Home ನಂಬಿಕೆ ಸುತ್ತಮುತ್ತ ನಿಗೂಢತೆಯ ಆಗರ…ಸಮುದ್ರದಿಂದ ಕಲಿಯ ಬೇಕಾದದ್ದು ಬಹಳಷ್ಟಿದೆ!

ನಿಗೂಢತೆಯ ಆಗರ…ಸಮುದ್ರದಿಂದ ಕಲಿಯ ಬೇಕಾದದ್ದು ಬಹಳಷ್ಟಿದೆ!

2357
0
SHARE

ಶ್ರೀಮದ್ಭಾಗವದಲ್ಲಿ ಸಮುದ್ರವು ಒಬ್ಬ ಗುರು ಎನ್ನಲಾಗಿದೆ. ಮುನಿಯಾದವನು ಹೇಗಿರಬೇಕೆಂಬುದನ್ನು ಸುಮುದ್ರದ ದೃಷ್ಟಾಂತದ ಮೂಲಕ ವಿವರಿಸುತ್ತದೆ.

ಮನಿಃ ಪ್ರಸನ್ನಗಂಭೀರೋ ದುರ್ವಿಗಾಹ್ಯೋ ದುರತ್ಯಯಃ |
ಅನಂತಪಾರೋ ಹ್ಯಕ್ಷೋಭ್ಯಃಸ್ತಿಮಿತೋದ ಇವಾರ್ಣವಃ ||

ಪ್ರಸನ್ನತೆ ಮತ್ತು ಗಾಂಭೀರ್ಯಕ್ಕೆ ಉದಾಹರಣೆಯಾಗಿ ಕಾಣುವುದು ಸಮುದ್ರ. ಅಂತಹ ಅಂದರೆ ಸುಮುದ್ರದಂತಹ ಪ್ರಸನ್ನ ಮತ್ತು ಗಂಭೀರವನ್ನು ನಾವು ನಮ್ಮಲ್ಲಿ ಅಳವಡಿಸಿಕೊಳ್ಳಬೇಕು. ಭಾವ ಅಗಾದವಾಗಿರಬೇಕು. ಪ್ರಭಾವಶಾಲಿಯಾಗಿರಬೇಕು. ಯಾವುದೂ ಅತಿಕ್ರಮಿಸದಷ್ಟು ಕಠಿಣವಾಗಿರಬೇಕು. ಕಾಮ, ಕ್ರೋದ, ಮದ, ಮೋಹ ಮೊದಲಾದ ಶತ್ರುಗಳು ವಿಚಲಿತರನ್ನಾಗಿಸದಂತಹ ಬಲಶಾಲಿಯಾದ ಮನಸ್ಸನ್ನು ಬೆಳೆಸಿಕೊಳ್ಳಬೇಕು. ಸಮುದ್ರದ ನಿಶ್ಚಲ, ಪ್ರಶಾಂತತೆಯಂತೆ ಯಾವಾಗಲೂ ನಮ್ಮಲ್ಲಿ ಶಾಂತಿಯು ಸ್ಥಿರವಾಗಿರಬೇಕು. ಸಮುದ್ರಕ್ಕೆ ಅದೆಷ್ಟೋ ನದಿಗಳು ನೀರು ಬಂದು ಸೇರಿದರೂ ಸಮುದ್ರವು ತನ್ನ ಎಲ್ಲೆಯನ್ನು ಮೀರುವುದಿಲ್ಲ. ಅಂತೆಯೇ ನೀರು ಬಾರದಿದ್ದರೂ ಒಣಗುವುದಿಲ್ಲ. ನಾವು ಸಮೃದ್ಧಿಗೆ ಉಬ್ಬದೆ ಸಮೃದ್ಧಿಹೀನ ಸ್ಥಿತಿಗೆ ಕುಗ್ಗದೇ ಎರಡೂ ಕಾಲದಲ್ಲಿ ಸಮಭಾವವನ್ನು ಹೊಂದುವಂತಾಗಬೇಕು.

