ಬಸ್ರೂರು : ಶ್ರೀ ಕಾಶೀ ಮಠ ಸಂಸ್ಥಾನದ ದ್ವಿತೀಯ ಯತಿವರ್ಯರಾದ ಶ್ರೀಮತ್ ಕೇಶವೇಂದ್ರತೀರ್ಥ ಸ್ವಾಮೀಜಿ ಅವರ 350ನೇ ಪುಣ್ಯತಿಥಿ ಆರಾಧನಾ ಮಹೋತ್ಸವದಂದು ಬಸ್ರೂರು ಶ್ರೀ ಕಾಶೀ ಮಠದ ಶ್ರೀ ವೆಂಕಟರಮಣ ದೇವರಿಗೆ ಹಾಗೂ ಶ್ರೀಮತ್ ಕೇಶವೇಂದ್ರತೀರ್ಥ ಹಾಗೂ ಶ್ರೀಮತ್ ಭುವನೇಂದ್ರತೀರ್ಥ ಸ್ವಾಮೀಜಿ ಅವರ ವೃಂದಾವನಗಳಿಗೆ ತಂತ್ರ ಸಾರೋಕ್ತ ರೀತಿಯ ಸಹಸ್ರ ಕುಂಭಾಭಿಷೇಕ ಗುರುವಾರ ಶ್ರೀ ಕಾಶೀ ಮಠಾಧೀಶ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರಿಂದ ನಡೆಯಿತು.
ಮಹಾವಿಷ್ಣು ಯಾಗದ ಮಹಾ ಪೂರ್ಣಾಹುತಿ ನಡೆಯಿತು. ಸಹಸ್ರ ಕುಂಭಾಭಿಷೇಕದ ಅನಂತರ ಗುರುವರ್ಯರು ಶ್ರೀ ದೇವರಲ್ಲಿ ಹಾಗೂ ಉಭಯ ವೃಂದಾವನದಲ್ಲಿ ಶಿಷ್ಯಕೋಟಿಯ ಅಭಿವೃದ್ಧಿಗೆ ಪ್ರಾರ್ಥಿಸಿದರು. ಮಧ್ಯಾಹ್ನ ಮಹಾ ಪೂಜೆಯ ಅನಂತರ ರಜತ ಪುಷ್ಪ ರಥ ಹಾಗೂ ರಜತ ಪಲ್ಲಕ್ಕಿ ಉತ್ಸವ ನಡೆಯಿತು. ಶ್ರೀ ಕಾಶೀ ಮಠವನ್ನು ಪುಷ್ಪಗಳಿಂದ ಅಲಂಕರಿಸಲಾಗಿತ್ತು.
ಧಾರ್ಮಿಕ ಸಭೆಯಲ್ಲಿ ಶ್ರೀಮತ್ ಸಂಯಮೀಂದ್ರತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ಉಡುಪಿ, ದಕ್ಷಿಣ ಕನ್ನಡ, ಬೆಂಗಳೂರು, ಮುಂಬಯಿ ಹಾಗೂ ಕೇರಳದ ಸಹಿತ ವಿವಿಧ ಭಾಗಗಳಿಂದ ಸಹಸ್ರಾರು ಸಮಾಜ ಬಾಂಧವರು ಪಾಲ್ಗೊಂಡರು.