ಬಂಟ್ವಾಳ: ಸಮುದ್ರ ಮಟ್ಟದಿಂದ ಸಾವಿರ ಅಡಿ ಎತ್ತರದಲ್ಲಿರುವ ಪುರಾಣ ಪ್ರಸಿದ್ಧ ಕ್ಷೇತ್ರ ಶ್ರೀ ನರಹರಿ ಪರ್ವತ ಸದಾಶಿವ ದೇವಸ್ಥಾನದಲ್ಲಿ ಗುರುವಾರ ಆಟಿ ಅಮಾವಾಸ್ಯೆ ಅಂಗವಾಗಿ ಸಾವಿರಾರು ಭಕ್ತರು ತೀರ್ಥಸ್ನಾನಗೈದು ದೇವರ ದರ್ಶನ ಪಡೆದರು.
ಮುಂಜಾನೆಯಿಂದಲೇ ಕ್ಷೇತ್ರದತ್ತ ಆಗಮಿಸಿದ ಭಕ್ತರು ಮಧ್ಯಾಹ್ನದವರೆಗೂ ಆಗಮಿಸುತ್ತಲೇ ಇದ್ದು, ಕ್ಷೇತ್ರದ ಶಂಖ, ಚಕ್ರ, ಗದಾ, ಪದ್ಮ ತೀರ್ಥಘಟ್ಟದಲ್ಲಿ ತೀರ್ಥಸ್ನಾನಗೈದು ಬಳಿಕ ದೇವರ ದರ್ಶನ ಪಡೆದರು. ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸಿದ್ದರೂ ವೈದಿಕ ವೃಂದದವರು ಅಲ್ಲಲ್ಲಿ ಪ್ರಸಾದ ವಿತರಣೆ ವ್ಯವಸ್ಥೆ ಮಾಡಿದ್ದರಿಂದ ಯಾವುದೇ ತೊಂದರೆಯಾಗಲಿಲ್ಲ.
ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ನರೇಂದ್ರಬಾಬು ಮೊದಲಾದ ಗಣ್ಯರು ಆಗಮಿಸಿದ್ದರು.
ಕ್ಷೇತ್ರದ ಆಡಳಿತ ಮೊಕ್ತೇಸರ ಡಾ| ಪ್ರಶಾಂತ್ ಮಾರ್ಲ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಡಾ| ಆತ್ಮರಂಜನ್ ರೈ, ಉತ್ಸವ ಸಮಿತಿಯ ಅಧ್ಯಕ್ಷ, ಮಾಜಿ ಶಾಸಕ ಎ. ರುಕ್ಮಯ ಪೂಜಾರಿ ಸಹಿತ ವೈದಿಕ ವೃಂದ, ಆಡಳಿತ ಸಮಿತಿ ಸದಸ್ಯರು, ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದು, ಭಕ್ತರಿಗೆ ಸಕಲ ವ್ಯವಸ್ಥೆಗಳನ್ನು ಕಲ್ಪಿಸಿದರು.
ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿರುವುದರಿಂದ ತೀರ್ಥಸ್ನಾನ, ದೇವರ ದರ್ಶನಕ್ಕೆ ಯಾವುದೇ ತೊಂದರೆ ಯಾಗದಂತೆ ಸ್ವಯಂಸೇವಕರನ್ನು ನಿಯೋಜಿಸಲಾಗಿತ್ತು.