Home ಧಾರ್ಮಿಕ ಸುದ್ದಿ ಮನೆಯಿಂದ ಮರೆಯಾಗುತ್ತಿರುವ ಹೌಂದೇ ರಾಯ್ನ ವಾಲ್ಗ

ಮನೆಯಿಂದ ಮರೆಯಾಗುತ್ತಿರುವ ಹೌಂದೇ ರಾಯ್ನ ವಾಲ್ಗ

425
0
SHARE

ದಯಾನಂದ ಬಳ್ಕೂರು
ಬಸ್ರೂರು:
ನಾವು ಮುಂದುವರಿ ಯುತ್ತಿದ್ದೇವೆ. ಆಧುನಿಕ ಯುಗದಲ್ಲಿ ಸಾಗುತ್ತಿರುವ ನಾವು ಪರಂಪರೆಯಿಂದ ಬಳುವಳಿಯಾಗಿ ಬಂದ ಒಂದೊಂದೇ ಆಚರಣೆಗಳನ್ನು ಮರೆಯುತ್ತಿರುವುದು ದುರಂತವೇ ಸರಿ!

ಇಂಥ ಆಚರಣೆಗಳಲ್ಲಿ ಕುಂದಾಪುರ ಪ್ರದೇಶದ ಹಳ್ಳಿಗಳಲ್ಲಿ ನಮ್ಮ ಜನಪದರು ಆಚರಿಸುತ್ತಿದ್ದ ಹೌಂದೇ ರಾಯ್ನ ವಾಲ್ಗವೂ ಒಂದು.

ಇದನ್ನು ಮನೆ ಮುಂದಿನ ತುಳಸಿಕಟ್ಟೆಯಲ್ಲಿ ಆಚರಿಸುವ ಕ್ರಮವಿತ್ತು. ಈಗಲೂ ಕೆಲವೆಡೆ ಮಾತ್ರ ಉಳಿದಿರಬಹುದು. ಹೌಂದೇ ರಾಯ್ನ ವಾಲ್ಗದ ಮಂತ್ರ, ತಂತ್ರ, ಪೂಜೆ, ಪುರಸ್ಕಾರ, ನಲಿಕೆ, ನಂಬಿಕೆಗಳೆಲ್ಲ ಕುಂದಾಪ್ರ ಕನ್ನಡದ ಶೈಲಿಯಿಂದ ಶ್ರೀಮಂತವಾಗಿದೆ. ಇದರಲ್ಲಿ ಒಟ್ಟು ಎಂಟು ಸಂಧಿಗಳಿವೆ.

ಹೌಂದೇ ರಾಯ್ನ ವಾಲ್ಗದಲ್ಲಿ ಪದ ಹೇಳುವ ಮುಖಂಡನನ್ನು ಕೊಡಂಗಿ ಎಂದು ಕರೆಯುತ್ತಾರೆ. ಆತ ಹೇಳಿದ್ದಕ್ಕೆ ಉಳಿದವರು ಉತ್ತರಿಸುತ್ತಾ ತುಳಸಿ ಕಟ್ಟೆಯ ಸುತ್ತ ಹೋ-ಹೋ ವಾಲ್ಗವೇ ಎಂದು ಶೃತಿಬದ್ಧವಾಗಿ ಕುಣಿಯುತ್ತಾರೆ. ತುಳಸಿ ಕಟ್ಟೆಯಲ್ಲಿ ಹೂ, ಹಣ್ಣು, ಅವಲಕ್ಕಿ, ಪಂಚಕಜ್ಜಾಯ, ಎಳನೀರು ಮುಂತಾದವುಗಳನ್ನು ಇಟ್ಟಿರುತ್ತಾರೆ. ಪದ ಹೇಳಿ ಕುಣಿಯುವವರು ಕಾಲುಗಳಿಗೆ ಗಗ್ಗರ ಹಾಕಿಕೊಂಡು ರೇಷ್ಮೆಯ ಪಂಚೆಯುಟ್ಟು ಹೆಗಲ ಮೇಲೆ ಸಿಂಗಾರ ಹೂ ಇರಿಸಿ ಕುಣಿಯುವುದು ನಿಜಕ್ಕೂ ಅಪೂರ್ವ ಜನಪದ ಶ್ರೀಮಂತಿಕೆಯ ಸಂಕೇತವಾಗಿದೆ.

