Home ನಂಬಿಕೆ ಸುತ್ತಮುತ್ತ ನಾವು ಲೋಭಿಯಾದರೆ ಅಧರ್ಮದ ಹೆಜ್ಜೆ ಇಟ್ಟಂತೆ..

ನಾವು ಲೋಭಿಯಾದರೆ ಅಧರ್ಮದ ಹೆಜ್ಜೆ ಇಟ್ಟಂತೆ..

2132
0
SHARE

ಹಿಂದಿನಕಾಲದಲ್ಲಿ ಉಜ್ಜೈನೆಯಲ್ಲಿ ಓರ್ವ ಬ್ರಾಹ್ಮಣನಿದ್ದ. ಆತ ಕೃಷಿ-ವ್ಯಾಪಾರಗಳಿಂದ ಸಾಕಷ್ಟು ಸಂಪತ್ತನ್ನು ಸಂಗ್ರಹ ಮಾಡಿಕೊಂಡಿದ್ದ. ಆದರೆ ಆತ ಮಹಾನ್ ಲೋಭಿ. ಅಂದರೆ ಜಿಪುಣ. ತನಗೂ ಮನೆಯಯವರಿಗೂ ಧನವನ್ನು ಖರ್ಚುಮಾಡದಷ್ಟು ಲೋಭಿಯಾಗಿದ್ದ. ಅತಿಥಿ-ಬಂಧುಗಳನ್ನು ಆದರದಿಂದ ಮಾತನಾಡಿಸುತ್ತಲೂ ಇರಲ್ಲಿಲ್ಲ. ಎಲ್ಲಿ ನನ್ನ ಮನೆಗೆ ಯಾರಾದರೂ ಬಂದು ಬಿಡುವರೋ, ಬಂದರೆ ಅವರಿಂದ ನನ್ನ ಸಂಪತ್ತು ವ್ಯಯಿಸಿಬಿಡುವುದೋ ಎಂಬ ದುರ್ಬುದ್ಧಿಯಿಂದ ಎಲ್ಲರಿಂದಲೂ ದೂರವಿರುತ್ತಿದ್ದ.

ಮನೆಯವರಲ್ಲಿಯೂ ಸದಾ ಕ್ರೋಧದಿಂದಿರುತ್ತಿದ್ದ. ತನ್ನ ಶರೀರಕ್ಕೆ ಬೇಕಾದುದಕ್ಕೂ ಧನವನ್ನು ವ್ಯಯಿಸದೆ ಸದಾ ತನ್ನ ಸಂಪತ್ತನ್ನು ಕಾಪಾಡಿಕೊಳ್ಳುವುದೇ ಅವನ ಕೆಲಸವಾಗಿತ್ತು. ಹಾಗಾಗಿ ಆತ ಭೋಗವನ್ನೂ ಭೋಗಿಸಲಿಲ್ಲ. ದಾನ-ಧರ್ಮಾದಿ ಕಾರ್ಯಗಳನ್ನೂ ಮಾಡಲಿಲ್ಲ. ಅವನ ಕುಟುಂಬದವರೂ ಸ್ವತಃ ಹೆಂಡತಿ ಮಕ್ಕಳೂ ಈ ಬಗೆಯ ವರ್ತನೆಯಿಂದಾಗಿ ದುಃಖಿತರಾಗಿದ್ದರು. ಹಾಗಾಗಿ ಮನೆಯು ನಕಾರಾತ್ಮಕ ಭಾವದಿಂದ ಕೂಡಿ ತೇಜಸ್ಸನ್ನು ಕಳೆದುಕೊಂಡಿತ್ತು. ಇದೇ ರೀತಿ ಜಿಪುಣನಾಗಿ ಧರ್ಮದಿಂದಲೂ ನಡೆದುಕೊಳ್ಳದೆ ಹಲವು ಕಾಲ ಜೀವಿಸಿದ್ದರಿಂದ ಪಂಚಮಹಾಯಜ್ಞಗಳ ಭಾಗಿಯಾದ ದೇವತೆಗಳು ಕ್ರುದ್ಧರಾದರು. ಇದರಿಂದ ಆ ಬ್ರಾಹ್ಮಣನಲ್ಲಿ ಪೂರ್ವಜರ ಪುಣ್ಯದಿಂದ ಈ ವರೆಗೆ ನೆಲೆಸಿದ್ದ ಧನಕನಕಾದಿ ಸಂಪತ್ತುಗಳು ನಾಶವಾಗತೊಡಗಿತು. ಕೆಲವನ್ನು ಬಂಧುಗಳು ಹೊತ್ತೊಯ್ದರು. ಕೆಲವಷ್ಟು ಕಳ್ಳರ ಪಾಲಾಯಿತು. ಸಿಡಿಲು, ಬೆಂಕಿ ಮೊದಲಾದ ದೈವಿಕೋಪದಿಂದ ಸಂಪತ್ತಿನ ನಷ್ಟವಾಯಿತು.

