Home ಧಾರ್ಮಿಕ ಸುದ್ದಿ ಬೀರಂತಡ್ಕ: ಎ. 24ರಂದು ಪುನಃ ಪ್ರತಿಷ್ಠಾ ಬ್ರಹ್ಮಕಲಶ

ಬೀರಂತಡ್ಕ: ಎ. 24ರಂದು ಪುನಃ ಪ್ರತಿಷ್ಠಾ ಬ್ರಹ್ಮಕಲಶ

ದೇವಸ್ಥಾನ, ದೈವಸ್ಥಾನ ಜೀರ್ಣೋದ್ಧಾರ

2152
0
SHARE
ದೇವಸ್ಥಾನ ಮತ್ತು ದೈವಸ್ಥಾನದ ಜೀರ್ಣೋದ್ಧಾರ ಕಾರ್ಯ ಭರದಿಂದ ನಡೆಯುತ್ತಿದೆ.

ಆಲಂಕಾರು : ಕಡಬ ತಾಲೂಕು ಕುಂತೂರು ಗ್ರಾಮದ ಪೆರಾಬೆ ಬೀರಂತಡ್ಕ ಬಲಮುರಿ ಶ್ರೀ ಮಹಾಗಣಪತಿ ದೇವಸ್ಥಾನ ಮತ್ತು ಶ್ರೀ ರಾಜನ್‌ ದೈವ ಹಾಗೂ ಪರಿವಾರ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯ ಭರದಿಂದ ಸಾಗುತ್ತಿದ್ದು ಎ. 24ರಿಂದ 27ರ ವರೆಗೆ ವೇದಮೂರ್ತಿ ಸುಬ್ರಹ್ಮಣ್ಯ ಬೈಪಡಿತ್ತಾಯ ಮತ್ತು ಕೃಷ್ಣಪ್ರಸಾದ್‌ ಉಪಾಧ್ಯಾಯ ಅರ್ಬಿ ಅವರ ನೇತೃತ್ವದಲ್ಲಿ ನವೀಕರಣ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಯಲಿದೆ.

ವಿಜಯನಗರ ಅರಸರ ಸೇನೆಯ ನಾಯಕತ್ವ ವಹಿಸಿದ್ದ ‘ನಾಯಕ’ರು (ಈಗ ಪರಿವಾರ ಬಂಟ) ಯುದ್ಧ ಬಿಟ್ಟು ಕೃಷಿ ಕಾಯಕದಲ್ಲಿ ತೊಡಗಿದ ಬಳಿಕ ಬೀರಂತಡ್ಕವನ್ನು (ವೀರರ ಬಯಲು ಎಂದು ಅರ್ಥ) ನೆಲೆ ಎಂದು ಸ್ವೀಕರಿಸಿದರು. ಇಲ್ಲಿ ಬೃಹತ್‌ ದೇಗುಲಗಳ ನಿರ್ಮಾಣ ಆಗಿರುವ ಉಲ್ಲೇಖಗಳಿವೆ. ಸುತ್ತಲೂ ಬಿಲ್ವಪತ್ರೆ ಮರಗಳಿಂದ ಶೋಭಿಸುವ ಈ ಕ್ಷೇತ್ರದ ಪೂರ್ವ ಭಾಗದಲ್ಲಿ ಪವಿತ್ರ ಪುಷ್ಕರಿಣಿಯೊಂದಿದೆ.

ಕುಂತೂರು ಗ್ರಾಮದಲ್ಲಿ ಕುಮಾರಧಾರಾ ಮತ್ತು ಗುಂಡ್ಯ ಹೊಳೆಗಳು ಸಂಗಮಿಸುವ ವಿಶಿಷ್ಟ ಪುಣ್ಯಕ್ಷೇತ್ರ ಬೀರಂತಡ್ಕದ ಕೂಡಿಗೆ. ಉತ್ತರದಲ್ಲಿ ಯಕ್ಷಪ್ರಶ್ನೆಯ ಸರೋವರ (ಕೆಧ್ದೋಟೆ ಕೆರೆ) ಇದೆ. ಪಶ್ಚಿಮದಲ್ಲಿ ಜಲ ಕನ್ನಿಕೆಯರ ವಿಶಿಷ್ಟ ಕಾರಣಿಕ ಸ್ಥಳ ‘ಉರುಂಬಿ’ ಇದೆ. ‘ಬಲ್ಲಳಿಕೆ’ ಎಂಬ ಸ್ಥಳವೂ ಇದ್ದು, ಅರಸರ ಆಳ್ವಿಕೆಯ ಕೇಂದ್ರ ಸ್ಥಾನ ಎಂದು ವಿದ್ದಿರಬಹುದಾಗಿದೆ ಎಂದು ಊಹಿಸಲಾಗಿದೆ.