ಸಮುದ್ರದಿಂದ ಕಲಿಯ ಬೇಕಾದದ್ದು ಬಹಳಷ್ಟಿದೆ. ಅದೆಷ್ಟೋ ಜಲಚರಗಳಿಗೆ, ಜೀವರಾಶಿಗೆ ಜೀವನವನ್ನು ನೀಡುವ ಕಡಲು ತನ್ನೊಡಲಿನೊಳಗೆ ಒಂದು ಲೋಕವನ್ನೇ ಹುದುಗಿಸಿಕೊಂಡಿದೆ. ಇದು ಜಲಚರ ಮತ್ತು ಉಭಯಚರಗಳಿಗೆ ಸಹಾಯಕವಾಗಿದೆ. ನಾವೂ ಕೂಡ ನಮ್ಮಲ್ಲಿ ಸಾಧ್ಯವಿದ್ದಷ್ಟು ಪರರಿಗೆ ಉಪಕಾರಿಯಾಗಿಯೇ ಬದುಕಬೇಕು. ಸಮುದ್ರದಂತಹ ವಿಶಾಲವಾದ ಮನಸ್ಸು ನಮ್ಮದಾಗಿರಬೇಕು. ಎಲ್ಲವನ್ನೂ ಸಹಿಸಿಕೊಳ್ಳುವ ಮತ್ತು ಜೀವನದಲ್ಲಿ ಇದಿರಾಗುವ ಎಲ್ಲ ಸಂದರ್ಭಗಳನ್ನು ಪ್ರಸನ್ನವಾಗಿ ಸ್ವೀಕರಿಸುವ ಗುಣವನ್ನು ಬೆಳೆಸಿಕೊಳ್ಳಬೇಕು. ಸಮುದ್ರ ಮಳೆಗಾಗಲೀ ಬಿಸಿಲಿಗಾಗಲೀ ಬೆದರುವುದಿಲ್ಲ. ಇದನ್ನು ನೋಡಿ, ನಾವು ಜೀವನದ ಪ್ರತಿಯೊಂದು ಆಗುಹೋಗುಗಳಿಗೆ ಸಮಾನವಾಗಿ ಸ್ಪಂದಿಸುತ್ತ, ಸ್ವೀಕರಿಸುವ ದೃಢವಾದ ವ್ಯಕ್ತಿತ್ವವನ್ನು ಹೊಂದಬೇಕು.