ಹೌಂದೇ ರಾಯ್ನ ವಾಲ್ಗದಲ್ಲಿ ಮುಖ್ಯವಾಗಿ ವರುಣನ ಆರಾಧನೆಯಾಗಿದೆ. ಹೌಂದೇ ರಾಯ್ನ ವಾಲ್ಗದಲ್ಲಿ ಸಮುದ್ರ ರಾಜನನ್ನು ಓಲೈಸಲಾಗುತ್ತದೆ. ಇದರಲ್ಲಿ ತಿರುಪತಿ ವೆಂಕಟರಮಣನ ಹೊಗಳಿಕೆಯೂ ಇದೆ.

ತಂಡದ ಮುಖಂಡ ಹೋ-ಹೋ ವಾಲ್ಗವೇ ಎಂದಾಗ ಉಳಿದವರೆಲ್ಲಾ ಹೌಂದೇ ರಾಯ್ನ ವಾಲ್ಗವೇ ಎಂದು ದನಿಗೂಡಿಸುತ್ತಾರೆ. ವಾಲಗದ ಸಂಧಿಯಿಂದ ಕುಣಿತ ಆರಂಭಿಸುತ್ತಾರೆ. ನಂತರ ಗೋವಿಂದನ ಸಂಧಿ, ವಾಲಗದ ಸಂಧಿ, ಮನೆ ಯಜಮಾನನ ಹೊಗಳಿಕೆ, ಬ್ಯಾಂಟಿ ಸಂಧಿ, ಶಿವರಾಯ ಸಂಧಿ, ಕೋಲು ಸಂಧಿ, ಕ್ವಾಡಂಗಿ ಸಂಧಿಯ ಅನಂತರ ಹೊಗಳಿಕೆ ಸಂಧಿಯೊಂದಿಗೆ ಹೌಂದೇ ರಾಯ್ನ ವಾಲ್ಗ ಮುಗಿಯುತ್ತದೆ.

ಕಲೆಗಳ ಸಂಗಮ
ಒಂದೊಂದು ಸಂಧಿಯಲ್ಲಿ ಒಂದೊಂದು ವಸ್ತು ವನ್ನು ಹೊಗಳಿ ಹಾಡುವ ಕ್ರಮ ಇಲ್ಲಿನ ವೈಶಿಷ್ಟ್ಯ ವಾಗಿದೆ. ಇದರಲ್ಲಿ ಕುಣಿತ ವಾಲಗದ ಸಂಧಿಯಿಂದ ಆರಂಭವಾಗುತ್ತದೆ. ಸಂಗೀತ, ಸಾಹಿತ್ಯ ಮತ್ತು ನೃತ್ಯ ಈ ಮೂರು ಕಲೆಗಳು ಇಲ್ಲಿ ಸಂಗಮವಾಗಿದೆ.

ಒಂದೊಂದು ಸಂಧಿಯಲ್ಲೂ ಆ ಸಂಧಿಯ ಹೆಸರಿಗೆ ತಕ್ಕಂತೆ ಹಾಡು ಮತ್ತು ನೃತ್ಯವಿರುವುದು ಇಲ್ಲಿನ ವಿಶೇಷ. ಹಿಂದೆ ತಿರುಪತಿಗೆ ಹೋಗಿ ಬಂದವರು ಈ ಹೌಂದೇ ರಾಯ್ನ ವಾಲ್ಗವನ್ನು ಮನೆ ಮುಂದೆ ಮಾಡುವ ಕ್ರಮವಿತ್ತು. ಆದರೆ ಈಗೀಗ ಮನೆ ಮುಂದೆ ತುಳಸಿ ಕಟ್ಟೆಯೇ ಇಲ್ಲದ ಮನೆಗಳು ಅನೇಕವಿವೆ! ಈ ವಾಲ್ಗದ ಪದ ಹೇಳಲು ಇಂದಿನ ಯುವ ಜನಾಂಗಕ್ಕೆ ಗೊತ್ತಿಲ್ಲ. ಹಳೆ ತಲೆಮಾರಿನವರು ಇದನ್ನು ಉಳಿಸಲೂ ಹೋಗಿಲ್ಲ. ರೈತನಿಗೆ ಉತ್ತಮ ಬೆಳೆ ಬಂದು ಸಮೃದ್ಧ ಫಸಲು ಬರಲಿ-ಬಾಳು ಬಂಗಾರವಾಗಲಿ ಎನ್ನುವುದು ಇಲ್ಲಿಯ ಆಶಯವಾಗಿದೆ.