ಉಳಿದ ಸ್ವಲ್ಪ ಧನವನ್ನು ಕುಟುಂಬದವರೂ ಕರ ಸಂಗ್ರಾಹಕರೂ ತೆಗೆದುಕೊಂಡುಹೋದರು. ಹೀಗೆ ಎಲ್ಲಾ ಸಂಪತ್ತುಗಳೂ ಪರರವಶವಾಗಿ ಆ ಬ್ರಾಹ್ಮಣನ ಕೈ ಬರಿದಾಯಿತು. ಕುಟುಂಬಿಕರೂ ನೆಂಟರೂ ಸ್ನೇಹಿತರೂ ಹೀಗೆ ಎಲ್ಲರೂ ಅವನನ್ನು ದೂರವಿಟ್ಟರು. ಆಗ ಆತನಿಗೆ ಭಯವುಂಟಾಯಿತು. ಸಂಪತ್ತಿನ ನಾಶದಿಂದ ಪರಿತಪಿಸಿದ. ಕಣ್ಣೀರು ಹರಿದು ಗಂಟಲು ಕಟ್ಟಿತು. ಮನಸ್ಸು ದುಗುಡದಿಂದ ತುಂಬಿ ಚಿಂತೆಗೊಳಗಾದ. ಚಿಂತಿಸುತ್ತಲೇ ಸಂಸಾರದ ಬಗ್ಗೆ ಉತ್ಕಟವಾದ ವೈರಾಗ್ಯವುಂಟಾಯಿತು. ಇಡೀ ಬದುಕನ್ನು ಲೋಭದಿಂದ ಸಂಪತ್ತನ್ನು ಸಂಗ್ರಹಿಸಿ ಕಾಪಾಡುವುದರಲ್ಲೇ ಕಳೆದುಹೋಯಿತೇ ಹೊರತು ಧರ್ಮದ ದಾರಿಯನ್ನು ಹಿಡಿಯದೆ ನರಕದ ದಾರಿ ಹಿಡಿಯಿತು.

ಇದು ಮದ್ಭಾಗವತದಲ್ಲಿ ಹೇಳಲ್ಪಟ್ಟ ಇತಿಹಾಸ. ಲೋಭಬುದ್ಧಿಯುಳ್ಳವನು ಧನ-ಸಂಪತ್ತಿನಿಂದ ಯಾವುದೇ ಸುಖವನ್ನೂ ಅನುಭವಿಸಲಾರ. ಅಲ್ಲದೆ ಧರ್ಮಕಾರ್ಯದಲ್ಲಿ ತೊಡಗದೆ ಮುಕ್ತಿಯನ್ನೂ ಪಡೆಯಲಾರ. ಯಾಕೆಂದರೆ ಆತ ಧನದ ಸಂಗ್ರಹ ಮತ್ತು ಅದರ ರಕ್ಷಣೆಯಲ್ಲಿಯೇ ತನ್ನ ಜೀವನವನ್ನು ಸವೆಸುತ್ತಾನೆ. ಲೋಭಿಯಾದವನು ಧನವನ್ನು ಗಳಿಸುವುದಕ್ಕಾಗಿ ಯಾವುದೇ ಹೇಸಿಗೆ ಕೆಲಸಕ್ಕೂ ಮುಂದಾಗುತ್ತಾನೆ. ಧರ್ಮದ ನಡೆಯೂ ಸಾಧ್ಯವಿಲ್ಲ. ಧನದ ಲಾಲಸೆಯಿಂದ ಮತ್ತು ಲೋಭತನದಿಂದ ಕಳ್ಳತನ, ಹಿಂಸೆ, ಸುಳ್ಳು, ದಂಭ, ಕಾಮ, ಕ್ರೋಧ, ಗರ್ವ, ಅಹಂಕಾರ, ಭೇದಬುದ್ಧಿ, ವೈರು, ಅವಿಶ್ವಾಸ, ಸ್ಪರ್ಧಾ, ಲಂಪಟತೆ, ಜೂಜು, ಹೆಂಡ – ಈ ಹದಿನೈದು ಅನರ್ಥಗಳಿಗೆ ಕಾರಣನಾಗುತ್ತಾನೆ. ಲೋಭತನದಿಂದಾಗಿಯೇ ಸಂಬಂಧಗಳು ಕೆಡುತ್ತವೆ. ಪರಸ್ಪರ ಪ್ರಾಣತೆಗೆಯುವಷ್ಟು ಕೆಟ್ಟ ಕಾರ್ಯಗಳಿಗೆ ಮನಸ್ಸು ಹೇಸುವುದಿಲ್ಲ. ಇದರಿಂದ ಅಧರ್ಮವೇ ಆಗುತ್ತದೆ. ನಮ್ಮ ಅಧೋಗತಿಗೆ ನಾವೇ ನಾಂದಿ ಹಾಡಿದಂತಾಗುತ್ತದೆ.