ದೇವರಿಗೆ ಪ್ರಿಯವಾಗಿ ಬದುಕುವುದಕ್ಕೂ ಸಮುದ್ರ ಮಾದರಿ. ಸಮುದ್ರ ತನ್ನ ನೀರನ್ನು ಆವಿಯಾಗಲು ಬಿಟ್ಟು ಮಳೆಗೆ ಕಾರಣವಾಗುತ್ತದೆ. ಇದರಿಂದ ಲೋಕದ ಪ್ರಾಕೃತಿಕ ಅವಶ್ಯಕತೆಗಳು ಮಳೆಯ ಮೂಲಕ ಈಡೇರಲು ಕಾರಣವಾಗುತ್ತದೆ. ಇಂತಹ ಜೀವನವೂ ನಮ್ಮದಾಗಬೇಕು. ಪರೋಪಕಾರಾರ್ಥಾಯಾ ಇದಂ ಶರೀರಂ ಎಂಬ ಮಾತಿನಂತೆ ದೇಹವೂ ಮನಸ್ಸೂ ಪರರಹಿತಕ್ಕಾಗಿ ಬಳಕೆಯಾದಾಗ ಸದ್ಗತಿಗೆ ಅವಕಾಶವಿದೆ. ನಮ್ಮ ಪರಿಸರವು ಅದರದ್ದೇ ಆದ ಕೆಲವು ನಿಯಮಗಳಿಗೆ ಒಳಪಟ್ಟಿದೆ. ಅಂತಹ ನಿಯಮಕ್ಕನುಸಾರವಾಗಿ ನಮ್ಮ ಬದುಕಿನ ನಡೆಯಿರಬೇಕು. ಸಮುದ್ರದ ನೀರು ಆವಿಯೇ ಆಗದೇ ಹೋದರೆ? ಮಳೆಯೂ ಇಲ್ಲ; ಬೆಳೆಯೂ ಇಲ್ಲದೆ ಮನುಷ್ಯ ಬದುಕಲಾರದ ಪರಿಸರದ ನಿರ್ಮಾಣವಾಗುತ್ತದೆ. ಅಂತೆಯೇ ನಮ್ಮ ಹುಟ್ಟು ಹೇಗೆ ಪ್ರಕೃತಿಯ ಕೊಡುಗೆಯಾಗಿದೆಯೋ ನಮ್ಮ ಬದುಕು ಕೂಡ ಪ್ರಕೃತಿಯನ್ನು ಅವಲಂಬಿಸಿಯೇ ನಿಂತಿದೆ. ಅಂತಹ ಪ್ರಕೃತಿಗೆ ವಿರುದ್ಧವಾದುದು ಅರಿಷಡ್ವರ್ಗಗಳು. ಅವು ನಮ್ಮೊಳಗೆ ಸೇರದಂತೆ, ಸನಿಹಕ್ಕೆ ಬಂದರೆ ಕಠಿಣವಿಧಾನಗಳಿಂದಾದರೂ ದೂರತಳ್ಳಬೇಕು. ಹೇಗೆ ಸಮುದ್ರ ಸಮುದ್ರಕ್ಕೆ ಎಸೆದ ಕಸವನ್ನು ಅಲೆಯ ಮೂಲಕ ತಂದು ದಡಕ್ಕೆಸೆಯುದೋ ಹಾಗೇ ನಾವೂ ಕೂಡ ಮನಸ್ಸನ್ನು ಆಳುವ ವಿಷಯಾಸಕ್ತಿಗಳನ್ನು ನಿರ್ಧಿಷ್ಟ ನಿಯಮಗಳನ್ನು ಪಾಲಿಸುವ ಮೂಲಕ ದೂರವೇ ಇಡಬೇಕು.

ಮನುಷ್ಯನ ದುಃಖಕ್ಕೆ ಮೂಲವಾಗುವುದೇ ಇಂತಹ ವಿಷಯಾಸಕ್ತಿಗಳು. ಸಮಾನಚಿತ್ತವಿದ್ದಾಗ, ಸೋಲು-ಗೆಲುವುಗಳನ್ನು ಸಮಾನವಾಗಿ ಅರಗಿಸಿಕೊಳ್ಳುವ ಶಕ್ತಿ-ಯುಕ್ತಿ ಇದ್ದಾಗ ನಾವು ನೆಮ್ಮದಿ ಎಂದರೆ ಏನು? ಎಂಬುದನ್ನು ಅರಿಯಬಹುದಾಗಿದೆ. ಅಲ್ಲದೆ ಇಹ ಮತ್ತು ಪರಲೋಕದ ಅಂತರವನ್ನು ಅರಿಯಲು ಇವು ಸಹಾಯಕ. ಇಹ-ಪರದ ಸ್ವರೂಪವನ್ನು ಪೂರ್ಣವಾಗಿ ತಿಳಿದುಕೊಂಡಾಗ ಬದುಕು ಬಂಗಾರವಾಗುವುದು ಸತ್ಯ.

..ಮುಂದುವರಿಯುವುದು.
||ಸರಳವಾಗಿ ಯೋಚಿಸಿ-ಸಂಸ್ಕಾರಯುತರಾಗಿ-ಸರಳರಾಗಿ ಜೀವಿಸಿ||

– ಭಾಸ್ವ.

LEAVE A REPLY

Please enter your comment!
Please enter your name here