ಪ್ರಸ್ತುತ ಇಲ್ಲಿ ಬೇರೆ ಕಡೆಯಿಂದ ಬಂದು ಹೌಂದೇ ರಾಯನ ವಾಲ್ಗ ಆಚರಿಸುತ್ತಾರೆ. ಊರಿನಲ್ಲಿ ಒಬ್ಬರು ಇಬ್ಬರು ಇದ್ದರೂ ಅವರು ಈಗ ಮಾಡುವುದಿಲ್ಲ. ಈಗ ಹೌಂದೇ ರಾಯ್ನ ವಾಲ್ಗ ಬಹುತೇಕ ನಮ್ಮ ಮನೆಯಿಂದ ಮಾಯವಾಗಿದೆ. ಹೋ-ಹೋ ವಾಲ್ಗವೇ ಹೌಂದೇ ರಾಯ್ನ ವಾಲ್ಗವೇ ಎನ್ನುವ ವಿಶಿಷ್ಟ ಶೈಲಿಯ ಜನಪದರ ಹಾಡು-ನೃತ್ಯದ ಪ್ರಾಕಾರವನ್ನು ಇಂದು ನಾವು ಉಳಿಸಿಕೊಳ್ಳಬೇಕಾದ ಆವಶ್ಯಕತೆಯಿದೆ.

ಪರಂಪರೆ ಉಳಿಸಬೇಕಿದೆ
ನಮ್ಮ ಹಿರಿಯರು ಹಾಕಿಕೊಟ್ಟ ಪರಂಪರೆ ಚೌಕಟ್ಟನ್ನು ನಾವು ಉಳಿಸಿಕೊಳ್ಳಬೇಕಾಗಿದೆ. ಹೌಂದೇ ರಾಯ್ನ ವಾಲ್ಗದಲ್ಲಿ ಒಂದೊಂದು ಸಂಧಿಯೂ ಒಂದೊಂದು ಆಶಯವನ್ನು ಹೊಂದಿದೆ. ನಮ್ಮ ಜನಪದರು ತಮ್ಮ ಹಾಡಿನಲ್ಲಿ, ಕುಣಿತದಲ್ಲಿ ಶ್ರೀಮಂತಿಕೆಯನ್ನು ಈ ಮೂಲಕ ತೆರೆದಿಟ್ಟಿದ್ದಾರೆ.
-ನಾಗರಾಜ ಪೂಜಾರಿ,
ಕೃಷಿಕ, ಬಳ್ಕೂರು ನಿವಾಸಿ

ಓಂ ಶ್ರೀ ಸಾಯಿ ಜ್ಯೋತಿಷ್ಯಾಲಯ
South Canara’s Famous Asrologer
Family issue, ಮದುವೆಯಲ್ಲಿ ವಿಘ್ನ, ಸತಿ-ಪತಿ ಕಲಹ, Court Case, ವಶೀಕರಣ, Love problems, ಸದಾ ಕುಟುಂಬದಲ್ಲಿ ಕಲಹ, Money problem, ಕೆಲಸದಲ್ಲಿ ಕಿರಿಕಿರಿ, ಮಕ್ಕಳ ಸಮಸ್ಯೆ, ವ್ಯಾಪಾರದಲ್ಲಿ ಅಡೆ-ತಡೆ, Loan Issue, ನಿಮ್ಮ ಯಾವುದೇ ಸಮಸ್ಯೆಗೆ 3 ದಿನಗಳಲ್ಲಿ ಶಾಶ್ವತ ಪರಿಹಾರ.
ಹೊಟೇಲ್ ದುರ್ಗಾ ಇಂಟರ್ ನ್ಯಾಶನಲ್, ರೂಂ. ನಂ. 310, 3ನೇ ಮಹಡಿ, ಸಿಟಿ ಬಸ್ ಸ್ಟ್ಯಾಂಡ್ ಹತ್ತಿರ, ಉಡುಪಿ.
ಪಂಡಿತ್ ಸಾಯಿನಾಥ್ ಜೋಶಿ : Ph- 98449-44242

LEAVE A REPLY

Please enter your comment!
Please enter your name here