ಯಶೋ ಯಶಸ್ವಿನಾಂ ಶುದ್ಧಂ ಶ್ಲಾಘ್ಯಾಯೇ ಗುಣಿನಾಂ ಗುಣಾಃ |
ಲೋಭಃ ಸ್ವಲ್ಪೋSಪಿ ತಾನ್ಹಂತಿ ಶ್ವಿತೋ ರೂಪಮಿವೇಪ್ಸಿತಮ್ ||

ಸ್ವಲ್ಪವೇ ತೊನ್ನು ಸರ್ವಾಂಗವನ್ನೂ ಕುರುಪಗೊಳಿಸುವುದೋ ಅದೇ ರೀತಿ ಸ್ವಲ್ಪವಾದ ಲೋಭವು ಇಡೀ ಜೀವನದಲ್ಲಿ ಗಳಿಸಿದ ಯಶಸ್ಸಿನ ಶುದ್ಧಕೀರ್ತಿ ಹಾಗೂ ಗುಣಿಗಳ ಪ್ರಶಂಸನೀಯ ಗುಣಗಳನ್ನು ನಾಶಮಾಡಿಬಿಡುತ್ತದೆ.

ಹಾಗಾಗಿಯೇ ಗಾದೆ ಹುಟ್ಟಿದ್ದು ಅಡಿಕೆ ಕದ್ದರೂ ಕಳ್ಳ, ಆನೆ ಕದ್ದರೂ ಕಳ್ಳ ಎಂಬುದು. ನಾವು ಗಳಿಸುವ ಸಂಪತ್ತು ಯಾವಗಲೂ ಧರ್ಮದ ಉನ್ನತಿಗಾಗಿ, ಶರೀರದ ಅಗತ್ಯತೆಗಳಿಗೆ ಬಳಕೆಯಾಗಬೇಕೇ ಹೊರತು ಕೇವಲ ಉಳಿಕೆಯಾಗಿ ಯಾವುದಕ್ಕೂ ಇಲ್ಲದೆ, ನಮ್ಮ ಮನಸ್ಸು ಲೋಭದಿಂದ ತುಂಬಿಕೊಳ್ಳುವಂತೆ ಮಾಡಬಾರದು. ಯಾಕೆಂದರೆ ಲೋಭವು ಮನುಷ್ಯನಿಂದ ಅಧರ್ಮದ ಕೆಲಸಗಳನ್ನು ಹೇರಳವಾಗಿ ಮಾಡಿಸುತ್ತದೆ. ಇದರಿಂದ ನಾವೂ ಕೆಡುವುದಲ್ಲದೆ ಸಮಾಜದ ಸ್ವಾಸ್ಥ್ಯವೂ ಕೆಡಲು ಕಾರಣರಾಗುತ್ತೇವೆ. ಹಾಗಾಗಿಯೇ ಲೋಭವನ್ನು ಅರಿಷಡ್ ವೈರಿಗಳಲ್ಲಿ ಒಂದನ್ನಾಗಿ ಗುರುತಿಸಲಾಗಿದೆ. ಲೋಭವನ್ನು ತ್ಯಜಿಸಿ ಧರ್ಮ ರಕ್ಷಣೆಯ ಕಾರ್ಯ ಎಲ್ಲರಿಂದಲೂ ಆಗಬೇಕಿದೆ.

||ಸರಳವಾಗಿ ಯೋಚಿಸಿ-ಸಂಸ್ಕಾರಯುತರಾಗಿ-ಸರಳರಾಗಿ ಜೀವಿಸಿ||

ವಿಷ್ಣು ಭಟ್, ಹೊಸ್ಮನೆ (ಭಾಸ್ವ).

LEAVE A REPLY

Please enter your comment!
Please enter your name here