯ ದೇವರ ಸನ್ನಿಧಿ ಯಲ್ಲಿ ಮಹಾಪೂಜೆ, ಬಲಿಯೊಂದಿಗೆ ಡಿ. 5ರಂದು ಹಗಲು ಮಹಾ ರಥೋತ್ಸವ ಸಂಪನ್ನಗೊಂಡಿತು. ಉಡುಪಿ ಪುತ್ತೂರು ವೇ|ಮೂ| ಶ್ರೀಶ ತಂತ್ರಿಯವರ ನೇತೃತ್ವದಲ್ಲಿ ಅರ್ಚಕ ವೇ|ಮೂ| ಸುಬ್ರಹ್ಮಣ್ಯ ಭಟ್ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.
ಶ್ರೀ ದೇವರ ಸನ್ನಿಧಿಯಲ್ಲಿ ಡಿ. 1 ರಂದು ಧ್ವಜಾರೋಹಣದೊಂದಿಗೆ ವಾರ್ಷಿಕ ಮಹೋತ್ಸವಕ್ಕೆ ಚಾಲನೆ ನೀಡಲಾಗಿದ್ದು, ಡಿ.2ರಂದು ಮುಂಜಾನೆ ಪಂಚಾಮೃತಾಭಿಷೇಕ, ಕಲಶಾಭಿಷೇಕ, ಬಲಿ, ಮಹಾಪೂಜೆ, ಷಷ್ಠಿ ಮಹೋತ್ಸವದ ರಥೋತ್ಸವ ನೆರವೇರಿತ್ತು. ಡಿ. 5 ರಂದು ಕಲಶಾಭಿಷೇಕ, ಮಹಾಪೂಜೆ ರಥಶುದ್ಧಿ ಬಲಿ ನಡೆದು ರಥಾರೋಹಣ, ಶ್ರೀ ಸುಬ್ರಹ್ಮಣ್ಯ ದೇವರ ಹಗಲು ಮಹಾ ರಥೋತ್ಸವ ಮೊದಲಾದ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದ್ದು ನೂರಾರು ಭಕ್ತರು ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡಿದ್ದರು.
ಡಿ. 6ರಂದು ತುಲಾಭಾರ, ನಾಗದರ್ಶನ, ರಾತ್ರಿ ಜುಮಾದಿ ದೈವದ ನೇಮ ಇತ್ಯಾದಿ ಕಾರ್ಯಕ್ರಮಗಳು ಜರಗಲಿವೆ. ಗರುಡ ಪ್ರದಕ್ಷಿಣೆ ಪ್ರತಿ ವರ್ಷದಂತೆ ಗುರುವಾರವೂ ಗರುಡ ಪ್ರದಕ್ಷಿಣೆ ಹಾಕಿದ್ದು, ಭಕ್ತರು ಈ ದೃಶ್ಯವನ್ನು ಕಂಡು ಭಕ್ತಿಪರವಶರಾದರು.
ಕಾರ್ಯಕ್ರಮದಲ್ಲಿ ದೇವಸ್ಥಾನದ ಅರ್ಚಕ ವೇ|ಮೂ| ಶ್ರೀಶ ಭಟ್, ಆನುವಂಶಿಕ ಆಡಳಿತ ಮೊಕ್ತೇಸರ ಶಿರ್ವ ಕೋಡು ಜಯಶೀಲ ಹೆಗ್ಡೆ, ಗಣ್ಯರಾದ ಶಿರ್ವ ಕೋಡು ಬಾಲಕೃಷ್ಣ ಹೆಗ್ಡೆ, ಕುಕ್ಕೆಹಳ್ಳಿ ದೊಡ್ಡಬೀಡು ಸುಧಾಕರ ಹೆಗ್ಡೆ, ಪ್ರಶಾಂತ್ ಶೆಟ್ಟಿ ಸೂಡ, ಶಿರ್ವ ಕೋಡು ದಿನೇಶ್ ಹೆಗ್ಡೆ, ಬೆಳ್ಮಣ್ನ ಉದ್ಯಮಿ ಎಸ್.ಕೆ. ಸಾಲ್ಯಾನ್, ರಿತೇಶ್ ಶೆಟ್ಟಿ, ಶಂಕರ ಕುಂದರ್ ಸೂಡ, ಹೇಮನಾಥ ಶೆಟ್ಟಿ, ಸೋಮನಾಥ ಹೆಗ್ಡೆ, ಭಾಸ್ಕರ ಆಚಾರ್ಯ, ಗಣೇಶ್ ಶೆಟ್ಟಿ , ಶಿರ್ವ ಕೋಡು ಕುಟುಂಬಸ್ಥರು, ಸೂಡ ಬ್ರೈಟ್ ಗ್ರೂಪ್ ಫ್ರೆಂಡ್ಸ್ನ ಸದಸ್ಯರು, ಮಕ್ಕೇರಿಬೈಲು ಆದರ್ಶ ಫ್ರೆಂಡ್ಸ್ನ ಪದಾಧಿಕಾರಿಗಳು, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು, ಸ್ತ್ರೀಶಕ್ತಿ ಸಂಘದ ಸದಸ್ಯರು, ಭಕ್ತರು ಗ್ರಾಮಸ್ಥರು ಉಪಸ್ಥಿತರಿದ್ದರು.