ಕ್ಷೇತ್ರಕ್ಕೆ ಊರ-ಪರವೂರ ಭಕ್ತರು ಹರಕೆ, ಸೇವೆ ಸಲ್ಲಿಸಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳುತ್ತಿದ್ದಾರೆ. ಕಾಲ ಘಟ್ಟದಲ್ಲಿ ನಾಯಕ ಮನೆತನದ ಹಿರಿಯರಾದ ರಾಮಣ್ಣ ನಾೖಕ್‌ ಮತ್ತು ನಂತರದ ತಲೆಮಾರಿನ ರಾಮಣ್ಣ ನಾೖಕ್‌, ಬಾಬು ನಾೖಕ್‌, ಸದಾಶಿವ ನಾೖಕ್‌ ಹಾಗೂ ಸಹೋದರರ ಮುಂದಾಳತ್ವದಲ್ಲಿ, ಭಕ್ತರ ಸಹಕಾರದೊಂದಿಗೆ ದೈವ ಕಾರ್ಯಗಳನ್ನು ನಡೆಸಲಾಗುತ್ತಿದೆ.

ದೇವರ ಸಾನ್ನಿಧ್ಯದಲ್ಲಿ ದೈವಜ್ಞ ಕೊಳಚ್ಚಪ್ಪೆ ಕೆ. ವಿಶ್ವನಾಥ ಭಟ್ಟರಲ್ಲಿ ಪ್ರಶ್ನೆ ಚಿಂತನ ನಡೆಸಿ, ಅವರ ಸೂಚನೆಯಂತೆ ಕ್ಷೇತ್ರದ ನೈಋತ್ಯ ಖಂಡದಲ್ಲಿ ಪೂರ್ವಾಭಿಮುಖವಾಗಿ ನೂತನ ದೇವಾಲಯ ರಚನೆಯಾಗಬೇಕಾಗಿದೆ. ದೇಗುಲದ ದಕ್ಷಿಣಕ್ಕೆ ಉತ್ತರಾಭಿಮುಖವಾಗಿ ದೈವಾಲಯ ನಿರ್ಮಾಣ ಮತ್ತು ವಾಯುವ್ಯದಲ್ಲಿ ಗುಳಿಗನಿಗೆ ಶಿಲಾಪ್ರತಿಷ್ಠೆಯಾಗಬೇಕೆಂದು ನಿರ್ದೇಶಿಸಿದ್ದು, ವಾಸ್ತುತಜ್ಞ ಕೃಷ್ಣರಾಜ್‌ ಭಟ್‌ ಕುಡುಪು ಅವರ ಮಾರ್ಗದರ್ಶನದಲ್ಲಿ ನಿರ್ಮಾಣ ನಡೆಯುತ್ತಿದೆ.

ದೈವಸ್ಥಾನದ ಜೀರ್ಣೋದ್ದಾರ
ಕ್ಷೇತ್ರದಲ್ಲಿ ರಾಜನ್‌ ದೈವ , ಪಂಜುರ್ಲಿ, ಆಟಿ ಗುಳಿಗ ಇತ್ಯಾದಿ ದೈವಗಳ ಸಾನ್ನಿಧ್ಯವಿದೆ. ಕೃಷ್ಣಪ್ರಸಾದ್‌ ಉಪಾಧ್ಯಾಯ ಅರ್ಬಿ ಇಲ್ಲಿನ ಅರ್ಚಕರು. ಕಾರ್ತಲ್‌ (ತುಳು) ತಿಂಗಳಲ್ಲಿ ಅಸುರ ಮತ್ತು ದೈವ ಕ್ರಿಯೆಯಲ್ಲಿ ಪರ್ವ ನಡೆಯುತ್ತದೆ. ದೀಪಾವಳಿಯಂದು ಬಲಿಯೇಂದ್ರ ಪೂಜೆ, ಕೃಷಿ ಉಪಕರಣಗಳ ಪೂಜೆ, ತುಳಸಿ ಪೂಜೆ, ಗೋಪೂಜೆ, ಗಣಪತಿಗೆ ವಿಶೇಷ ಹೋಮ ನೆರವೇರುತ್ತದೆ. ಅದೇ ದಿನ ಹೊಸಕ್ಕಿ ಊಟ, ದೈವಗಳಿಗೂ ಪರ್ವ ನಡೆಯುತ್ತದೆ. ಅಂದು ಹರಕೆ ರೂಪದಲ್ಲಿ ಹಸು, ಕರುಗಳನ್ನು ಕ್ಷೇತ್ರದಲ್ಲಿ ಒಪ್ಪಿಸುವ ಇತಿಹಾಸವಿದೆ.

LEAVE A REPLY

Please enter your comment!
Please enter your name here